ವರದಕ್ಷಿಣೆ ಕಿರುಕುಳ ನೀಡಿ ಪತ್ನಿಯ ಕೊಲೆಗೆ ಯತ್ನ: ಎಸ್.ಐ. ಕಿಶೋರ್ ವಿರುದ್ಧದ ಪ್ರಕರಣ ಧರ್ಮಸ್ಥಳ ಠಾಣೆಗೆ ವರ್ಗಾವಣೆಪುತ್ತೂರು ಗ್ರಾಮಾಂತರ ಪೊಲೀಸ್ ವೃತ್ತ ನಿರೀಕ್ಷಕ ರವಿ ಬಿ.ಎಸ್. ಪ್ರಕರಣದ ತನಿಖಾಧಿಕಾರಿಯಾಗಿ ನೇಮಕ

0

ಬೆಳ್ತಂಗಡಿ: ವರದಕ್ಷಿಣೆ ತರುವಂತೆ ಪೀಡಿಸಿ ಪತ್ನಿಗೆ ದೈಹಿಕ ಮತ್ತು ಮಾನಸಿಕ ಹಿಂಸೆ ನೀಡಿ ಬೆದರಿಕೆ ಒಡ್ಡಿ ಕೊಲೆಗೆ ಯತ್ನಿಸಿದ ಆರೋಪದಲ್ಲಿ ಧರ್ಮಸ್ಥಳ ಪೊಲೀಸ್ ಠಾಣೆಯ ಸಬ್‌ಇನ್ಸ್‌ಪೆಕ್ಟರ್ ಕಿಶೋರ್ ಪಿ. ವಿರುದ್ಧ ಬೆಂಗಳೂರು ನಗರದ ಚಂದ್ರ ಲೇಔಟ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಕೇಸು ಧರ್ಮಸ್ಥಳ ಪೊಲೀಸ್ ಠಾಣೆಗೆ ವರ್ಗಾವಣೆಯಾಗಿದೆ. ಪ್ರಕರಣದ ತನಿಖಾಧಿಕಾರಿಯಾಗಿ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಕಚೇರಿ ಹೊಂದಿರುವ ಪುತ್ತೂರು ಗ್ರಾಮಾಂತರ ಪೊಲೀಸ್ ವೃತ್ತ ನಿರೀಕ್ಷಕ ರವಿ ಬಿ.ಎಸ್. ಅವರನ್ನು ನೇಮಕ ಮಾಡಲಾಗಿದೆ. ಎ.೨ರಂದು ರವಿ ಬಿ.ಎಸ್.ಅವರಿಗೆ ಪ್ರಕರಣದ ದಾಖಲೆಗಳನ್ನು ಹಸ್ತಾಂತರಿಸಲಾಗಿದೆ. ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಎಸ್‌ಐ ಕಿಶೋರ್ ಮತ್ತಿತರರ ವಿರುದ್ಧ ಹೊಸದಾಗಿ ಎಫ್‌ಐಆರ್ ದಾಖಲಿಸಿಕೊಂಡ ಬಳಿಕ ರವಿ ಬಿ.ಎಸ್.ಅವರು ತನಿಖೆ ಆರಂಭಿಸಲಿದ್ದಾರೆ.
ಬೆಂಗಳೂರು ನಗರದ ನಾಗರಬಾವಿ ಸರ್ಕಲ್‌ನ ಟೀಚರ್ಸ್ ಕಾಲೋನಿಯ ಮಾನಸ ನಗರದ ೨ನೇ ಅಡ್ಡ ರಸ್ತೆಯ ನಿವಾಸಿಯಾಗಿರುವ ೨೭ ವರ್ಷದ ಯುವತಿ ಬೆಂಗಳೂರಿನ ಚಂದ್ರ ಲೇಔಟ್ ಪೊಲೀಸ್ ಠಾಣೆಗೆ ನೀಡಿದ ದೂರಿನಂತೆ ಧರ್ಮಸ್ಥಳ ಪೊಲೀಸ್ ಠಾಣೆಯ ಸಬ್‌ಇನ್ಸ್‌ಪೆಕ್ಟರ್ ಕಿಶೋರ್, ಯುವತಿಯ ಮಾವ ಪುಟ್ಟ ಚನ್ನಪ್ಪ, ಅತ್ತೆ ಸರಸ್ವತಮ್ಮ ಹಾಗೂ ಮೈದುನ ಚಂದನ್ ಪಿ. ವಿರುದ್ಧ ವರದಕ್ಷಿಣೆ ಕಿರುಕುಳ ತಡೆ ಕಾಯ್ದೆ ೧೯೬೧ ಮತ್ತು ಭಾರತೀಯ ನ್ಯಾಯ ಸಂಹಿತೆ ೨೦೦೩ರ ಸೆಕ್ಷನ್ ೧೦೯, ೧೧೫(೨), ೧೧೮(೧), ೩(೫), ೩೫೧(೩), ೩೫೨ ಮತ್ತು ೮೫ರಡಿ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು. ಕೇಸು ದಾಖಲಾದ ಬಳಿಕ ಧರ್ಮಸ್ಥಳದಿಂದ ಬೆಂಗಳೂರಿಗೆ ತೆರಳಿರುವ ಎಸ್.ಐ. ಕಿಶೋರ್ ಬಳಿಕ ನಾಪತ್ತೆಯಾಗಿದ್ದಾರೆ.

