

ಬೆಳ್ತಂಗಡಿ: ಅರಣ್ಯ ಇಲಾಖೆಯ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿ ಪಡಿಸಿ ಹಲ್ಲೆಗೆ ಯತ್ನಿಸಿ ಜೀವ ಬೆದರಿಕೆ ಒಡ್ಡಿದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಈರ್ವರಿಗೆ ಬೆಳ್ತಂಗಡಿ ನ್ಯಾಯಾಲಯ ಜೈಲು ಶಿಕ್ಷೆ ಮತ್ತು ದಂಡ ವಿಧಿಸಿ ತೀರ್ಪು ನೀಡಿದೆ.
ಘಟನೆಯ ವಿವರ: ೨೩-೦೫-೨೦೨೦ರಂದು ಮಧ್ಯಾಹ್ನ ೨.೩೦ರ ವೇಳೆಗೆ ಬೆಳ್ತಂಗಡಿ ತಾಲೂಕಿನ ಉರುವಾಲು ಗ್ರಾಮದ ಬನಾರಿ ಎಂಬಲ್ಲಿಗೆ ಉಪ್ಪಿನಂಗಡಿ ವಲಯ ಅರಣ್ಯಾಧಿಕಾರಿ ಭರತ್ ಎ. ಮತ್ತು ಅರಣ್ಯ ರಕ್ಷಕರಾದ ಸುಬ್ಬಯ್ಯ ನಾಯ್ಕ ಹಾಗೂ ಮಾರುತಿ ಅವರು ಅರಣ್ಯ ಇಲಾಖೆಯಲ್ಲಿ ದಾಖಲಾದ ಪ್ರಕರಣಕ್ಕೆ ಸಂಬಂಧಿಸಿದ ಸೊತ್ತುಗಳನ್ನು ಸ್ವಾಧೀನ ಪಡಿಸಿಕೊಳ್ಳಲು ಹೋಗಿದ್ದ ವೇಳೆ ಉರುವಾಲು ಗ್ರಾಮದ ಯೋಗೀಶ್ ಕುಮಾರ್ ಮತ್ತು ಅವರ ಸಂಬಂಧಿಕರಾದ ಮಾಲತಿರವರು ಭರತ್, ಸುಬ್ಬಯ್ಯ ಮತ್ತು ಮಾರುತಿ ಗೋವಿಂದರವರನ್ನು ಉzಶಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆಗೆ ಯತ್ನಿಸಿ ಜೀವ ಬೆದರಿಕೆ ಒಡ್ಡಿದ್ದರು ಎಂದು ಐಪಿಸಿ ೫೦೪, ೩೫೩ ಮತ್ತು ೫೦೬ರಡಿ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ನಂತರ ತನಿಖೆ ಪೂರ್ಣಗೊಳಿಸಿ ಉಪ್ಪಿನಂಗಡಿ ಪೊಲೀಸ್ ಠಾಣೆಯ ಉಪ ನಿರೀಕ್ಷಕ ಕುಮಾರ್ ಸಿ. ಕಾಮ್ಲೆ ಅವರು ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಘಟನೆಯ ವೇಳೆ ಅರಣ್ಯ ರಕ್ಷಕ ಮಾರುತಿ ಅವರು ತನ್ನ ಮೊಬೈಲ್ ಫೋನ್‌ನಲ್ಲಿ ಚಿತ್ರೀಕರಿಸಿದ್ದ ವಿಡಿಯೋ ದೃಶ್ಯಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದ ಸಹಾಯಕ ಸರ್ಕಾರಿ ಅಭಿಯೋಜಕ ದಿವ್ಯರಾಜ್ ಹೆಗ್ಡೆ ಪುತ್ತೂರು ಅವರು ಪ್ರಮುಖ ಸಾಕ್ಷಿಗಳು ವ್ಯತಿರಿಕ್ತ ಹೇಳಿಕೆ ನೀಡಿದ್ದರೂ ಇದೇ ವೀಡಿಯೋದ ಆಧಾರದಲ್ಲಿ ವಾದ ಮಂಡಿಸಿದ್ದರು. ಇದೀಗ ವಿಚಾರಣೆ ಮುಕ್ತಾಯಗೊಳಿಸಿರುವ ಬೆಳ್ತಂಗಡಿಯ ಪ್ರಧಾನ ಹಿರಿಯ ಸಿವಿಲ್ ಹಾಗೂ ಜೆ.ಎಮ್.ಎಫ್.ಸಿ ನ್ಯಾಯಾಲಯದ ನ್ಯಾಯಾಧೀಶ ಮನು ಬಿ.ಕೆ.ರವರು ಆರೋಪಿಗಳು ದೋಷಿಗಳು ಎಂದು ತೀರ್ಮಾನಿಸಿ ತೀರ್ಪು ಪ್ರಕಟಿಸಿದ್ದಾರೆ.
