


ಬೆಳ್ತಂಗಡಿ: ಹಬ್ಬಗಳ ಪೈಕಿ ರಾಜನ ಸ್ಥಾನದಲ್ಲಿರುವ ಹಬ್ಬ ದೀಪಾವಳಿ. ಕತ್ತಲೆಯನ್ನು ಓಡಿಸುವ ಶಕ್ತಿ ಬೆಳಕಿಗಿದೆ. ಆದ್ದರಿಂದ ಅಂಧಕಾರ ತೊಲಗಿ ಎಲ್ಲರ ಬಾಳಲ್ಲಿ ಹೊಸ ಬೆಳಕು ಮೂಡಲಿ. ಋಣಾತ್ಮಕತೆಯಿಂದ ಧನಾತ್ಮಕತೆಗೆ ಕೊಂಡೊಯ್ಯುವ ಬೆಳಕಿನ ಹಬ್ಬವೇ ಈ ದೀಪಾವಳಿ ಎಂದು ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಸತೀಶ್ಚಂದ್ರ ಹೇಳಿದರು.
ಬೆಳ್ತಂಗಡಿ ಲಯನ್ಸ್ ಕ್ಲಬ್ ನಿಂದ ಬಲಿಪ ರೆಸಾರ್ಟ್ ಸಭಾಂಗಣದಲ್ಲಿ ನಡೆದ ಸಾಮೂಹಿಕ ದೀಪಾವಳಿ ಆಚರಣೆ ಉದ್ಘಾಟಿಸಿ ಅವರು ಮಾತನಾಡಿದರು.
ಅಧ್ಯಕ್ಷತೆಯನ್ನು ಲಯನ್ಸ್ ಕ್ಲಬ್ ಅಧ್ಯಕ್ಷ ಮುರಳಿ ಬಲಿಪ ವಹಿಸಿದ್ದರು. ಉದ್ಘಾಟನೆಯ ವೇಳೆ ಮುರಳಿ ಬಲಿಪ ಅವರ ಮಾತೃಶ್ರೀಯವರು, ಧರ್ಮಪತ್ನಿ ಮನೋರಮಾ ಬಲಿಪ ಜೊತೆಯಾಗಿ ದೀಪ ಪ್ರಜ್ವಲನಗೊಳಿಸಿದರು.


ಶಿಕ್ಷಣ ಕ್ಷೇತ್ರದ ಸಾಧನೆಗೆ ಪ್ರಶಸ್ತಿ ಪಡೆದ ಲಯನ್ಸ್ ಕ್ಲಬ್ ಕಾರ್ಯದರ್ಶಿ ಅಮಿತಾನಂದ ಹೆಗ್ಡೆ ಅವರನ್ನು ಈ ವೇಳೆ ಸನ್ಮಾನಿಸಿ ಗೌರವಿಸಲಾಯಿತು.
ಲಿಯೋ ಕ್ಲಬ್ ಅಧ್ಯಕ್ಷೆ ಡಾ. ಭಾಷಿಣಿ ಪ್ರಾರ್ಥನೆ ಹಾಡುವುದರ ಜೊತೆಗೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಸಂತ ಶೆಟ್ಟಿ ಹಾಗೂ ಕೃಷ್ಣ ಆಚಾರ್ ಅತಿಥಿ ಮತ್ತು ಸನ್ಮಾನಿತರ ಪರಿಚಯ ಮಾಡಿದರು. ಉಪಾಹಾರದ ಪ್ರಾಯೋಜಕರಾದ ಜಯರಾಂ ಭಂಡಾರಿ ಧರ್ಮಸ್ಥಳ, ನಾಣ್ಯಪ್ಪ ನಾಯ್ಕ್ ಮತ್ತು ಕೃಷ್ಣ ಆಚಾರ್ ಅವರನ್ನು ಗೌರವಿಸಲಾಯಿತು.
ದೀಪಾವಳಿ ಪ್ರಯುಕ್ತ ರಂಗೋಲಿ ಬಿಡಿಸಲಾಯಿತು. ದೋಸೆ ಸಹಿತ ಇರುವ ಉಪಹಾರದ ವ್ಯವಸ್ಥೆ ಮಾಡಲಾಗಿತ್ತು. ಸಾಂಪ್ರದಾಯಿಕ ಉಡುಗೆ ತೊಡುಗೆ ತೊಟ್ಟು ಸ್ಪರ್ಧೆ ಇತ್ಯಾಧಿ ಆಟೋಟ ಸ್ಪರ್ಧೆಗಳನ್ನು ಮನೋರಂಜನಾತ್ಮಕವಾಗಿ ಆಚರಿಸಲಾಯಿತು. ಕಾರ್ಯಕ್ರಮ ಸಂಯೋಜಕ ನಾಣ್ಯಪ್ಪ ನಾಯ್ಕ್ ಸ್ವಾಗತಿಸಿದರು. ಧರಣೇಂದ್ರ ಕೆ ಜೈನ್ ಕಾರ್ಯಕ್ರಮ ನಿರೂಪಿಸಿದರು. ಕೋಶಾಧಿಕಾರಿ ಅಮಿತಾನಂದ ಹೆಗ್ಡೆ ವಂದಿಸಿದರು.









