

ಮರೋಡಿ: ಬ್ರಹ್ಮಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘ, ಯುವ ಬಿಲ್ಲವ ವೇದಿಕೆ ಮತ್ತು ಮಹಿಳಾ ಬಿಲ್ಲವ ವೇದಿಕೆಯ ಆಶ್ರಯದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ 168ನೇ ಜಯಂತಿಯ ಪ್ರಯುಕ್ತ ಶ್ರೀ ಗುರುಪೂಜೆ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಎ.18ರಂದು ಪೊಸರಡ್ಕ ಶ್ರೀ ದೇವಿಪ್ರಸಾದ್ (ಮಹಾಬಲ ಸುವರ್ಣರ) ಮನೆ ವಠಾರದಲ್ಲಿ ನಡೆಯಿತು.

ಸಂಘದ ಅಧ್ಯಕ್ಷ ನಾರಾಯಣ ಪೂಜಾರಿ ಕನರೊಟ್ಟು ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ನಾರಾಯಣ ಗುರುಗಳ ಸಂದೇಶದಂತೆ ಸಮಾಜದ ಏಳಿಗೆಗೆ ಸಂಘಟನೆ ಅಗತ್ಯ. ಸಂಘಟನೆಗೆ ಶಕ್ತಿ ತುಂಬುವ ಕೆಲಸವನ್ನು ಸಮಾಜ ಬಾಂಧವರು ಮಾಡಬೇಕು ಎಂದು ಹೇಳಿದರು.

ಎಚ್ ಡಿಎಫ್ ಸಿ ಬ್ಯಾಂಕ್ ನ ಉಡುಪಿ ಜಿಲ್ಲಾ ಮುಖ್ಯಸ್ಥ ರವೀಂದ್ರ ಅಂಚನ್ ಮಾತನಾಡಿ, ವಿದ್ಯೆಯೇ ಮನುಷ್ಯನ ಸಂಪತ್ತು. ವಿದ್ಯೆಯಿಂದ ಸಮಾಜದ ಪರಿವರ್ತನೆ ಸಾಧ್ಯವಿದೆ. ಮಕ್ಕಳಿಗೆ ಉನ್ನತ ಶಿಕ್ಷಣವನ್ನು ನೀಡುವ ಕೆಲಸವನ್ನು ಪೋಷಕರು ಮಾಡಬೇಕು. ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಸಹಾಯಹಸ್ತ ನೀಡುತ್ತೇನೆ ಎಂದು ಭರವಸೆ ನೀಡಿದರು.

ಮರೋಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಮತ್ತು ಸಂಘದ ಸ್ಥಾಪಕಾಧ್ಯಕ್ಷ ರತ್ನಾಕರ ಬುಣ್ಣಾನ್ ಮಾತನಾಡಿ, ಸಂಘಟನೆಯಿಂದ ಸಮಾಜಕ್ಕೆ ಶಕ್ತಿ ಲಭಿಸುತ್ತದೆ. ಬಲಿಷ್ಠ ಸಂಘಟನೆಯಿದ್ದರೆ ಸಮಾಜದ ಬೇಡಿಕೆ ಈಡೇರಿಸಿಕೊಳ್ಳಬಹುದು ಎಂದು ಅಭಿಪ್ರಾಯಪಟ್ಟರು.
ಮರೋಡಿ ಶ್ರೀ ಉಮಾಮಹೇಶ್ವರ ದೇವಸ್ಥಾನದ ಆಡಳಿತ ಮಂಡಳಿ ಕಾರ್ಯದರ್ಶಿ ಜಯಂತ ಕೋಟ್ಯಾನ್ ಪ್ರಾಸ್ತಾವಿಕವಾಗಿ ಮಾತನಾಡಿ, ಮರೋಡಿಯ ಬಿಲ್ಲವ ಸಂಘಟನೆಯಿಂದ ಈಗಾಗಲೇ ಸಾಕಷ್ಟು ಸಮಾಜಪರ ಚಟುವಟಿಕೆ ಮಾಡಲಾಗಿದೆ. ಸಮಾಜದ ಸಾಧಕರನ್ನು ಗುರುತಿಸಿ ಗೌರವಿಸುವ ಕೆಲಸವನ್ನು ಮಾಡುತ್ತಿದೆ ಎಂದರು.

ಮಹಿಳಾ ಬಿಲ್ಲವ ವೇದಿಕೆ ಅಧ್ಯಕ್ಷೆ ಶಕುಂತಳಾ, ಯುವ ಬಿಲ್ಲವ ವೇದಿಕೆ ಅಧ್ಯಕ್ಷ ವಿದ್ಯಾನಂದ ಪೂಜಾರಿ, ಮಹಿಳಾ ಬಿಲ್ಲವ ವೇದಿಕೆ ಕಾರ್ಯದರ್ಶಿ ಸುಮಿತ್ರಾ, ಯುವ ಬಿಲ್ಲವ ವೇದಿಕೆ ಕಾರ್ಯದರ್ಶಿ ಅನಿಲ್ ಇದ್ದರು.
ಸನ್ಮಾನ: ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಮರೋಡಿ ಗ್ರಾಮ ಪಂಚಾಯತ್ ಅಧ್ಯಕ್ಷ ರತ್ನಾಕರ ಬುಣ್ಣಾನ್, ಪೆರಾಡಿ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ನಿರ್ದೇಶಕ ಸುರೇಶ್ ಅಂಚನ್, ರವೀಂದ್ರ ಅಂಚನ್, ಸಾಧಕ ದೈಹಿಕ ಶಿಕ್ಷಣ ಶಿಕ್ಷಕರಾದ ಪ್ರಶಾಂತ್ ಮರೋಡಿ, ಮೋಹನ್ ಮರೋಡಿ, ಕುಸ್ತಿಪಟು ಕಾರ್ತಿಕ್ ಪಲಾರಗೋಳಿ, ಮರೋಡಿ ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘದ ನಿರ್ದೇಶಕರಾದ ಗೀತಾ, ಪೂರ್ಣಿಮಾ, ಪ್ರತಿಭಾನ್ವಿತ ವಿದ್ಯಾರ್ಥಿಗಳಾದ ವಿದ್ಯಾರ್ಥಿಗಳಾದ ಜಿತೇಶ್ ಪೂಜಾರಿ ಕುಡ್ಯಾರೊಟ್ಟು, ನಿರೀಕ್ಷಾ ಎನ್. ಪೂಜಾರಿ, ನಿರೀಕ್ಷಾ, ಸುದೀಕ್ಷಾ, ಸಹನಾ ಕಂಬಳದಡ್ಡ, ಪ್ರಿಯಾ ಪೂಜಾರಿ ಅವರನ್ನು ಸನ್ಮಾನಿಸಲಾಯಿತು.
ಯುವ ಬಿಲ್ಲವ ವೇದಿಕೆ ಮಾಜಿ ಅಧ್ಯಕ್ಷ ಬಾಲಕೃಷ್ಣ ಬಂಗೇರ ಸ್ವಾಗತಿಸಿದರು. ಸಂಘದ ಕಾರ್ಯದರ್ಶಿ ಯಶೋಧರ ಬಂಗೇರ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.