






ಬೆಳ್ತಂಗಡಿ: ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಅನುದಾನ ಉಪಯೋಗಿಸುವ ಎಲ್ಲಾ ಇಲಾಖೆಗಳ ಅಧಿಕಾರಿಗಳು ಕಡ್ಡಾಯವಾಗಿ ಸಭೆಗೆ ಹಾಜರಾಗಬೇಕು. ದಲಿತರ ಕುಂದುಕೊರತೆಗಳ ಸಭೆಗೆ ಅಧಿಕಾರಿಗಳು ಗೈರು ಹಾಜರಾಗಿ ಸಿಬ್ಬಂದಿಗಳನ್ನು ಕಳುಹಿಸುತ್ತಿರುವುದು ಸರಿಯಲ್ಲ. ಇದು ಕೂಡ ದಲಿತ ದೌರ್ಜನ್ಯಕ್ಕೆ ಸಮ ಎಂದು ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಶೇಖರ್ ಕುಕ್ಕೇಡಿ ಹೇಳಿದ್ದಾರೆ. ಡಿ.೩೧ರಂದು ಬೆಳ್ತಂಗಡಿ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಡಿವೈಎಸ್ಪಿ ರೋಹಿಣಿ ಸಿ.ಕೆ. ಅವರ ಅಧ್ಯಕ್ಷತೆಯಲ್ಲಿ ನಡೆದ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಕುಂದುಕೊರತೆಗಳ ಸಭೆಯಲ್ಲಿ ಅವರು ಈ ಆಗ್ರಹ ವ್ಯಕ್ತಪಡಿಸಿದ್ದಾರೆ. ಶೇಖರ ಕುಕ್ಕೇಡಿ ಅವರ ಆಗ್ರಹಕ್ಕೆ ಹಿರಿಯ ದಲಿತ ನಾಯಕ ಸಂಜೀವ ಆರ್. ಅವರು ಸಭೆಯಲ್ಲಿ ಧ್ವನಿಗೂಡಿದ್ದಾರೆ. ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಅನುದಾನ ವಿನಿಯೋಗ ಮಾಡದಿರುವುದು ಕೂಡ ದೌರ್ಜನ್ಯಕ್ಕೆ ಸಮ. ಅಂತಹ ಅಧಿಕಾರಿಗಳ ಮೇಲೆ ದಲಿತ ದೌರ್ಜನ್ಯ ತಡೆ ಕಾಯಿದೆಯಡಿ ಕ್ರಿಮಿನಲ್ ಕೇಸ್ ದಾಖಲಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ. ಈ ಕುರಿತು ಸಂಬಂಧಿಸಿದವರ ಗಮನಕ್ಕೆ ತರಲಾಗುವುದು ಎಂದು ಡಿವೈಎಸ್ಪಿ ರೋಹಿಣಿ ತಿಳಿಸಿದರು.
