ಗುರುವಾಯನಕೆರೆ: ಅರೋಗ್ಯಯುತ ದೇಶದ ನಿರ್ಮಾಣದಲ್ಲಿ ಪ್ರತಿಯೊಬ್ಬರ ಸಹಕಾರ ಅಗತ್ಯವಿದ್ದು ಇದು ಜವಾಬ್ದಾರಿಯೂ ಕೂಡ ಆಗಿದೆ ಎಂದು ಬೆಳ್ತಂಗಡಿ ಪೋಲಿಸ್ ನಿರೀಕ್ಷಕ ಬಿ.ಜಿ. ಸುಬ್ಬಾಪುರ ಮಠ ಹೇಳಿದರು. ಅವರು ಗುರುವಾಯನಕೆರೆಯ ವಿದ್ವತ್ ಪದವಿ ಪೂರ್ವ ಕಾಲೇಜಿನಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಪೋಲಿಸ್ ( ಬಂಟ್ವಾಳ ಉಪವಿಭಾಗ ) ಬೆಳ್ತಂಗಡಿ ಪೋಲಿಸ್ ಠಾಣೆಯಿಂದ ಜರುಗಿದ್ದ ಮಾದಕ ವಸ್ತುಗಳ ದುಷ್ಪರಿಣಾಮಗಳ ಜಾಗೃತಿ ಮೂಡಿಸುವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಬೆಳ್ತಂಗಡಿ ಪೋಲಿಸ್ ಠಾಣೆಯ ಉಪನಿರೀಕ್ಷಕ ಆನಂದ ಮಾತನಾಡಿ ಮಾದಕ ವಸ್ತುಗಳ ಸೇವನೆಯ ಚಟಕ್ಕೆ ಬಲಿಯಾದವರನ್ನು ಗುರುತಿಸಿ ವ್ಯಸನಮುಕ್ತ ಕೇಂದ್ರಗಳ ಮೂಲಕ ಚಿಕಿತ್ಸೆ ನೀಡಬೇಕು. ಮಾದಕ ವಸ್ತುಗಳ ಸೇವನೆ ಮಾಡುವ ವ್ಯಕ್ತಿಯು ಸ್ವಇಚ್ಛೆಯಿಂದ ನಿರ್ಧಾರ ಕೈಗೊಂಡಾಗ ವ್ಯಸನ ಮುಕ್ತನಾಗಲು ಸಾಧ್ಯವಾಗುತ್ತದೆ. ವಿದ್ಯಾರ್ಥಿಗಳಿಗೆ ಈ ಬಗ್ಗೆ ಜಾಗೃತಿ ಮೂಡಿಸಿದಾಗ ಮಾತ್ರ ಉತ್ತಮ ಸಮಾಜ ನಿರ್ಮಾಣವಾಗಲು ಸಾಧ್ಯ ಎಂದರು. ನಂತರ ಕಾಲೇಜಿನ ಎಲ್ಲಾ ವಿದ್ಯಾರ್ಥಿಗಳು ಮಾದಕ ವಸ್ತುಗಳಿಗೆ ಬಲಿಯಾಗುವುದಿಲ್ಲ ಎಂದು ಪ್ರತಿಜ್ಞಾವಿಧಿಯನ್ನು ಕೈಗೊಂಡರು. ವೇದಿಕೆಯಲ್ಲಿ ವಿದ್ವತ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಸುಭಾಶ್ಚಂದ್ರ ಶೆಟ್ಟಿ, ಕಾರ್ಯದರ್ಶಿ ಪ್ರಜ್ವಲ್ ರೈ, ಕಾಲೇಜಿನ ಪ್ರಾಂಶುಪಾಲ ಹರೀಶ ಕೆ.ಆರ್. ಉಪಸ್ಥಿತರಿದ್ದರು. ಕನ್ನಡ ಉಪನ್ಯಾಸಕ ನೀಲಕಂಠ ಕಾರ್ಯಕ್ರಮ ನಿರೂಪಿಸಿದರು.