
ಗುರುವಾಯನಕೆರೆ: ಎಕ್ಸೆಲ್ ಶೈಕ್ಷಣಿಕ ಸಾಧಕರಿಗೆ ಸನ್ಮಾನ ಮತ್ತು ಪ್ರತಿಭೆಗಳಿಗೆ ಬೆಳಕು ನೀಡುವ ವಿದ್ಯಾರ್ಥಿವೇತನ ವಿತರಣೆ, 7 ಜನ ಜೆಇಇ ಸಾಧಕರಿಗೆ ಸನ್ಮಾನ ಸೇರಿದಂತೆ 142 ಹೆಚ್ಚು ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಹಾಗೂ ಬೋರ್ಡ್ ಪರೀಕ್ಷೆಗಳಲ್ಲಿ ಸಾಧನೆ ಮಾಡಿದವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.
ಕೊಡುವ ಕೈ ಹಾಡುವ ಬಾಯಿ ಎಂದೂ ಬಡವಾಗಲಾರವು’. ಕೊಡುವ ಕೈಗಳೇ ಸಮಾಜದ ನಿರ್ಮಾತೃಗಳು ಎಂಬ ಮಾತಿಗೆ ಅನ್ವರ್ಥವೆಂಬಂತೆ ಗುರುವಾಯನಕೆರೆಯ ಎಕ್ಸೆಲ್ ಪ.ಪೂ. ಕಾಲೇಜಿನ ಅಧ್ಯಕ್ಷ ಸುಮಂತ್ ಕುಮಾರ್ ಜೈನ್ ಅವರು ಸುಮಾರು 189 ಶೈಕ್ಷಣಿಕ ಸಾಧಕ ವಿದ್ಯಾರ್ಥಿಗಳಿಗೆ ಹಾಗೂ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ‘ಬೆಳಕು’ ಯೋಜನೆಯಡಿಯಲ್ಲಿ ವಿದ್ಯಾರ್ಥಿವೇತನವನ್ನು ಕೊಟ್ಟು ಸನ್ಮಾನಿಸಿದರು.
ಎಕ್ಸೆಲ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ಈ ಚೆಕ್ ಅನ್ನು ಪ್ರಾಂಶುಪಾಲರಾದ ಡಾ.ನವೀನ್ ಕುಮಾರ್ ಮರಿಕೆ ಮತ್ತು ಡಾ.ಪ್ರಜ್ವಲ್ ಕಜೆ ಸ್ವೀಕರಿಸಿದರು. ವಿವಿಧ ಶಾಲೆಗಳಲ್ಲಿ
STATE, CBSE, ICSE, ಪಠ್ಯಕ್ರಮದಲ್ಲಿ ಕಲಿತು 10ನೇ ತರಗತಿಯಲ್ಲಿ ಅತ್ಯುತ್ತಮ ಫಲಿತಾಂಶದ ಮೂಲಕ ಸಾಧನೆಗೈದ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ವಿದ್ಯಾರ್ಥಿ ವೇತನವನ್ನು ಪಡೆದ 189ಕ್ಕೂ ಹೆಚ್ಚು ವಿದ್ಯಾರ್ಥಿಗಳಲ್ಲಿ ಒಬ್ಬರಾದ ಕಿರಣ್ ಕುಮಾರ್ ಮಾತನಾಡಿ ” ನಮ್ಮ ಸಾಧನೆಯನ್ನು ಗುರುತಿಸಿ ವಿದ್ಯಾರ್ಥಿ ವೇತನವನ್ನು ನೀಡಿದಂತಹ ಇಂತಹ ಶೈಕ್ಷಣಿಕ ಸಂಸ್ಥೆಯಲ್ಲಿ ನಾನು ವ್ಯಾಸಂಗ ಮಾಡುತ್ತಿರುವುದು ನನ್ನ ಪಾಲಿನ ಅದೃಷ್ಟ” ಎಂದರು.
