

ಬೆಳ್ತಂಗಡಿ: ಇಳಂತಿಲ ಗ್ರಾಮ ಪಂಚಾಯತ್ ಅಧ್ಯಕ್ಷ ಸ್ಥಾನದಿಂದ ತಿಮ್ಮಪ್ಪ ಗೌಡ ಅವರನ್ನು ಪದಚ್ಯುತಿಗೊಳಿಸಿರುವುದು ಮತ್ತು ಉಪ್ಪಿನಂಗಡಿ ಸಿ.ಎ. ಬ್ಯಾಂಕ್ ಮಾಜಿ ಅಧ್ಯಕ್ಷ ಕೆ.ವಿ.ಪ್ರಸಾದ್‌ರವರನ್ನು ಉಚ್ಛಾಟನೆಗೊಳಿಸಿರುವುದು ಬಿಜೆಪಿ ನಾಯಕರೊಳಗಿನ ಮುಸುಕಿನ ಗುದ್ದಾಟಕ್ಕೆ ಕಾರಣವಾಗಿದೆ. ಪಕ್ಷದ ಪ್ರಮುಖರೊಳಗಿನ ಪ್ರತಿಷ್ಠೆಯ ಕದನ ನಿಸ್ವಾರ್ಥದಿಂದ ಕೆಲಸ ಮಾಡುವ ನಿಷ್ಠಾವಂತ ಕಾರ್ಯಕರ್ತರ ಒದ್ದಾಟಕ್ಕೆ ಕಾರಣವಾಗಿದೆ. ಶಿಸ್ತಿನ ಪಕ್ಷದೊಳಗೆ ನಡೆಯುತ್ತಿರುವ ಕಲಹಕ್ಕೆ ಬ್ರೇಕ್ ಹಾಕಲು ಹೈಕಮಾಂqಲಿದೀಗ ಮಧ್ಯ ಪ್ರವೇಶಿಸಿದೆ ಎಂದು ಮಾಹಿತಿ ಲಭ್ಯವಾಗಿದೆ.
ಫ್ಲ್ಯಾಶ್‌ಬ್ಯಾಕ್: ಇಳಂತಿಲ ಗ್ರಾಮದ ಪ್ರಭಾವಿ ಬಿಜೆಪಿ ಮುಖಂಡರಾಗಿದ್ದ ಉಪ್ಪಿನಂಗಡಿ ಸಿ.ಎ. ಬ್ಯಾಂಕ್ ಮಾಜಿ ಅಧ್ಯಕ್ಷ ಕೆ.ವಿ ಪ್ರಸಾದ್‌ರವರನ್ನು ಪಕ್ಷ ವಿರೋಧಿ ಚಟುವಟಿಕೆ ನಡೆಸಿದ ಆರೋಪದಡಿ ಭಾರತೀಯ ಜನತಾ ಪಕ್ಷದಿಂದ ಮುಂದಿನ ಆರು ವರ್ಷಗಳ ಕಾಲ ಉಚ್ಛಾಟಿಸಿ ಬೆಳ್ತಂಗಡಿ ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ಪಾರೆಂಕಿ ಹೊರಡಿಸಿರುವ ಆದೇಶದ ಹಿಂದೆ ಜನಪ್ರಿಯ ಶಾಸಕ ಹರೀಶ್ ಪೂಂಜ ಮತ್ತು ಪ್ರಖರ ನ್ಯಾಯವಾದಿ ಸುಬ್ರಹ್ಮಣ್ಯ ಕುಮಾರ್ ಅಗರ್ತ ಅವರ ಪ್ರಭಾವ ಇದೆ ಎಂಬುದು ಕೆ.ವಿ. ಪ್ರಸಾದ್ ಬೆಂಬಲಿಗರ ಲೆಕ್ಕಾಚಾರವಾಗಿದೆ. ಉಪ್ಪಿನಂಗಡಿ ಸಿ.ಎ. ಬ್ಯಾಂಕ್ ಮತ್ತು ಶ್ರೀ ಸಹಸ್ರಲಿಂಗೇಶ್ವರ ಮಹಾಕಾಳಿ ದೇವಸ್ಥಾನದ ಆಗು ಹೋಗುಗಳ ವಿಚಾರಕ್ಕೆ ಸಂಬಂಧಿಸಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಮತ್ತು ಪುತ್ತೂರು ಶಾಸಕರಾಗಿದ್ದ ಸಂಜೀವ ಮಠಂದೂರು ನಡುವೆ ತಿಕ್ಕಾಟ ನಡೆಯುತ್ತಿತ್ತು.
