ಕಾಡಿನಲ್ಲಿ ಪತ್ತೆಯಾಗಿದ್ದ ಹೆಣ್ಣು ಮಗುವಿನ ತಂದೆ, ತಾಯಿ ಪತ್ತೆ! ಬೆಳಾಲಿನ ಯುವಕ, ಧರ್ಮಸ್ಥಳ ಗ್ರಾಮದ ಯುವತಿಯೇ ಹೆತ್ತವರು

0

ಬೆಳ್ತಂಗಡಿ: ಬೆಳಾಲು ಗ್ರಾಮದ ಮುಂಡ್ರೊಟ್ಟು ಕಾಡಿನಲ್ಲಿ ಮಾ.೨೨ರಂದು ಪತ್ತೆಯಾದ ಹೆಣ್ಣು ಮಗುವಿನ ತಂದೆ ಮತ್ತು ತಾಯಿಯ ಗುರುತು ಪತ್ತೆಯಾಗಿದೆ. ಬೆಳಾಲು ಗ್ರಾಮದ ಯುವಕ ಮತ್ತು ಧರ್ಮಸ್ಥಳ ಗ್ರಾಮದ ಯುವತಿ ನಡುವೆ ಪ್ರೇಮಾಂಕುರವಾಗಿ ಅವರಿಗೆ ಜನಿಸಿದ ಮಗುವನ್ನು ಕಾಡಿನಲ್ಲಿ ಬಿಡಲಾಗಿತ್ತು ಎಂದು ಮಾಹಿತಿ ಲಭ್ಯವಾಗಿದೆ. ಪರಸ್ಪರ ಪ್ರೀತಿಸುತ್ತಿದ್ದ ಬೆಳಾಲು ಗ್ರಾಮದವನಾಗಿದ್ದು ಖಾಸಗಿ ಸಂಸ್ಥೆಯಲ್ಲಿ ಉದ್ಯೋಗಿಯಾಗಿದ್ದ ೨೭ರ ಹರೆಯದ ಯುವಕ ಹಾಗೂ ಧರ್ಮಸ್ಥಳ ಗ್ರಾಮದವಳಾಗಿದ್ದು ಮಂಗಳೂರಿನಲ್ಲಿ ಬ್ಯೂಟಿಪಾರ್ಲರ್‌ನಲ್ಲಿ ಕೆಲಸ ಮಾಡುತ್ತಿದ್ದ ೨೨ರ ಹರೆಯದ ಯುವತಿಯ ನಡುವೆ ದೈಹಿಕ ಸಂಪರ್ಕ ನಡೆದು ಅವರಿಗೆ ಹೆಣ್ಣು ಮಗು ಜನಿಸಿತ್ತು. ಮಾರ್ಚ್ ೫ರಂದು ಆಸ್ಪತ್ರೆಯಲ್ಲಿ ಹೆಣ್ಣು ಮಗು ಜನಿಸಿದ್ದು ಇದಾದ ಬಳಿಕ ಹುಡುಗ ಮತ್ತು ಹುಡುಗಿಯ ನಡುವೆ ವೈಮನಸ್ಸು ಏರ್ಪಟ್ಟಿತ್ತು. ಈ ಹಿನ್ನಲೆಯಲ್ಲಿ ಹುಡುಗಿ ಮಗುವನ್ನು ತನ್ನ ಪ್ರಿಯಕರ ರಂಜಿತ್‌ನ ಬೆಳಾಲು ಗ್ರಾಮದ ಮಾಯ ಸಮೀಪದ ಬಾಗಿದಡಿಯ ಮನೆಯಲ್ಲಿ ಬಿಟ್ಟು ಹೋಗಿದ್ದಾಳೆ. ಇದರಿಂದ ದಿಕ್ಕು ತೋಚದಾದ ಯುವಕ ಮಗುವನ್ನು ಬೆಳಾಲಿನ ಮಾಯ ಮುಂಡ್ರೊಟ್ಟು ಕಾಡಿನಲ್ಲಿ ಬಿಟ್ಟು ಯಾರದ್ದಾದರೂ ಕೈಗೆ ಸಿಗುವ ತನಕ ದೂರದಲ್ಲಿ ನಿಂತು ನೋಡಿ ನಂತರ ತೆರಳಿದ್ದಾಗಿ ತಿಳಿದು ಬಂದಿದೆ. ಜತೆಗೆ ಕಾಡಿನಲ್ಲಿ ಮಗುವನ್ನು ಬಿಡುವಾಗ ಯುವತಿಯೂ ಇದ್ದಳು ಎಂದು ಹೇಳಲಾಗುತ್ತಿದೆ. ಬೆಳಾಲಿನ ಕಾಡಿನಲ್ಲಿ ಸಿಕ್ಕಿದ ಮುದ್ದು ಕಂದಮ್ಮ ಇದೀಗ ಪುತ್ತೂರಿನ ನೆಲ್ಲಿಕಟ್ಟೆಯಲ್ಲಿರುವ ಶ್ರೀರಾಮಕೃಷ್ಣ ಸೇವಾಶ್ರಮದಲ್ಲಿದೆ.