ವಿದ್ಯಾರ್ಥಿನಿ ದೀಕ್ಷಾ ” ಇಂತಹ ನಿಸ್ವಾರ್ಥ ಸೇವೆಯಿಂದಲೇ ಈ ಸಂಸ್ಥೆಯು ರಾಜ್ಯದಾದ್ಯಂತ ಹೆಸರು ಗಳಿಸಿದೆ. ವಿಶಿಷ್ಟ ಕಾರ್ಯಕ್ರಮಗಳ ಮೂಲಕ ನಾಡಿನ ಮೂಲೆ ಮೂಲೆಗಳಿಂದ ವಿದ್ಯಾರ್ಥಿಗಳನ್ನು ಆಕರ್ಷಿಸುತ್ತಿದೆ. ಈ ವಿದ್ಯಾರ್ಥಿ ವೇತನವು ನನ್ನ ಭವಿಷ್ಯದ ದಾರಿಗೆ ಬೆಳಕಾಗುವುದಲ್ಲದೆ ಇನ್ನಷ್ಟು ಸಾಧಿಸಬೇಕೆಂಬ ಉತ್ಸಾಹವನ್ನು ಮೂಡಿಸಿದೆ. ಶ್ರೀ ಸುಮಂತ್ ಕುಮಾರ್ ರವರ ಈ ಕಾರ್ಯವು ಸಮಾಜಕ್ಕೆ ಮಾದರಿಯಾದುದಾಗಿದೆ ಎಂದು ಬಣ್ಣಿಸಿದರು.
ರಾಜ್ಯದ ವಿವಿಧ ಭಾಗಗಳಿಂದ ಬಂದು ಎಕ್ಸೆಲ್ ವಿದ್ಯಾ ಸಂಸ್ಥೆಯಲ್ಲಿ ಅಧ್ಯಯನ ಮಾಡಿ ವಿಶಿಷ್ಟ ಸಾಧನೆ ಮೆರೆದ ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಈ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ಸಾಧಕ ವಿದ್ಯಾರ್ಥಿಗಳ ಜೊತೆ ಪೋಷಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎಕ್ಸೆಲ್ ವಿದ್ಯಾಸಂಸ್ಥೆಯ ಅಧ್ಯಕ್ಷ ಸುಮಂತ್ ಕುಮಾರ್ ಜೈನ್ ಅವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ “ಮಕ್ಕಳು ದುಶ್ಚಟಗಳಿಗೆ ದಾಸರಾಗದೆ ತಂದೆ ತಾಯಿಗಳ ಕನಸನ್ನು ಈಡೇರಿಸುವತ್ತ ಮುನ್ನಡೆಯಬೇಕು. ಪರಿಶ್ರಮದಿಂದ ಸಾಧನೆ ಸಾಧ್ಯ” ಎಂದು ಹೇಳುತ್ತಾ ಸ್ವಾತಂತ್ರ್ಯೋತ್ಸವಕ್ಕೆ ಶುಭಾಶಯ ಕೋರಿದರು.
ಪ್ರಸ್ತಾವಿಕ ಭಾಷಣ ಮಾಡಿದ ಎಕ್ಸೆಲ್ ವಿದ್ಯಾಸಾಗರ ಕ್ಯಾಂಪಸ್‌ನ ಪ್ರಿನ್ಸಿಪಾಲ ಡಾ. ನವೀನ್ ಕುಮಾರ್ ಮರಿಕೆ ಅವರು ” ಪುಟ್ಟ ಮೊಳಕೆಯಿಂದ ಚಿಗುರೊಡೆದ ಎಕ್ಸಲ್ ಇಂದು ಹೆಮ್ಮರವಾಗಿ ಬೆಳೆದಿದೆ. ಸುಮಾರು 5000 ವಿದ್ಯಾರ್ಥಿಗಳನ್ನು ಒಳಗೊಂಡಿದ್ದು 700ಕ್ಕಿಂತಲೂ ಹೆಚ್ಚು ಉದ್ಯೋಗಿಗಳು, 3 ಕ್ಯಾಂಪಸ್ ಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎನ್ನುತ್ತಾ, ಪ್ರತಿ ವರ್ಷವೂ ಪಿಯು ಮಂಡಳಿ ಪರೀಕ್ಷೆಯಲ್ಲಿ ನೂರರಷ್ಟು ಫಲಿತಾಂಶವನ್ನು ಪಡೆಯುತ್ತಾ ಬಂದಿದೆ. NEET, JEE, KCET, NDA, NATAಗಳಂತಹ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಅತ್ಯುತ್ತಮ ಸಾಧನೆ ಮಾಡಿರುವ ಎಕ್ಸೆಲ್ ಕಾಲೇಜಿನ ವಿದ್ಯಾರ್ಥಿಗಳು ದೇಶದ ಅತ್ಯುನ್ನತ ಏಮ್ಸ್, ಐಐಟಿ, ಎಂಜಿನಿಯರಿಂಗ್ ಮತ್ತು ಮೆಡಿಕಲ್ ಕಾಲೇಜುಗಳಲ್ಲಿ ವಿದ್ಯಾಭ್ಯಾಸವನ್ನು ಮಾಡುತ್ತಿದ್ದಾರೆ. ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳು ಕೂಡಾ ಹಲವು ಬಗೆಯ ಸಾಧನೆ ಮಾಡಿದ್ದಾರೆ ” ಎಂದು ಹೇಳಿದರು.