ತನಿಖಾಧಿಕಾರಿಯಾಗಿ ರವಿ ಬಿ.ಎಸ್. ನೇಮಕ: ತಂದೆ ತಾಯಿಗೆ ಏಕೈಕ ಪುತ್ರಿಯಾಗಿರುವ ೨೭ ವರ್ಷ ಪ್ರಾಯದ ಸಂತ್ರಸ್ತ ಯುವತಿಗೆ ಸಹೋದರ, ಸಹೋದರಿ ಯಾರೂ ಇಲ್ಲ. ಮಹಿಳೆಯ ತಂದೆ ವ್ಯಾಪಾರಸ್ಥರಾಗಿದ್ದಾರೆ. ತಾಯಿ ಗೃಹಿಣಿಯಾಗಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದಲ್ಲಿ ವಾಸವಾಗಿರುವ ಸರಸ್ವತಮ್ಮ ಮತ್ತು ಪುಟ್ಟ ಚನ್ನಪ್ಪ ಅವರ ಮಗನಾದ ಮೂಡಿಗೆರೆಯಲ್ಲಿ ಸಬ್‌ಇನ್ಸ್‌ಪೆಕ್ಟರ್ ಆಗಿದ್ದ ಕಿಶೋರ್ ಪಿ. ಅವರೊಂದಿಗೆ ಯುವತಿ ವಿವಾಹವಾಗಿದ್ದಾರೆ. ವಿವಾಹವಾದ ಬಳಿಕ ಪ್ರಸ್ತುತ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಎಸ್‌ಐ ಆಗಿರುವ ಕಿಶೋರ್ ಅವರು ತನ್ನ ಪತ್ನಿಗೆ ವರದಕ್ಷಿಣೆ ಕಿರುಕುಳ ಕೊಟ್ಟು ಅವಾಚ್ಯ ಶಬ್ಧಗಳಿಂದ ನಿಂದಿಸಿ ದೈಹಿಕವಾಗಿ ಹಲ್ಲೆ ಮಾಡಿ ಮಾನಸಿಕವಾಗಿ ಹಿಂಸಿಸಿ ಕೊಲೆ ಮಾಡಲು ಪ್ರಯತ್ನಿಸಿದ್ದಾರೆ ಎಂದು ಪ್ರಕರಣ ದಾಖಲಾಗಿದೆ.

