ಐಜಿಪಿ ಅಮಿತ್ ಸಿಂಗ್, ಸಿಐಡಿ ಎಸ್‌ಪಿ ಡಾ. ಅನೂಪ್ ಶೆಟ್ಟಿ, ಇನ್ಸ್‌ಪೆಕ್ಟರ್‌ಗಳಾದ ಮಹೇಶ್ ಪ್ರಸಾದ್, ಶಿವಕುಮಾರ್, ಹೆಡ್‌ಕಾನ್ಸ್‌ಟೇಬಲ್ ಪ್ರವೀಣ್‌ಗೆ ಮುಖ್ಯಮಂತ್ರಿಗಳ ಪದಕ

0

ಬೆಳ್ತಂಗಡಿ: ಪೊಲೀಸ್ ಇಲಾಖೆಯಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದವರಿಗೆ ನೀಡುವ ೨೦೨೪ನೇ ಸಾಲಿನ ಮುಖ್ಯಮಂತ್ರಿ ಪದಕಕ್ಕೆ ರಾಜ್ಯದ ವಿವಿಧ ಜಿಲ್ಲೆಗಳ ೧೯೭ ಪೊಲೀಸರನ್ನು ಆಯ್ಕೆ ಮಾಡಲಾಗಿದ್ದು ಎ.೨ರಂದು ಬೆಂಗಳೂರಿನಲ್ಲಿ ನಡೆದ ಪೊಲೀಸ್ ಧ್ವಜ ದಿನಾಚರಣೆಯಲ್ಲಿ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಗಿದೆ. ಬೆಳ್ತಂಗಡಿ ತಾಲೂಕಿಗೆ ಸಂಬಂಧಿಸಿದಂತೆ ಈ ಹಿಂದೆ ಪುತ್ತೂರು ಉಪವಿಭಾಗದ ಎಎಸ್ಪಿಯಾಗಿದ್ದು ಪ್ರಸ್ತುತ ಮಂಗಳೂರು ಪಶ್ಚಿಮ ವಲಯ ಐಜಿಪಿ ಆಗಿರುವ ಅಮಿತ್ ಸಿಂಗ್, ಬೆಂಗಳೂರು ಸಿಐಡಿಯಲ್ಲಿ ಎಸ್ಪಿಯಾಗಿರುವ ಬೆಳ್ತಂಗಡಿ ತಾಲೂಕಿನವರಾಗಿರುವ ಡಾ. ಅನೂಪ್ ಎ. ಶೆಟ್ಟಿ, ಸುರತ್ಕಲ್ ಪೊಲೀಸ್ ಠಾಣಾ ಇನ್ಸ್‌ಪೆಕ್ಟರ್ ಆಗಿರುವ ವೇಣೂರು ಸರಕಾರಿ ಪ್ರೌಢಶಾಲೆಯ ಹಿರಿಯ ವಿದ್ಯಾರ್ಥಿ ಮಹೇಶ್ ಪ್ರಸಾದ್ ಮತ್ತು ದ.ಕ. ಸೈಬರ್ ಪೊಲೀಸ್ ಠಾಣೆಯಲ್ಲಿ ಹೆಡ್‌ಕಾನ್ಸ್‌ಟೇಬಲ್ ಆಗಿರುವ ಪುತ್ತಿಲ ಗ್ರಾಮದ ಮೂರುಗೋಳಿ ನಿವಾಸಿ ಪ್ರವೀಣ್ ಅವರು ಮುಖ್ಯಮಂತ್ರಿಗಳ ಪದಕ ಪುರಸ್ಕೃತರಾಗಿದ್ದಾರೆ.

