ಉಜಿರೆ: ಬೆಳ್ತಂಗಡಿ ತಾಲೂಕು ರಬ್ಬರು ಬೆಳೆ ಗಾರರ ಮಾರಾಟ ಮತ್ತು ಸಂಸ್ಕರಣ ಸಹಕಾರ ಸಂಘದ 2024- 25ನೇ ಸಾಲಿನ ವಾರ್ಷಿಕ ಮಹಾಸಭೆ ಜು. 19ರಂದು ಉಜಿರೆ ಕೃಷ್ಣಾನುಗ್ರಹ ಸಭಾ ಭವನದಲ್ಲಿ ನಡೆಯಿತು. ಸಂಘವು ವರದಿ ವರ್ಷದಲ್ಲಿ ಸಂಘವು 29ಲಕ್ಷ ರೂ. ಗಿಂತ ಅಧಿಕ ಲಾಭಗಳಿಸಿದ್ದು, ಸದಸ್ಯರಿಗೆ ಶೇ.10ಡಿವಿಡೆಂಡ್ ನೀಡಲು ನಿರ್ಣಯಿಸಿದೆ” ಎಂದು ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಶ್ರೀಧರ ಜಿ.ಭಿಡೆ ಹೇಳಿದರು.
“3,828 ಸದಸ್ಯರನ್ನು ಹೊಂದಿರುವ ಸಂಘವು 1.29 ಕೋಟಿ ರೂ.ಪಾಲು ಭಂಡವಾಳ ಹೊಂದಿದೆ. ಸಂಘದಲ್ಲಿ 26 ಕೋಟಿ ರೂ.ಗಿಂತ ಅಧಿಕ ಠೇವಣಿಗಳಿವೆ.ಸಂಘವು ತಾಲೂಕು, ಜಿಲ್ಲೆ ಹಾಗೂ ಹೊರ ಜಿಲ್ಲೆಗಳಲ್ಲಿ ಒಟ್ಟು 33 ಖರೀದಿ ಶಾಖೆಗಳನ್ನು ಹೊಂದಿದೆ. ಪ್ರಸಕ್ತ ವರ್ಷದಲ್ಲಿ 16,661ಟನ್ ರಬ್ಬರ್ ಖರೀದಿಸಲಾಗಿದ್ದು ಗ್ರಾಹಕರಿಗೆ ಕಿಲೋ ಒಂದರ ಸರಾಸರಿ 191.71 ರೂ.ಧಾರಣೆ ಸಿಕ್ಕಿದೆ” ಎಂದು ಹೇಳಿದರು.

“ಸದಸ್ಯರಿಂದ ಖರೀದಿಸಿದ ರಬ್ಬರನ್ನು ದೇಶದಾದ್ಯಂತ ಮಾರಾಟ ಮಾಡಲಾಗಿದ್ದು,ಸದಸ್ಯರ ಉತ್ಪನ್ನಗಳಿಗೆ ಉತ್ತಮ ಧಾರಣೆ ಸಿಗುವಂತೆ ಪ್ರಯತ್ನ ನಡೆಸಿರುತ್ತೇವೆ ಸಂಘವು ಸುಮಾರು 150ಕ್ಕಿಂತಲೂ ಮೇಲ್ಪಟ್ಟು ಉತ್ಪಾದಕರೊಂದಿಗೆ ನೇರ ವ್ಯವಹಾರ ನಡೆಸುತ್ತಿದೆ. ಸಂಘವು ಜಿಲ್ಲೆಯ ಇತರ ಸಹಕಾರ ಸಂಘಗಳ ಮತ್ತು ವ್ಯಾಪಾರ ಸಂಸ್ಥೆಗಳ ರಬ್ಬರನ್ನು ಕೂಡ ಖರೀದಿ ಮಾಡಿ ಮಾರಾಟ ಮಾಡುವ ಮೂಲಕ ಜಿಲ್ಲೆಯ ಹೆಚ್ಚಿನ ಎಲ್ಲಾ ರಬ್ಬರ್ ವ್ಯವಹಾರ ಮಾಡುವ ಸಹಕಾರಿ ಸಂಘಗಳೊಂದಿಗೆ ಸಮನ್ವಯತೆ ಸಾಧಿಸಿದೆ”ಎಂದು ಹೇಳಿದರು.