ಗೊತ್ತಾದದ್ದು ಹೀಗೆ..: ಮಗುವಿನ ಪತ್ತೆ ಕಾರ್ಯಾಚರಣೆ ವಿಶಿಷ್ಟ ರೀತಿಯಲ್ಲಿ ನಡೆದಿದೆ. ತಾಲೂಕಿನಾದ್ಯಂತ ಇತ್ತೀಚೆಗೆ ಹುಟ್ಟಿದ ಮಕ್ಕಳ ಅಂಕಿಅಂಶ ಸಂಗ್ರಹಿಸಿದಾಗ ಬೆಳ್ತಂಗಡಿಯ ಖಾಸಗಿ ಆಸ್ಪತ್ರೆಯಲ್ಲಿ ಬೆಳಾಲಿನ ರಂಜಿತ್ ಅವರು ಗಂಡ ಎಂದು ಹೆಸರಿಸಿ ದಾಖಲಾಗಿದ್ದ ಯುವತಿ ಹೆಣ್ಣುಮಗುವಿನ ಜನ್ಮ ನೀಡಿರುವುದು ಗೊತ್ತಾಗಿದೆ. ಬಳಿಕ ಅಧಿಕಾರಿಗಳು ಪರಿಶೀಲಿಸಿದಾಗ ಹೆರಿಗೆಯಾದ ಯುವತಿಯ ಜತೆ ಮಗು ಇರಲಿಲ್ಲ ಎಂದು ಗೊತ್ತಾದಾಗ ವಿಚಾರ ಬಹಿರಂಗವಾಗಿದೆ.

ಯುವಕನ ವಿಚಾರಣೆ: ಯುವಕನ ವಿಚಾರಣೆ
ಮಗುವನ್ನು ಕಾಡಿನಲ್ಲಿ ಬಿಟ್ಟು ಹೋಗಿರುವ ಬೆಳಾಲು ಗ್ರಾಮದ ಮಾಯ ಸಮೀಪದ ರಂಜಿತ್ ಅವರನ್ನು ಎ.೨ರಂದು ರಾತ್ರಿ ವಶಕ್ಕೆ ಪಡೆದು ಧರ್ಮಸ್ಥಳ ಪೊಲೀಸ್ ಠಾಣೆಗೆ ಕರೆ ತಂದು ವಿಚಾರಣೆ ನಡೆಸಲಾಗಿದೆ.