ಐಜಿಪಿ ಅಮಿತ್ ಸಿಂಗ್: ಉತ್ತರ ಭಾರತ ಮೂಲದವರಾಗಿರುವ ಅಮಿತ್ ಸಿಂಗ್ ಅವರು ಈ ಹಿಂದೆ ಎನ್‌ಐಎಯಲ್ಲಿ ಕಾರ್ಯ ನಿರ್ವಹಿಸಿದ್ದು ಕಳೆದೊಂದು ವರ್ಷದಿಂದ ಮಂಗಳೂರು ಪಶ್ಚಿಮ ವಲಯ ಐಜಿಪಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ನಾಲ್ಕು ವರ್ಷಗಳ ಕಾಲ ಕೇಂದ್ರಕ್ಕೆ ನಿಯೋಜನೆ ನೆಲೆಯಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‌ಐಎ)ಯಲ್ಲಿ ಇವರು ೨೦೨೩ರ ದಶಂಬರ್ ಎರಡನೇ ವಾರದಲ್ಲಿ ಮರಳಿ ಕರ್ನಾಟಕದಲ್ಲಿ ಸೇವೆಗೆ ಯೋಜಿತರಾಗಿದ್ದರು. ಡಾ|ಚಂದ್ರಗುಪ್ತ ಅವರವರ್ಗಾವಣೆ ಬಳಿಕ ಪಶ್ಚಿಮ ವಲಯ ಐಜಿಪಿಯಾಗಿ ನೇಮಕಗೊಂಡು ವರ್ಗಾವಣೆಗೊಂಡಿದ್ದರು. ಅವರು ಆರಂಭದಲ್ಲಿ ಪುತ್ತೂರು ಉಪವಿಭಾಗದ ಎಎಸ್ಪಿಯಾಗಿ ಕರ್ತವ್ಯ ನಿರ್ವಹಿಸಿದ್ದರು. ದಕ್ಷ ಮತ್ತು ಖಡಕ್ ಐಪಿಎಸ್ ಅಧಿಕಾರಿ ಎಂದೇ ಕರೆಯಲ್ಪಡುವ ಇವರು ನಕ್ಸಲ್ ಸಂಘಟನೆಯಲ್ಲಿದ್ದವರು ಶರಣಾಗಲು ಪ್ರಮುಖ ಕಾರಣಕರ್ತರಾಗಿದ್ದ ಹಿನ್ನೆಲೆಯಲ್ಲಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಡಾ. ಅನೂಪ್ ಶೆಟ್ಟಿ:
ಬೆಳ್ತಂಗಡಿ ತಾಲೂಕಿನ ತೆಂಕಕಾರಂದೂರು ಗ್ರಾಮದ ಅಲೆಕ್ಕಿ ನಿವಾಸಿ ಉಮೇಶ್ ಶೆಟ್ಟಿ ಮತ್ತು ಶೋಭಾ ಎ. ಶೆಟ್ಟಿ ದಂಪತಿಯ ಪುತ್ರರಾದ ಐಪಿಎಸ್ ಅಧಿಕಾರಿ ಡಾ. ಅನೂಪ್ ಎ. ಶೆಟ್ಟಿ ಅವರು ಬೆಂಗಳೂರು ಈಶಾನ್ಯ ವಿಭಾಗದ ಡಿಸಿಪಿಯಾಗಿ ಕಾರ್ಯ ನಿರ್ವಹಿಸಿದ್ದರು. ಕರ್ನಾಟಕ ಸ್ಟೇಟ್ ರಿಸರ್ವ್ ಪೊಲೀಸ್ ಕಮಾಂಡೆಂಟ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಇವರು ಕೊಪ್ಪಳ, ರಾಮನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ, ದಾವಣಗೆರೆ, ಭಟ್ಕಳ, ತೀರ್ಥಹಳ್ಳಿಯಲ್ಲಿ ಎಎಸ್ಪಿಯಾಗಿಯೂ ಸೇವೆ ಸಲ್ಲಿಸಿದ್ದರು. ದಕ್ಷ ಹಾಗೂ ಪ್ರಾಮಾಣಿಕ ಸೇವೆಯಲ್ಲಿ ಜನಮೆಚ್ಚಿದ ಅಧಿಕಾರಿಯಾಗಿ ಗುರುತಿಸಿಕೊಂಡಿದ್ದಾರೆ.

ಮಹೇಶ್‌ಪ್ರಸಾದ್: ಪುತ್ತೂರು ಮೂಲದವರಾಗಿರುವ ಮಹೇಶ್ ಪ್ರಸಾದ್ ಅವರು ಪ್ರಸ್ತುತ ಸುರತ್ಕಲ್ ಪೊಲೀಸ್ ಠಾಣಾ ಇನ್ಸ್‌ಪೆಕ್ಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪೊಲೀಸ್ ಇಲಾಖೆಯಲ್ಲಿ ಸಬ್‌ಇನ್ಸ್‌ಪೆಕ್ಟರ್ ಆಗಿ ಹಾವೇರಿ, ಬೆಂಗಳೂರು, ಹಿರಿಯಡ್ಕ, ಕೋಟ, ಬಂಟ್ವಾಳ ಮತ್ತು ಶೃಂಗೇರಿಯಲ್ಲಿ ಕಾರ್ಯ ನಿರ್ವಹಿಸಿದ್ದ ಇವರು ಬಳಿಕ ಇನ್ಸ್‌ಪೆಕ್ಟರ್ ಆಗಿ ಭಡ್ತಿ ಪಡೆದು ಕಾರವಾರ, ಮಣಿಪಾಲ, ಪುತ್ತೂರು ಮತ್ತು ಕಾಪು ಠಾಣೆಗಳಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ಮಂಗಳೂರು ಸಿಸಿಬಿ ವಿಭಾಗದ ಇನ್ಸ್‌ಪೆಕ್ಟರ್ ಆಗಿದ್ದ ವೇಳೆ ಮಹೇಶ್ ಪ್ರಸಾದ್‌ರವರು ಉಳ್ಳಾಲದಲ್ಲಿ ಕಾರ್ಯಾಚರಣೆ ನಡೆಸಿ ಐಸಿಸ್ ಉಗ್ರರೊಂದಿಗೆ ಸಂಪರ್ಕ ಹೊಂದಿದ್ದವರನ್ನು ಬಂಧಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಇವರ ಕಾರ್ಯ ದಕ್ಷತೆಯನ್ನು ಪರಿಗಣಿಸಿ ಉಗ್ರರ ವಿರುದ್ಧ ವಿಶೇಷ ಕಾರ್ಯಾಚರಣೆ ನಡೆಸಿದ ಪೊಲೀಸರಿಗೆ ಕೇಂದ್ರ ಗೃಹ ಸಚಿವಾಲಯದಿಂದ ನೀಡುವ ಪುರಸ್ಕಾರಕ್ಕೆ ಆಯ್ಕೆಯಾಗಿದ್ದರು. ಇತ್ತೀಚೆಗೆ ನಡೆದ ಕೋಟೆಕಾರು ಬ್ಯಾಂಕ್ ದರೋಡೆ ಪ್ರಕರಣದ ಆರೋಪಿಗಳನ್ನು ಪತ್ತೆ ಹಚ್ಚಿದ ಸಾಧನೆಗಾಗಿ ಪ್ರಶಸ್ತಿಗೆ ಭಾಜನರಾಗಿರುವ ಇವರು ಪೊಲೀಸ್ ಇಲಾಖೆಯಲ್ಲಿದ್ದ ರಘು ನಾಯ್ಕ ಮತ್ತು ಪುಷ್ಪಲತಾ ದಂಪತಿಯ ಪುತ್ರರಾಗಿದ್ದು ಪುತ್ತೂರಿನಲ್ಲಿ ಜನಿಸಿದವರಾಗಿದ್ದಾರೆ. ಪ್ರಸ್ತುತ ಉಡುಪಿ ಜಿಲ್ಲೆಯ ಬ್ರಹ್ಮಾವರದ ಚೆರ್ಕಾಡಿ ನಿವಾಸಿಯಾಗಿದ್ದಾರೆ. ಮೂಡಬಿದ್ರೆಯ ಶ್ರೀ ಮಹಾವೀರ ಕಾಲೇಜ್‌ನ ಹಿರಿಯ ವಿದ್ಯಾರ್ಥಿಯಾಗಿರುವ ಮಹೇಶ್ ಪ್ರಸಾದ್‌ರವರು ತನ್ನ ಕರ್ತವ್ಯದ ಅವಧಿಯಲ್ಲಿ ಹಲವು ಕ್ಲಿಷ್ಟಕರ ಪ್ರಕರಣಗಳನ್ನು ಭೇದಿಸಿ ಜನಮನ್ನಣೆ ಗಳಿಸಿದ್ದಾರೆ. ಮಹೇಶ್ ಪ್ರಸಾದ್ ಅವರ ತಂದೆ ರಘು ನಾಯ್ಕ ಅವರು ವೇಣೂರು ಪೊಲೀಸ್ ಠಾಣೆಯಲ್ಲಿ ಹೆಡ್‌ಕಾನ್ಸ್‌ಟೇಬಲ್ ಆಗಿದ್ದ ವೇಳೆ ಮಹೇಶ್ ಪ್ರಸಾದ್ ಅವರು ವೇಣೂರು ಸರಕಾರಿ ಪ್ರೌಢಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದ್ದರು.

ಶಿವಕುಮಾರ್: ಮೂಲತಃ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕು ಕಾಗೋಡು ಗ್ರಾಮದವರಾಗಿರುವ ಇವರು ೨೦-೦೫-೧೯೮೩ರಂದು ಜನಿಸಿದ್ದು ೨೨-೧೦-೨೦೦೭ರಂದು ಪೊಲೀಸ್ ಉಪನಿರೀಕ್ಷಕರಾಗಿ ಇಲಾಖೆಗೆ ಸೇರಿದ್ದರು. ತರಬೇತಿಯ ನಂತರ ಪೊಲೀಸ್ ನಿರೀಕ್ಷಕರಾಗಿ ಕಾರವಾರ ಗ್ರಾಮಾಂತರ, ಕುಮಟಾ, ಸಿದ್ದಾಪುರ, ಶಿರಸಿ ಗ್ರಾಮಾಂತರ ಮತ್ತು ಬೆಳ್ತಂಗಡಿ ವೃತ್ತ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸಿ ೧೮-೦೯-೨೦೨೩ರಿಂದ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪೊಲೀಸ್ ನಿರೀಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಜಿಲ್ಲೆಯಲ್ಲಿ ಕಾನೂನು ಮತ್ತು ಸುವ್ಯವಸ್ಥೆಯಲ್ಲಿ ಅತ್ಯಂತ ಸೂಕ್ಷ್ಮತೆಯಿಂದ ಕೂಡಿರುವ ಪೊಲೀಸ್ ಠಾಣೆಗಳಲ್ಲಿ ಅತ್ಯಂತ ದಕ್ಷತೆಯಿಂದ ಕರ್ತವ್ಯ ನಿರ್ವಹಿಸುತ್ತಿರುವುದಲ್ಲದೆ ಗಂಭೀರ ಪ್ರಕರಣಗಳಲ್ಲಿ ಉತ್ತಮ ವೃತ್ತಿಪರ ತನಿಖಾಧಿಕಾರಿಯಾಗಿಯೂ ಕರ್ತವ್ಯ ನಿರ್ವಹಿಸಿದ್ದಾರೆ. ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕಾಯ್ದೆ ೨೦೧೨ ಪ್ರಕರಣದಲ್ಲಿ ತನಿಖಾ ಸಹಾಯಕನಾಗಿ ಕರ್ತವ್ಯ ನಿರ್ವಹಿಸಿದ್ದು ಸಾಕ್ಷ್ಯಧಾರಗಳನ್ನು ಕಲೆ ಹಾಕಿ ಸಂಪೂರ್ಣ ತನಿಖೆ ನಡೆಸಿ ದೋಷಾರೋಪಣ ಪಟ್ಟಿ ಸಲ್ಲಿಸಿ ಆರೋಪಿಗೆ ಶಿಕ್ಷೆಯಾಗುವಲ್ಲಿ ಪ್ರಮುಖ ಪಾತ್ರ ವಹಿಸಿರುವ ಇವರು ಪುಂಜಾಲಕಟ್ಟೆ ಪೊಲೀಸ್ ಠಾಣೆ, ಬೆಳ್ತಂಗಡಿ ಸಂಚಾರಿ ಪೊಲೀಸ್ ಠಾಣೆ, ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದಾಖಲಾದ ವಿವಿಧ ಪ್ರಕರಣಗಳಲ್ಲಿ ತನಿಖಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದಾರೆ. ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಕಳವು ಪ್ರಕರಣದ ಆರೋಪಿಯನ್ನು ಪತ್ತೆ ಹಚ್ಚಿವಲ್ಲಿ ಪ್ರಮುಖ ಪ್ರಾತ ವಹಿಸಿದ್ದಾರೆ. ದರೋಡೆ ನಡೆಸಿದ ಒಟ್ಟು ೭ ಜನ ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿಯೂ ಶಿವಕುಮಾರ್ ಪ್ರಮುಖ ಪಾತ್ರ ವಹಿಸಿದ್ದರು. ತುಂಬೆ ದೇವಸ್ಥಾನದ ಕಳವು ಪ್ರಕರಣದಲ್ಲಿ ಮೂರು ಜನ ಆರೋಪಿಗಳನ್ನು ಪತ್ತೆ ಹಚ್ಚುವ ಮೂಲಕ ಶ್ಲಾಘನೆಗೆ ಪಾತ್ರರಾಗಿದ್ದರು.

ಪ್ರವೀಣ್ ಎಂ.: ಬೆಳ್ತಂಗಡಿ ತಾಲೂಕಿನ ಪುತ್ತಿಲ ಗ್ರಾಮದ ಮೂರುಗೋಳಿ ನಿವಾಸಿ ಅಣ್ಣು ದೇವಾಡಿಗ ಮತ್ತು ಬೇಬಿ ದೇವಾಡಿಗ ದಂಪತಿಯ ಮೊದಲ ಪುತ್ರರಾದ ಪ್ರವೀಣ್ ಎಂ.ಅವರು ೨೦೦೨ರಲ್ಲಿ ಪೊಲೀಸ್ ಇಲಾಖೆಗೆ ಸೇರ್ಪಡೆಗೊಂಡರು. ಮಂಗಳೂರು ಬಂದರು ಪೊಲೀಸ್ ಠಾಣೆ, ಬೆಳ್ತಂಗಡಿ ವೃತ್ತ ಕಚೇರಿ, ದಕ್ಷಿಣ ಕನ್ನಡ ಜಿಲ್ಲಾ ಅಪರಾಧ ಪತ್ತೆ ದಳ, ಬಂಟ್ವಾಳ ಡಿವೈಎಸ್ಪಿ ವಿಶೇಷ ಅಪರಾಧ ಪತ್ತೆದಳ, ವೇಣೂರು ಪೊಲೀಸ್ ಠಾಣೆಯಲ್ಲಿ ಕಾರ್ಯ ನಿರ್ವಹಿಸಿದ್ದ ಇವರು ಪ್ರಸ್ತುತ ದಕ್ಷಿಣ ಕನ್ನಡ ಸೈಬರ್ ಪೊಲೀಸ್ ಠಾಣೆಯಲ್ಲಿ ಹೆಡ್‌ಕಾನ್ಸ್‌ಟೇಬಲ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಬಿಜೆಪಿ ಯುವಮೋರ್ಚಾದ ಮುಖಂಡರಾಗಿದ್ದ ಸುಳ್ಯ ತಾಲೂಕಿನ ಬೆಳ್ಳಾರೆ ಸಮೀಪದ ನೆಟ್ಟಾರು ನಿವಾಸಿ ಪ್ರವೀಣ್ ನೆಟ್ಟಾರು ಅವರ ಹತ್ಯೆ ಪ್ರಕರಣ ಹಾಗೂ ಬಿಹಾರದಲ್ಲಿ ನಡೆದಿದ್ದ ಪ್ರಧಾನಿ ನರೇಂದ್ರ ಮೋದಿಯವರ ಹತ್ಯೆಯ ಸಂಚು ಪ್ರಕರಣದ ಕುರಿತು ತನಿಖೆ ನಡೆಸಿದ ರಾಷ್ಟ್ರೀಯ ತನಿಖಾ ದಳದಲ್ಲಿಯೂ ಕಾರ್ಯ ನಿರ್ವಹಿಸಿದ್ದ ಪ್ರವೀಣ್ ಅವರು ಬಂಟ್ವಾಳದ ಆರ್‌ಎಸ್‌ಎಸ್ ಸ್ವಯಂಸೇವಕ ಶರತ್ ಮಾಡಿವಾಳ ಹತ್ಯೆ ಪ್ರಕರಣ, ಫರಂಗಿಪೇಟೆಯ ಡಬ್ಬಲ್ ಮರ್ಡರ್, ಬೆಳ್ತಂಗಡಿ ತಾಲೂಕಿನ ಬಂಗಾಡಿ ಬಸದಿ ಸಹಿತ ದೇವಾಲಯಗಳಲ್ಲಿನ ಕಳವು ಪ್ರಕರಣ, ವಿಟ್ಲ ಕರ್ಣಾಟಕ ಬ್ಯಾಂಕ್ ದರೋಡೆ, ಪುತ್ತೂರು ಗ್ರಾಮಾಂತರ ವ್ಯಾಪ್ತಿಯಲ್ಲಿ ನಡೆದ ದರೋಡೆ, ವಗ್ಗ ಮನೆ ದರೋಡೆ ಪ್ರಕರಣ, ವಿಟ್ಲ ಸಿಂಗಾರಿ ಬೀಡಿ ಮಾಲಕರ ಮನೆಗೆ ನಕಲಿ ಇಡಿ ಅಧಿಕಾರಿಗಳ ಸೋಗಿನಲ್ಲಿಂದು ನಡೆಸಿದ ದರೋಡೆ, ಫರಂಗಿಪೇmಯೆ ದಿಗಂತ್ ನಾಪತ್ತೆ ಪ್ರಕರಣ ಹಾಗೂ ಇನ್ನಿತರ ಗಂಭೀರ ಪ್ರಕರಣದಲ್ಲಿ ವಿಶೇಷ ತಂಡದ ಜೊತೆ ಪ್ರವೀಣ್ ಪ್ರಮುಖ ಪಾತ್ರ ವಹಿಸಿದ್ದರು.

ನಕ್ಸಲರು ಶರಣಾಗಲು ಗಮನಾರ್ಹ ಪಾತ್ರ: ನಿಂಬಾಳ್ಕರ್, ರೆಡ್ಡಿ, ಹರಿರಾಮ ಶಂಕರ್‌ಗೆ ಸಿ.ಎಂ.ಪದಕ

ಕರ್ನಾಟಕ ರಾಜ್ಯ ಮತ್ತು ನೆರೆ ರಾಜ್ಯದ ನಕ್ಸಲರು ಶರಣಾಗತಿಯಾಗಿ ಸಮಾಜದ ಮುಖ್ಯವಾಹಿನಿಗೆ ಬರುವಲ್ಲಿ ಗಮನಾರ್ಹ ಪಾತ್ರ ವಹಿಸಿದ ರಾಜ್ಯ ಗುಪ್ತ ವಾರ್ತೆ ಘಟಕ ಹಾಗೂ ನಕ್ಸಲ್ ನಿಗ್ರಹ ಪಡೆಯ ೨೨ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ಮುಖ್ಯಮಂತ್ರಿ ಪದಕ ನೀಡಿ ಪುರಸ್ಕರಿಸಲಾಗಿದೆ. ರಾಜ್ಯ ಗುಪ್ತವಾರ್ತೆಯ ನಿರ್ದೇಶಕರಾಗಿರುವ ಈ ಹಿಂದೆ ಐಜಿಪಿಯಾಗಿದ್ದ ಹೇಮಂತ್ ಎಂ. ನಿಂಬಾಳ್ಕರ್, ಭದ್ರತೆ ವಿಭಾಗದ ಹೆಚ್ಚುವರಿ ನಿರ್ದೇಶಕ ಡಾ. ವೈ.ಎಸ್. ರವಿಕುಮಾರ್, ರಾಜ್ಯ ಗುಪ್ತವಾರ್ತೆಯ ಜಂಟಿ ನಿರ್ದೇಶಕರಾಗಿರುವ ಈ ಹಿಂದೆ ದ.ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದ ಸುಧೀರ್ ಕುಮಾರ್ ರೆಡ್ಡಿ, ರಾಜ್ಯ ಗುಪ್ತವಾರ್ತೆಯ ಉಪನಿರ್ದೇಶಕರಾಗಿರುವ ಮಂಗಳೂರು ಡಿಸಿಪಿಯಾಗಿ, ಹಾಸನ ಎಸ್.ಪಿ.ಯಾಗಿ ಕಾರ್ಯನಿರ್ವಹಿಸಿದ್ದ ಹರಿರಾಮ ಶಂಕರ್, ನಕ್ಸಲ್ ನಿಗ್ರಹ ಪಡೆಯ ಪೊಲೀಸ್ ಅಧೀಕ್ಷಕ ಜಿತೇಂದ್ರ ದ್ಯಾಮ, ಸಹಾಯಕ ನಿರ್ದೇಶಕ ಸಿ.ವಿ. ದೀಪಕ್, ನಕ್ಸಲ್ ನಿಗ್ರಹ ಪಡೆಯ ಪೊಲೀಸ್ ಉಪಾಧೀಕ್ಷಕ ರಾಘವೇಂದ್ರ ಆರ್. ನಾಯಕ್, ಮುಖ್ಯ ಗುಪ್ತಚರ ಅಧಿಕಾರಿ ಪ್ರಕಾಶ್ ಬಿ. ಕರಿಗಾರ, ನಕ್ಸಲ್ ನಿಗ್ರಹ ಪಡೆಯ ಪೊಲೀಸ್ ಇನ್ಸ್‌ಪೆಕ್ಟರ್ ಸತೀಶ್, ಗುಪ್ತಚರ ಅಧಿಕಾರಿಗಳಾದ ಕಲ್ಲಪ್ಪ ಹೆಚ್. ಆತನೂರ, ದಿನೇಶ್ ಕುಮಾರ್ ಶೆಟ್ಟಿ, ಸಹಾಯಕ ಗುಪ್ತಚರ ಅಧಿಕಾರಿ ಬಿ.ಎಸ್.ಗಿರೀಶ್, ಹಿರಿಯ ಗುಪ್ತಚರ ಸಹಾಯಕರಾದ ರಮೇಶ್ ರಾವ್, ನವೀನ್, ದಿಲೀಪ್, ನಕ್ಸಲ್ ನಿಗ್ರಹ ಪಡೆಯ ಸಶಸ್ತ್ರ ಮುಖ್ಯಪೇದೆ ರಾಘವೇಂದ್ರ, ಗುಪ್ತಚರ ಸಹಾಯಕರಾದ ಎಸ್.ಆರ್. ಚಂದ್ರಶೇಖರ, ಮಹೇಶ್ ಹೆಗಡೆ, ನಕ್ಸಲ್ ನಿಗ್ರಹ ಪಡೆಯ ಪೊಲೀಸ್ ಪೇದೆ ಸೋಮಲಿಂಗ, ಚಿಕ್ಕಮಗಳೂರು ಜಿಲ್ಲೆಯ ಪೊಲೀಸ್ ಪೇದೆಗಳಾದ ಬಸವರಾಜ ಕೆ.ಹೆಚ್. ಮತ್ತು ಶೇಷಾದ್ರಿ ಅವರು ಮುಖ್ಯಮಂತ್ರಿಗಳ ಪದಕ ಪುರಸ್ಕಾರ ಪಡೆದಿದ್ದಾರೆ.

ಎಸ್‌ಪಿ ಯತೀಶ್, ಡಿವೈಎಸ್‌ಪಿ ವಿಜಯ ಪ್ರಸಾದ್‌ಗೆ ಪ್ರಶಸ್ತಿ ಪ್ರದಾನ: ೨೦೨೩ನೇ ಸಾಲಿನ ಮುಖ್ಯಮಂತ್ರಿ ಪದಕ ಪುರಸ್ಕೃರಾಗಿರುವ ದ.ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ಎನ್. ಮತ್ತು ೨೦೨೨ನೇ ಸಾಲಿನ ಪ್ರಶಸ್ತಿಗೆ ಭಾಜನರಾಗಿರುವ ಬಂಟ್ವಾಳ ಡಿವೈಎಸ್‌ಪಿ ವಿಜಯ ಪ್ರಸಾದ್ ಅವರಿಗೆ ಎ.೨ರಂದು ಬೆಂಗಳೂರಿನಲ್ಲಿ ನಡೆದ ಪೊಲೀಸ್ ಧ್ವಜ ದಿನಾಚರಣೆಯಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗಿದೆ. 2016ರ ಬ್ಯಾಚ್‌ನ ಐಪಿಎಸ್ ಅಧಿಕಾರಿಯಾಗಿರುವ ಎಸ್‌ಪಿ ಯತೀಶ್ ಎನ್. ಅವರು ಬೆಂಗಳೂರಿನ ಜ್ಞಾನಬೋಧಿನಿ ಪ್ರಾಥಮಿಕ ಶಾಲೆಯಲ್ಲಿ ಮತ್ತು ಸೈಂಟ್ ಜೋಸೆಫ್ ಪ್ರೌಢಶಾಲೆಯಲ್ಲಿ ವಿದ್ಯಾಭ್ಯಾಸ ನಡೆಸಿದ ನಂತರ ಬೆಂಗಳೂರಿನ ಆರ್.ಎನ್.ಎಸ್. ಇಂಜಿನಿಯರಿಂಗ್ ಕಾಲೇಜ್‌ನಲ್ಲಿ ಇಂಜಿನಿಯರಿಂಗ್ ಪದವಿ ಪಡೆದಿದ್ದರು. ನಂತರ ಐದು ವರ್ಷ ವಾಣಿಜ್ಯ ತೆರಿಗೆ ಇಲಾಖೆಯ ಸಹಾಯಕ ಆಯುಕ್ತರಾಗಿ ಕಾರ್ಯ ನಿರ್ವಹಿಸಿದ್ದ ಇವರು ಬಳಿಕ ಪೊಲೀಸ್ ಇಲಾಖೆ ಸೇರಿ ಕೊಡಗು ಜಿಲ್ಲೆಯಲ್ಲಿ ಪ್ರೊಬೆಷನರಿ ಅವಧಿ ಪೂರೈಸಿದ್ದರು. ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ ಎಎಸ್‌ಪಿಯಾಗಿ, ಬೆಂಗಳೂರು ಎಫ್‌ಎಸ್‌ಎಲ್ ವಿಭಾಗದ ನಿರ್ದೇಶಕರಾಗಿ, ಗದಗ ಮತ್ತು ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದ ಇವರು ಪ್ರಸ್ತುತ ದ.ಕ.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಡಿವೈಎಸ್‌ಪಿ ವಿಜಯಪ್ರಸಾದ್: ತಮ್ಮ ದಕ್ಷ ಮತ್ತು ಪ್ರಾಮಾಣಿಕತೆಯ ಸೇವೆಗಾಗಿ ೨೦೨೨-೨೩ನೇ ಸಾಲಿನ ಮುಖ್ಯಮಂತ್ರಿಗಳ ಪದಕಕ್ಕೆ ಆಯ್ಕೆಯಾಗಿರುವ ಬಂಟ್ವಾಳ ಉಪವಿಭಾಗದ ಡಿವೈಎಸ್ಪಿ ಎಸ್.ವಿಜಯಪ್ರಸಾದ್ ಅವರು ಪುತ್ತೂರು ಮೂಲದವರು. ಪುತ್ತೂರು ತಾಲೂಕಿನ ಶಿಬರಾಡಿ ಆನಂದ ಪೂಜಾರಿ ಮತ್ತು ಉಲಾಂಡಿಯ ಪುಷ್ಪಾವತಿ ದಂಪತಿ ಪುತ್ರರಾಗಿರುವ ಇವರು ೧೯೯೮ರಲ್ಲಿ ಎಸ್.ಐ.ಆಗಿ ಸೇವೆಗೆ ಸೇರಿದ್ದರು. ಬಳಿಕ ದಾವಣಗೆರೆ, ಭದ್ರಾವತಿ, ಚಿಕ್ಕಮಗಳೂರುನಲ್ಲಿ ಕರ್ತವ್ಯ ನಿರ್ವಹಿಸಿ ೨೦೦೭ರಲ್ಲಿ ಪೊಲೀಸ್ ಇನ್ಸ್‌ಪೆಕ್ಟರ್ ಆಗಿ ಭಡ್ತಿ ಹೊಂದಿ ಹಾಸನ ಹೊಳೆನರಸೀಪುರ, ಕುಶಾಲನಗರ, ಕಾರ್ಕಳ, ಅಂಕೋಲ ಹಾಗೂ ಮಂಗಳೂರು ಲೋಕಾಯುಕ್ತ ಸಂಸ್ಥೆಯಲ್ಲಿ ಕರ್ತವ್ಯ ನಿರ್ವಹಿಸಿದ್ದರು. ೨೦೧೯ರಲ್ಲಿ ಭಡ್ತಿ ಹೊಂದಿ ಕರ್ನಾಟಕ ಲೋಕಾಯುಕ್ತ ಡಿವೈಎಸ್ಪಿಯಾಗಿ, ಕಾರ್ಕಳ ಉಪವಿಭಾಗದ ಡಿವೈಎಸ್ಪಿಯಾಗಿ, ಉತ್ತರ ಕನ್ನಡ ಜಿಲ್ಲಾ ಪೊಲೀಸ್ ಅಧೀಕ್ಷಕರ ಕಚೇರಿಯಲ್ಲಿ ಡಿಸಿಆರ್‌ಬಿಯ ಡಿವೈಎಸ್ಪಿ ಆಗಿ ಕರ್ತವ್ಯ ನಿರ್ವಹಿಸಿದ್ದ ಇವರು ಪ್ರಸ್ತುತ ಬೆಳ್ತಂಗಡಿ ತಾಲೂಕನ್ನು ಒಳಗೊಂಡಿರುವ ಬಂಟ್ವಾಳ ಉಪವಿಭಾಗದ ಡಿವೈಎಸ್ಪಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪುತ್ತೂರು ವಿವೇಕಾನಂದ ಕಾಲೇಜಿನಲ್ಲಿ ಬಿಕಾಂ ಪದವಿ ಪಡೆದಿರುವ ಇವರು ಪತ್ನಿ ಗಾಯತ್ರಿ, ಪುತ್ರಿ ನಿಶಿತಾ ಜೊತೆ ಮಂಗಳೂರಿನಲ್ಲಿ ವಾಸವಾಗಿದ್ದಾರೆ. ವಿಜಯ ಪ್ರಸಾದ್‌ರವರು ಪುತ್ತೂರಿನ ಸಂತ ಫಿಲೋಮಿನಾ ಕಾಲೇಜಿನಲ್ಲಿ ಉಪನ್ಯಾಸಕರಾಗಿದ್ದ ದಿ. ಪ್ರೊ|ಬಿ.ಜೆ.ಸುವರ್ಣ ಅವರ ಸಹೋದರಿ ಪುಷ್ಪಾವತಿಯವರ ಪುತ್ರ.

LEAVE A REPLY

Please enter your comment!
Please enter your name here