

ಗುರುವಾಯನಕೆರೆ: ಅರಮಲೆಬೆಟ್ಟದ ಕೊಡಮಣಿತ್ತಾಯ ಕ್ಷೇತ್ರದ ಕುಂಭಕಂಠಿಣಿ ದೈವ ಸಾನಿಧ್ಯದಲ್ಲಿ ಫೆ.9ರಿಂದ 13ರ ತನಕ ಬ್ರಹ್ಮಕುಂಭಾಭಿಷೇಕ ಸೇರಿ ಹಲವು ಧಾರ್ಮಿಕ ಕಾರ್ಯಕ್ರಮಗಳು ಬಹಳ ಸಂಭ್ರಮದಿಂದ, ವೈಭವ ಪೂರ್ಣವಾಗಿ ನಡೆದಿದ್ದು, ಸಾವಿರಾರು ಭಕ್ತರು ಕ್ಷೇತ್ರಕ್ಕೆ ಭೇಟಿ ನೀಡಿ, ಭಕ್ತಿಪರವಶತೆಯಲ್ಲಿ ಮಿಂದೆದಿದ್ದಾರೆ.

ಗಣ್ಯಾತಿಗಣ್ಯರು ಕೂಡ ಕ್ಷೇತ್ರಕ್ಕೆ ಭೇಟಿ ನೀಡಿದ್ದಲ್ಲದೆ, ಧಾರ್ಮಿಕ ಸಭಾ ಕಾರ್ಯಕ್ರಮಗಳಲ್ಲಿ ಭಾಗಿಯಾಗಿ, ತಮ್ಮ ಧಾರ್ಮಿಕ ಸಂದೇಶಗಳನ್ನು ಸಮಾಜಕ್ಕೆ ನೀಡಿದ್ದಾರೆ. ಭಕ್ತರಿಗೆ ಎಲ್ಲಿಯೂ ಯಾವುದೇ ಅಡಚಣೆ ಕುಂದುಕೊರತೆಗಳು ಉಂಟಾಗದಂತೆ ನೋಡಿಕೊಳ್ಳಲಾಗಿದ್ದು, ಕಾರ್ಯಕ್ರಮವನ್ನು ನಡೆಸಿದರೆ ಹೀಗೆ ನಡೆಸಬೇಕು ಎಂದು ಭಕ್ತರೇ ಮಾತನಾಡಿಕೊಂಡಿರುವುದು ಇಡೀ ಕಾರ್ಯಕ್ರಮಕ್ಕೆ ಸಾಕ್ಷಿಯಾಗಿ ನಿಂತಿದೆ.
ಕೆಲಸ ಎಂದರೆ ಹೀಗಿರಬೇಕು: ಅರಮಲೆ ಬೆಟ್ಟ ಕೊಡಮಣಿತ್ತಾಯ ದೈವಸ್ಥಾನದ ಬ್ರಹ್ಮ ಕುಂಭಾಭಿಷೇಕಕ್ಕೆ ಅವಿರತ ದುಡಿದ ಸಮಿತಿ ಸದಸ್ಯರ ಕಾರ್ಯಕ್ಷಮತೆ ಎಲ್ಲರನ್ನೂ ಮೆಚ್ಚುವಂತೆ ಮಾಡಿದೆ. ಸಮಿತಿಯು ಶಶಿಧರ್ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ, ಅನುವಂಶಿಕ ಆಡಳಿತ ಮೊಕ್ತೇಸರ ಸುಕೇಶ್ ಕುಮಾರ್ ಕಡಂಬು, ಪ್ರಧಾನ ಕಾರ್ಯದರ್ಶಿ ಪುರಂದರ ಶೆಟ್ಟಿ ಪಾಡ್ಯಾರು, ಕಾರ್ಯಾಧ್ಯಕ್ಷ ಸುಮಂತ್ ಕುಮಾರ್ ಜೈನ್, ಕೋಶಾಧಿಕಾರಿ ಪ್ರದೀಪ್ ಕುಮಾರ್ ಶೆಟ್ಟಿ ರಾತ್ರಿ ಹಗಲು ಎನ್ನದೆ ದೈವಸ್ಥಾನದಲ್ಲಿ ಶ್ರಮ ಪಟ್ಟಿದ್ದಾರೆ. ಇದರ ಪ್ರತಿಫಲವಾಗಿ ಮಾದರಿ ಬ್ರಹ್ಮ ಕುಂಭಾಭೀಷೇಕ ಎಂಬಂತೆ ಕಾರ್ಯಕ್ರಮ ನಡೆದು ಯಶಸ್ವಿಯಾಗಿದೆ. ಪ್ರಧಾನ ಅರ್ಚಕರಾದ ಕೆ ರತ್ನಾಕರ ನೂರಿತ್ತಾಯ ಬಹಳ ಅಚ್ಚು ಕಟ್ಟಾಗಿ ವೈದಿಕ ಕಾರ್ಯಕ್ರಮ ನಡೆಸಿಕೊಟ್ಟಿದ್ದಾರೆ.