ಆರೋಪಿಗಳಾದ ಯೋಗೀಶ್ ಕುಮಾರ್ ಮತ್ತು ಅವರ ಸಂಬಂಧಿಕರಾದ ಮಾಲತಿಗೆ ಕಲಂ ೩೫೩ ಐಪಿಸಿಯ ಅಪರಾಧಕ್ಕಾಗಿ ಒಂದು ವರ್ಷ ಸಾದಾ ಕಾರಾಗೃಹ ಶಿಕ್ಷೆ ಮತ್ತು ಐದು ಸಾವಿರ ರೂ ದಂಡ ವಿಧಿಸಲಾಗಿದೆ. ದಂಡ ಪಾವತಿಸಲು ತಪ್ಪಿದಲ್ಲಿ ಆರು ತಿಂಗಳು ಜೈಲು ಶಿಕ್ಷೆ ಅನುಭವಿಸುವಂತೆ ಆದೇಶಿಸಲಾಗಿದೆ. ಕಲಂ ೫೦೪ ಐಪಿಸಿಯ ಅಪರಾಧಕ್ಕಾಗಿ ಒಂದು ವರ್ಷ ಸಾದಾ ಕಾರಾಗೃಹ ಶಿಕ್ಷೆ ಮತ್ತು ಐದು ಸಾವಿರ ರೂ ದಂಡ ವಿಧಿಸಲಾಗಿದ್ದು ದಂಡ ಪಾವತಿಸಲು ತಪ್ಪಿದಲ್ಲಿ ಆರು ತಿಂಗಳು ಜೈಲು ಶಿಕ್ಷೆ ಅನುಭವಿಸುವಂತೆ ಹಾಗೂ ಕಲಂ ೫೦೬ ಐಪಿಸಿಯ ಅಪರಾಧಕ್ಕಾಗಿ ಒಂದು ವರ್ಷ ಸಾದಾ ಕಾರಾಗೃಹ ಶಿಕ್ಷೆ ಮತ್ತು ಮತ್ತು ಐದು ಸಾವಿರ ರೂ ದಂಡ ವಿಧಿಸಲಾಗಿದೆ. ದಂಡ ಪಾವತಿಸಲು ತಪ್ಪಿದಲ್ಲಿ ಆರು ತಿಂಗಳು ಜೈಲು ಶಿಕ್ಷೆ ಅನುಭವಿಸುವಂತೆ ನ್ಯಾಯಾಧೀಶರು ಆದೇಶದಲ್ಲಿ ತಿಳಿಸಿದ್ದಾರೆ. ಸರ್ಕಾರದ ಪರವಾಗಿ ಹಿರಿಯ ಸಿವಿಲ್ ಜೆ.ಎಮ್.ಎಫ್.ಸಿ ನ್ಯಾಯಾಲಯದ ಸಹಾಯಕ ಸರ್ಕಾರಿ ಅಭಿಯೋಜಕ ದಿವ್ಯರಾಜ್ ಹೆಗ್ಡೆ ಪುತ್ತೂರು ವಾದ ಮಂಡಿಸಿದ್ದರು. ಬೆಳ್ತಂಗಡಿ ನ್ಯಾಯಾಲಯ ಜೈಲು ಶಿಕ್ಷೆ ವಿಧಿಸಿ ನೀಡಿರುವ ತೀರ್ಪಿನ ವಿರುದ್ಧ ಯೋಗೀಶ್ ಕುಮಾರ್ ಮತ್ತು ಮಾಲತಿ ಅವರು ವಕೀಲ ಸುಬ್ರಹ್ಮಣ್ಯ ಕುಮಾರ್ ಅಗರ್ತ ಅವರ ಮೂಲಕ ಜಿಲ್ಲಾ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿದ್ದಾರೆ ಎಂದು ತಿಳಿದು ಬಂದಿದೆ.