



ಬೆಳ್ತಂಗಡಿ: ಪುದುವೆಟ್ಟು ಗ್ರಾ.ಪಂ ವ್ಯಾಪ್ತಿಯಲ್ಲಿ ಒಟ್ಟು 43 ಮಂದಿ ಗುರುತಿನ ಚೀಟಿ ಪಡೆದ ವಿಶೇಷಚೇತರಿದ್ದು, ಅವರಿಗೆ ಸರಕಾರದ ವಿವಿಧ ಸೌಲಭ್ಯಗಳನ್ನು ಒದಗಿಸಿಕೊಡುವ ಬಗ್ಗೆ ಪುನರ್ವಸತಿ ಕಾರ್ಯಕರ್ತೆ ಶಮೀಮಾ ಬಾನು ಅವರ ಮೂಲಕ ಪೂರಕ ಕೆಲಸ ಮಾಡಲಾಗುತ್ತಿದೆ. ಅವರೆಲ್ಲರ ಬಗ್ಗೆ ವಿಶೇಷ ಕಾಳಜಿಯನ್ನು ಗ್ರಾಮ ಪಂಚಾಯತ್ ಹೊಂದಿದೆ ಎಂದು ಗ್ರಾ.ಪಂ. ಅಧ್ಯಕ್ಷ ಪೂರ್ಣಾಕ್ಷ ತಿಳಿಸಿದರು.
ವಿಶ್ವ ವಿಶೇಷಚೇತನರ ದಿನಾಚರಣೆಯ ಅಂಗವಾಗಿ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಡಿ. 11ರಂದು ನಡೆದ ವಿಶೇಷಚೇತನರ ಸಮನ್ವಯ ಗ್ರಾಮ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.
ನಮ್ಮ ಪಂಚಾಯತ್ ನಿಂದ ವಿಶೇಷಚೇತನರ ಮೀಸಲು ಅನುದಾನವನ್ನು ಅವರಿಗಾಗಿಯೇ ವಿನಿಯೋಗಿಸಿ ಅವರ ಬೇಡಿಕೆಗಳಿಗೆ ಸ್ಪಂದಿಸಲಾಗುತ್ತಿದೆ. ಪುದುವೆಟ್ಟು ಪಂಚಾಯತ್ ಸಣ್ಣ ಮತ್ತು ಕಡಿಮೆ ಆದಾಯ ಹೊಂದಿರುವುದರಿಂದ 5% ಮೀಸಲು ಅನುದಾನದ ಪ್ರಮಾಣ ಕಡೀಮೆ ಇದೆ. ಅದಾಗ್ಯೂ ಲಭ್ಯ ಅನುದಾನದಲ್ಲಿ ದಾನಿಗಳ ಸಹಕಾರದೊಂದಿಗೆ ಪೂರಕವಾಗಿ ಸ್ಪಂದಿಸಲಾಗುತ್ತಿದೆ ಎಂದೂ ಅವರು ಹೇಳಿದರು.


ತಾಲೂಕು ವಿಕಲಚೇತನರ ವಿವಿಧೋದ್ದೇಶ ಪುನರ್ವಸತಿ ಸಂಯೋಜಕ ಜೋನ್ ಬ್ಯಾಪ್ಟಿಸ್ಟ್ ಡಿಸೋಜ ಮಾತನಾಡಿ, ವಿಕಲಚೇತನರಿಗೆ ಸರಕಾರದಿಂದ ಇರುವ ಸೌಲಭ್ಯಗಳ ಸಮಗ್ರ ಮಾಹಿತಿ ನೀಡುತ್ತಾ ವಿಕಲಚೇತನರ ಪ್ರಶ್ನೆಗಳಿಗೆ ಸಮರ್ಪಕವಾಗಿ ಉತ್ತರಿಸಿದರು.
ಗ್ರಾಮ ಸಭೆಗೆ ಸಹಯೋಗ ನೀಡಿದ ಸೌಭಾಗ್ಯ ವಿಕಲಚೇತನರ ಪತ್ತಿನ ಸಹಕಾರ ಸಂಘ ಬೆಳ್ತಂಗಡಿ ಇದರ ಸಲಹಾ ಸಮಿತಿ ಅಧ್ಯಕ್ಷ, ಹಿರಿಯ ಪತ್ರಕರ್ತ ಅಶ್ರಫ್ ಆಲಿಕುಂಞಿ ಮುಂಡಾಜೆ ಮಾತನಾಡಿ, ಸಂಘದ ಸದಸ್ಯತ್ವ ವಿಶೇಷಚೇತನರಿಗಾಗಿಯೇ ರಾಜ್ಯಮಟ್ಟದ ಅನುಮತಿಯೊಂದಿಗೆ ಕಾರ್ಯನಿರ್ವಹಿಸುತ್ತಿರುವ ಬ್ಯಾಂಕಿನಲ್ಲಿ ಈಗ ಇರುವ ವ್ಯವಹಾರ ವಿವರ, ಸಾಲಸೌಲಭ್ಯಗಳ ಮಾಹಿತಿ, ವಿಕಲಚೇತನರ ಅಭಿವೃದ್ಧಿಗೆ ಇರುವ ಅವಕಾಶಗಳ ವಿವರ ನೀಡಿದರು.
ಸಭೆಯಲ್ಲಿ ಗ್ರಾಮ ಪಂಚಾಯತ್ ಸದಸ್ಯ ಯಶವಂತ್ ಗೌಡ , ಭಾಸ್ಕರ, ರೇಣುಕಾ, ವನಿತಾ, ಅಪ್ಪಿ, ಇಂದಿರಾ, ಜಯಲಕ್ಷ್ಮಿ, ರಾಮೇಂದ್ರ, ಸೌಭಾಗ್ಯ ಸೊಸೈಟಿಯ ಸಲಹಾ ಸಮಿತಿ ಸದಸ್ಯೆ ಸಿ.ಕೆ ಚಂದ್ರಕಲಾ, ಮೆನೇಜರ್ ಸಹನ್ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.
ಪಿಡಿಒ ರವಿ ಎನ್.ಬಿ ಸ್ವಾಗತಿಸಿ ಪ್ರಸ್ತಾವನೆಗೈದರು. ಬಿಲ್ ಕಲೆಕ್ಟರ್ ರವಿಶಂಕರ್ ನಿರೂಪಿಸಿದರು. ವಿಕಲಚೇತನರು ಮತ್ತು ಅವರ ಪೋಷಕರ ಅಹವಾಲು ಸ್ವೀಕರಿಸಲಾಯಿತು. ಕೆಲವು ಬೇಡಿಕೆಗಳಿಗೆ ಎಂಆರ್ಡಬ್ಲ್ಯೂ ಮೂಲಕ ಪರಿಹಾರವನ್ನೂ ಕಂಡುಕೊಳ್ಳಲಾಯಿತು. ಗ್ರಾಮೀಣ ಪುನರ್ವಸತಿ ಕಾರ್ಯಕರ್ತೆ ಶಮೀಮಾ ಬಾನು ಧನ್ಯವಾದ ಸಲ್ಲಿಸಿದರು.