ಅದ್ದೂರಿ ಹೊರೆಕಾಣಿಕೆ ಶೋಭಾಯಾತ್ರೆ: ಫೆ.9ರಂದು ಸಂಜೆ 5 ಗಂಟೆಗೆ ಹೊರೆಕಾಣಿಕೆ ಶೋಭಾಯಾತ್ರೆಯನ್ನು ನವಶಕ್ತಿ ನಿವಾಸದಿಂದ ಶಶಿಧರ್ ಶೆಟ್ಟಿ ಬರೋಡ ಅವರ ಮಾತೃಶ್ರೀ ಕಾಶಿ ಶೆಟ್ಟಿ ಅವರು ಉದ್ಘಾಟನೆ ಮಾಡುವುದರೊಂದಿಗೆ ಶುಭಾರಂಭಗೊಂಡಿತು. ಪಡಂಗಡಿ, ಗುರುವಾಯನಕೆರೆ, ಶಕ್ತಿನಗರ, ಓಡಿಳ್ನಾಲ, ಮದ್ದಡ್ಕದಿಂದ ಹೊರೆಕಾಣಿಕೆಯನ್ನು ಪಡೆದ ನಂತರದಲ್ಲಿ ವಿಶಾಲವಾದ ನವಶಕ್ತಿ ಕ್ರೀಡಾಂಗಣದಿಂದ ಹೊರಟ ಭವ್ಯ ಮರೆವಣಿಗೆಯಲ್ಲಿ ವಿವಿಧ ಕುಣಿತ ಭಜನಾ ತಂಡ, ಹುಲಿ ಮರಿಯಂತೆ ವೇಷ ಧರಿಸಿದ ಪುಟ್ಟ ಪೋರನ ಹುಲಿ ಕುಣಿತ ಜನರ ಆಕರ್ಷಣೆಗೆ ಪಾತ್ರವಾಯಿತು. ಕುಡುಮಶ್ರೀ ಹುಲಿಕುಣಿತ ತಂಡ, ಕೀಲು ಕುದುರೆ, ಯಕ್ಷಗಾನದ ವೇಷಭೂಷಣಗಳು ನೆರೆದ ಭಕ್ತಾದಿಗಳ ಚಿತ್ತ ಸೆಳೆದಿತ್ತು. ಎಕ್ಸೆಲ್ ಕಾಲೇಜು ವಿದ್ಯಾರ್ಥಿಗಳು ಶೋಭಾಯಾತ್ರೆಯಲ್ಲಿ ಪಾಲ್ಗೊಂಡು ಮೆರವಣಿಗೆಗೆ ಇನ್ನಷ್ಟು ಮೆರುಗು ಕೊಟ್ಟಿದ್ದರು.
ಜಗತ್ತಿನ ದೇವರಕೋಣೆ ಭಾರತವಾದರೆ ಭಾರತದ ದೇವರಕೋಣೆ ತುಳುವ ನೆಲ: ದಯಾನಂದ ಕತ್ತಲ್‌ಸಾರ್ ಜಗತ್ತಿನ ದೇವರಕೋಣೆ ಭಾರತವಾದರೆ ಭಾರತದ ದೇವರಕೋಣೆ ತುಳುವ ನೆಲ. ತುಳುನಾಡು ಪವಿತ್ರ ಮಣ್ಣು. ದೈವವನ್ನು ಅಟ್ಟದ ತನಕ ಎತ್ತಿದರೆ ಭಕ್ತನನ್ನು ದೈವ ಆಕಾಶದೆತ್ತರಕ್ಕೆ ಎತ್ತುತ್ತದೆ. ದೈವಕ್ಕೂ ದೇವರಿಗೂ ಭೇದವಿಲ್ಲ ಎಂದು ಜಾನಪದ ವಿಧ್ವಾಂಸ ದಯಾನಂದ ಕತ್ತಲ್‌ಸಾರ್ ಹೇಳಿದರು.