ಹರೀಶ್ ಪೂಂಜರು ಬೆಳ್ತಂಗಡಿ ನೋಡಿಕೊಂಡರೆ ಸಾಕು, ನನ್ನ ಕ್ಷೇತ್ರಕ್ಕೆ ಕೈ ಹಾಕಬಾರದು ಎಂಬುದು ಸಂಜೀವ ಮಠಂದೂರು ಅವರ ನಿಲುವು ಆಗಿತ್ತು. ಈ ವಿಚಾರ ಜಿಲ್ಲಾ ಬಿಜೆಪಿಯ ಅಂಗಳಕ್ಕೆ ತಲುಪಿತ್ತು. ಇದರ ಮಧ್ಯೆ ಇಳಂತಿಲದಲ್ಲಿ ಬಿಜೆಪಿ ನಾಯಕರೊಳಗೆ ಕುದಿಯುತ್ತಿದ್ದ ಬಣ ರಾಜಕೀಯ ಉಪ್ಪಿನಂಗಡಿ ಸಿಎ ಬ್ಯಾಂಕ್ ಚುನಾವಣೆಯ ವೇಳೆ ನಾನಾ-ನೀನಾ ಎಂಬ ಹಂತಕ್ಕೆ ತಲುಪಿತ್ತು. ಇದರ ಮುಂದುವರಿದ ಭಾಗವಾಗಿ ಮಾಜಿ ಅಧ್ಯಕ್ಷರಾಗಿದ್ದರೂ ಉಪ್ಪಿನಂಗಡಿ ಸಿ.ಎ. ಬ್ಯಾಂಕ್ ಚುನಾವಣೆಗೆ ಸ್ಪರ್ಧಿಸಲು ಕೆ.ವಿ. ಪ್ರಸಾದ್‌ರಿಗೆ ಸಹಕಾರ ಭಾರತಿ ಅವಕಾಶ ನಿರಾಕರಿಸಿತ್ತು. ತನಗೆ ಟಿಕೆಟ್ ತಪ್ಪಲು ಶಾಸಕ ಹರೀಶ್ ಪೂಂಜ, ತನ್ನ ಬಾವ ಸುಬ್ರಹ್ಮಣ್ಯ ಕುಮಾರ್ ಅಗರ್ತ ಮತ್ತು ಗ್ರಾಮ ಪಂಚಾಯತ್ ಅಧ್ಯಕ್ಷ ತಿಮ್ಮಪ್ಪ ಗೌಡ ಅವರೇ ಕಾರಣ ಎಂದು ಕೆ.ವಿ. ಪ್ರಸಾದ್ ಕೋಪಗೊಂಡಿದ್ದರು. ಸಿ.ಎ. ಬ್ಯಾಂಕ್ ಚುನಾವಣೆಗೆ ಬಂಡಾಯವಾಗಿ ಸ್ಪರ್ಧಿಸಿ ಪರಾಭವಗೊಂಡಿದ್ದ ಕೆ.ವಿ. ಪ್ರಸಾದ್ ತನಗಾದ ಸೋಲಿಗೆ ಪ್ರತೀಕಾರ ತೀರಿಸಲು ಸಿದ್ಧತೆ ನಡೆಸಿದ್ದರು. ಅದಕ್ಕೆ ಅವರು ಇಳಂತಿಲ ಗ್ರಾಮ ಪಂಚಾಯತ್ ಅನ್ನು ಗುರಿ ಮಾಡಿಕೊಂಡಿದ್ದರು. ಹರೀಶ್ ಪೂಂಜರ ಆಪ್ತರಾದ ತಿಮ್ಮಪ್ಪ ಗೌಡರ ವಿರುದ್ಧ ಅವಿಶ್ವಾಸ ಗೊತ್ತುವಳಿಯ ದಾಳ ಉರುಳಿಸಿದ ಕೆ.ವಿ. ಪ್ರಸಾದ್ ಬಹುತೇಕ ಬಿಜೆಪಿ ಬೆಂಬಲಿತ ಗ್ರಾಮ ಪಂಚಾಯತ್ ಸದಸ್ಯರನ್ನು ತನ್ನ ತೆಕ್ಕೆಯಲ್ಲಿ ಇಟ್ಟುಕೊಂಡಿದ್ದರು. ಇಳಂತಿಲ ಗ್ರಾಮದ ಕಾಂಗ್ರೆಸ್ ಮುಖಂಡರ ಜೊತೆಗೂ ನಿಕಟ ಬಾಂಧವ್ಯ ಹೊಂದಿರುವ ಪ್ರಸಾದ್ ಅವರು ಅವಿಶ್ವಾಸ ಗೊತ್ತುವಳಿ ಮಂಡಿಸಲು ಬೇಕಾದ ಒಂಬತ್ತು ಸದಸ್ಯರ ಸಹಿ ಮಾಡಿಸಿ ಗ್ರಾಮ ಪಂಚಾಯತ್ ಅಧ್ಯಕ್ಷ ತಿಮ್ಮಪ್ಪ ಗೌಡರವರು ಪ್ರಯಾಗ್‌ರಾಜ್‌ನ ಕುಂಭಮೇಳಕ್ಕೆ ತೆರಳಿದ್ದ ಸಮಯದಲ್ಲಿ ತನ್ನ ಬೆಂಬಲಿಗರ ಮೂಲಕ ಅವಿಶ್ವಾಸ ಗೊತ್ತುವಳಿ ಪತ್ರವನ್ನು ಪುತ್ತೂರು ಸಹಾಯಕ ಆಯುಕ್ತರಿಗೆ ಸಲ್ಲಿಸುವಲ್ಲಿ ಯಶಸ್ವಿಯಾದರು. ನಂತರ ಸದ್ರಿ ಗೊತ್ತುವಳಿ ಪತ್ರಕ್ಕೆ ಸಹಿ ಮಾಡಿರದ ಇನ್ನೂ ಮೂರು ಮಂದಿಯನ್ನು ಗೌಪ್ಯವಾಗಿ ಕೆ.ವಿ. ಪ್ರಸಾದ್ ವಿಶ್ವಾಸಕ್ಕೆ ಪಡೆದಿದ್ದರು. ಕೊನೆಗೂ ತಿಮ್ಮಪ್ಪ ಗೌಡರವರನ್ನು ಗ್ರಾ.ಪಂ. ಅಧ್ಯಕ್ಷ ಸ್ಥಾನದಿಂದ ಪದಚ್ಯುತಿಗೊಳಿಸುವಲ್ಲಿ ಕೆ.ವಿ. ಪ್ರಸಾದ್ ಯಶಸ್ವಿಯಾಗಿದ್ದರು.
ಕಾಂಗ್ರೆಸ್ ಭದ್ರಕೋಟೆ ಬಿಜೆಪಿ ತೆಕ್ಕೆಗೆ ಸೇರಿತ್ತು!: ಸುಮಾರು ೨೫ ವರ್ಷಗಳಿಂದ ಕಾಂಗ್ರೆಸ್ ಪಕ್ಷದ ತೆಕ್ಕೆಯಲ್ಲಿದ್ದ ಇಳಂತಿಲ ಗ್ರಾಮ ಪಂಚಾಯತ್ ಆಡಳಿತ ಚುಕ್ಕಾಣಿಯನ್ನು ಕಳೆದ ಸಲ ಕೆ. ವಿ ಪ್ರಸಾದ್, ಸುಬ್ರಹ್ಮಣ್ಯ ಕುಮಾರ್ ಅಗರ್ತ, ತಿಮ್ಮಪ್ಪ ಗೌಡ, ಚಂದ್ರಿಕಾ ಭಟ್, ರವಿ ಇಳಂತಿಲ ಮೂತಾದವರು ಒಟ್ಟಾಗಿ ಸೇರಿ ಕೆಡಹುವಲ್ಲಿ ಯಶಸ್ವಿಯಾಗಿದ್ದರು. ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಮನೋಹರ ಕುಮಾರ್ ಆದಿಯಾಗಿ ಎಲ್ಲಾ ಕಡೆ ಕಾಂಗ್ರೆಸ್ ಬೆಂಬಲಿತ ಅಬ್ಯರ್ಥಿಗಳನ್ನು ಸೋಲಿಸುವಲ್ಲಿ ಇವರೆಲ್ಲ ಸಂಘಟಿತರಾಗಿ ಕೆಲಸ ಮಾಡಿ ಯಶಸ್ವಿಯಾಗಿದ್ದರು. ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಯು.ಕೆ. ಇಸುಬು ಕೇವಲ ಎರಡು ಮತಗಳ ಅಂತದಿಂದ ಗೆದ್ದು ಕಾಂಗ್ರೆಸ್‌ನ ಒಂದು ಖಾತೆ ತೆರೆದಿದ್ದರು. ಓರ್ವ ಎಸ್‌ಡಿಪಿಐ ಬೆಂಬಲಿತ ಅಭ್ಯರ್ಥಿ ಗೆದ್ದಿದ್ದರು. ಉಳಿದ ೧೨ ಸ್ಥಾನಗಳನ್ನು ಬಿಜೆಪಿ ಬೆಂಬಲಿತರು ಅನಾಯಾಸವಾಗಿ ಗೆದ್ದು ಅಧಿಕಾರ ಹಿಡಿದಿದ್ದರು. ಗ್ರಾಮ ಪಂಚಾಯತ್‌ನಲ್ಲಿ ಅಭೂತಪೂರ್ವವಾಗಿ ಗೆಲುವು ಸಾಧಿಸಿದ ಬಿಜೆಪಿ ಬೆಂಬಲಿತ ತಂಡದಲ್ಲಿ ಪ್ರಥಮ ಅವಧಿಗೆ ಚಂದ್ರಿಕಾ ಭಟ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು.