ದೀಪ ಬೆಳಗಿಸುವ ಮೂಲಕ ಈ ಶೈಕ್ಷಣಿಕ ಸಾಧಕರಿಗೆ ಅಭಿನಂದನೆ ಹಾಗೂ ವಿದ್ಯಾರ್ಥಿ ವೇತನ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಭೂಸೇನೆಯ ವಿಶ್ರಾಂತ ಕರ್ನಲ್ ನಿತಿನ್ ಭಿಡೆ ಮಾತನಾಡಿ “ಭಾರತದ ಐಕ್ಯತೆ ಮತ್ತು ಸಮಗ್ರತೆಗಾಗಿ ಹೋರಾಡಿದವರು ನಮಗೆ ಆದರ್ಶವಾಗಬೇಕು. ಇಂದಿನ ಯುವಕರೇ ಸ್ವಾತಂತ್ರ್ಯದ ನಿಜವಾದ ರಕ್ಷಕರಾಗಬೇಕು. ಸ್ವಾತಂತ್ರವು ನಮ್ಮಿಂದ ಕೈ ಜಾರಿ ಹೋಗದಂತೆ ಕಾಪಾಡಿಕೊಳ್ಳಬೇಕೆಂದು ನೂರನೇ ಸ್ವಾತಂತ್ರ್ಯೋತ್ಸವವನ್ನು ಆಚರಿಸುವಾಗ ನೀವೆಲ್ಲರೂ ಗಣ್ಯರಾಗಿ ವೇದಿಕೆಯ ಮೇಲೆ ಭಾಗವಹಿಸುವಂತಾಗಬೇಕು” ಎಂದು ಕರೆ ನೀಡಿದರು.
ವಿದ್ಯಾರ್ಥಿ ವೇತನದ ವಿತರಣೆ ಮಾಡಿದ ಬೆಸ್ಟ್ ಫೌಂಡೇಶನ್ ಅಧ್ಯಕ್ಷ ರಕ್ಷಿತ್ ಶಿವರಾಂ ಅವರು ” ಎಕ್ಸೆಲ್ ವಿದ್ಯಾಸಂಸ್ಥೆಯು ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಗಳಿಸುವ ವಿದ್ಯಾಸಂಸ್ಥೆಯಾಗಿ ರೂಪಗೊಳ್ಳಲಿ, ಮುಂದಿನ ದಿನಗಳಲ್ಲಿ ಇದು ವಿದ್ಯಾ ಕಾಶಿಯಾಗಲಿದೆ ಎಂದು ಭವಿಷ್ಯ ನುಡಿದರು. ವಿಜ್ಞಾನ ತಂತ್ರಜ್ಞಾನದಲ್ಲಿ ಉತ್ತುಂಗದಲ್ಲಿರುವ ನಾವು ಭವಿಷ್ಯದ ಭಾರತದ ನಿರ್ಮಾಣಕ್ಕಾಗಿ ಹೆಚ್ಚು ಹೆಚ್ಚು ಉದ್ಯೋಗಗಳನ್ನು ಸೃಷ್ಟಿಸುವಂತಹ ಸಾಮರ್ಥ್ಯ ಉಳ್ಳವರಾಗಬೇಕು. ರಾಮಾಯಣ ಮಹಾಭಾರತಗಳು ನಮ್ಮ ಜೀವನಕ್ಕೆ ಆದರ್ಶಗಳಾಗಬೇಕು. ಮಾನವೀಯ ಮೌಲ್ಯ ಆಧಾರಿತ ಬದುಕೇ ನಿಜವಾದ ಬದುಕು” ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಸಾಧಕರನ್ನು ಅಭಿನಂದಿಸಿ ಮಾತನಾಡಿದ ಶಾಲಾ ಶಿಕ್ಷಣ ಇಲಾಖೆ, (ಪದವಿ ಪೂರ್ವ ) ವಿಭಾಗದ ಉಪ ನಿರ್ದೇಶಕಿ ರಾಜೇಶ್ವರಿಯವರು ಮಾತನಾಡಿ” ಇಂತಹ ಸುಂದರ ಪರಿಸರದಲ್ಲಿ ಸಾಧನೆ ಮಾಡಲು ಬಂದಿರುವ ನಿಮ್ಮನ್ನು ನೋಡಿ ಹರ್ಷವಾಗುತ್ತಿದೆ” ಎಂದು ಸಂತಸ ವ್ಯಕ್ತಪಡಿಸಿದರು. ಹೆಸರಾಂತ ವಕೀಲ ಧನಂಜಯ್ ರಾವ್ ಅವರು ಮಾತನಾಡುತ್ತಾ ” ಪೂರ್ವದಲ್ಲಿ ನಮಗೆ ಸ್ವಾತಂತ್ರ್ಯವಿತ್ತು ಆದರೆ ವಿದೇಶಿಯರ ಒಡೆದಾಳುವ ನೀತಿಯಿಂದ ಅದನ್ನು ಕಳೆದುಕೊಳ್ಳಬೇಕಾಯಿತು. ಪಾಶ್ಚಾತ್ಯ ಸಂಸ್ಕೃತಿಗೆ ಮಾರುಹೋಗಿರುವ ನಾವು ಸ್ವಾತಂತ್ರ್ಯವನ್ನು ಕಳೆದುಕೊಳ್ಳುತ್ತೇವೆನೋ? ಎಂದು ಆತಂಕವನ್ನು ವ್ಯಕ್ತಪಡಿಸುವ ಮೂಲಕ ಯುವ ಜನತೆಯು ಭಾರತೀಯತೆಯನ್ನು ಮೈಗೂಡಿಸಿಕೊಳ್ಳಬೇಕಾಗಿದೆ” ಎಂದರು. ಭಾರತೀಯ ವಾಯುಸೇನೆಯ ನಿವೃತ್ತ ವಾರಂಟ್ ಆಫೀಸರ್ ಬಿ. ಅನಂತ್ ರಾಜ್ ಜೈನ್ ಮತ್ತು ಧಾರ್ಮಿಕ ಮುಖಂಡ ಕಿರಣ ಚಂದ್ರ ಪುಷ್ಪಗಿರಿ ಅವರು ಮಕ್ಕಳಿಗೆ ತಮ್ಮ ಅನುಭವಗಳನ್ನು ತಿಳಿಸಿದರು.
ಎಕ್ಸೆಲ್ ಪದವಿ ಪೂರ್ವ ಕಾಲೇಜು ವಿದ್ಯಾಸಾಗರ ಕ್ಯಾಂಪಸ್ ನ ಪ್ರಾಂಶುಪಾಲ ಡಾ. ನವೀನ್ ಕುಮಾರ್ ಮರಿಕೆ, ಅರೆಮಲೆ ಬೆಟ್ಟ ಕ್ಯಾಂಪಸ್ ನ ಪ್ರಾಂಶುಪಾಲ ಡಾ. ಪ್ರಜ್ವಲ್ ಕಜೆ ಅವರು, ಬೋಧಕ ಬೋಧಕೇತರ ಸಿಬ್ಬಂದಿಯವರು, ಎಕ್ಸೆಲ್ ಟೆಕ್ನೋ ಸ್ಕೂಲ್ ನ ವಿದ್ಯಾರ್ಥಿಗಳು, ಶಿಕ್ಷಕರು, ಪೋಷಕರು, ಹಿರಿಯ ವಿದ್ಯಾರ್ಥಿಗಳು ಸಾವಿರಾರು ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ಈ ಕಾರ್ಯಕ್ರಮಕ್ಕೆ ಮೆರುಗು ತುಂಬಿದರು. ಮುಖ್ಯ ಅತಿಥಿಗಳಿಗೆ ಸಂಸ್ಥೆಯ ಅಧ್ಯಕ್ಷ ಸುಮಂತ್ ಕುಮಾರ್ ಜೈನ್ ಅವರು ಗೌರವಾರ್ಪಣೆ ಮಾಡುವ ಮೂಲಕ ಅಭಿನಂದಿಸಿದರು. ಉಪನ್ಯಾಸಕರಾದ ಪ್ರಜ್ವಿತ್ ರೈ, ಪ್ರಸನ್ನ ಭೋಜ ಮತ್ತು ಈಶ್ವರ್ ಶರ್ಮ ಅವರು ನಿರೂಪಿಸಿದರು. ಪ್ರಾಚಾರ್ಯ ಡಾ. ನವೀನ್ ಕುಮಾರ್ ಮರಿಕೆ ಸ್ವಾಗತಿಸಿ, ಡಾ. ಪ್ರಜ್ವಲ್ ವಂದಿಸಿದರು.