ಅರಮಲೆಬೆಟ್ಟದ ಬ್ರಹ್ಮಕುಂಭಾಭಿಷೇಕ ಕಾರ್ಯಕ್ರಮದ ಎರಡನೇ ದಿನದ ಧಾರ್ಮಿಕ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹಿಂದಿನ ಗುತ್ತು ಮನೆಯವರು ಸತ್ಯ ದೈವಗಳು ಎತ್ತರದಲ್ಲಿ ನೆಲೆಸಿ ಊರನ್ನು ಕಾಯಬೇಕು ಎಂಬ ಉದ್ದೇಶ ಹೊಂದಿದ್ದರು. ಹರಿಯುವ ನದಿಯಿಂದ ಕಲ್ಲನ್ನು ತಂದು ದೈವವೆಂದು ನಂಬಿದ್ದರು. ದೈಹಿಕ ವ್ಯಾಧಿಗೆ ನಮ್ಮ ಗಿಡ ಗಂಟಿ, ಬೇರುಗಳಲ್ಲಿ ಮದ್ದು ಅಡಗಿತ್ತು. ನಮ್ಮ ಮಾನಸಿಕ ವ್ಯಾಧಿಗೆ ಮದ್ದಾಗಿ ದೈವಾರಾಧನೆ ಮಾಡಲಾಗಿದೆ. ಪ್ರಕೃತಿದತ್ತವಾಗಿ ನಾವು ದೈವ ಮತ್ತು ನಾಗಾರಾಧನೆ ಮಾಡಬೇಕು. ನಮ್ಮಲ್ಲಿ ಹಾವಿನ ಹುತ್ತವಿದ್ದರೆ ಅಂತರ್ಜಲವಿರುತ್ತದೆ. ಅವುಗಳನ್ನು ಉಳಿಸಬೇಕಾಗಿದೆ ಎಂದರು.
ದೇವರನ್ನು ಕಂಡವರು ನಾವು-ಪ್ರತಾಪಸಿಂಹ ನಾಯಕ್: ವಿಧಾನಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್ ಮಾತನಾಡಿ ಯಾವುದೇ ಕಾರ್ಯ ಮಾಡುವಾಗಲೂ ಕೂಡ ಭಕ್ತನಾದವನು ದೇವರ್ ತೂಪೆರ್ ಎಂದು ಭಾವಿಸಿಕೊಳ್ಳುತ್ತಾನೆ. ಪ್ರತಿಯೊಂದು ವಸ್ತುವಲ್ಲೂ ವ್ಯಕ್ತಿಯಲ್ಲೂ ದೇವರನ್ನು ಕಂಡವರು ನಾವು. ದೇವರ ಸಾನಿಧ್ಯ ಹೆಚ್ಚಾಗಬೇಕು ಅನ್ನುವ ಕಾರಣಕ್ಕೆ ಬ್ರಹ್ಮಾಕುಂಭಾಭಿಷೇಕ ನಡೆಯುತ್ತಿದೆ ಎಂದರು.