ದೈಹಿಕ ಶಿಕ್ಷಣ ಶಿಕ್ಷಕರಿಂದ ಮೋಸ-ಯಾವುದೇ ಕ್ರಮ ಕೈಗೊಂಡಿಲ್ಲ: ನಲಿಕೆ ಸಮಾಜ ಸೇವಾ ಸಂಘದ ಅಧ್ಯಕ್ಷ ಪ್ರಭಾಕರ ಶಾಂತಿಗೋಡು ಮಾತನಾಡಿ ಶಿರ್ಲಾಲು ಗ್ರಾಮದ ಬಾಬು ನಲ್ಕೆ ಎಂಬವರ ಪಟ್ಟಾ ಜಮೀನನ್ನು ಸ್ಥಳೀಯ ಮೇಲ್ಜಾತಿಯ ವ್ಯಕ್ತಿಯೊಬ್ಬರು ಅತಿಕ್ರಮಿಸಿ ಜಮೀನಿನ ಕೃಷಿ ನಾಶ ಮಾಡಿರುವ ಬಗ್ಗೆ ವೇಣೂರು ಪೊಲೀಸರು ನಿರ್ಲಕ್ಷ್ಯ ತೋರಿದ್ದಾರೆ. ಜಿಲ್ಲಾಧಿಕಾರಿ ಅವರು ಜಿಲ್ಲಾ ಎಸ್ಪಿರವರಿಗೆ ಸೂಕ್ತ ಕ್ರಮಗಳನ್ನು ಕೈಗೊಳ್ಳಲು ಆದೇಶಿಸಿದರೂ ವೇಣೂರು ಪೊಲೀಸರು ಸಿವಿಲ್ ಸ್ವರೂಪದ ಪ್ರಕರಣ ಎಂದು ಹಿಂಬರಹ ನೀಡಿರುವುದು ಸರಿಯಲ್ಲ. ಅಧಿಕೃತ ದಾಖಲೆಗಳನ್ನು ಹೊಂದಿರುವ ಜಮೀನಿನಲ್ಲಿದ್ದ ಕೃಷಿ ನಾಶ ಮಾಡಿರುವುದು ದಲಿತ ದೌರ್ಜನ್ಯವಾಗಿದೆ. ಈ ಬಗ್ಗೆ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಮುಖಂಡರು ಒತ್ತಾಯಿಸಿದರು. ಈ ಬಗ್ಗೆ ಸೂಕ್ತ ಕ್ರಮಗಳನ್ನು ಕೈಗೊಳ್ಳಲು ಡಿವೈಎಸ್ಪಿ ರೋಹಿಣಿ ಅವರು ವೇಣೂರು ಠಾಣಾ ಎಸ್.ಐ.ಗೆ ಸೂಚಿಸಿದರು. ದಸಂಸ(ಅಂಬೇಡ್ಕರ್ ವಾದ) ತಾಲೂಕು ಸಂಚಾಲಕ ರಮೇಶ್ ಆರ್. ಮಾತನಾಡಿ ಈ ಹಿಂದೆ ಕಾಲೇಜೊಂದರ ದೈಹಿಕ ಶಿಕ್ಷಣ ಶಿಕ್ಷಕರೋರ್ವರು ರಾಜ್ಯ, ರಾಷ್ಟ್ರೀಯ ವಾಲಿಬಾಲ್ ಪಂದ್ಯಾವಳಿಯಲ್ಲಿ ಸ್ಥಾನ ದೊರಕಿಸಿ ಕೊಡುತ್ತೇನೆ ಎಂದು ಆಮಿಷ ತೋರಿಸಿ ನಗರದ ಕೆಲ್ಲಗುತ್ತು, ರೆಂಕೆದಗುತ್ತು ಪರಿಸರದ ಹಲವು ದಲಿತ ಯುವಕರಿಂದ ತಲಾ ೮,೦೦೦ ರೂಪಾಯಿಗಳನ್ನು ಪಡೆದುಕೊಂಡು ಮೋಸ ಮಾಡಿದ್ದಾರೆ. ಈ ಬಗ್ಗೆ ಬೆಳ್ತಂಗಡಿ ಪೋಲಿಸ್ ಠಾಣೆಗೆ ದೂರು ನೀಡಿ ಎರಡು ತಿಂಗಳಾದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ನಕಲಿ ಜಾತಿ ಪ್ರಮಾಣಪತ್ರಗಳನ್ನು ಪಡೆಯುತ್ತಿದ್ದಾರೆ: ಶೇಖರ್ ಲಾಯಿಲ ಮಾತನಾಡಿ ಜಿಲ್ಲೆಯಲ್ಲಿ ನಕಲಿ ದಾಖಲೆಗಳ ಮೂಲಕ ನಕಲಿ ಜಾತಿ ಪ್ರಮಾಣಪತ್ರಗಳನ್ನು ಪಡೆದು ಚುನಾವಣಾ ಸ್ಪರ್ಧೆ, ಉದ್ಯೋಗ ಪಡೆಯಲಾಗುತ್ತದೆ. ಈ ಬಗ್ಗೆ ಯಾವ ರೀತಿಯ ಕ್ರಮ ಕೈಗೊಳ್ಳಲಾಗಿದೆ ಎಂದು ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಸಿಬ್ಬಂದಿಯನ್ನು ಪ್ರಶ್ನಿಸಿದರು. ಧರ್ಮಸ್ಥಳ ಗ್ರಾಮ ಪಂಚಾಯತ್ ಸದಸ್ಯರೋರ್ವರು ನಕಲಿ ದಾಖಲೆಗಳನ್ನು ನೀಡಿ ಪರಿಶಿಷ್ಟ ಜಾತಿ ಪ್ರಮಾಣಪತ್ರ ಪಡೆದುಕೊಂಡ ಬಗ್ಗೆ ೨೦೦೦ ಇಸವಿಯಲ್ಲಿ ದೂರು ನೀಡಿದರೂ ಇಂದಿನ ತನಕವೂ ತನಿಖೆ ನಡೆಸದ ಬಗ್ಗೆ ಸಿಬ್ಬಂದಿಯನ್ನು ಅವರು ಪ್ರಶ್ನಿಸಿದರು. ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದಲ್ಲಿ ಪಿ.ಎಸ್.ಐ, ಇನ್ಸ್ಪೆಕ್ಟರ್, ಡಿವೈಎಸ್ಪಿ ಹುದ್ದೆಗಳು ಸೇರಿದಂತೆ ಬಹುತೇಕ ಹುದ್ದೆಗಳು ಖಾಲಿಯಿದೆ. ಎಸ್ಪಿ ಅವರು ಎಸ್.ಐಟಿಗೆ ನೇಮಕಗೊಂಡು ಅಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇರುವ ಸಿಬ್ಬಂದಿಗಳು ನಾಲ್ಕು ಜಿಲ್ಲೆಗಳ ಸಮಸ್ಯೆಗಳನ್ನು ಪರಿಹರಿಸಲು ಸಾಧ್ಯವಿಲ್ಲ ಎಂದರು. ಮುಂದಿನ ಸಭೆಗೆ ಸೂಕ್ತ ದಾಖಲೆಗಳೊಂದಿಗೆ ಸಭೆಗೆ ಬರಲು ಡಿವೈಎಸ್ಪಿ ಸೂಚಿಸಿದರು.


ವೇದಿಕೆಯಲ್ಲಿ ಬೆಳ್ತಂಗಡಿ ಸರ್ಕಲ್ ಇನ್ಸ್ಪೆಕ್ಟರ್ ರವಿ ಬಿ.ಎಸ್. ಮತ್ತು ಉಪ್ಪಿನಂಗಡಿ ಸರ್ಕಲ್ ಇನ್ಸ್ಪೆಕ್ಟರ್ ನಾಗರಾಜ್ ಉಪಸ್ಥಿತರಿದ್ದರು. ಸಭೆಯಲ್ಲಿ ಬೆಳ್ತಂಗಡಿ ಪೊಲೀಸ್ ಉಪ ವಿಭಾಗದ ಪೊಲೀಸ್ ಠಾಣೆಗಳ ಎಸ್.ಐ.