

ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನ ಕಣಿಯೂರು ಗ್ರಾಮದ ಪದ್ಮುಂಜ ಸರಕಾರಿ ಪ್ರೌಢಶಾಲೆಯಲ್ಲಿ ೨೦೨೪-೨೫ನೇ ಶೈಕ್ಷಣಿಕ ವರ್ಷದ ಎಸ್.ಎಸ್.ಎಸ್.ಸಿ ಪರೀಕ್ಷೆ ಬರೆಯಲು ಈರ್ವರು ವಿದ್ಯಾರ್ಥಿನಿಯರಿಗೆ ಅವಕಾಶ ನಿರಾಕರಿಸಲಾಗಿದೆ ಎಂದು ದೂರು ಬಂದ ಹಿನ್ನೆಲೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ತಾರಾಕೇಸರಿ ಮತ್ತು ಶಿಕ್ಷಣ ಸಂಯೋಜಕಿ ಚೇತನಾಕ್ಷಿ, ಸಮೂಹ ಸಂಪನ್ಮೂಲ ವ್ಯಕ್ತಿ ಶರೀಫ್, ಸರಳೀಕಟ್ಟೆ ಪ್ರೌಢಶಾಲೆಯ ಅಧ್ಯಾಪಕ ಹನೀಫ್, ಗ್ರಾಮ ಪಂಚಾಯತ್ ಅಧ್ಯಕ್ಷ ಸೀತಾರಾಮ ಮಡಿವಾಳ ಹಾಗೂ ಸದಸ್ಯೆ ಸುಮತಿ ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಘಟನೆಯ ಹಿನ್ನೆಲೆ: ಖಾಸಗಿ ಶಾಲೆಗಳು ೧೦೦ ಶೇಕಡಾ ಫಲಿತಾಂಶಕ್ಕಾಗಿ ಕಲಿಕೆಯಲ್ಲಿ ಹಿಂದಿರುವ ಮಕ್ಕಳನ್ನು ಒಂಬತ್ತನೇ ತರಗತಿಯಿಂದಲೇ ಬೇರೆ ಶಾಲೆಗ ವರ್ಗಾಯಿಸುತ್ತಿರುವ ಬಗ್ಗೆ ದೂರುಗಳು ಸಹಜವಾಗಿ ಬರುತ್ತಾ ಇದೆ. ಇದೇ ರೀತಿ ಸರಕಾರಿ ಶಾಲೆಯಲ್ಲಿಯೂ ಮಾಡಲಾಗುತ್ತಿದೆ ಎಂದು ದೂರು ಕೇಳಿ ಬಂದಿದೆ. ಎಲ್ಲಾ ತರಹದ ಮಕ್ಕಳಿಗೂ ಸಮಾನ ಶಿಕ್ಷಣ ಹಾಗೂ ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆಗೆ ಪೂರಕವಾಗಿ ಶಿಕ್ಷಣ ನೀಡಲಾಗುತ್ತಿದೆ. ಆದರೆ ಈ ಶೈಕ್ಷಣಿಕ ವರ್ಷದಲ್ಲಿ ಪದ್ಮುಂಜದ ಸರಕಾರಿ ಪ್ರೌಢಶಾಲೆಯ ಶಿಕ್ಷಕ ವೃಂದ ಶಾಲೆಗೆ ೧೦೦ ಶೇಕಡಾ ಫಲಿತಾಂಶ ಬರಬೇಕು ಎಂದು ಜಿದ್ದಿಗೆ ಬಿದ್ದು ಕಲಿಕೆಯಲ್ಲಿ ಹಿಂದಿರುವ ಈರ್ವರು ಹೆಣ್ಣು ಮಕ್ಕಳಿಗೆ ಪರೀಕ್ಷೆ ಬರೆಯಲು ಅವಕಾಶ ಕೊಟ್ಟಿಲ್ಲ ಎಂದು ಆರೋಪ ಕೇಳಿ ಬಂದಿದೆ. ಪರೀಕ್ಷೆ ಬರೆಯುವ ಅವಕಾಶದಿಂದ ವಂಚಿತಳಾಗಿರುವ ವಿದ್ಯಾರ್ಥಿನಿ ಮಕ್ಕಳ ಹಕ್ಕುಗಳ ಆಯೋಗ, ಉಪನಿರ್ದೇಶಕರು, ಶಿಕ್ಷಣಾಧಿಕಾರಿ ಹಾಗೂ ಕರ್ನಾಟಕ ರಾಜ್ಯ ಎಸ್.