ಕೊಕ್ಕಡ: ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಕೊಕ್ಕಡ ಬಳಿಯ ಸೌತಡ್ಕದಲ್ಲಿ ಇತ್ತೀಚೆಗೆ ನಡೆದ ಕಾಡಾನೆ ದಾಳಿಯಲ್ಲಿ ಮೃತಪಟ್ಟ ಬಾಲಕೃಷ್ಣ ಶೆಟ್ಟಿ ಅವರ ಮನೆಗೆ ಧಾರ್ಮಿಕ ಮುಖಂಡ ಹಾಗೂ ಸಮಾಜ ಸೇವಕ ಕಿರಣ್ ಚಂದ್ರ ಪುಷ್ಪಗಿರಿ ಅವರು ಜು.19ರಂದು ಭೇಟಿ ನೀಡಿ ಮೃತರ ಕುಟುಂಬಕ್ಕೆ ಸಾಂತ್ವಾನ ತಿಳಿಸಿ ಆರ್ಥಿಕ ನೆರವನ್ನು ನೀಡಿದರು.
ಬಳಿಕ ಮಾತನಾಡಿದ ಅವರು, “ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾಡುಪ್ರಾಣಿಗಳ ದಾಳಿಯಿಂದ ಸಾರ್ವಜನಿಕರು ಮತ್ತು ಕೃಷಿಕರು ತುಂಬಾ ತೊಂದರೆಯಲ್ಲಿದ್ದಾರೆ. ಇದನ್ನು ನಿಭಾಯಿಸಲು ಸರ್ಕಾರ ‘ವೈಲ್ಡ್ ಲೈಫ್ ಟ್ರಸ್ಟ್’ ಎಂಬಂತ ಸಂಸ್ಥೆಯನ್ನು ಸ್ಥಾಪಿಸಿ, ಕಾಡು ಪ್ರಾಣಿಗಳಿಂದ ಹಾನಿಗೊಳ್ಳುವ ಕುಟುಂಬಗಳಿಗೆ ನಿರಂತರ ಸಹಾಯ ಮಾಡುವ ವ್ಯವಸ್ಥೆ ಮಾಡಬೇಕು” ಎಂದು ಅಭಿಪ್ರಾಯಪಟ್ಟರು.
“ಬೆಳ್ತಂಗಡಿ, ಕಡಬ, ಸುಳ್ಯ ತಾಲೂಕುಗಳಲ್ಲಿ ಆನೆಗಳ ಆರ್ಭಟ ನಿರಂತರವಾಗಿ ಹೆಚ್ಚುತ್ತಿದೆ. ಅರಣ್ಯ ಇಲಾಖೆ ಜನರ ಸಹಕಾರ ಪಡೆದುಕೊಂಡು ಆನೆಗಳನ್ನು ಕಾಡಿಗೆ ಹಿಂತಿರುಗಿಸುವ ಜವಾಬ್ದಾರಿ ಹೊತ್ತುಕೊಳ್ಳಬೇಕು. ಕಾಡುಪ್ರಾಣಿಗಳಿಗೆ ನಷ್ಟ ಯಾವುದೇ ರೀತಿಯ ಹಾನಿ ಉಂಟು ಮಾಡಬಾರದೆಂಬ ನಿಯಮ ಇರುವಂತೆಯೇ, ಜನರ ಜೀವ ಹಾಗೂ ಆಸ್ತಿಗೂ ರಕ್ಷಣೆ ನೀಡುವ ಜವಾಬ್ದಾರಿ ಸರ್ಕಾರದ ಮೇಲಿದೆ.”

ಮೃತ ಬಾಲಕೃಷ್ಣ ಶೆಟ್ಟಿ ಅವರ ಕುಟುಂಬದ ಆರ್ಥಿಕ ಸ್ಥಿತಿ ಅವಲಂಬಿತವಾಗಿರುವುದರಿಂದ, ಅವರಿಗೆ ಗರಿಷ್ಠ ಪರಿಹಾರ ದೊರಕಿಸಿಕೊಡುವಂತೆ ಸರಕಾರಕ್ಕೆ ಮನವಿ ಮಾಡುವುದಾಗಿ ಹೇಳಿದರು. ಮೃತರ ಪತ್ನಿಗೆ ಸೌತಡ್ಕದ ದೇವಸ್ಥಾನದಲ್ಲಿ ಖಾಯಂ ಉದ್ಯೋಗ ನೀಡುವಂತೆ ಮುಜರಾಯಿ ಇಲಾಖೆಗೆ ಪತ್ರ ನೀಡುವುದಾಗಿ ಹಾಗೂ ಅವರ ಮಗಳಿಗೆ ಸೂಕ್ತ ರೀತಿಯಲ್ಲಿ ಉತ್ತಮ ಉದ್ಯೋಗವನ್ನು ದೊರಕಿಸಿಕೊಡುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ತಿಳಿಸಿದರು.
ಧಾರ್ಮಿಕ ಮುಖಂಡ ತುಕ್ರಪ್ಪ ಶೆಟ್ಟಿ ನೂಜೆ, ನೆಲ್ಯಾಡಿ ಸೇವಾ ಸಹಕಾರಿ ಬ್ಯಾಂಕಿನ ಉಪಾಧ್ಯಕ್ಷ ರವಿಚಂದ್ರ ಹೊಸವಕ್ಲು, ಉದ್ಯಮಿ ಗಣೇಶ್ ಕಲಾಯಿ, ಶ್ರೀನಾಥ್ ಬಡೆಕೈಲ್ ಹಾಗೂ ಊರಿನ ಮುಖಂಡರು, ಗ್ರಾಮಸ್ಥರು ಹಾಗೂ ಮೃತರ ಕುಟುಂಬದ ಸದಸ್ಯರು ಉಪಸ್ಥಿತರಿದ್ದರು.