ಗಳು ಹಾಜರಿದ್ದರು. ದಲಿತ ಮುಖಂಡರಾದ ಸೇಸಪ್ಪ ನೆಕ್ಕಿಲು, ಶ್ರೀನಿವಾಸ್ ಉಜಿರೆ, ಸದಾನಂದ ನಾಲ್ಕೂರು, ಪ್ರಭಾಕರ್ ನಾಯ್ಕ್, ದಯಾನಂದ ಇಂದಬೆಟ್ಟು ಮತ್ತಿತರರು ಉಪಸ್ಥಿತರಿದ್ದರು. ಡಿವೈಎಸ್ಪಿ ಕಛೇರಿಯ ಎಎಸ್ಐ ಲಾರೆನ್ಸ್ ಹಿಂದಿನ ಸಭೆಯ ವರದಿ ಮಂಡಿಸಿದರು. ಹೆಡ್ ಕಾನ್ಸ್ಟೇಬಲ್ ಪ್ರವೀಣ್ ಎಂ. ಸಹಕರಿಸಿದರು. ಹೆಡ್ ಕಾನ್ಸ್ಟೇಬಲ್ ಮನೋಹರ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ಪೊಲೀಸ್ ಹೊರ ಠಾಣೆ ತೆರೆಯಬೇಕು: ನಲಿಕೆ ಸಮಾಜ ಸೇವಾ ಸಂಘದ ಮಾಜಿ ಅಧ್ಯಕ್ಷ ಸೇಸಪ್ಪ ಅಳದಂಗಡಿ ಮಾತನಾಡಿ ಅಳದಂಗಡಿಯಲ್ಲಿ ಪೊಲೀಸ್ ಹೊರ ಠಾಣೆ ತೆರೆಯಬೇಕು. ಅಳದಂಗಡಿ, ನಾರಾವಿ ಭಾಗದಲ್ಲಿ ಯಾವುದೇ ಘಟನೆ ನಡೆದರೂ ೧೫-೨೦ ಕಿ.ಮೀ. ದೂರದಲ್ಲಿರುವ ವೇಣೂರು ಪೊಲೀಸ್ ಠಾಣೆಯನ್ನು ಸಂಪರ್ಕಿಸಬೇಕಾಗಿದೆ ಎಂದರು. ಕೃಷ್ಣಪ್ಪ ನಾರಾವಿ ಮಾತನಾಡಿ ಪೊಲೀಸ್ ಠಾಣೆ ಸೇರಿದಂತೆ ಸರ್ಕಾರಿ ಇಲಾಖೆಗಳಲ್ಲಿ ದಲಿತರ ಕೆಲಸಗಳನ್ನು ತಡವಾಗಿ ಮಾಡುತ್ತಾರೆ ಎಂದು ಬೇಸರ ವ್ಯಕ್ತಪಡಿಸಿದರು. ಉಪ ವಿಭಾಗದ ಎಲ್ಲಾ ಪೊಲೀಸ್ ಠಾಣೆಗಳಲ್ಲಿ ಸಾರ್ವಜನಿಕರ ಎಲ್ಲಾ ಕೆಲಸಗಳನ್ನು ತ್ವರಿತವಾಗಿ ನಡೆಸುವುದಲ್ಲದೆ ಸಾರ್ವಜನಿಕರೊಂದಿಗೆ ಜನಸ್ನೇಹಿಯಾಗಿ ನಡೆದುಕೊಳ್ಳಲು ಡಿವೈಎಸ್ಪಿ ಸೂಚಿಸಿದರು. ನಾಗರಿಕ ಸೇವಾ ಟ್ರಸ್ಟ್ನ ಟ್ರಸ್ಟಿ ಬಾಬು ಎ. ಮಾತನಾಡಿ ಅನುದಾನಿತ ಶಾಲಾ ಕಾಲೇಜುಗಳಲ್ಲಿ ಸರ್ಕಾರದ ನಿಯಮಾವಳಿಗಳಂತೆ ಶಿಕ್ಷಣ ಸಂಸ್ಥೆಗಳಲ್ಲಿ ಒಬ್ಬನೇ ಒಬ್ಬ ದಲಿತ ಶಿಕ್ಷಕ/ಸಿಬ್ಬಂದಿಗಳನ್ನು ನೇಮಕ ಮಾಡಿಕೊಳ್ಳದಿರುವುದು ದಲಿತ ದೌರ್ಜನ್ಯವಾಗಿದೆ. ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ವಿದೇಶಿಗರ ಅನಧಿಕೃತ ವಾಸ: ತಾಲೂಕಿನಲ್ಲಿ ಕಾನೂನು ಬಾಹಿರವಾಗಿ ಮತ್ತು ಅನಧಿಕೃತವಾಗಿ ಮನೆಗಳಲ್ಲಿ ವಸತಿ ನಿಲಯಗಳನ್ನು ನಡೆಸುತ್ತಿದ್ದಾರೆ. ಇಲ್ಲಿ ಸರ್ಕಾರದ ನಿಯಮಾವಳಿಗಳನ್ನು ಪಾಲಿಸಲಾಗುತ್ತಿದೆಯೇ ಎಂದು ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಮುಖಂಡ ಬಿ.ಕೆ. ವಸಂತ ಸಭೆಯಲ್ಲಿ ಪ್ರಶ್ನಿಸಿದರು. ಈ ಬಗ್ಗೆ ಅನಧಿಕೃತ ವಸತಿ ನಿಲಯಗಳ ಬಗ್ಗೆ ಮಾಹಿತಿ ಸಂಗ್ರಹಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಡಿವೈಎಸ್ಪಿ ತಿಳಿಸಿದರು. ತಾಲೂಕಿನ ಅಲ್ಲಲ್ಲಿ ವಲಸೆ ಕಾರ್ಮಿಕರಿದ್ದು ಅವರ ಬಗ್ಗೆ ಮಾಹಿತಿ ಸಂಗ್ರಹಿಸುವ ಕುರಿತು ಈ ಹಿಂದಿನ ಸಭೆಯಲ್ಲಿ ಹೇಳಿದ್ದರೂ ಯಾವುದೇ ಕ್ರಮ ಕೈಗೊಳ್ಳದ ಬಗ್ಗೆ ಬೇಸರ ವ್ಯಕ್ತಪಡಿಸಿದ ಬಿ.ಕೆ. ವಸಂತ್ ಅವರು ವಲಸೆ ಕಾರ್ಮಿಕರು ಯಾವ ರಾಜ್ಯ, ದೇಶದವರು ಎಂದು ತಿಳಿಯಲು ಅವರ ಅಧಿಕೃತ ದಾಖಲೆಗಳನ್ನು ಸಂಗ್ರಹಿಸುವುದು ಅಗತ್ಯವಿದೆ ಎಂದರು. ಈಗಾಗಲೇ ರಾಜ್ಯದಲ್ಲಿ ವಿದೇಶಿಗರು ಅನಧಿಕೃತವಾಗಿ ವಾಸಿಸುವ ಬಗ್ಗೆ ಮಾಹಿತಿ ಬರುತ್ತಿದ್ದು ಈ ಬಗ್ಗೆ ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಿದರೆ ಉತ್ತಮ ಎಂದರು. ಶಿರ್ಲಾಲು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಪುಷ್ಪರಾಜ್ ಎಂ.ಕೆ. ಮಾತನಾಡಿ ರಸ್ತೆಯ ಇಕ್ಕೆಲಗಳಲ್ಲಿ ಅಧಿಕೃತ ಮತ್ತು ಅನಧಿಕೃತವಾಗಿ ಪ್ಲೆಕ್ಸ್, ಬ್ಯಾನರ್ಗಳನ್ನು ಅಳವಡಿಸಲಾಗುತ್ತಿದೆ. ಇದರಿಂದಾಗಿ ಹಲವು ಕಡೆಗಳಲ್ಲಿ ರಸ್ತೆ ಅಪಘಾತಗಳು ಸಂಭವಿಸಿವೆ. ಈ ಬಗ್ಗೆ ಸೂಕ್ತ ಕ್ರಮಗಳನ್ನು ಕೈಗೊಳ್ಳಲು ಗ್ರಾಮ ಪಂಚಾಯತಿಗಳಿಗೆ ಸೂಚಿಸಬೇಕು ಎಂದು ಅವರು ಒತ್ತಾಯಿಸಿದರು.