ಸುದ್ದಿ ಕಚೇರಿಗೆ ನಿರಂತರ ಕರೆ: ಮಗು ಪತ್ತೆಯಾದ ಬಗ್ಗೆ ಸುದ್ದಿ ನ್ಯೂಸ್ ವಿಸ್ತೃತ ವರದಿ ಮಾಡಿದ ನಂತರ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಸಂಚಲನ ಸೃಷ್ಟಿ ಮಾಡಿತ್ತು. ಮಗುವಿಗಾಗಿ ಲಕ್ಷಾಂತರ ಮಂದಿ ಪ್ರಾರ್ಥಿಸಿದ್ದರು. ಮಗು ಆರೋಗ್ಯವಾಗಿರಲಿ, ಉತ್ತಮ ಭವಿಷ್ಯ ಸಿಗಲಿ ಎಂದು ಹಾರೈಸಿದ್ದರು. ಅಷ್ಟೇ ಅಲ್ಲ ನೂರಾರು ಮಂದಿ ಸುದ್ದಿ ಬಿಡುಗಡೆ ಕಚೇರಿಗೆ, ಸಿಬ್ಬಂದಿಗಳಿಗೆ ಕರೆ ಮಾಡಿ ನಮಗೆ ಮಕ್ಕಳಿಲ್ಲ. ಆ ಮಗುವನ್ನು ಕೊಡುತ್ತಾರ? ನಮಗೆ ಹೆಣ್ಣು ಮಕ್ಕಳಿಲ್ಲ ಆ ಮಗು ಕೊಡುವಂತೆ ಮಾಡಿ ಎಂದು ಕೇಳಿಕೊಂಡಿದ್ದರು. ಇದಕ್ಕಾಗಿ ಕಳೆದ ವಾರ ಸುದ್ದಿ ಬಿಡುಗಡೆ ಪತ್ರಿಕೆಯಲ್ಲಿ ಪರಿತ್ಯಕ್ತ ಮಗುವನ್ನು ಕಾನೂನಾತ್ಮಕವಾಗಿ ಹೇಗೆ ರಕ್ಷಿಸಬೇಕು ಮತ್ತು ದತ್ತು ಸ್ವೀಕಾರ ಮಾಡುವುದು ಹೇಗೆ ಅನ್ನುವುದರ ಕುರಿತು ಸಂಪೂರ್ಣ ವಿವರ ಕೊಡಲಾಗಿತ್ತು.

