ತನಿಖೆ ಹೆಸರಿನಲ್ಲಿ ಕಾರ್ಯಕರ್ತರನ್ನು ಹಿಂಸಿಸಿದರೆ ಬಿಜೆಪಿ ವಿರೋಧಿಸುತ್ತದೆ: ಧರ್ಮಸ್ಥಳದ ಪಾವಿತ್ರ್ಯತೆ ಹಾಳು ಮಾಡಲು ಯತ್ನಿಸಿದರೆ ಸಹಿಸಲು ಸಾಧ್ಯವಿಲ್ಲ-ಪತ್ರಿಕಾಗೋಷ್ಠಿಯಲ್ಲಿ ಶಾಸಕ ಹರೀಶ್ ಪೂಂಜ ಎಚ್ಚರಿಕೆ

0

ಬೆಳ್ತಂಗಡಿ: ಕೆಲವು ದಿನಗಳ ಹಿಂದೆ ಧರ್ಮಸ್ಥಳದ ಪಾಂಗಳದಲ್ಲಿ ಕ್ಷುಲ್ಲಕ ಕಾರಣಕ್ಕೆ ನಡೆದ ಗಲಾಟೆಗೆ ಸಂಬಂಧಿಸಿ ಸ್ವಯಂಪ್ರೇರಿತ ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿರುವ ಪೊಲೀಸರು ತನಿಖೆ ಹೆಸರಿನಲ್ಲಿ ಬಿಜೆಪಿ ಮತ್ತು ಹಿಂದೂ ಸಂಘಟನೆ ಕಾರ್ಯಕರ್ತರ ಹೆಸರನ್ನು ಸೇರಿಸಿ ವಿನಾಕಾರಣ ಹಿಂಸೆ ನೀಡಿದರೆ ಬಿಜೆಪಿ ಬಲವಾಗಿ ವಿರೋಧಿಸುತ್ತದೆ ಮತ್ತು ಎಸ್‌ಐಟಿ ತನಿಖೆ ನೆಪದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಸೇರಿದಂತೆ ಯಾವುದೇ ಹಿಂದೂ ಧಾರ್ಮಿಕ ಕೇಂದ್ರದ ಪಾವಿತ್ರ್ಯತೆ ಹಾಳುಮಾಡಲು ಯತ್ನಿಸಿದರೆ ಸಹಿಸಲು ಸಾಧ್ಯವಿಲ್ಲ ಎಂದು ಶಾಸಕ ಹರೀಶ್ ಪೂಂಜ ಎಚ್ಚರಿಸಿದ್ದಾರೆ. ಇಂತಹ ಪ್ರಕರಣ ನಡೆಯಲು ಪೊಲೀಸರ ವೈಫಲ್ಯ ಕಾರಣ ಎಂದು ಶಾಸಕರು ಇದೇ ವೇಳೆ ಆರೋಪಿಸಿದ್ದಾರೆ.

ಉಜಿರೆಯಲ್ಲಿ ಆ.9ರಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಎಸ್‌ಐಟಿ ತನಿಖೆ ನಡೆಯುತ್ತಿರುವಾಗ ಒಬ್ಬ ಜನಪ್ರತಿನಿಧಿಯಾಗಿ ತನಿಖೆಗೆ ಅಡ್ಡಿಯಾಗಬಾರದೆಂಬ ಕಾರಣಕ್ಕೆ ನಾನು ಏನೂ ಹೇಳಿಕೆ ನೀಡಿಲ್ಲ. ಎಸ್‌ಐಟಿ ಕೂಡ ತನಿಖೆ ಪ್ರಗತಿ ಬಗ್ಗೆ ಏನೂ ಹೇಳುತ್ತಿಲ್ಲ. ಸರಕಾರಕ್ಕೆ ಮಧ್ಯಂತರ ವರದಿ ಸಲ್ಲಿಸಿಲ್ಲ. ಈ ಹಂತದಲ್ಲಿ ಪ್ರಕರಣಕ್ಕೆ ಸಂಬಂಧಿಸಿ ಯಾರೇ ಆದರೂ ಸುಳ್ಳು ಹೇಳಿಕೆ, ಸತ್ಯಕ್ಕೆ ದೂರವಾದ ಮಾಹಿತಿ ಪ್ರಚಾರ ಮಾಡಿದಲ್ಲಿ ಅಂಥವರ ವಿರುದ್ಧ ಪೊಲೀಸರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡು ತನಿಖೆ ಮಾಡುವುದು ಅವರ ಕರ್ತವ್ಯ ಈ ಕರ್ತವ್ಯದಲ್ಲಿ ಅವರು ಎಡವಿದ್ದಾರೆ ಎಂದು ಆಪಾದಿಸಿದರು.