ಒಡಕು ಮೂಡಿತು: ಬಿಜೆಪಿಯೊಳಗಿನ ಒಗ್ಗಟ್ಟು ಹೆಚ್ಚು ಸಮಯ ಉಳಿಯದೆ ಆ ನಂತರ ಎರಡು ಹೋಳಾದ ಪಕ್ಷದ ಒಂದು ಬಣದಲ್ಲಿ ಕೆ. ವಿ.ಪ್ರಸಾದ್, ಗ್ರಾ. ಪಂ. ಸದಸ್ಯರುಗಳಾದ ಚಂದ್ರಿಕಾ ಭಟ್, ವಸಂತ ಶೆಟ್ಟಿ, ವಿಜಯ ಕುಮಾರ್ ಗುರುತಿಸಿಕೊಂಡಿದ್ದರು. ಇನ್ನೊಂದು ಬಣದಲ್ಲಿ ಸುಬ್ರಹ್ಮಣ್ಯ ಕುಮಾರ್, ತಿಮ್ಮಪ್ಪ ಗೌಡ ಮತ್ತು ರವಿ ಇಳಂತಿಲ ಮುಂತಾದವರು ಗುರುತಿಸಿಕೊಂಡಿದ್ದರು. ಈ ಮಧ್ಯೆ ಕಳೆದ ಒಂದೂವರೆ ವರ್ಷದ ಹಿಂದೆ ಗ್ರಾ.ಪಂ. ಅಧ್ಯಕ್ಷರ ಬದಲಾವಣೆಯ ಸಂದರ್ಭದಲ್ಲಿ ಗ್ರಾ.ಪಂ. ಸದಸ್ಯರುಗಳ ಆಂತರಿಕ ಅಭಿಪ್ರಾಯ ಸಂಗ್ರಹಣೆಯಲ್ಲಿ ತಿಮ್ಮಪ್ಪ ಗೌಡರವರಿಗೆ ಹೆಚ್ಚಿನ ಸದಸ್ಯರುಗಳ ವಿರೋಧ ಇದ್ದರೂ ಸುಬ್ರಹ್ಮಣ್ಯ ಕುಮಾರ್ ಅಣತಿಯಂತೆ ತಿಮ್ಮಪ್ಪ ಗೌಡರವರನ್ನೇ ಶಾಸಕ ಹರೀಶ್ ಪೂಂಜ ಅವರು ಅಧ್ಯಕ್ಷ ಅಭ್ಯರ್ಥಿ ಎಂದು ಘೋಷಿಸಿದ್ದರು. ಇದಕ್ಕೆ ಸಡ್ಡು ಹೊಡೆದ ಕೆ.ವಿ. ಪ್ರಸಾದ್‌ರವರು ವಸಂತ ಶೆಟ್ಟಿಯವರನ್ನು ಬಂಡಾಯ ಅಭ್ಯರ್ಥಿಯಾಗಿ ಕಣಕ್ಕೆ ಇಳಿಸಿದ್ದರು. ಬಿಜೆಪಿಯ ಬಂಡಾಯದಲ್ಲಿ ತನಗೆ ಲಾಭವಾಗಬಹುದು ಎಂಬ ನಿರೀಕ್ಷೆಯಲ್ಲಿದ್ದ ಕಾಂಗ್ರೆಸ್‌ನ ಯು.ಕೆ. ಇಸುಬುರವರು ಸಹ ಕಣಕ್ಕೆ ಇಳಿದಿದ್ದರು. ಆದರೆ ಆ ಸಮಯದಲ್ಲಿ ಹೈಕಮಾಂಡ್ ಆದೇಶದಂತೆ ಏಳು ಮಂದಿ ತಿಮ್ಮಪ್ಪ ಗೌಡರ ಪರವಾಗಿ ಮತ ಚಲಾಯಿಸಿ ಅವರು ಅಧ್ಯಕ್ಷರಾಗಿ ಚುನಾಯಿತರಾದರು. ವಸಂತ ಶೆಟ್ಟಿ ೩ ಮತ್ತು ಯು.ಕೆ. ಇಸುಬು ೪ ಮತ ಪಡೆದಿದ್ದರು. ತಿಮ್ಮಪ್ಪ ಗೌಡರವರು ಅಧ್ಯಕ್ಷರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಸಮಯದಲ್ಲಿ ಎರಡೂ ಬಣಗಳ ನಡುವಿನ ಮುಸುಕಿನ ಗುದ್ದಾಟ ತಾರಕಕ್ಕೇರಿತ್ತು. ನಂತರ ೧ನೇ ವಾರ್ಡ್‌ನ ಬಿ ಜೆಪಿ ಬೆಂಬಲಿತ ಸದಸ್ಯೆ ರೇಖಾರವರ ಅಕಾಲಿಕ ಮರಣದ ನಂತರ ಘೋಷಣೆಯಾದ ಉಪ ಚುನಾವಣೆಯಲ್ಲಿ ಹರೀಶ್ ಪೂಂಜರವರು ಕೆ.ವಿ. ಪ್ರಸಾದ್‌ರವರನ್ನು ಹೊರಗಿಟ್ಟು ಸಭೆ ನಡೆಸಿ ಅಭ್ಯರ್ಥಿ ಘೋಷಣೆ ಮಾಡಿದ್ದರು. ಇದಕ್ಕೆ ಸಡ್ಡು ಹೊಡೆದ ಕೆ.ವಿ. ಪ್ರಸಾದ್ ಸದ್ರಿ ಚುನಾವಣೆಯಲ್ಲಿ ತಟಸ್ಥವಾಗಿ ನಿಂತು ಪರೋಕ್ಷವಾಗಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಕುಸುವರವರು ೧೫೦ ಮತಗಳ ಅಂತರದಿಂದ ಗೆಲ್ಲಲು ಕಾರಣರಾಗಿದ್ದರಲ್ಲದೆ ಶಾಸಕ ಹರೀಶ್ ಪೂಂಜ, ತಿಮ್ಮಪ್ಪ ಗೌಡ ಮತ್ತು ಸುಬ್ರಹ್ಮಣ್ಯ ಕುಮಾರ್‌ಗೆ ಠಕ್ಕರ್ ಕೊಟ್ಟಿದ್ದರು ಎಂದು ವಿಶ್ಲೇಷಣೆ ನಡೆಯುತ್ತಿದೆ.
