

ಬೆಳ್ತಂಗಡಿ: ವೇಣೂರು-ಪೆರ್ಮುಡದ 32ನೇ ವರ್ಷದ ಸೂರ್ಯಚಂದ್ರ ಜೋಡುಕರೆ ಕಂಬಳ ಮಾ. 30 ಮತ್ತು 31ರಂದು ನಡೆಯಲಿದೆ ಎಂದು ಕಂಬಳ ಸಮಿತಿಯ ಗೌರವಾಧ್ಯಕ್ಷರಾದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಮ್ ಹೇಳಿದರು. ಅವರು ಮಾ. 26ರಂದು ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು.
ಬೋಟಿಂಗ್, ಕಾರಂಜಿ ವ್ಯವಸ್ಥೆ: ತುಳುನಾಡಿನ ಸಂಸ್ಕೃತಿಗೆ ಕಂಬಳದ ದೊಡ್ಡ ಕೊಡುಗೆ ಇದೆ. ವಿಶ್ವ ಮಟ್ಟದಲ್ಲಿ ಕಂಬಳ ನೋಡುವ ಅಭಿಮಾನಿಗಳು ಇದ್ದಾರೆ. ಗ್ರಾಮೀಣ ರೈತರ ಕ್ರೀಡಾಕೂಟವಾಗಿದ್ದು ಕಳೆದ ೩೨ ವರ್ಷಗಳ ಹಿಂದೆ ಮಾಜಿ ಶಾಸಕ ದಿ. ವಸಂತ ಬಂಗೇರರು ಪ್ರಾರಂಭ ಮಾಡಿದ ಈ ಕಂಬಳ ಅಲ್ಲಿಯ ಪ್ರಮುಖರನ್ನು ಆಧ್ಯಕ್ಷರನ್ನಾಗಿ ಮಾಡಿ ಎಲ್ಲರ ಸಹಕಾರದಿಂದ ಯಶಸ್ವಿಯಾಗಿ ನಡೆಯುತ್ತಾ ಬರುತ್ತಿದೆ. ತಾಲೂಕಿನಲ್ಲಿ ಪೆರ್ಮುಡ, ಬಂಗಾಡಿ ಕೊಲ್ಲಿ ಮತ್ತು ಬಳ್ಳಮಂಜದಲ್ಲಿ ಕಂಬಳ ನಡೆಯುತ್ತಿದೆ. ಈ ವರ್ಷ ಯುಗಾದಿ ದಿನದಂದು ಮತ್ತು ರಂಜಾನ್ ಹಬ್ಬದ ಸಂದರ್ಭದಲ್ಲಿ ನಡೆಯುವ ಕಂಬಳ ಸೌಹಾರ್ದ ಕಂಬಳವಾಗಿದೆ. ಸುಧೀರ್ಘವಾಗಿ ದುಡಿದ ಹಿರಿಯರು ಸಹಿತ ಹಲವಾರು ಮಂದಿ ಸಹಕಾರ ನೀಡುತ್ತಿದ್ದಾರೆ. ಸುಜಿತಾ ವಿ. ಬಂಗೇರ ಗೌರವ ಮಾರ್ಗದರ್ಶಕರಾಗಿದ್ದಾರೆ. ಇಲ್ಲಿ ಕಂಬಳಕ್ಕೆ ಜಾಗದ ಸಮಸ್ಯೆ ಇದ್ದು ಅದಕ್ಕಾಗಿ ಈ ವರ್ಷ ಸ್ಥಳೀಯರು ವಿಶಾಲಾವಾದ 7.5 ಎಕ್ರೆ ಜಾಗವನ್ನು ಕೋಣಗಳಿಗೆ ನಿಲ್ಲಲು ವ್ಯವಸ್ಥೆ ಮಾಡಲಾಗಿದೆ. ವಾಹನ ಪಾಕಿಂಗ್ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದ ರಕ್ಷಿತ್ ಶಿವರಾಂ ಅವರು ಎಲ್.ಡಿ.ಪರದೆಯಲ್ಲಿ ಕಂಬಳ ವೀಕ್ಷಿಸುವ ಅವಕಾಶ ಮಾಡಲಾಗಿದೆ. ಈ ವರ್ಷ ವಿಶೇಷವಾಗಿ ಬೋಟಿಂಗ್, ಕಾರಂಜಿ ವ್ಯವಸ್ಥೆ, ವಿಶೇಷ ಖಾದ್ಯದ ಆಹಾರ ಮಳಿಗೆ, ಗ್ರಾಮೀಣ ಮಳಿಗೆ ತೆರೆದು ಮಹಿಳೆಯರು, ಮಕ್ಕಳು, ಕುಟುಂಬ ಸಮೇತ ನೋಡ ಬಹುದಾದ ವ್ಯವಸ್ಥೆ ಮಾಡಲಾಗಿದೆ. ಪೂರ್ವ ತಯಾರಿಯಲ್ಲಿ ಪ್ರತಿದಿನ ಸ್ವಯಂಸೇವಕರು ಪಕ್ಷಾತೀತವಾಗಿ ಶ್ರಮದಾನದಲ್ಲಿ ಭಾಗವಹಿಸುತ್ತಿದ್ದಾರೆ. ಯುಗಾದಿಯ ದಿನ ನಡೆಯುವ ಕಂಬಳ ಆದುದರಿಂದ ಈ ಬಾರಿ ಕೋಣದ ಮಾಲಕರನ್ನು ವಿಶೇಷ ಗೌರವದಿಂದ ಸ್ವಾಗತಿಸಿ ಉಡುಗೊರೆ ನೀಡಲಾಗುವುದು ಎಂದರು.