ಡಿ.ಎಮ್.ಸಿ ಸಮನ್ವಯ ಕೇಂದ್ರ ವೇದಿಕೆಯ ಸಂಚಾಲಕರಿಗೆ ಪತ್ರ ಬರೆದಿದ್ದಾರೆ. ಈ ಪತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಹಿನ್ನೆಲೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ತಾರಾಕೇಸರಿ ಮತ್ತಿತರರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಕೊನೆಗೂ ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿನಿಯರು: ವಿದ್ಯಾರ್ಥಿನಿಯರಾದ ಫಾತಿಮತ್ ಫರ್ಝಾನ ಮತ್ತು ಅಸ್ಲಹ ಅವರಿಗೆ ಪ್ರವೇಶ ಪತ್ರ ನೀಡದ ಕಾರಣ ಪರೀಕ್ಷೆ ಬರೆಯಲು ಸಾಧ್ಯವಾಗಿರಲಿಲ್ಲ. ಈ ವಿದ್ಯಾರ್ಥಿನಿಯರು ಮೊದಲ ನಾಲ್ಕು ಪರೀಕ್ಷೆಗೆ ಗೈರು ಹಾಜರಾಗಿದ್ದರು. ೫ನೇ ಪರೀಕ್ಷೆಗೆ ವಿದ್ಯಾರ್ಥಿನಿಯರು ಹಾಜರಾಗಿದ್ದು ಇನ್ನುಳಿದ ಒಂದು ಪರೀಕ್ಷೆಗೂ ಹಾಜರಾಗಲು ನಿರ್ಧರಿಸಿರುವುದಾಗಿ ಮಾಹಿತಿ ಲಭ್ಯವಾಗಿದೆ.
ಮುಖ್ಯ ಶಿಕ್ಷಕಿ ಸುಮತಿ ಪಿ.ಎನ್. ಸ್ಪಷ್ಟನೆ: ಘಟನೆಯ ಕುರಿತು ಸ್ಪಷ್ಟೀಕರಣ ನೀಡಿರುವ ಪದ್ಮುಂಜ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಸುಮತಿ ಪಿ.ಎನ್. ಅವರು ಸರಕಾರದ ಶಿಕ್ಷಣ ಇಲಾಖೆ ೧೦ನೇ ತರಗತಿಯ ವಿದ್ಯಾರ್ಥಿಗಳಿಗೆ ಸರಳ ರೀತಿಯ ಯೋಜನೆ ಜಾರಿಗೆ ತಂದಿದೆ. ಮೂರು ಸಲ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಗಿದೆ ಒಂದನೇ ಹಂತ, ಎರಡನೇ ಹಂತ, ಮೂರನೇ ಹಂತದಲ್ಲಿ ವಿದ್ಯಾರ್ಥಿಗಳಿಗೆ ಈ ಅವಕಾಶವನ್ನು ಬೇಕಾದ ರೀತಿಯಲ್ಲಿ ಉಪಯೋಗಿಸಕೊಳ್ಳಬಹುದಾಗಿದೆ. ಇದರ ಮಾಹಿತಿಯನ್ನು ವಿದ್ಯಾರ್ಥಿಗಳಿಗೂ ಪೋಷಕರ ಸಭೆಯಲ್ಲಿಯೂ ದಿನ ನಿತ್ಯ ನಡೆಯುವ ಅಸೆಂಬ್ಲಿ ಯಲ್ಲಿಯೂ ತಿಳಿಸುತ್ತಿದ್ದೆ. ಈ ಬಗ್ಗೆ ಮಾಹಿತಿ ಪಡೆದುಕೊಂಡ ಎರಡು ವಿದ್ಯಾರ್ಥಿನಿಯರು ನಾವು ಎರಡನೇ ಹಂತದ ಪರೀಕ್ಷೆ ಬರೆಯುತ್ತೇವೆಂದು ಹೇಳಿದ್ದರು. ಆದರೂ ನಾನು ವಿದ್ಯಾರ್ಥಿಗಳ ಮಾತನ್ನೇ ಅಂತಿಮಗೊಳಿಸದೆ ಅವರ ಪೋಷಕರನ್ನು ಕರೆಸಿ ಅವರು ಸಹ ಒಪ್ಪಿಕೊಂಡ ನಂತರವೇ ಎರಡನೇ ಹಂತದ ಪರೀಕ್ಷೆ ಬರೆಯುವುದಾಗಿ ಅಂತಿಮ ನಿರ್ಧಾರಕ್ಕೆ ಬಂದಿದ್ದರು. ಹಾಗೆಯೇ ಎರಡನೇ ಹಂತದ ಪರೀಕ್ಷೆ ಬರೆಯಲು ತಯಾರಿ ನಡೆಸುತ್ತಿದ್ದ ವಿದ್ಯಾರ್ಥಿಗಳನ್ನು ಹಾಗೂ ಪೋಷಕರನ್ನು ಯಾರೋ ತಪ್ಪು ಮಾಹಿತಿ ನೀಡಿ ೧೦೦ ಶೇಕಡ ಫಲಿತಾಂಶ ಪಡೆಯಲು ಈ ರೀತಿ ಮಾಡಲಾಗಿದೆ ಎಂದು ದೂರು ಕೊಡಿಸಿದ್ದಾರೆ. ಇದರಲ್ಲಿ ನಾನೇನು ತಪ್ಪು ಮಾಡಿಲ್ಲ. ಸರಕಾರದ ಶಿಕ್ಷಣ ಇಲಾಖೆಯ ಆದೇಶದ ಮಾಹಿತಿಯನ್ನು ವಿದ್ಯಾರ್ಥಿಗಳಿಗೆ ಹಾಗೂ ಪೋಷಕರಿಗೆ ತಿಳಿಸಿದ್ದೇನೆ ಎಂದು ತಿಳಿಸಿದ್ದಾರೆ.
ಮೇಲಾಧಿಕಾರಿಗಳಿಗೆ ವರದಿ: ಬಿಇಒ ತಾರಾಕೇಸರಿ: ಪದ್ಮುಂಜ ಪ್ರೌಢಶಾಲೆಗೆ ಮಾ.೨೭ರಂದು ಭೇಟಿ ನೀಡಿದ ಬಳಿಕ ಪ್ರತಿಕ್ರಿಯೆ ನೀಡಿರುವ ಕ್ಷೇತ್ರ ಶಿಕ್ಷಣಾಧಿಕಾರಿ ತಾರಾಕೇಸರಿ ಅವರು ನಾನು ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿzನೆ. ವಿದ್ಯಾರ್ಥಿಗಳೊಂದಿಗೆ ಮಾತನಾಡಿzನೆ. ಮುಂದಿನ ಮೂರು ಪರೀಕ್ಷೆಗಳಿಗೆ ಹಾಜರಾಗುವಂತೆ ತಿಳಿ ಹೇಳಿ ಹಾಲ್ ಟಿಕೆಟ್ ಹಂಚಿಕೆ ಮಾಡಲಾಗಿದೆ. ಆದರೆ ಓರ್ವ ವಿದ್ಯಾರ್ಥಿನಿ ಹಾಲ್ ಟಿಕೆಟ್ ಪಡೆದುಕೊಂಡರೂ ಬಳಿಕ ಮತ್ತೆ ಹಿಂತಿರುಗಿಸಿದ್ದಾರೆ. ಇನ್ನೊಂದು ಹುಡುಗಿ ಹಾಲ್ಟಿಕೆಟ್ ಪಡೆಯಲು ಮುಂದೆ ಬಂದಿದ್ದು ಬಳಿಕ ಹಿಂದೆ ಸರಿದಿದ್ದಾರೆ. ಶಾಲೆಗೆ ಸಂಬಂಧಿಸದ ವ್ಯಕ್ತಿಗಳು ಹಾಲ್ಟಿಕೆಟ್ ಸ್ವೀಕರಿಸಿದಂತೆ ಮಾಡಿದ್ದಾರೆ. ವಿದ್ಯಾರ್ಥಿಗಳನ್ನು ಪರೀಕ್ಷೆಗೆ ಹಾಜರಾಗುವಂತೆ ಮಾಡುವ ಅವಕಾಶವಿತ್ತು ಆದರೆ ಅದನ್ನು ಮಾಡಲು ಬಿಡಲಿಲ್ಲ. ಘಟನೆ ಕುರಿತು ಮೇಲಾಧಿಕಾರಿಗಳಿಗೆ ವರದಿ ಸಲ್ಲಿಸಲಾಗುವುದು ಎಂದು ತಿಳಿಸಿದ್ದಾರೆ.
ಕ್ರಮ ಕೈಗೊಳ್ಳಲು ಡಬ್ಲ್ಯೂ.ಐ.ಎಮ್. ಮನವಿ: ಪದ್ಮುಂಜ ಸರ್ಕಾರಿ ಪ್ರೌಢಶಾಲೆಯ ಇಬ್ಬರು ವಿದ್ಯಾರ್ಥಿನಿಯರಿಗೆ ಈ ವರ್ಷದ ಎಸ್.ಎಸ್.ಎಲ್.ಸಿ ಪರೀಕ್ಷೆ ಬರೆಯಲು ಅವಕಾಶ ನಿರಾಕರಿಸುವ ಶಾಲಾ ಮುಖ್ಯ ಶಿಕ್ಷಕಿ ಹಾಗೂ ಸಿಬ್ಬಂದಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ವಿಮೆನ್ ಇಂಡಿಯಾ ಮೂವ್ಮೆಂಟ್ ಬೆಳ್ತಂಗಡಿ ಕ್ಷೇತ್ರ ಸಮಿತಿ ವತಿಯಿಂದ ಬೆಳ್ತಂಗಡಿ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಮನವಿ ನೀಡಲಾಗಿದೆ. ವಿದ್ಯಾರ್ಥಿನಿಯರು ಕಲಿಕೆಯಲ್ಲಿ ಹಿಂದುಳಿದಿದ್ದಾರೆ. ಪರೀಕ್ಷೆ ಬರೆದು ಫೇಲ್ ಆದರೆ ಶಾಲೆಗೆ ೧೦೦ ಶೇಕಡಾ ಫಲಿತಾಂಶ ಬರುವುದಿಲ್ಲ ಎಂಬ ಕಾರಣಕ್ಕೆ ಅವರಿಗೆ ಹಾಲ್ ಟಿಕೆಟ್ ಕೊಡದೆ ಪರೀಕ್ಷೆ ಬರೆಯುವ ಅವಕಾಶ ತಪ್ಪಿಸಲಾಗಿದೆ ಎಂಬ ಗಂಭೀರ ಆರೋಪ ಈ ಶಾಲಾ ಸಿಬ್ಬಂದಿಗಳ ಮೇಲೆ ಇದೆ. ಈ ಬಗ್ಗೆ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥ ಸಿಬ್ಬಂದಿಗಳ ಮೇಲೆ ಕೇಸ್ ದಾಖಲಿಸಬೇಕು ಮತ್ತು ವಿದ್ಯಾರ್ಥಿನಿಯರಿಗೆ ಎಲ್ಲರಂತೆ ಎಸ್.ಎಸ್.ಎಲ್.ಸಿ ಪರೀಕ್ಷೆಗೆ ಹಾಜರಾಗುವಂತೆ ಮಾಡಬೇಕೆಂದು ಮನವಿಯಲ್ಲಿ ಒತ್ತಾಯಿಸಲಾಗಿದೆ. ವಿಮೆನ್ ಇಂಡಿಯಾ ಮೂವ್ಮೆಂಟ್ ಬೆಳ್ತಂಗಡಿ ಕ್ಷೇತ್ರಾಧ್ಯಕ್ಷರಾದ ಶಮಾ ಆಲಿ ಉಜಿರೆ, ನಸೀಮಾ ಬೆಳ್ತಂಗಡಿ ಮತ್ತು ಸೌದಾ ಬೆಳ್ತಂಗಡಿ ಅವರು ಮನವಿ ನೀಡುವ ವೇಳೆ ಉಪಸ್ಥಿತರಿದ್ದರು. ಮನವಿಯ ಪ್ರತಿಗಳನ್ನು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಅಧಿಕಾರಿ, ಶಿಕ್ಷಣ ಸಚಿವರಿಗೆ, ಮುಖ್ಯಮಂತ್ರಿಗಳಿಗೆ ಮತ್ತು ರಾಜ್ಯಪಾಲರಿಗೆ ಇಮೇಲ್ ಮುಖಾಂತರ ಕಳುಹಿಸಲಾಗಿದೆ.