ಕಾರ್ಯಾಧ್ಯಕ್ಷ ಸುಮಂತ್ ಕುಮಾರ್ ಜೈನ್, ಬಂಟರ ಸಂಘದ ಅಧ್ಯಕ್ಷ ಜಯಂತ್ ಶೆಟ್ಟಿ, ಸಂತೋಷ್ ಕುಮಾರ್ ಜೈನ್, ಬೆಳ್ತಂಗಡಿ ರಬ್ಬರ್ ಸಂಸ್ಥೆಯ ಕಾರ್ಯನಿರ್ವಹಣಾಧಿಕಾರಿ ರಾಜು ಶೆಟ್ಟಿ, ಉದ್ಯಮಿ ಗಂಗಾಧರ್ ಆಚಾರ್ಯ, ಸತ್ಯಶಂಕರ್ ಭಟ್ ಅರಮಲೆಬೆಟ್ಟ, ರಾಜಪ್ಪ ಶೆಟ್ಟಿ ಸುದೆಕ್ಕಾರ್, ಪ್ರದೀಪ್ ಶೆಟ್ಟಿ ಸಾಯಿರಾಮ್, ಪಾಡ್ಯಾರ್‌ಬೀಡು ವಿಠಲ ಶೆಟ್ಟಿ, ನಿರಂಜಲ ಮಲ್ಯ, ಪ್ರಭಾಕರ್ ಬಂಗೇರ, ಗುಜರಾತ್‌ನ ಉದ್ಯಮಿ ಕಜೆ ಸಚಿನ್ ಶೆಟ್ಟಿ, ಪ್ರಶಾಂತ್, ಅನುವಂಶಿಕ ಆಡಳಿತ ಮೊಕ್ತೇಸರ ಸುಕೇಶ್ ಕುಮಾರ್ ಜೈನ್, ಎಕ್ಸೆಲ್ ಕಾಲೇಜಿನ ಚೇರ್‌ಮನ್ ಸುಮಂತ್ ಕುಮಾರ್ ಜೈನ್, ಪುರಂದರ ಶೆಟ್ಟಿ ಪಾಡ್ಯಾರು, ಕೋಶಾಧಿಕಾರಿ ಪ್ರದೀಪ್ ಶೆಟ್ಟಿ ಉಪಸ್ಥಿತರಿದ್ದರು. ಎಕ್ಸೆಲ್ ಕಾಲೇಜಿನ ಉಪನ್ಯಾಸಕ ಪಿ. ಪ್ರದೀಪ್ ರೈ ನಿರೂಪಿಸಿದ ಕಾರ್ಯಕ್ರಮದಲ್ಲಿ ಹರ್ಷಿಕಾ ವಿ. ಪ್ರಾರ್ಥಿಸಿದರು. ಧಾರ್ಮಿಕ ಸಭಾಧ್ಯಕ್ಷತೆ ವಹಿಸಿದ್ದ ಶಶಿಧರ್ ಶೆಟ್ಟಿ ಬರೋಡಾ ಸ್ವಾಗತಿಸಿ, ಎಕ್ಸೆಲ್ ಕಾಲೇಜಿನ ಚೇರ್‌ಮೆನ್ ಸುಮಂತ್ ಕುಮಾರ್ ಜೈನ್ ವಂದಿಸಿದರು.
ರಾಜನ್ ದೈವ ಬಗ್ಗೆ ಡಾ. ಹೆಗ್ಗಡೆಯವರು ಹೇಳಿದ್ದೇನು?: ಫೆ.11ರಂದು ಅರಮಲೆಬೆಟ್ಟದಲ್ಲಿ ನಡೆದ ಚಂಡಿಕಾ ಹೋಮದ ಸಂದರ್ಭದಲ್ಲಿ ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ. ವಿರೇಂದ್ರ ಹೆಗ್ಗಡೆ ಭೇಟಿ ಕೊಟ್ಟರು. ಕೊಡಮಣಿತ್ತಾಯ ದೈವಕ್ಕೆ ವಿದ್ಯೇಶ್ ತಂತ್ರಿಗಳು ವಿಶೇಷ ಪೂಜೆ ಸಲ್ಲಿಸಿ ಡಾ. ಹೆಗ್ಗಡೆ ಅವರಿಗೆ ಗಂಧ ಪ್ರಸಾದ ನೀಡಿದರು. ಅರಮಲೆಬೆಟ್ಟದಲ್ಲಿ ನೆಲೆಯಾದ ರಾಜನ್ ದೈವದ ಬಗ್ಗೆ ಡಾ. ವೀರೇಂದ್ರ ಹೆಗ್ಗಡೆಯವರು ಸುದ್ದಿ ನ್ಯೂಸ್ ಜೊತೆ ಮಾತನಾಡಿ, ಅರಮಲೆಬೆಟ್ಟದಲ್ಲಿ ಪ್ರಾಚೀನ ಸಾನಿಧ್ಯ ಇದೆ ಎನ್ನುವುದು ನೋಡುವಾಗಲೇ ಗೊತ್ತಾಗುತ್ತದೆ. ಬ್ರಹ್ಮಕುಂಭಾಭೀಷೇಕ ಮೂಲಕ ಶಕ್ತಿಯನ್ನು ಜಾಗೃತಿಗೊಳಿಸುವ ಕೆಲಸ ಇಲ್ಲಿ ಆಗುತ್ತಿದೆ. ಬಹಳ ಒಳ್ಳೆಯ ಕಾರ್ಯ ಮಾಡುತ್ತಿದ್ದಾರೆ. ನೋಡುವಾಗ ಸಂತೋಷವಾಗುತ್ತದೆ. ದೇವರು ತಡವಾಗಿ ಪ್ರತಿಕ್ರಿಯೆ ಕೊಡುತ್ತಾನೆ ಆದರೆ ದೈವ ತಕ್ಷಣ ಪ್ರತಿಕ್ರಿಯೆ ಕೊಡುತ್ತದೆ ಎಂದರು. ಶಶಿಧರ್ ಶೆಟ್ಟಿ ಬರೋಡ ಹಾಗೂ ಸುಕೇಶ್ ಕುಮಾರ್ ಕಡಂಬು ಅವರ ಕೆಲಸವನ್ನು ಶ್ಲಾಘಿಸಿದರು.
