ನಾರಾವಿ: ವಕ್ರಾಂಗಿ ಸಂಸ್ಥೆಯ ವಿನೂತನ ತಂತ್ರಜ್ಞಾನಗಳನ್ನೊಳಗೊಂಡ ಯುಪಿಐ ಮಿನಿ ಎಟಿಎಂ ಕೇಂದ್ರವು ಮಧುವನ ಎಂಟರ್ಪ್ರೈಸಸ್ ನ ಆಶ್ರಯದಲ್ಲಿ ನಾರಾವಿಯ ಮಧುವನ ಕಾಂಪ್ಲೆಕ್ಸ್ ನಲ್ಲಿ ಶುಭಾರಂಭಗೊಂಡಿತು.

ಎಟಿಎಂ ಕೇಂದ್ರದ ಉದ್ಘಾಟನೆಯನ್ನು ಮಧುವನ ಎಂಟರ್ಪ್ರೈಸಸ್ ನ ಮಾರ್ಗದರ್ಶಕರಾದ ನಿವೃತ್ತ ಉಪ ಅರಣ್ಯ ಸಂರಕ್ಷಣಾಧಿಕಾರಿ ಗೋಪಾಲ ಪೂಜಾರಿ ನಾರಾವಿ ನೆರವೇರಿಸಿದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ನಾರಾವಿ ಯೂನಿಯನ್ ಬ್ಯಾಂಕ್ ನ ಮುಖ್ಯ ಪ್ರಬಂಧಕ ಮಂಜುನಾಥ್, ನಾರಾವಿ ಗ್ರಾಮ ಪಂಚಾಯತ್ ಅಧ್ಯಕ್ಷ ರಾಜವರ್ಮ ಜೈನ್, ನಾರಾವಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಸುಧಾಕರ ಭಂಡಾರಿ, ಬೆಳ್ತಂಗಡಿ ಗುತ್ತಿಗೆದಾರರ ಸಂಘದ ಅಧ್ಯಕ್ಷ ವಿನಯ್ ಹೆಗ್ಡೆ, ನಾರಾವಿ ಶ್ರೀ ಸೂರ್ಯನಾರಾಯಣ ದೇವಸ್ಥಾನದ ಆಡಳಿತ ಮೊಕ್ತೇಸರರಾದ ರವೀಂದ್ರ ಪೂಜಾರಿ ಬಾಂದೊಟ್ಟು, ನಾರಾವಿ ಗ್ರಾಮ ಪಂಚಾಯತ್ ನ ನಿಕಟಪೂರ್ವ ಉಪಾಧ್ಯಕ್ಷ ಉದಯ್ ಹೆಗ್ಡೆ, ವಕ್ರಾಂಗಿ ಯುಪಿಐ ಎಟಿಎಂ ಕೇಂದ್ರದ ರಾಜ್ಯ ಮುಖ್ಯಸ್ಥ ಬಾಲಕೃಷ್ಣ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಮುಖ್ಯಸ್ಥರಾದ ಅಭಿಜಿತ್ ಜೈನ್ ಮತ್ತು ಮಾರ್ಕೆಟಿಂಗ್ ಮುಖ್ಯಸ್ಥ ಪ್ರವೀಣ್ ಅಳದಂಗಡಿಯವರು ಭಾಗವಹಿಸಿ ದೀಪವನ್ನು ಬೆಳಗಿಸಿ ನೂತನ ಯುಪಿಐ ಎಟಿಎಂ ಕೇಂದ್ರಕ್ಕೆ ಶುಭಾಶಯಗೈದರು.
ಈ ಸಂದರ್ಭದಲ್ಲಿ ಮಧುವನ ಎಂಟರ್ಪ್ರೈಸಸ್ ನ ಮುಖ್ಯಸ್ಥರಾದ ಮೃದುಲಾ ಗೋಪಾಲ್, ರೂಪಕ್ ನಾರಾವಿ ಮತ್ತು ಗ್ರಾಹಕ ಬಂಧುಗಳು, ಹಿತೈಷಿಗಳು ಉಪಸ್ಥಿತರಿದ್ದರು.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಕ್ರಾಂಗಿ ಸಂಸ್ಥೆಯ ಪ್ರಪ್ರಥಮ ಯುಪಿಐ ಮಿನಿ ಎಟಿಎಂ ಕೇಂದ್ರವು ಇದಾಗಿದ್ದು, ನೂತನ ಎಟಿಎಂ ಕೇಂದ್ರದಲ್ಲಿ ಎಲ್ಲಾ ಬ್ಯಾಂಕಿನ ಕಾರ್ಡ್ ಗಳ ಮೂಲಕ ನಗದನ್ನು ಪಡೆಯಬಹುದಾದ ವ್ಯವಸ್ಥೆಯ ಜೊತೆಗೆ ಅತ್ಯಂತ ಸರಳ ರೀತಿಯಲ್ಲಿ ತಮ್ಮ ಮೊಬೈಲ್ ನಿಂದ ಗೂಗಲ್ ಪೇ ಅಥವಾ ಫೋನ್ ಪೇ ಮೂಲಕ ಸ್ಕ್ಯಾನರ್ ಬಳಸಿ ನಗದನ್ನು ಪಡೆಯುವ ವಿನೂತನ ವ್ಯವಸ್ಥೆಯು ಇರಲಿದ್ದು, ನೂತನ ಸುಸಜ್ಜಿತ ಕೇಂದ್ರವು ಸಾರ್ವಜನಿಕ ಸೇವೆಗೆ ದಿನದ 24 ಗಂಟೆಯೂ ತೆರೆದಿರುತ್ತದೆ. ನಾರಾವಿ ಮತ್ತು ಆಸುಪಾಸಿನ ಗ್ರಾಮಗಳ ಸಾರ್ವಜನಿಕ ಬಂಧುಗಳು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ವಿನಂತಿಸುತ್ತಾ ಪ್ರಥಮವಾಗಿ ನಾರಾವಿಯಲ್ಲಿ ಪ್ರಾರಂಭಗೊಂಡ ಅತ್ಯಾಧುನಿಕ ವಕ್ರಾಂಗಿ ಯುಪಿಐ ಎಟಿಎಂ ಕೇಂದ್ರಗಳನ್ನು ಮುಂದಿನ ದಿನಗಳಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಾದ್ಯಂತ ವಿಸ್ತರಿಸಲಿದ್ದೇವೆಂದು ಜಿಲ್ಲಾ ಮುಖ್ಯಸ್ಥ ಅಭಿಜಿತ್ ಜೈನ್ ತಿಳಿಸಿದರು.