ಬೆಳ್ತಂಗಡಿ: ಸುದ್ದಿ ಸಮೂಹ ಸಂಸ್ಥೆಯಿಂದ ಮುಳಿಯ ಗೋಲ್ಡ್ ಅಂಡ್ ಡೈಮಂಡ್ ಹಾಗೂ ಬೆನಕ ಹೆಲ್ತ್ ಸೆಂಟರ್ ಉಜಿರೆಯ ಪ್ರಾಯೋಜಕತ್ವದಲ್ಲಿ ಹೋಟೆಲ್ ಶ್ರೀ ದುರ್ಗಾ ಗ್ರ್ಯಾಂಡ್ ನ ಸಹಪ್ರಾಯೋಜಕತ್ವದಲ್ಲಿ ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಸಹಕಾರದೊಂದಿಗೆ ಮುದ್ದು ಕೃಷ್ಣ ಸ್ಪರ್ಧೆ 2025 ಆ.10ರಂದು ಶ್ರೀ ಗುರುನಾರಾಯಣ ಸೇವಾ ಸಂಘದ ಸಭಾಭವನದಲ್ಲಿ ಸುದ್ದಿ ಸಮೂಹ ಸಂಸ್ಥೆಯ ಆಡಳಿತ ನಿರ್ದೇಶಕ ಡಾ. ಯು.ಪಿ. ಶಿವಾನಂದ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಕಾರ್ಯಕ್ರಮ ಉದ್ಘಾಟನೆಯನ್ನು ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಅಧ್ಯಕ್ಷ ಜಯವಿಕ್ರಮ್ ಕಲ್ಲಾಪು ನೆರವೇರಿಸಿದರು. ಸುದ್ದಿ ಬಿಡುಗಡೆ ಬೆಳ್ತಂಗಡಿ ವಾರಪತ್ರಿಕೆಯ ಸಂಪಾದಕ ಸಂತೋಷ್ ಶಾಂತಿನಗರ ಪ್ರಾಸ್ತಾವಿಕವಾಗಿ ಮಾತನಾಡಿ ಸುದ್ದಿ ಬಿಡುಗಡೆ ವಾರಪತ್ರಿಕೆಯು ಬೆಳ್ತಂಗಡಿ, ಪುತ್ತೂರು ಮತ್ತು ಸುಳ್ಯದಲ್ಲಿ ಬೆಳೆದು ಬಂದು ಜನಮಾನಸದಲ್ಲಿ ಅಚ್ಚಳಿಯದೆ ಉಳಿದು ಇಂದಿಗೂ ತಾಲೂಕಿನ ಅತ್ಯಧಿಕ ಪ್ರಸಾರ ಹೊಂದಿರುವ ಪತ್ರಿಕೆಯಾಗಿ ಬೆಳೆದು ಬಂದ ಹಿನ್ನೆಲೆಯ ಬಗ್ಗೆ ವಿವರಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿ ಸ್ವಾಗತಿಸಿದರು.