ಬ್ರಹ್ಮಕುಂಭಾಭಿಷೇಕ: ಮಡಂತ್ಯಾರಿನ ಗೋಪಾಲಕೃಷ್ಣ ತಂತ್ರಿಯವರಿಂದ ಬ್ರಹ್ಮಕುಂಭಾಭೀಷೇಕ ಪೂಜೆ ನೆರವೇರಿತು. ಬ್ರಹ್ಮಕಲಶ ಪ್ರತಿಷ್ಠಾ ಹೋಮ, ಪ್ರತಿಷ್ಠಾ ಕಲಶಾಭೀಷೇಕ, ಪರಿಕಲಶಾಭೀಷೇಕ ಸೇರಿದಂತೆ ಹೋಮ ಹವನ ನಡೆದ ನಂತರ ಧ್ವಜಾರೋಹಣ ನಡೆದು ದೈವದ ಬಲಿ ನಡೆಯಿತು. ರಾತ್ರಿ ಕೊಡಮಣಿತ್ತಾಯ ದೈವದ ನೇಮೋತ್ಸವ ಜರಗಿತು. ಸಾವಿರಾರು ಭಕ್ತರು ಭಾಗವಹಿಸಿದ್ದರು.
ದೇವರಿಗಿಂತ ದೈವಕ್ಕೆ ಪ್ರಾಧಾನ್ಯತೆ ಹೆಚ್ಚು: ಶಶಿಧರ ಶೆಟ್ಟಿ ಬ್ರಹ್ಮಕುಂಭಾಭಿಷೇಕ ಸಮಿತಿಯ ಅಧ್ಯಕ್ಷ ಶಶಿಧರ್ ಶೆಟ್ಟಿ ಬರೋಡಾ ಮಾತನಾಡಿ ನಮ್ಮ ಊರಿನಲ್ಲಿ ದೇವರಿಗಿಂತ ದೈವಕ್ಕೆ ಪ್ರಾಧಾನ್ಯತೆ ಹೆಚ್ಚು. ನಮ್ಮಲ್ಲಿ ದೇವರನ್ನು ತಂದಿದ್ದೆ ದೈವಗಳು. ಅದಕ್ಕಾಗಿ ನಾವು ದೈವ ಮೊದಲು ನಂತರ ದೇವರು ಎಂದು ಹೇಳುತ್ತೇವೆ. ದೇವರು ದೈವದ ಮೂಲಕ ಕೆಲಸಗಳನ್ನು ಮಾಡಿಸುತ್ತಾರೆ ಎಂಬ ನಂಬಿಕೆಯಿದೆ. ಅರ್ಧ ಕಾಡಿರುವ ಅರಮಲೆ ಪ್ರದೇಶದಲ್ಲಿ ಕುಂಭಕಂಠಿಣಿ ನೆಲೆಸಿದ್ದಾಳೆ. ಬಾಲ್ಯದಿಂದಲೇ ಈ ದೇವಸ್ಥಾನವನ್ನು ನೋಡಿದ್ದೇನೆ. ಧನ್ಯಕುಮಾರ್ ಕಡಂಬುರವರ ಮನೆಯಿಂದ ಭಂಡಾರ ಬಂದು ಅರಮಲೆಬೆಟ್ಟದಲ್ಲಿ ನೇಮೋತ್ಸವ ಆಗುತ್ತಿತ್ತು. 40 ವರ್ಷದ ಹಿಂದೆ ಕತ್ತಿವರಸೆ, ಡೊಳ್ಳು ಕುಣಿತಗಳ ಮೂಲಕ ಭಂಡಾರದ ವ್ಯವಸ್ಥೆಗಳು ನಮ್ಮ ಬಾಲ್ಯದಲ್ಲಿ ಕಂಡಿದ್ದೇವೆ. ನಾನು ಉದ್ಯಮವನ್ನು ಅರಮಲೆಬೆಟ್ಟದಲ್ಲೇ ಪ್ರಾರಂಭ ಮಾಡಿದ್ದು. ಈಗ 600 ಕೋಟಿಗೂ ಮಿಕ್ಕಿ ವ್ಯಾಪಾರ-ವಹಿವಾಟು ಮಾಡುತ್ತಿದ್ದೇನೆ. ದೇಶದ 14 ರಾಜ್ಯಗಳಲ್ಲಿ 10000ಕ್ಕೂ ಹೆಚ್ಚು ಜನ ಕೆಲಸ ಮಾಡುತ್ತಿದ್ದಾರೆ. ಇದಕ್ಕೆಲ್ಲ ಕಾರಣ ಕುಂಭಕಂಟಿಣಿ ದೈವದ ಅನುಗ್ರಹ. ಬೇರೆ ಬೇರೆ ರಾಜ್ಯಕ್ಕೆ ಹೋಗುವಾಗ ದೈವದ ಗಂಧ ತೆಗೆದುಕೊಂಡು ಹೋದವರ ಜೊತೆಗೆ ದೈವ ಇರುತ್ತದೆ. ಇಂತಹ ಎತ್ತರ ಪ್ರದೇಶದಲ್ಲಿ 52 ಫೀಟ್‌ನಲ್ಲಿ ಬಾವಿ ತೆಗೆದಾಗ ನೀರು ಸಿಕ್ಕಿರುವುದು ಕಾರಣಿಕ. ನನಗೆ ಕನಸಿನಲ್ಲಿ ಬಂದು ಕುಂಭಕಂಟಿಣಿ ಶಿಲಾಮಯ ಗರ್ಭಗುಡಿ ನಿರ್ಮಿಸು ಎಂದಿದ್ದರು. ಈಗ ನನಗೆ ಶಕ್ತಿ ನೀಡಿದ್ದಾಳೆ. ಕಷ್ಟ ಬಂದಾಗ ದೈವವನ್ನು ನೆನಪಿಸಿಕೊಳ್ಳಿ ಎಂದರು.
ಸುದ್ದಿ ನ್ಯೂಸ್‌ಗಾಗಿ ಶಶಿಧರ್ ಶೆಟ್ಟರಿಂದ ದೈವ ನರ್ತಕರ ಸಂದರ್ಶನ: ಬೆಳ್ತಂಗಡಿ: ಅರಮಲೆಬೆಟ್ಟ ಕೊಡಮಣಿತ್ತಾಯ ದೈವಸ್ಥಾನದಲ್ಲಿ ಫೆ.12ರಂದು ನೇಮೋತ್ಸವ ನಡೆದಿದ್ದು, ಕೊಡಮಣಿತ್ತಾಯ ದೈವ ನರ್ತಕ ರಾಜ್ಯ ಪ್ರಶಸ್ತಿ ಪುರಸ್ಕೃತ ದೇಜಪ್ಪ ಅವರ ಜೊತೆ ಉದ್ಯಮಿ ಶಶಿಧರ್ ಶೆಟ್ಟಿ ಬರೋಡ ಅವರು ಸುದ್ದಿ ನ್ಯೂಸ್ ಪರವಾಗಿ ಸಂದರ್ಶನ ಮಾಡಿದ್ದಾರೆ. ಅರಮಲೆ ಬೆಟ್ಟದಲ್ಲಿ ಮೊದಲ ಬಾರಿ ದೈವ ನರ್ತಕರಾಗಿ ಬಂದಿರುವ ದೇಜಪ್ಪ ಅವರಲ್ಲಿ ನೇಮೋತ್ಸವದ ಕಟ್ಟಳೆ ಹಾಗೂ ಮಹತ್ವದ ಬಗ್ಗೆ ಶಶಿಧರ್ ಶೆಟ್ಟಿ ಬರೋಡ ಅವರು ಪ್ರಶ್ನೆಗಳನ್ನು ಕೇಳಿದ್ದಾರೆ. ಇದರ ಸಂಪೂರ್ಣ ವರದಿ ಸುದ್ದಿ ನ್ಯೂಸ್ ಬೆಳ್ತಂಗಡಿ ಯೂಟ್ಯೂಬ್ ಚಾನೆಲ್‌ನಲ್ಲಿ ಇದೆ.