ಕೇಸು ಹಾಕುವ ಜವಾಬ್ದಾರಿ ಪೊಲೀಸರಿಗಿದೆ: ಕಾನೂನು ಸುವ್ಯವಸ್ಥೆ ಮತ್ತು ಸಮಾಜದ ಸ್ವಾಸ್ಥ್ಯ ಕಾಪಾಡುವ ನಿಟ್ಟಿನಲ್ಲಿ ಸ್ವಯಂಪ್ರೇರಿತ ಕೇಸು ಹಾಕುವ ಜವಾಬ್ದಾರಿ ಪೊಲೀಸರಿಗಿದೆ. ಆದರೆ ಎಡಪಂಥೀಯರು ಮತ್ತು ಎಸ್‌ಡಿಪಿಐ ಮಾನಸಿಕತೆಯವರ ಕಾರಣದಿಂದ ಬಿಜೆಪಿ, ಹಿಂದೂ ಕಾರ್ಯಕರ್ತರ ಮೇಲೆ ಕೇಸು ಹಾಕಿ ಅವರ ಮನೆಗೆ ರಾತ್ರಿ ತೆರಳಿ ಹಿಂಸೆ ನೀಡುವ ಪರಿಪಾಠ ನಡೆಯುತ್ತಿದೆ. ಇದಕ್ಕಾಗಿ ನಾನು ಸ್ಪಷ್ಟವಾದ ಎಚ್ಚರಿಕೆ ನೀಡುತ್ತಿದ್ದೇನೆ ನಿರಪರಾಧಿ ಬಿಜೆಪಿ ಮತ್ತು ಹಿಂದೂ ಸಂಘಟನೆಯ ಕಾರ್ಯಕರ್ತರನ್ನು ಪ್ರಕರಣದಲ್ಲಿ ಸಿಲುಕಿಸುವ ಷಡ್ಯಂತ್ರ ಮಾಡಿದರೆ ಬಿಜೆಪಿ ವಿರೋಧಿಸಲಿದೆ ಎಂದು ಹೇಳಿದ ಶಾಸಕರು ಎಡಪಂಥೀಯರು, ಎಸ್‌ಡಿಪಿಐ ಅವರು ಹೆಸರು ಕೊಟ್ಟಿದ್ದಾರೆ ಎಂದು ದೌರ್ಜನ್ಯ ಮಾಡಲು ಬಂದರೆ ಬಿಜೆಪಿ ಸುಮ್ಮನಿರುವುದಿಲ್ಲ. ಜಿಲ್ಲಾ ಪೊಲೀಸ್ ಅಧೀಕ್ಷಕ ದಕರಿದ್ದಾರೆ ಅವರು ಕಾನೂನು ಸುವ್ಯವಸ್ಥೆ ಸರಿ ಮಾಡುತ್ತಾರೆ ಎಂಬ ನಂಬಿಕೆ ಈಗಲೂ ನನಗಿದೆ. ಶಶಿರಾಜ್, ಸಂದೀಪ್ ಎಂಬವರು ಘಟನೆ ನಡೆದ ಸ್ಥಳದಲ್ಲಿ ಇರಲಿಲ್ಲ. ಆದರೂ ಅವರ ಹೆಸರನ್ನು ಸೇರಿಸಲಾಗಿದೆ. ವಿನಾಕಾರಣ ಕೇಸ್, ದೌರ್ಜನ್ಯ ನಡೆಯದಂತೆ ಎಸ್‌ಪಿ ಎಚ್ಚರ ವಹಿಸಬೇಕು ಎಂದು ಹೇಳಿದರು. ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಜಯಂತ ಕೋಟ್ಯಾನ್ ಮತ್ತು ಮಂಡಲ ಬಿಜೆಪಿ ಕಾರ್ಯ್ರದರ್ಶಿ ಪ್ರಶಾಂತ್ ಪಾರೆಂಕಿ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here