ಹಲವರು ಭಾಗಿ: ಅಳದಂಗಡಿ ಅರಮನೆಯ ತಿಮ್ಮಣ್ಣರಸರದಾರ ಡಾ. ಪದ್ಮಪ್ರಸಾದ್ ಅಜಿಲರು ಕಂಬಳ ಉದ್ಘಾಟನೆ ಮಾಡಲಿದ್ದಾರೆ. ತಹಸೀಲ್ದಾರ್ ಪೃಥ್ವಿ ಸಾನಿಕಂ, ವೇಣೂರು ಕ್ರಿಸ್ತರಾಜ ದೇವಾಲಯದ ಧರ್ಮಗುರು ಪೀಟರ್ ಆರಾನ್ಹ, ಕುಂಡದಬೆಟ್ಟು ಜುಮ್ಮಾ ಮಸೀದಿ ಧರ್ಮಗುರು ಕೆ. ಎಂ. ಹನೀಫ್ ಸಖಾಫಿ, ಕುಂಡದಬೆಟ್ಟು ಸೈ೦ಟ್ ಜಾನ್ ಪೌಲ್ ಚರ್ಚ್ ಧರ್ಮಗುರು ವಿಕಾರ್ ಜನರಲ್ ಫಾ. ಜೋಸ್ ವಲಿಯ ಪರಂಬಿಲ್ ಮತ್ತಿತರರು ಭಾಗವಹಿಸಲಿದ್ದಾರೆ ಎಂದು ಹೇಳಿದ ರಕ್ಷಿತ್ ಅವರು ಸಭಾಪತಿ ಯು.ಟಿ.ಖಾದರ್ ಫರೀದ್, ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ಕಾರ್ಮಿಕ ಸಚಿವ ಸಂತೋಷ್ ಲಾಡ್, ಸಂಸದ ಕ್ಯಾ.ಬ್ರಿಜೇಶ್ ಚೌಟ, ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಸಹಕಾರ ರತ್ನ ಡಾ.ಎಂ.ಎನ್. ರಾಜೇಂದ್ರ ಕುಮಾರ್, ಶಾಸಕ ಹರೀಶ್ ಪೂಂಜ, ಎಂಎಲ್‌ಸಿ ಪ್ರತಾಪಸಿಂಹ ನಾಯಕ್, ಮಾಜಿ ಎಂಎಲ್‌ಸಿ ಹರೀಶ್ ಕುಮಾರ್, ಮಾಜಿ ಸಚಿವ ಬಿ. ರಮಾನಾಥ ರೈ, ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ, ಕೆಪಿಸಿಸಿ ಕಾರ್ಯಾಧ್ಯಕ್ಷ ಡಾ.ಮಂಜುನಾಥ ಭಂಡಾರಿ, ಅಳದಂಗಡಿ ಶ್ರೀ ಸತ್ಯದೇವತಾ ದೈವಸ್ಥಾನ ಆಡಳಿತದಾರ ಶಿವಪ್ರಸಾದ್ ಅಜಿಲ, ಶೀಕ್ಷೇತ್ರ ಕುದ್ರೋಳಿಯ ಕೋಶಾಧಿಕಾರಿ ಪದ್ಮರಾಜ್ ಆರ್. ಪೂಜಾರಿ ಸಹಿತ ಹಲವು ಗಣ್ಯರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಉಡುಗೊರೆ ನೀಡಲಾಗುವುದು: ಕಂಬಳ ಸಮಿತಿ ಅಧ್ಯಕ್ಷ ನಿತೀಶ್ ಎಚ್. ಕೋಟ್ಯಾನ್ ಮಾತನಾಡಿ ಯುಗಾದಿಯ ಸಂದರ್ಭದಲ್ಲಿ ನಡೆಯುವ ಈ ವರ್ಷದ ಕಂಬಳದಲ್ಲಿ ಗೌರವಾಧ್ಯಕ್ಷ ರಕ್ಷಿತ್ ಶಿವರಾಮ್ ಉತ್ತಮ ವ್ಯವಸ್ಥೆ ಮಾಡಿದ್ದು ಕೋಣಗಳ ಎಲ್ಲಾ ಯಜಮಾನರಿಗೆ ಉಡುಗೊರೆ ನೀಡಲಾಗುವುದು. ಕುಟುಂಬ ಸಮೇತ ನೋಡ ಬಹುದಾದ ಕಾರಂಜಿ, ಬೋಟಿಂಗ್ ವ್ಯವಸ್ಥೆ ಮಾಡಲಾಗಿದೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಸಮಿತಿಯ ಕಾರ್ಯಾಧ್ಯಕ್ಷ ಶೇಖರ್ ಕುಕ್ಕೇಡಿ, ಉಪಾಧ್ಯಕ್ಷರಾದ ಗೋಪಾಲ ಪೂಜಾರಿ, ಸ್ಟೀವನ್ ಮೋನಿಸ್, ಕೋಶಾಧ್ಯಕ್ಷ ಅಶೋಕ್ ಪಾಣೂರು ಮತ್ತು ಮಹಾಪೋಷಕ ಪ್ರವೀಣ್ ಫೆನಾಂಡಿಸ್ ಉಪಸ್ಥಿತರಿದ್ದರು.