ಉಪ್ಪಿನಂಗಡಿ ಸಿ.ಎ. ಬ್ಯಾಂಕ್ ಚುನಾವಣೆ: ನಂತರ ನಡೆದ ಉಪ್ಪಿನಂಗಡಿ ಸಿಎ ಬ್ಯಾಂಕ್ ಚುನಾವಣೆಯಲ್ಲಿ ಕೆ.ವಿ. ಪ್ರಸಾದ್‌ರವರಿಗೆ ಶಾಸಕ ಪೂಂಜ ಟಿಕೆಟ್ ತಪ್ಪಿಸಿದ್ದರು. ತನ್ನ ಆಪ್ತರಾದ ಸುಬ್ರಹ್ಮಣ್ಯ ಕುಮಾರ್ ಅಗರ್ತರವರಿಗೆ ಟಿಕೆಟ್ ಕೊಡಿಸಿ ಅವರನ್ನು ಅದ್ಯಕ್ಷರನ್ನಾಗಿ ಮಾಡುವಂತೆ ಜಿಲ್ಲಾ ಸಹಕಾರ ಭಾರತಿ ಮುಖಂಡರಿಗೆ ಪೂಂಜ ಸಲಹೆ ನೀಡಿದ್ದರು. ಸಹಕಾರ ಭಾರತಿ ಭರ್ಜರಿ ಜಯ ಸಾಧಿಸಿದ ಬಳಿಕ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆಯ ದಿನ ಪ್ರಾರಂಭದವರೆಗೂ ಸುಬ್ರಹ್ಮಣ್ಯ ಕುಮಾರ್ ಅಗರ್ತ ಅಧ್ಯಕ್ಷರಾಗುತ್ತಾರೆ ಎಂದು ಸುದ್ದಿ ಹರಡಿತ್ತು. ಆದರೆ ಚುನಾವಣೆಗೆ ಸ್ವಲ್ಪ ಹೊತ್ತಿಗೆ ಮುಂಚೆ ಬಂದ ಜಿಲ್ಲಾ ಸಹಕಾರ ಭಾರತಿ ಪತಿನಿಧಿಗಳು ಹರೀಶ್ ಪೂಂಜ ಅವರ ಆಪ್ತ ಸುಬ್ರಹ್ಮಣ್ಯ ಕುಮಾರ್ ಬದಲಿಗೆ ಕೆ.ವಿ ಪ್ರಸಾದ್ ಅಧ್ಯಕ್ಷರಾಗಿದ್ದ ಸಮಯದಲ್ಲಿ ಉಪಾಧ್ಯಕ್ಷರಾಗಿದ್ದ ನಿಷ್ಠಾವಂತ ಬಿಜೆಪಿಗ ಸುನಿಲ್ ಕುಮಾರ್ ದಡ್ಡುರವರನ್ನು ಅಧ್ಯಕ್ಷರನ್ನಾಗಿ ಘೋಷಿಸಿದರು. ಉಪ್ಪಿನಂಗಡಿ ಸಿ.ಎ. ಬ್ಯಾಂಕ್ ವ್ಯವಹಾರದಲ್ಲಿ ಹರೀಶ್ ಪೂಂಜ ಕೈಯಾಡಿಸುತ್ತಿದ್ದಾರೆ ಎಂದು ಅಸಮಾಧಾನಗೊಂಡಿದ್ದ ಪುತ್ತೂರಿನ ಮಾಜಿ ಶಾಸಕ ಸಂಜೀವ ಮಠಂದೂರು ಅವರು ತನ್ನ ಆಪ್ತರಾಗಿರುವ ಸುನೀಲ್ ಕುಮಾರ್ ದಡ್ಡು ಅವರು ಅಧ್ಯಕ್ಷರಾಗುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದರು. ಸಂಘ ಪರಿವಾರ, ಪಕ್ಷ ನಿಷ್ಠೆ, ಬಿಲ್ಲವ ಜಾತಿ ಇತ್ಯಾದಿ ವಿಚಾರಗಳನ್ನು ಮುಂದಿಟ್ಟುಕೊಂಡು ಸುನೀಲ್ ಕುಮಾರ್ ಪರ ದಾಳ ಉರುಳಿಸಿದ ಸಂಜೀವ ಮಠಂದೂರು ಅವರು ಆರ್‌ಎಸ್‌ಎಸ್, ಸಹಕಾರ ಭಾರತಿ ಮತ್ತು ಬಿಜೆಪಿ ನಾಯಕರನ್ನು ಮನವೊಲಿಸಿ ಸುನೀಲ್ ಕುಮಾರ್ ಅವರಿಗೆ ಅಧ್ಯಕ್ಷ ಸ್ಥಾನ ಕೊಡಿಸುವಲ್ಲಿ ಯಶಸ್ವಿಯಾಗಿದ್ದರು. ಈ ವಿಚಾರ ಪೂಂಜ ಬೆಂಬಲಿಗರ ಅಸಮಾಧಾನಕ್ಕೆ ಕಾರಣವಾಗಿತ್ತು. ಪರಸ್ಪರ ವಾಗ್ವಾದಕ್ಕೂ ಕಾರಣವಾಗಿತ್ತು. ಬಳಿಕ ಇಳಂತಿಲ ಗ್ರಾಮ ಪಂಚಾಯತ್ ಅಧ್ಯಕ್ಷ ಸ್ಥಾನದಿಂದ ತಿಮ್ಮಪ್ಪ ಗೌಡ ಅವರನ್ನು ಪದಚ್ಯುತಿಗೊಳಿಸಿದ ಮತ್ತು ಕೆ.ವಿ.ಪ್ರಸಾದ್ ಅವರನ್ನು ಬಿಜೆಪಿಯಿಂದ ಉಚ್ಛಾಟಿಸಿದ ಘಟನೆ ನಡೆದಿದೆ. ಈ ಬೆಳವಣಗೆ ಪಕ್ಷದ ನಾಯಕರ ಒಳ ಜಗಳಕ್ಕೆ ಮತ್ತು ಪಕ್ಷ ನಿಷ್ಠ ಕಾರ್ಯಕರ್ತರ ನೋವಿಗೆ ಕಾರಣವಾಗಿದೆ. ಇನ್ನೇನು ಕೆಲವೇ ಸಮಯದಲ್ಲಿ ಜಿಲ್ಲಾ ಪಂಚಾಯತ್ ಮತ್ತು ತಾಲೂಕು ಪಂಚಾಯತ್ ಚುನಾವಣೆ ನಡೆಯಲಿರುವುದರಿಂದ ತಳಮಟ್ಟದಲ್ಲಿ ಪಕ್ಷ ಸಂಘಟನೆಗೆ ತೊಂದರೆ ಆಗದಂತೆ ನೋಡಿಕೊಳ್ಳಲು ಮತ್ತು ದೇವದುರ್ಲಭ ಕಾರ್ಯಕರ್ತರು ಪಕ್ಷದಿಂದ ದೂರ ಸರಿಯದಂತೆ ಮಾಡಲು ಇಳಂತಿಲದತ್ತ ಜಿಲ್ಲಾ ಬಿಜೆಪಿಯ ಹೈಕಮಾಂಡ್ ಚಿತ್ತ ಹರಿಸಿದೆ.
ಸಹಕಾರಿ ಕ್ಷೇತ್ರಕ್ಕೆ ಮಾರಕವಾಗಿರುವ ಸಿಸಿಎ ಕಾನೂನು ಜಾರಿಗೆ ತರುವ ಸಂಬಂಧ ಸಹಕಾರಿ ಕಾಯಿದೆಯ ಕಲಂ ೧೨೮ ಎ ತಿದ್ದುಪಡಿಯನ್ನು ರಾಜ್ಯದ ಕಾಂಗ್ರೆಸ್ ಸರಕಾರ ಮಾಡಿದೆ. ಸಹಕಾರ ಕ್ಷೇತ್ರದ, ಸಹಕಾರ ಸಂಘಗಳ ಹಿತದೃಷ್ಟಿಯಿಂದ ಈ ತಿದ್ದುಪಡಿಯ ಜಾರಿಗೆ ವಿರೋಧವಾಗಿ ಸರಕಾರದ ವಿರುದ್ಧ ರಾಜ್ಯ ಉಚ್ಛ ನ್ಯಾಯಾಲಯದಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದೇನೆ. ಇದೇ ಕಾರಣಕ್ಕಾಗಿ ಕಾಣದ ಕೈಗಳು ನನ್ನ ವಿರುದ್ಧ ಷಡ್ಯಂತ್ರ ಮಾಡಿ ನನ್ನನ್ನು ಪಕ್ಷದಿಂದ ಉಚ್ಚಾಟನೆ ಮಾಡುವಂತೆ ಮಾಡಿದೆ ಎಂದು ಉಪ್ಪಿನಂಗಡಿ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ಮಾಜಿ ಅಧ್ಯಕ್ಷ ಕೆ.ವಿ.ಪ್ರಸಾದ್ ಹೇಳಿದ್ದಾರೆ.