ಗುರುನಾರಾಯಣ ಸ್ವಾಮಿ ಸೇವಾ ಸಂಘದ ಅಧ್ಯಕ್ಷ ಜಯವಿಕ್ರಮ್ ಕಲ್ಲಾಪು ಮಾತನಾಡಿ ಸುದ್ದಿ ಸಮೂಹ ಸಂಸ್ಥೆಯ ಆಡಳಿತ ನಿರ್ದೇಶಕರ ಉತ್ಸುಕತೆಯು ಎಲ್ಲಾ ಸಿಬ್ಬಂದಿಗಳಲ್ಲಿ ಪ್ರತಿಬಿಂಬಿಸುತ್ತಿರುವುದು ಸಂಸ್ಥೆಯ ಸಿಬ್ಬಂದಿಗಳ ಬಾಂಧವ್ಯಕ್ಕೆ ಹಿಡಿದ ಕನ್ನಡಿಯಾಗಿದೆ. ಸುದ್ದಿ ಬಿಡುಗಡೆ ವಾರಪತ್ರಿಕೆಯು ಯಾವುದೇ ಆಮಿಷ ಅಥವಾ ಒತ್ತಡಗಳಿಗೆ ಮಣಿಯದೆ ನಿಷ್ಪಕ್ಷ ವರದಿಯನ್ನು ಬೆಳ್ತಂಗಡಿ ತಾಲೂಕಿನವರಿಗೆ ಇಂದಿಗೂ ನೀಡುತ್ತಿರುವುದು ಸಮಾಜಕ್ಕೆ ದೊಡ್ಡ ಕೊಡುಗೆಯಾಗಿದೆ. ಸುದ್ದಿ ಬಿಡುಗಡೆ ವಾರಪತ್ರಿಕೆ ಸಾಮಾಜಿಕ ಚಿಂತನೆಗಳನ್ನು ಅಳವಡಿಸಿಕೊಂಡು ಜನಪರ ಕಾರ್ಯಗಳನ್ನು ಮಾಡಿಕೊಂಡು ಬರುತ್ತಿರುವುದು ಹೊಸದೇನಲ್ಲ. ಪುಟಾಣಿ ಮಕ್ಕಳನ್ನು ಒಂದುಗೂಡಿಸಿ ಮಾಡುತ್ತಿರುವ ಈ ಕೃಷ್ಣ ವೇಷ ಸ್ಪರ್ಧೆಯ ಕಾರ್ಯಕ್ರಮಕ್ಕೆ ಶುಭವಾಗಲಿ ಎಂದರು.

ಮುಖ್ಯ ಅತಿಥಿಗಳಾಗಿ ಮುಳಿಯ ಗೋಲ್ಡ್ ಅಂಡ್ ಡೈಮಂಡ್ ಬೆಳ್ತಂಗಡಿ ಶಾಖೆಯ ಸಿಬ್ಬಂದಿ ದಿನೇಶ್, ಸುದ್ದಿ ಸಮೂಹ ಸಂಸ್ಥೆಯ ನಿರ್ದೇಶಕಿ ಶೋಭಾ ಶಿವಾನಂದ್ ಉಪಸ್ಥಿತರಿದ್ದರು.
6 ತಿಂಗಳಿನಿಂದ 3 ವರ್ಷದ ವರೆಗಿನ ಹಾಗೂ 3ವರ್ಷದಿಂದ ಆರು ವರ್ಷದವರೆಗಿನ ಎರಡು ವಿಭಾಗದಲ್ಲಿ ಮುದ್ದು ಮಕ್ಕಳ ಕೃಷ್ಣ ವೇಷ ಸ್ಪರ್ಧೆ ನಡೆಸಲಾಗಿದ್ದು 50ಕ್ಕೂ ಹೆಚ್ಚು ಪುಟಾಣಿ ಮಕ್ಕಳು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಪೋಷಕರು ಪುಟಾಣಿ ಕಂದಮ್ಮಗಳಿಗೆ ಕೃಷ್ಣ ವೇಷ ಹಾಕಿಸಿ ಸ್ಪರ್ಧೆಯಲ್ಲಿ ಬಹಳ ಉತ್ಸುಕತೆಯಿಂದ ಪಾಲ್ಗೊಂಡರು. ಸ್ಪರ್ಧೆಯಲ್ಲಿ ವಿಜೇತರಾದ ಪುಟಾಣಿ ಮಕ್ಕಳಿಗೆ ಬಹುಮಾನ ಮತ್ತು ಭಾಗವಹಿಸಿದ ಎಲ್ಲಾ ಪುಟಾಣಿಗಳಿಗೆ ಪ್ರಮಾಣಪತ್ರ ವಿತರಿಸಲಾಯಿತು.
ಸುದ್ದಿ ಬಿಡುಗಡೆ ಬೆಳ್ತಂಗಡಿ ವಾರಪತ್ರಿಕೆಯ ಸಿಬ್ಬಂದಿಗಳಾದ ರಚನಾ, ತೇಜಸ್ವಿನಿ ಮತ್ತು ಶಾಲಿನಿ ಪ್ರಾರ್ಥಿಸಿ, ಸುದ್ದಿ ಚಾನೆಲ್ ನ ನಿರೂಪಕಿ ಶ್ರೇಯಾ ಪಿ. ಶೆಟ್ಟಿ ಹಾಗೂ ಶ್ರುತ ಜೈನ್ ನಿರೂಪಿಸಿ, ವಂದಿಸಿದರು.