ಅರಮಲೆಮಲೆಬೆಟ್ಟ ಕೊಡಮಣಿತ್ತಾಯ ಬ್ರಹ್ಮ ಕುಂಭಾಭಿಷೇಕದ ಪಕ್ಷಿನೋಟ: ಸುಮಾರು 600 ವರ್ಷ ಇತಿಹಾಸ ಇರುವ ಅರಮಲೆ ಬೆಟ್ಟದ ಐತಿಹ್ಯ ಬಹಳ ರೋಚಕವಾದುದು. ಸಮೀಪದ ಪಡ್ಯಾರು ಬೀಡಿನ ಮನೆಯಲ್ಲಿ ಗಿಂಡೆ ಹಾಲಿಡುವ ವೇಳೆ ಅದು ಮಾಯವಾಗಿ ಹೋಗುತ್ತಿತ್ತು. ಗದ್ದೆಯಲ್ಲಿ ಹುಲಿ ಮತ್ತು ದನ ಜೊತೆಯಾಗಿ ಮೇಯುತ್ತಿತ್ತು. ಈ ಬಗ್ಗೆ ಚಿಂತನೆ ಮಾಡಿದಾಗ ಅಲ್ಲಿ ಕುಂಭಕಂಠಿಣಿ ದೈವ ನೆಲೆಯಾಗಿರುವ ಬಗ್ಗೆ ತಿಳಿದುಬಂತು. ಪಡ್ಯಾರ ಬೆಟ್ಟ ಕ್ಷೇತ್ರದಲ್ಲಿ ತೆಂಗಿನಕಾಯಿ ಒಡೆಯುವ ಸಂದರ್ಭದಲ್ಲಿ ಅದರ ಒಂದು ಹೋಳು ಬಂದು ಅರಮಲೆಬೆಟ್ಟದ ಎತ್ತರದ ಜಾಗದಲ್ಲಿ ಬಂದು ಬಿದ್ದಿತ್ತು. ನಂತರದಲ್ಲಿ ಆ ಹೋಳಿನಿಂದ ತೆಂಗಿನಮರ ಬೆಳೆದು ಅದರಲ್ಲಿ ಆದ ತೆಂಗಿನಕಾಯಿಯಲ್ಲಿ ಅರ್ಧ ಭಾಗ ಚೆನ್ನಾಗಿದ್ದು ಉಳಿದ ಅರ್ಧ ಭಾಗ ಕೆಟ್ಟು ಹೋಗಿರುತ್ತಿತ್ತು. ಇದು ದೈವದ ಪವಾಡ ಎಂದು ಜನ ನಂಬಿದಂತಹ ಕ್ಷೇತ್ರ ವರ್ಷದಿಂದ ವರ್ಷ ಅಭಿವೃದ್ದಿಯಾಗುತ್ತಾ ಬಂದಿದೆ. ಇಲ್ಲಿ ಪ್ರತಿ 12 ವರ್ಷಕ್ಕೊಮ್ಮೆ ಬ್ರಹ್ಮ ಕುಂಭಾಭೀಷೇಕ ನಡೆಯುತ್ತಿದ್ದು ಇದೀಗ 13 ವರ್ಷದ ನಂತರ ಅರಮಲೆ ಬೆಟ್ಟದಲ್ಲಿ ವೈಭವಪೂರ್ಣ ಬ್ರಹ್ಮ ಕುಂಭಾಭಿಷೇಕ ನಡೆದಿದೆ. ಇತಿಹಾಸ ಪ್ರಸಿದ್ಧ ಗುರುವಾಯನಕೆರೆಯ ಅರಮಲೆಬೆಟ್ಟ ಕೊಡಮಣಿತ್ತಾಯ ದೈವಸ್ಥಾನದಲ್ಲಿ ಫೆ.9ರಿಂದ 12ರವರೆಗೆ ವಿಜೃಂಭಣೆಯಿಂದ ವೈದಿಕ ವಿಧಿ ವಿಧಾನಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದಿದೆ. ಉದ್ಯಮಿ ಶಶಿಧರ್ ಶೆಟ್ಟಿ ಬರೋಡ ಅವರ ಅಧ್ಯಕ್ಷತೆಯಲ್ಲಿ ನಡೆದ ಬ್ರಹ್ಮಕುಂಭಾಭೀಷೇಕಕ್ಕೆ ನಿರೀಕ್ಷೆಗೂ ಮೀರಿ ಭಕ್ತ ಜನಸಾಗರ ಸೇರಿತ್ತು.