ಪುತ್ತೂರು ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಕಳೆದ ೪೦ ವರ್ಷದಿಂದ ಬಿಜೆಪಿ ಕಾರ್ಯಕರ್ತನಾಗಿ ಕೆಲಸ ಮಾಡುತ್ತಿದ್ದೇನೆ. ಬಿಜೆಪಿ ಕಾರ್ಯಕರ್ತನಾಗಿ ನನ್ನ ಬೂತ್ ಹಾಗೂ ಇಳಂತಿಲ ಗ್ರಾಮದಲ್ಲಿ ಪಕ್ಷದ ಕೆಲಸ ಮಾಡಿರುತ್ತೇನೆ. ಕಳೆದ ೧೦ ವರ್ಷದ ಹಿಂದೆ ಉಪ್ಪಿನಂಗಡಿ ಸಹಕಾರಿ ವ್ಯವಸಾಯಿಕ ಸಂಘದ ನಿರ್ದೇಶಕ ಸ್ಥಾನಕ್ಕೆ ಸ್ಪರ್ಧಿಸಿ ನಿರ್ದೇಶಕನಾಗಿರುತ್ತೇನೆ. ಬಳಿಕದ ಅವಧಿಯಲ್ಲಿ ಸಂಘದ ಅಧ್ಯಕ್ಷ ಜವಾಬ್ದಾರಿಯನ್ನು ನನಗೆ ನೀಡಿದ್ದು ಸಂಘದ ಅಭಿವೃದ್ಧಿಗಾಗಿ ಅವಿರತವಾದ ಪ್ರಾಮಾಣಿಕ ಸೇವೆಯನ್ನು ಪಕ್ಷ ನಿಷ್ಠೆಯಾಗಿ ಮಾಡಿzನೆ. ಬೆಳ್ತಂಗಡಿ ತಾಲೂಕಿನ ರೈತ ಮೋರ್ಚಾದ ಪ್ರಧಾನ ಕಾರ್ಯದರ್ಶಿಯಾಗಿ ಕೂಡ ೩ ವರ್ಷ ಸಂಘಟನೆ ಮಾಡಿದ್ದೇನೆ.
ಸಹಕಾರಿ ಕ್ಷೇತ್ರದಲ್ಲಿ ಜಿಲ್ಲಾ ಸಹಕಾರಿ ಪ್ರಕೋಷ್ಠದ ಸಹ ಸಂಚಾಲಕನಾಗಿ ಕೆಲಸ ನಿರ್ವಹಿಸಿzನೆ. ಸಹಕಾರಿ ಕ್ಷೇತ್ರಕ್ಕೆ ಮಾರಕವಾಗುವ ಸಿಸಿಎ ಕಾನೂನಿನ ವಿರುದ್ಧವಾಗಿ ರಾಜ್ಯ ಉಚ್ಛ ನ್ಯಾಯಾಲಯದಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದ ಒಂದೇ ಕಾರಣದಿಂದ ಬೆಳ್ತಂಗಡಿ ಶಾಸಕರು ನನ್ನನ್ನು ಮಟ್ಟಹಾಕಲು ನನ್ನ ಮೇಲೆ ನಿರಾಧಾರವಾದ ಆರೋಪಗಳನ್ನು ಹೊರಿಸಿ ಸಹಕಾರಿ ಸಂಘದ ಚುನಾವಣೆಯಲ್ಲಿ ಸ್ಪರ್ಧಿಸದಂತೆ ತಡೆದರು ಎಂದು ಹೇಳಿದರು. ಇಳಂತಿಲ ಗ್ರಾಮ ಪಂಚಾಯತ್‌ನಲ್ಲಿ ಅಧ್ಯಕ್ಷರ ಮತ್ತು ಸದಸ್ಯರ ನಡುವಿನ ಹೊಂದಾಣಿಕೆಯ ಕೊರತೆಯಿಂದ ಅಧ್ಯಕ್ಷರ ವಿರುದ್ಧ ಅವಿಶ್ವಾಸ ನಿಲುವಳಿಗೊಂಡು ಬಿಜೆಪಿ ಬೆಂಬಲಿತ ಅಧ್ಯಕ್ಷರು ಪದಚ್ಯುತರಾಗಬೇಕಾಯಿತು.