ಮಾಹಿತಿ ಸಂಗ್ರಹ ಮಾಡಲಾಗುತ್ತಿತ್ತು: ಬೆಳಾಲು ಗ್ರಾಮದ ಮುಂಡ್ರೊಟ್ಟು ಕಾಡಿನ ನಡುವೆ ಹೆಣ್ಣು ಮಗುವನ್ನು ಅನಾಥವಾಗಿ ಬಿಟ್ಟು ಹೋಗಿರುವ ಪ್ರಕರಣದ ತನಿಖೆ ನಡೆಯುತ್ತಿತ್ತು. ಮಗು ಪತ್ತೆಯಾದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಪೊಲೀಸ್ ಇಲಾಖೆ ಹಾಗೂ ಆರೋಗ್ಯ ಇಲಾಖೆಯವರು ಮಾಹಿತಿ ಸಂಗ್ರಹ ಕಾರ್ಯ ಮುಂದುವರಿಸಿದ್ದರು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯವರು ಮಾಹಿತಿ ಸಂಗ್ರಹಕ್ಕೆ ಕೈ ಜೋಡಿಸಿದ್ದರು. ಆರೋಗ್ಯ ಇಲಾಖೆಯವರು ತಾಲೂಕಿನ ಪ್ರತಿ ಗ್ರಾಮದ ಯಾರ ಮನೆಯಲ್ಲಿ ಕಳೆದ ಮೂರು ತಿಂಗಳ ಹಿಂದೆ ಮಗುವಿನ ಜನನ ಆಗಿದೆ ಎಂದು ಮಾಹಿತಿ ಕಲೆ ಹಾಕುತ್ತಿದ್ದರು. ಆಶಾ ಕಾರ್ಯಕರ್ತೆಯರು ತಾಲೂಕಿನಾದ್ಯಂತ ಅವರವರ ವ್ಯಾಪ್ತಿಯಲ್ಲಿ ಬರುವ ಮಕ್ಕಳ ಗಣತಿ ನಡೆಸುತ್ತಿದ್ದರು. ಹೆಣ್ಣು ಮಗು, ಗಂಡು ಮಗು, ಆಯಾಯ ಗ್ರಾಮದಲ್ಲಿ ಹೆರಿಗೆ ಆದವರು, ಬೇರೆ ಊರಿನಿಂದ ಹೆರಿಗೆ ಆಗಿ ಬಂದವರು ಹೀಗೆ ಬೇರೆ ಬೇರೆ ಆಯಾಮಗಳಲ್ಲಿ ಶಿಶು ಗಣತಿ ಮಾಡುತ್ತಿದ್ದರು. ಆದರೆ ಈವರೆಗೂ ಕಾಡಿನಲ್ಲಿ ಸಿಕ್ಕ ಹೆಣ್ಣು ಮಗು ಯಾರದ್ದು ಎನ್ನುವ ಮಾಹಿತಿ ಲಭ್ಯವಾಗಿರಲಿಲ್ಲ. ಪೊಲೀಸ್ ಇಲಾಖೆ ಕೂಡ ಚುರುಕಿನ ತನಿಖೆ ನಡೆಸುತ್ತಿದ್ದು ತಾಲೂಕಿನ ಎಲ್ಲಾ ಆಸ್ಪತ್ರೆಗಳಿಗೆ ಹೋಗಿ ಅಲ್ಲಿ ಕಳೆದ ನಾಲ್ಕು ತಿಂಗಳಿನಿಂದ ಜನನ ಆದ ಮಕ್ಕಳ ಮಾಹಿತಿಯನ್ನು ಪಡೆದುಕೊಳ್ಳುತ್ತಿತ್ತು. ಆಸ್ಪತ್ರೆಗಳಲ್ಲಿ ಯಾವುದಾದರೂ ಮಗು ಕಾಣೆಯಾಗಿರುವ, ಅದಲು ಬದಲಾಗಿರುವ ಪ್ರಕರಣ ಏನಾದರೂ ಇದೆಯಾ ಅನ್ನುವುದರ ಬಗ್ಗೆಯೂ ಪೊಲೀಸರು ಪರಿಶೀಲನೆ ನಡೆಸುತ್ತಿದ್ದರು. ವಿವಿಧೆಡೆ ಸಿ.ಸಿ. ಕ್ಯಾಮರಾಗಳನ್ನೂ ಜಾಲಾಡುತ್ತಿದ್ದರು. ಆದರೆ ಪ್ರಕರಣ ನಿಗೂಢವಾಗಿಯೇ ಮುಂದುವರಿದಿತ್ತು. ಇದೀಗ ಮಗುವಿನ ಹೆತ್ತವರು ಪತ್ತೆಯಾಗಿದ್ದಾರೆ.

ಕಾಡಿನಲ್ಲಿ ಮಗು ಸಿಗುವಾಗ ಆಗಿದ್ದು ಕೇವಲ ೨೩ ದಿನ: ಲಭ್ಯ ಮಾಹಿತಿಯ ಪ್ರಕಾರ ಮಗು ಮಾರ್ಚ್ ೫ರಂದು ಜನಿಸಿದೆ. ಕಾಡಿನಲ್ಲಿ ಪತ್ತೆಯಾದಾಗ ಮಗುವಿಗೆ ಮೂರು ತಿಂಗಳಾಗಿರಬಹುದು ಎಂಬ ಅಂದಾಜಿಸಲಾಗಿತ್ತು. ಆದರೆ ಮಗು ಕಾಡಿನಲ್ಲಿ ಸಿಕ್ಕಾಗ ಆಗಿದ್ದು ಕೇವಲ ೨೩ ದಿನ ಎಂದು ಇದೀಗ ಬಹಿರಂಗವಾಗಿದೆ.

LEAVE A REPLY

Please enter your comment!
Please enter your name here