“ಸದಸ್ಯರ ಬಹುದಿನದ ಬೇಡಿಕೆಯಾಗಿದ್ದ ರಬ್ಬರ್ ಹಾಲು ಖರೀದಿಯನ್ನು ಪ್ರಾರಂಭಿಸಿದ್ದು ವರದಿ ಸಾಲಿನಲ್ಲಿ 2.98 ಕೋಟಿ ರೂ. ಮೊತ್ತದ ಹಾಲನ್ನು ಸಂಗ್ರಹಿಸಲಾಗಿದೆ” ಎಂದರು.
ಉಪಾಧ್ಯಕ್ಷ ಅನಂತ ಭಟ್ ಎಂ., ನಿರ್ದೇಶಕರಾದ ಜಯಶ್ರೀ ಡಿ.ಎಂ.,ಆರ್.ಸುಭಾಷಿಣಿ, ಬೈರಪ್ಪ, ಕೆ.ರಾಮ ನಾಯ್ಕ, ಸೋಮನಾಥ ಬಂಗೇರ, ಗ್ರೇಸಿಯಸ್ ವೇಗಸ್, ಪದ್ಮ ಗೌಡ ಎಚ್., ಕೆ.ಜೆ.ಆಗಸ್ಟಿನ್, ವಿ.ವಿ.ಅಬ್ರಾಹಂ, ಬಾಲಕೃಷ್ಣ ಗೌಡ ಕೆ., ಶಶಿಧರ ಡೋಂಗ್ರೆ ವಿಶೇಷ ಆಹ್ವಾನಿತ ಅಬ್ರಾಹಂ ಬಿ.ಎಸ್., ಉಪಸ್ಥಿತರಿದ್ದರು.
ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ರಾಜು ಶೆಟ್ಟಿ ವರದಿ ವಾಚಿಸಿದರು. ಈ ಸಾಲಿನಲ್ಲಿ ಅಗಲಿದ ಮಾಜಿ ಉಪಾಧ್ಯಕ್ಷ ನಿರ್ದೇಶಕ ಪದ್ಮನಾಭಾ ಮಾಣಿಂಜ, ಇ.ಸುಂದರ ಗೌಡ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಆರೋಗ್ಯ ಇಲಾಖೆಯಿಂದ ಡೆಂಗ್ಯೂ ಕುರಿತು ಜಾಗೃತಿ ನೀಡಲಾಯಿತು.
ಅತಿ ಹೆಚ್ಚು ರಬ್ಬರ್ ಖರೀದಿಸಿದ ಆರ್.ಪಿ.ಎಸ್., ಸಹಕಾರಿ ಸಂಘ ಹಾಗೂ ಏಜೆಂಟ್ ಗಳನ್ನು ಗೌರವಿಸಲಾಯಿತು. ಆರ್.ಪಿ.ಎಸ್. ಗಳ ಪೈಕಿ ಮೂರ್ಜೆ, ಹೊಸ್ಮಾರು, ಪಡಂಗಡಿ, ಸಹಕಾರಿ ಸಂಘಗಳ ಪೈಕಿ ಅಜೆಕಾರು, ಬೆಳಾಲು ಪ್ಯಾಕ್ಸ್ ಮುಂಡಾಜೆ ಪ್ಯಾಕ್ಸ್ ಗಳ ಅಧ್ಯಕ್ಷರನ್ನು ವೈಯಕ್ತಿಕವಾಗಿ ಅತಿ ಹೆಚ್ಚು ರಬ್ಬರ್ ಖರೀದಿಸಿದ ಟಿ.ಎ. ಜೋಸ್ ಜಡ್ಕಲ್, ಮೌಲಿ ಎಲ್ಡಾಸ್, ಪಾಪಚ್ಚನ್ ಅವರನ್ನು ಗೌರವಿಸಲಾಯಿತು. ಸಂಘದ ರಬ್ಬರ್ ಖರೀದಿಸುವ ಇತರ ಕೇಂದ್ರಗಳ ಪ್ರತಿನಿಧಿಗಳನ್ನು ಅಭಿನಂದಿಸಲಾಯಿತು. ನಿರ್ದೇಶಕ ಹೆಚ್. ಪದ್ಮ ಗೌಡ ವಂದಿಸಿದರು.