ವಿಶೇಷ ಊಟ ಉಪಚಾರ: ಬೆಳ್ತಂಗಡಿಯ ಸಂತೋಷ್ ಕುಮಾರ್ ಅವರ ಒಟ್ಟು 17 ಬಾಣಸಿಗರ ತಂಡ ಬೆಳಗ್ಗೆ ಉಪಾಹಾರ, ಮಧ್ಯಾಹ್ನ ಊಟ, ಸಂಜೆ ಫಲಾಹಾರ, ರಾತ್ರಿ ಊಟದ ವ್ಯವಸ್ಥೆ ಮಾಡಿದ್ದರು. ಬ್ರಹ್ಮ ಕುಂಭಾಭೀಷೇಕದ ಪ್ರತಿ ದಿನವೂ ವಿವಿಧ ಬಗೆಯ ಅಡುಗೆ ಮಾಡಿ ಭಕ್ತಾದಿಗಳ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ರವೆ ಲಡ್ಡು, ಪಾಯಸ, ಜಿಲೇಬಿ, ಹೋಳಿಗೆ, ಕುಂಬಳ ಕಾಯಿ ಹಲ್ವ ಸೇರಿದಂತೆ ಸಿಹಿ ತಿಂಡಿ ಒಂದು ಕಡೆಯಾದರೆ, ಹುಳಿ ಉಪ್ಪಿನ ಕಾಯಿ, ಊಟಕ್ಕೆ ಹಲಸಿನ ಕಾಯಿ ಪಲ್ಯ, ಸುವರ್ಣ ಗೆಡ್ಡೆ ಗಸಿ, ಹೀಗೆ ಬಗೆ ಬಗೆಯ ಖಾದ್ಯಗಳ ಊಟ ಸ್ವಾದ ಮಯವಾಗಿತ್ತು. ಬೆಳಗ್ಗೆ ಉಪಾಹಾರಕ್ಕೆ ಮಸಾಲೆ ದೋಸೆ, ರಾಗಿ ಮಣ್ಣಿ, ಇಡ್ಲಿ ಸಾಂಬಾರ್, ಬನ್ಸ್ ಇತ್ಯಾದಿ ಇದ್ದರೆ, ಸಂಜೆ ಹೊತ್ತಿಗೆ ಶ್ಯಾವಿಗೆ, ಪರೋಟ, ಪುಂಡಿ ಬಸಳೆ, ಗೋಳಿಬಜೆ, ಪುಲಾವ್ ಸೇರಿದಂತೆ ೧೦ಕ್ಕೂ ಮಿಕ್ಕಿದ ಫಲಾಹಾರ ಇಲ್ಲಿನ ವಿಶೇಷವಾಗಿತ್ತು. ಮೂರನೇ ದಿನ ಬಂದ ಭಕ್ತಾದಿಗಳಿಗೆ ಕುಂಬಳ ಕಾಯಿ ಜ್ಯೂಸ್ ದೇಹವನ್ನು ಕೂಡ ತಂಪು ಮಾಡಿತ್ತು. ಬ್ರಹ್ಮ ಕುಂಭಾಭೀಷೇಕೆದಂತಹ ಕಾರ್ಯಕ್ರಮದಲ್ಲಿ ಎಲ್ಲೂ ನಡೆಯದಂತಹ ಫಲಾಹಾರ ಹಾಗೂ ಊಟದ ವ್ಯವಸ್ಥೆಯನ್ನು ಶಶಿಧರ್ ಶೆಟ್ಟಿ ಬರೋಡ ಅವರು ಮಾಡಿದ್ದರು.
ಕಾರ್ಯಾಲಯ ಉದ್ಘಾಟನೆ: ಅರಮಲೆ ಬೆಟ್ಟದ ಬ್ರಹ್ಮಕುಂಭಾಭೀಷೇಕದ ಕಾರ್ಯಾಲಯವನ್ನು ಫೆ. 7ರಂದು ನವಶಕ್ತಿಯ ಸಾಯಿ ಪ್ರಸಾದ್ ಶೆಟ್ಟಿ ಉದ್ಘಾಟಿಸಿದರು. ದೇಣಿಗೆ ