ದ.ಕ. ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ 16 ಸ್ಥಾನಗಳಿಗೆ ಎ.26ರಂದು ಚುನಾವಣೆ – ಎ.13: ನಾಮಪತ್ರ ಸಲ್ಲಿಕೆ ಆರಂಭ ಎ.20: ನಾಮಪತ್ರ ಹಿಂತೆಗೆಯಲು ಕಡೆ ದಿನ

0

ಬೆಳ್ತಂಗಡಿ ತಾಲೂಕು ಸೇರಿದಂತೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ವ್ಯಾಪ್ತಿ ಹೊಂದಿರುವ ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಮುಂದಿನ 5 ವರ್ಷಗಳ ಅವಧಿಗೆ ಆಡಳಿತ ಮಂಡಳಿ ನಿರ್ದೇಶಕರ ಸ್ಥಾನಗಳಿಗೆ ಎ.26ರಂದು ಪೂರ್ವಾಹ್ನ 9ರಿಂದ ಅಪರಾಹ್ನ 4ರವರೆಗೆ ಚುನಾವಣೆ ನಡೆಯಲಿದೆ. ಮಾ.17ರಂದು ಚುನಾವಣಾ ವೇಳಾಪಟ್ಟಿ ಪ್ರಕಟವಾಗಿದ್ದು ಎ.13ರಿಂದ ಏ.18ರ ತನಕ ನಾಮಪತ್ರ ಸಲ್ಲಿಕೆಗೆ ಅವಕಾಶವಿದೆ. ಎ.19ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ಎ.20ರ ಮಧ್ಯಾಹ್ನ 3 ಗಂಟೆವರೆಗೆ ನಾಮಪತ್ರ ಹಿಂತೆಗೆಯುವಿಕೆ ಪ್ರಕ್ರಿಯೆ ನಡೆಯಲಿದ್ದು ಚುನಾವಣೆಗೆ ಸಂಬಂಧಿಸಿದ ಎಲ್ಲಾ ಪ್ರಕ್ರಿಯೆಗಳು ಮಂಗಳೂರು ನಗರದ ಕುಲಶೇಖರದಲ್ಲಿರುವ ಒಕ್ಕೂಟದ ಕೇಂದ್ರ ಕಚೇರಿಯ ಆವರಣದಲ್ಲಿ ನಡೆಯಲಿದೆ. ಚುನಾವಣಾ ವೇಳಾಪಟ್ಟಿಯನ್ನು ಈಗಾಗಲೇ ಎಲ್ಲಾ ಅರ್ಹ ಸದಸ್ಯ ಸಹಕಾರ ಸಂಘಗಳಿಗೆ ಅಂಚೆ ಮೂಲಕ ಕಳುಹಿಸಲಾಗಿದೆ.

ಪುತ್ತೂರು ಉಪವಿಭಾಗದಿಂದ 4 ಸೇರಿ 16 ಸ್ಥಾನ: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗೆ ಸಂಬಂಧಿಸಿ ಒಟ್ಟು ಎಲ್ಲ ೧೬ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ದ.ಕ. ಮತ್ತು ಉಡುಪಿ ಜಿಲ್ಲೆಯಲ್ಲಿ ತಲಾ ಒಂದು ಸ್ಥಾನವನ್ನು ಮಹಿಳೆಗೆ ಮೀಸಲಿರಿಸಲಾಗಿದೆ. ಎರಡೂ ಜಿಲ್ಲೆಗಳಿಗೆ ತಲಾ 8 ಸ್ಥಾನಗಳನ್ನು ಹಂಚಿಕೆ ಮಾಡಲಾಗಿದೆ. ಪುತ್ತೂರು, ಕಡಬ, ಸುಳ್ಯ ಮತ್ತು ಬೆಳ್ತಂಗಡಿ ತಾಲೂಕು ಸೇರಿದಂತೆ ಪುತ್ತೂರು ಉಪವಿಭಾಗದಿಂದ 4 ನಿರ್ದೇಶಕರ ಆಯ್ಕೆಯಾಗಬೇಕಿದೆ. ಉಡುಪಿ ಜಿಲ್ಲೆಯ ಕುಂದಾಪುರ ಉಪವಿಭಾಗದಿಂದ 7, ದ.ಕ.ಜಿಲ್ಲೆಯ ಪುತ್ತೂರು ಉಪವಿಭಾಗದಿಂದ 4, ಮಂಗಳೂರು ಉಪವಿಭಾಗದಿಂದ ೩ ಹಾಗೂ ದ.ಕ., ಉಡುಪಿಯಿಂದ ತಲಾ 1 ಮಹಿಳಾ ಮೀಸಲು ಸ್ಥಾನ ಸೇರಿ ಒಟ್ಟು 16 ಸ್ಥಾನಗಳಿಗೆ ನೂತನವಾಗಿ ಆಡಳಿತ ಮಂಡಳಿ ನಿರ್ದೇಶಕರ ಆಯ್ಕೆಗೆ ಚುನಾವಣೆ ನಿಗದಿಯಾಗಿದೆ.

ತೆರೆಮರೆ ಪೈಪೋಟಿ-ಕಸರತ್ತು: ಹಾಲು ಒಕ್ಕೂಟದ ಚುನಾವಣೆಗೆ ಇನ್ನೂ ಒಂದು ತಿಂಗಳು ಇದೆ. ಈಗಲೇ ನಿರ್ದೇಶಕರ ಸ್ಥಾನಕ್ಕೆ ಸ್ಪರ್ಧಿಸಲು ಸಹಕಾರ ಭಾರತಿ ಮತ್ತು ಕಾಂಗ್ರೆಸ್ ಬೆಂಬಲಿತರಲ್ಲಿ ಪೈಪೋಟಿ ಆರಂಭವಾಗಿದೆ. ಪ್ರಸಕ್ತ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳ ಹಾಲಿ ನಿರ್ದೇಶಕರು ಮತ್ತೆ ಸ್ಪರ್ಧೆಗ ಆಸಕ್ತಿ ತೋರಿಸುತ್ತಿದ್ದಾರೆ. ಹೊಸಬರೂ ಸ್ಪರ್ಧಿಸಲು ಉತ್ಸುಕರಾಗಿದ್ದಾರೆ.
ಈ ಹಿಂದೆ ಅಧ್ಯಕ್ಷರಾಗಿದ್ದ ಕಾಂಗ್ರೆಸ್‌ನ ಕಾಪು ದಿವಾಕರ ಶೆಟ್ಟಿ, ಹಿರಿಯ ನಿರ್ದೇಶಕ ಪದ್ಮನಾಭ ಶೆಟ್ಟಿ ಆರ್ಕಜೆ, ಮೂರು ಬಾರಿ ಅಧ್ಯಕ್ಷರಾದ ರವಿರಾಜ ಹೆಗ್ಡೆ, ಕೊನೆಯ ಮೂರು ವರ್ಷ ಆಡಳಿತ ನಡೆಸಿದ ಸುಚರಿತ ಶೆಟ್ಟಿ ಕೂಡ ಮತ್ತೆ ಸ್ಪರ್ಧಿಸುವ ಇರಾದೆಯಲ್ಲಿದ್ದಾರೆ. ಆದರೆ ಇನ್ನೂ ಸಹಕಾರ ಭಾರತಿ, ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳ ನಾಯಕರು ತಮ್ಮ ಅಭ್ಯರ್ಥಿ ಯಾರು ಎನ್ನುವುದನ್ನು ಇನ್ನೂ ಅಂತಿಮಗೊಳಿಸಿಲ್ಲ. ಬಳಿಕ ಅವಿರೋಧ ಆಯ್ಕೆ ನಡೆದರೆ ಚುನಾವಣೆ ಇರದು. ಅವಿರೋಧ ಆಯ್ಕೆಗೆ ಕಾಂಗ್ರೆಸ್ ಮುಖಂಡರು ಸಮ್ಮತಿಸುತ್ತಾರಾ ಎನ್ನುವುದು ಪ್ರಮುಖ ವಿಚಾರ. ಈಗಾಗಲೇ ಒಂದು ಗುಂಪು ಹಾಲಿ ನಿರ್ದೇಶಕರಲ್ಲಿ ಕೆಲವರನ್ನು ಬದಲಾಯಿಸಿ ಮರು ಅವಿರೋಧ ಆಯ್ಕೆಗೆ ಒಲವು ತೋರಿಸಿದೆ. ಈ ಬಗ್ಗೆ ಎರಡೂ ಪಕ್ಷಗಳ ಸಹಕಾರಿ ಧುರೀಣರು ತಮ್ಮೊಳಗೆ ಒಂದು ಸುತ್ತಿನ ಅನೌಪಚಾರಿಕ ಮಾತುಕತೆ ನಡೆಸಿದ್ದಾರೆ. ಎಪ್ರಿಲ್ ಪ್ರಥಮ ವಾರದಲ್ಲಿ ಆಯಾ ಪಕ್ಷಗಳು ತಮ್ಮ ಬೆಂಬಲಿತ ಅಭ್ಯರ್ಥಿಗಳ ಆಯ್ಕೆಯನ್ನು ಅಂತಿಮಗೊಳಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಚುನಾವಣೆಯೋ? ಅವಿರೋಧ ಆಯ್ಕೆಯೋ?: ಒಂದು ವರ್ಷ ವಿಳಂಬದ ಬಳಿಕ ದ.ಕ. ಸಹಕಾರಿ ಹಾಲು ಉತ್ಪಾದಕರ ಒಕ್ಕೂಟಕ್ಕೆ ಚುನಾವಣೆ ನಿಗದಿಯಾಗಿದೆ. ಕಳೆದ ಮೂರು ಅವಧಿಯಲ್ಲಿ ಬಿಜೆಪಿ ಬೆಂಬಲಿತ ಸಹಕಾರ ಭಾರತಿ ಸಂಘಟನೆಯ ಆಡಳಿತದಲ್ಲಿದ್ದ ಹಾಲು ಒಕ್ಕೂಟದ ಆಡಳಿತವನ್ನು ಕಸಿದುಕೊಳ್ಳಲು ಕಾಂಗ್ರೆಸ್ ಹವಣಿಕೆ ನಡೆಸುತ್ತಿದೆ. ಈ ಬಾರಿಯೂ ಸಹಕಾರ ಭಾರತಿ ಮತ್ತು ಕಾಂಗ್ರೆಸ್ ನಡುವೆ ಮಾತುಕತೆ ನಡೆಸಿ ಅವಿರೋಧ ಆಯ್ಕೆಗೆ ಎರಡೂ ಕಡೆಯ ಸಹಕಾರಿ ಧುರೀಣರು ಒಲವು ಹೊಂದಿದ್ದಾರೆ. ಆದರೆ ಇಲ್ಲಿ ಪಕ್ಷಗಳ ನಾಯಕರ ಅಭಿಪ್ರಾಯವೇ ಪ್ರಮುಖ್ಯತೆ ಪಡೆಯುತ್ತದೆ. ಹಾಲು ಒಕ್ಕೂಟಕ್ಕೆ ಅವಿಭಜಿತ ದ.ಕ. ಜಿಲ್ಲೆಯಲ್ಲಿ ಒಟ್ಟು 16 ನಿರ್ದೇಶಕ ಸ್ಥಾನ ಇದೆ. ಇದರಲ್ಲಿ ದ.ಕ. ಹಾಗೂ ಉಡುಪಿಗೆ ತಲಾ 8 ನಿರ್ದೇಶಕ ಸ್ಥಾನ ನೀಡಲಾಗಿದೆ. 2009ರವರೆಗೆ ಕಾಂಗ್ರೆಸ್ ಆಡಳಿತದಲ್ಲಿದ್ದ ಹಾಲು ಒಕ್ಕೂಟ ಬಳಿಕ ಚುನಾವಣೆ ಘೋಷಣೆಯಾದಾಗ ಅವಿರೋಧ ಆಯ್ಕೆ ನಡೆದಿತ್ತು. ನಂತರ ಪರಸ್ಪರ ಒಪ್ಪಂದದ ಪ್ರಕಾರ ಮೊದಲ ಬಾರಿಗೆ ಸಹಕಾರ ಭಾರತಿ ತೆಕ್ಕೆಗೆ ಹಾಲು ಒಕ್ಕೂಟದ ಆಡಳಿತ ಬಂದಿತ್ತು. 2014ರಲ್ಲಿ ಚುನಾವಣೆ ನಡೆದು 13 ಸಹಕಾರ ಭಾರತಿ ಹಾಗೂ 3 ಕಾಂಗ್ರೆಸ್ ಬೆಂಬಲಿತ ನಿರ್ದೇಶಕರು ಆಯ್ಕೆಯಾಗಿದ್ದರು. 2019ರಲ್ಲಿ ಅವಿರೋಧ ಆಯ್ಕೆಯಾಗಿ ಸಹಕಾರ ಭಾರತಿಗೆ ಮತ್ತೆ ಪಟ್ಟ ಲಭಿಸಿತ್ತು. ಈ ಬಾರಿ ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತ ಇರುವುದರಿಂದ ಮತ್ತೆ ಅವಿರೋಧ ಆಯ್ಕೆಗೆ ಅವಕಾಶ ಸಿಗುತ್ತದೆಯೇ ಅಥವಾ ಸ್ಪರ್ಧೆ ನಡೆಯುತ್ತದೆಯೇ ನಾಮಪತ್ರ ಸಲ್ಲಿಕೆ ವೇಳೆ ಸ್ಪಷ್ಟವಾಗಲಿದೆ.

