



ಬೆಳ್ತಂಗಡಿ: ವಿಧಾನಸಭೆಯ ಚಳಿಗಾಲದ ಅಧಿವೇಶನ ನಡೆಯುತ್ತಿದೆ. ರಾಜ್ಯದ ಸಮಸ್ಯೆಗಳು, ಹೊಸ ಮಸೂದೆಗಳು ಸೇರಿದಂತೆ ಬಿಸಿ ಬಿಸಿ ಚರ್ಚೆಗಳು, ವಾಕ್ಸಮರಗಳು ಅಧಿವೇಶನದಲ್ಲಿ ಕಂಡು ಬರುತ್ತಿದೆ. ಈ ಮಧ್ಯೆ, ಡಿ. 12ರಂದು ಅಧಿವೇಶನ ಆರಂಭಕ್ಕೂ ಮುನ್ನ ಮುಂಜಾನೆಯ ಸಮಯದಲ್ಲಿ ಕೆಸಿಎ ಕ್ರೀಡಾಂಗಣದಲ್ಲಿ ಮಾಧ್ಯಮ ಮಿತ್ರರ ಜೊತೆಗೆ ಬಿಜೆಪಿ ರಾಜ್ಯಾಧ್ಯಕ್ಷರು ಸೇರಿದಂತೆ ಬಿಜೆಪಿ ಶಾಸಕರು, ಪಕ್ಷದ ಮುಖಂಡರು ಕ್ರಿಕೆಟ್ ಆಡಿ ಗಮನ ಸೆಳೆದಿದ್ದಾರೆ.


ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಅವರ ಬ್ಯಾಟಿಂಗ್ ಹಾಗೂ ಬೌಲಿಂಗ್ ಪ್ರದರ್ಶನವು ಜನರ ಗಮನ ಸೆಳೆದಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅನುಭವ ಹಂಚಿಕೊಂಡ ಶಾಸಕರು “ಬೆಳಗಾವಿಯ ಅಧಿವೇಶನದ ನಡುವೆ ಬೆಳಗ್ಗೆ ಮಾಧ್ಯಮ ಸ್ನೇಹಿತರ ಜೊತೆ ಬೆಳಗಾವಿಯ ಕೆಸಿಎ ಕ್ರೀಡಾಂಗಣದಲ್ಲಿ ಬಿಜೆಪಿ ರಾಜ್ಯಧ್ಯಕ್ಷ ಬಿ.ವೈ. ವಿಜಯೇಂದ್ರ, ಶಾಸಕ ಮಿತ್ರರು, ಪಕ್ಷದ ಮುಖಂಡರು ಮತ್ತಿತರರೊಂದಿಗೆ ಕ್ರಿಕೆಟ್ ಆಡಿದರು. ಹಲವಾರು ಒತ್ತಡದ ಮಧ್ಯೆ ಕ್ರೀಡೆಯಲ್ಲಿ ತೊಡಗಿಸಿಕೊಂಡಾಗ ದೇಹಕ್ಕೆ ಉಲ್ಲಾಸ ಮತ್ತು ಮನಸ್ಸಿಗೆ ಸಂತೋಷವನ್ನು ನೀಡಿ ನಮ್ಮ ದೈಹಿಕ ಸಧೃಡತೆಯನ್ನು ಕಾಪಾಡಿಕೊಳ್ಳಲು ಸಹಕಾರಿಯಾಗುತ್ತದೆ.” ಎಂದಿದ್ದಾರೆ.