ಈ ಅವಿಶ್ವಾಸ ನಿಲುವಳಿ ಪ್ರಕರಣದಲ್ಲಿ ನನ್ನ ಕೈವಾಡ ಇರಲಿಲ್ಲ. ಆದರೆ ನಿಲುವಳಿ ಮಂಡನೆಯಾಗುವಲ್ಲಿ ನನ್ನ ಪರೋಕ್ಷವಾದ ಪ್ರೇರಣೆ ಇದೆ ಎಂದು ಸುಳ್ಳು ಆರೋಪಗಳನ್ನು ಹೊರಿಸಿ ಅಪಪ್ರಚಾರ ಮಾಡಲಾಗಿದೆ. ಬಿಜೆಪಿ ಬೆಳ್ತಂಗಡಿ ಮಂಡಲ ಸಮಿತಿಯು ಸತ್ಯಾಸತ್ಯತೆಯನ್ನು ಅರಿಯದೆ ದುರುದ್ದೇಶಪೂರಿತವಾಗಿ ನನ್ನನ್ನು ಪಕ್ಷದಿಂದ ಉಚ್ಚಾಟನೆ ಮಾಡಲಾಗಿದೆ ಎಂದು ಹೇಳಿದ ಅವರು ಪ್ರಸ್ತುತ ನನಗೆ ಪಕ್ಷದಲ್ಲಿ ಯಾವುದೇ ಜವಾಬ್ದಾರಿಗಳು ಇಲ್ಲದೆ ಇರುವುದರಿಂದ ಉಚ್ಚಾಟನೆ ಅನ್ವಯಿಸುವುದಿಲ್ಲ. ನಾನು ಹಿಂದೆಯೂ ಬಿಜೆಪಿ ಕಾರ್ಯಕರ್ತ, ಮುಂದೆಯೂ ಬಿಜೆಪಿ ಕಾರ್ಯಕರ್ತನಾಗಿ ಇರುತ್ತೇನೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ವಸಂತ್ ಮತ್ತು ವಸಂತ್ ಗೌಡರವರು ಉಪಸ್ಥಿತರಿದ್ದರು.
ಕಳೆದ ೩೦ ವರ್ಷಗಳಿಂದ ರಾಷ್ಟ್ರೀಯ ಸ್ವಯಂಸೇವಕ ಸಂಘ, ವಿಶ್ವಹಿಂದೂ ಪರಿಷತ್, ಹಿಂದೂ ಜಾಗರಣ ವೇದಿಕೆ ಸಹಿತ ಹಲವಾರು ಸಂಘಟನೆಗಳಲ್ಲಿ ತನ್ನನ್ನು ತೊಡಗಿಸಿಕೊಂಡು ಹಿಂದೂ ಸಮಾಜಕ್ಕೋಸ್ಕರ ಹಲವು ಕೇಸುಗಳನ್ನು ಹಾಕಿಕೊಂಡು ಜೈಲಿಗೆ ಹೋಗಿ ಪ್ರಸಕ್ತ ಪಕ್ಷದ ಕಾರ್ಯಕರ್ತರ ಒತ್ತಾಯಕ್ಕಾಗಿ ಸಂಘಟನೆಯ ಜವಾಬ್ದಾರಿ ತೊರೆದು ಕಳೆದ ೧೦ ವರ್ಷಗಳಿಂದ ಪಂಚಾಯತ್ ಸದಸ್ಯನಾಗಿ ಯಾವುದೇ ಫಲಾಪೇಕ್ಷೆ ಇಲ್ಲದೆ ಸಾರ್ವಜನಿಕ ಸೇವೆಯಲ್ಲಿ ತೊಡಗಿಸಿಕೊಂಡಿzನೆ. ಕಳೆದ ೨ ವರ್ಷದಿಂದ ಪಕ್ಷದ ಮತ್ತು ಗ್ರಾಮ ಪಂಚಾಯತ್ ಸದಸ್ಯರ ಅಪೇಕ್ಷೆಯಂತೆ ಅಧ್ಯಕ್ಷನಾಗಿ ಕಾರ್ಯ ನಿರ್ವಹಿಸಿzನೆ. ಯಾವುದೇ ಅಧಿಕಾರದ ಆಸೆ ಇಲ್ಲದೆ ಕುರ್ಚಿಗೆ ಅಂಟಿಕೊಳ್ಳದೆ ಗ್ರಾಮದ ಅಭಿವೃದ್ಧಿಯನ್ನೇ ಮುಖ್ಯ ಎಂದು ಭಾವಿಸಿ ಕಾರ್ಯ ನಿರ್ವಹಿಸಿzನೆ. ಇದನ್ನು ಸಹಿಸಲಾಗದ ವಿಕೃತ ಮನಸಿನ ಕೆಲವು ವ್ಯಕ್ತಿಗಳಿಂದಾಗಿ ಪಕ್ಷವನ್ನು ಕಡೆಗಣಿಸಿ ಮುಖಂಡರ ಮಾತನ್ನು ಧಿಕ್ಕರಿಸಿ ಆಮಿಷಕ್ಕೆ ಬಲಿಯಾಗಿ ಅವಿಶ್ವಾಸ ಗೊತ್ತುವಳಿ ನಿರ್ಧಾರಕ್ಕೆ ಬಂದಿದ್ದಾರೆ ಎಂದು ಇಳಂತಿಲ ಗ್ರಾಮ ಪಂಚಾಯತ್ ನಿಕಟಪೂರ್ವ ಅಧ್ಯಕ್ಷ ತಿಮ್ಮಪ್ಪ ಗೌಡ ಅವರು ಸುದ್ದಿ ಬಿಡುಗಡೆಗೆ ಹೇಳಿಕೆ ನೀಡಿದ್ದಾರೆ.