ಒಂದು ಹಾಲು ಸೊಸೈಟಿಗೆ ಒಂದೇ ಮತ!
ಸಹಕಾರಿ ಹಾಲು ಒಕ್ಕೂಟ ವ್ಯವಸ್ಥೆಯ ಚುನಾವಣೆಯಲ್ಲಿ ಒಂದು ಹಾಲು ಸೊಸೈಟಿಗೆ ಒಂದೇ ಮತದಾನಕ್ಕೆ ಅವಕಾಶ ಇರುತ್ತದೆ. ಒಕ್ಕೂಟದ ನಿಯಮದ ಪ್ರಕಾರ ಆಯಾ ಹಾಲು ಸೊಸೈಟಿಗಳು ಆಯ್ಕೆ ಮಾಡಿದ ಒಬ್ಬರು ಮಾತ್ರ ಒಕ್ಕೂಟದ ನಿರ್ದೇಶಕರ ಆಯ್ಕೆಗೆ ಮತದಾನ ಮಾಡಲು ಅವಕಾಶ ಇದೆ. ಹೆಚ್ಚಾಗಿ ಹಾಲು ಸೊಸೈಟಿಗಳು ತಮ್ಮ ಅಧ್ಯಕ್ಷರನ್ನು ಮತದಾನ ಮಾಡಲು ಆಯ್ಕೆ ಮಾಡುತ್ತವೆ. ಇಲ್ಲವೇ ಉಪಾಧ್ಯಕ್ಷರು ಅಥವಾ ಯಾವುದೇ ಸದಸ್ಯರೊಬ್ಬರಿಗೆ ಮತದಾನದ ಅವಕಾಶ ನೀಡಬಹುದು. ಪ್ರಸಕ್ತ ಅವಿಭಜಿತ ದ.ಕ. ಹಾಲು ಒಕ್ಕೂಟದಲ್ಲಿ 750 ಹಾಲು ಸೊಸೈಟಿಗಳಿವೆ. ನಿಯಮಿತವಾಗಿ ೨ಕ್ಕಿಂತ ಹೆಚ್ಚಿನ ಮಹಾಸಭೆಗೆ ಗೈರಾಗಿದ್ದರೆ ಅಂತಹ ಸೊಸೈಟಿಗಳಿಗೆ ಮತದಾನದ ಅವಕಾಶ ಇರುವುದಿಲ್ಲ. ಚುನಾವಣಾಧಿಕಾರಿಗಳಾಗಿ ಗೋಪಾಲ್ ಮತ್ತು ಭೂಸ್ವಾಧೀನಾಧಿಕಾರಿ ರಾಜು ಅವರು ಪ್ರಕ್ರಿಯೆ ನಡೆಸಿಕೊಡಲಿದ್ದಾರೆ.

LEAVE A REPLY

Please enter your comment!
Please enter your name here