೨೪-೧೧-೨೦೨೩ರಂದು ಸಂಜೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದಲ್ಲಿರುವ ಸಿ.ಕೆ. ಪ್ಯಾಲೇಸ್‌ನಲ್ಲಿ ಕಿಶೋರ್ ಪಿ. ಅವರೊಂದಿಗೆ ಯುವತಿಗೆ ವಿವಾಹ ನಿಶ್ಚಿತಾರ್ಥವಾಗಿತ್ತು. ೨೦-೦೨-೨೦೨೪ರಂದು ಸಂಜೆ ಆರತಕ್ಷತೆ ಹಾಗೂ ೨೧-೦೨-೨೦೨೪ರಂದು ಬೆಂಗಳೂರಿನ ಎಂ.ವಿ.ಎಂ ಕನ್ವೆಷನಲ್ ಹಾಲ್‌ನಲ್ಲಿ ವಿವಾಹವಾಗಿತ್ತು. ನಿಶ್ಚಿತಾರ್ಥ ಮತ್ತು ಮದುವೆಗೆ ಲಕ್ಷಾಂತರ ರೂ ಖರ್ಚು ಮಾಡಿದ್ದಲ್ಲದೆ ಲಕ್ಷಾಂತರ ರೂ ವರದಕ್ಷಿಣೆ, ಬೆಲೆ ಬಾಳುವ ಕಾರು, ಚಿನ್ನಾಭರಣ ನೀಡಿದ್ದರೂ ಮತ್ತೆ ವರದಕ್ಷಿಣೆ ತರುವಂತೆ ಪತ್ನಿಗೆ ಕಿಶೋರ್ ಹಿಂಸೆ ನೀಡಿದ್ದರು. ಅಲ್ಲದೆ ಮೂಡಿಗೆರೆ ಪೊಲೀಸ್ ಠಾಣೆಯಲ್ಲಿ ಎಸ್‌ಐ ಆಗಿದ್ದ ಕಿಶೋರ್ ಅವರು ಬೇರೆ ಠಾಣೆಗೆ ವರ್ಗಾವಣೆ ಬಯಸಿ ವರ್ಗಾವಣೆ ಆಗಲು ೮ರಿಂದ ೧೦ ಲಕ್ಷ ಲಂಚವನ್ನು ಎಸ್.ಪಿ. ಮತ್ತು ಮೇಲಾಧಿಕಾರಿಗಳಿಗೆ ಕೊಡಬೇಕು ಎಂದು ತಿಳಿಸಿ ಮತ್ತೆ ಹತ್ತು ಲಕ್ಷ ರೂ ತಂದೆಯಿಂದ ಕೊಡಿಸುವಂತೆ ಹಿಂಸಿಸಿದ್ದರು, ನಂತರ ಕಿಶೋರ್‌ಗೆ ಮೂಡಿಗೆರೆಯಿಂದ ಧರ್ಮಸ್ಥಳ ಠಾಣೆಗೆ ವರ್ಗಾವಣೆಯಾಗಿದೆ. ನಂತರ ಧರ್ಮಸ್ಥಳದಲ್ಲಿ ಮನೆ ಮಾಡಲು ಅಡ್ವಾನ್ಸ್ ಹಣ ಬೇಕು ಮತ್ತು ಮನೆಗೆ ಪೀಠೋಪಕರಣಗಳನ್ನು ಕೊಳ್ಳಲು ಮತ್ತು ಮನೆಯ ಸಾಮಾಗ್ರಿಗಳನ್ನು ಕೊಳ್ಳಲು ತಂದೆ ತಾಯಿಯ ಹತ್ತಿರ ಹಣ ತೆಗೆದುಕೊಂಡು ಬಾ ಎಂದು ಪೀಡಿಸಿದ್ದಾರೆ. ಹಣ ತರಲು ಒಪ್ಪದೇ ಇದ್ದಾಗ ವರದಕ್ಷಿಣೆ ವಿಚಾರವಾಗಿ ಪ್ರತಿ ದಿವಸ ಹಿಂಸೆ ನೀಡಿದ್ದಾರೆ.

ಯುವತಿಯ ಮೊಬೈಲ್ ಕಸಿದುಕೊಂಡು ಹಿಂಸೆ ನೀಡಿದ್ದಾರೆ. ಈ ವಿಚಾರ ಅಕ್ಕ ಪಕ್ಕದವರಿಗೆ ಗೊತ್ತಾಗಿ ಯಾರೋ ಯುವತಿಯ ತಾಯಿಗೆ ೨೨-೦೩-೨೦೨೫ರಂದು ವಿಷಯ ತಿಳಿಸಿದ್ದಾರೆ. ಮಾಹಿತಿ ತಿಳಿದು ತಂದೆ ಮತ್ತು ತಾಯಿ ಮತ್ತು ಯುವತಿಯ ದೊಡ್ಡಮ್ಮನ ಮಗ ಅಕ್ಷಯ ಗೌಡ ಹಾಗೂ ಚಿಕ್ಕಜ್ಜಿಯ ಮಗ ಚೇತನ್ ಕುಮಾರ್ ೨೩-೦೩-೨೦೨೫ರಂದು ಮಧ್ಯಾಹ್ನ ೧೨.೩೦ಕ್ಕೆ ಧರ್ಮಸ್ಥಳಕ್ಕೆ ಬಂದು ಯುವತಿಯನ್ನು ಕರೆದುಕೊಂಡು ಹೋಗಿದ್ದರು. ನಂತರ ಅಲ್ಲಿ ಆಸ್ಪತ್ರೆಗೆ ದಾಖಲಾದ ಯುವತಿ ಬಳಿಕ ಪೊಲೀಸರಿಗೆ ದೂರು ನೀಡಿದ್ದಾರೆ. ತನ್ನ ಪತ್ನಿಗೆ ವರದಕ್ಷಿಣೆ ತರುವಂತೆ ಪೀಡಿಸಿ ಮಾನಸಿಕ, ದೈಹಿಕ ಹಿಂಸೆ ನೀಡಿ ಬೆದರಿಸಿ ಕೊಲೆಗೆ ಯತ್ನಿಸಿದ ಆರೋಪದಡಿ ಎಸ್‌ಐ ಕಿಶೋರ್ ಪಿ ವಿರುದ್ಧ ಸದ್ಯ ಬೆಂಗಳೂರಿನ ಚಂದ್ರ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆಯಾದರೂ ಕಿಶೋರ್ ತನ್ನ ಪತ್ನಿ ಮೇಲೆ ನಡೆದಿರುವ ದೌರ್ಜನ್ಯದ ಬಹುತೇಕ ಕೃತ್ಯಗಳು ಧರ್ಮಸ್ಥಳದಲ್ಲಿರುವ ಅವರ ಬಾಡಿಗೆ ಮನೆಯಲ್ಲಿ ನಡೆದಿರುವುದರಿಂದ ಈ ಪ್ರಕರಣ ಚಂದ್ರ ಲೇಔಟ್ ಪೊಲೀಸ್ ಠಾಣೆಯಿಂದ ಧರ್ಮಸ್ಥಳ ಪೊಲೀಸ್ ಠಾಣೆಗೆ ವರ್ಗಾವಣೆ ಆಗಿದೆ. ಧರ್ಮಸ್ಥಳ ಠಾಣೆಯಲ್ಲಿ ಹೊಸದಾಗಿ ಎಫ್‌ಐಆರ್ ದಾಖಲಾಗಿ ತನಿಖೆ ನಡೆಯಬೇಕಿದೆ. ಪ್ರಕರಣದ ತನಿಖಾಧಿಕಾರಿಯಾಗಿ ಪುತ್ತೂರು ಗ್ರಾಮಾಂತರ ವೃತ್ತ ನಿರೀಕ್ಷಕ ರವಿ ಬಿ.ಎಸ್. ಅವರನ್ನು ನೇಮಕ ಮಾಡಲಾಗಿದೆ. ಎ.೨ರಂದು ರವಿ ಬಿ.ಎಸ್. ಅವರಿಗೆ ಪ್ರಕರಣದ ಫೈಲ್ ಹಸ್ತಾಂತರವಾಗಿದೆ. ಇನ್ನಷ್ಟೇ ಅವರು ತನಿಖೆ ಆರಂಭಿಸಬೇಕಿದೆ.

LEAVE A REPLY

Please enter your comment!
Please enter your name here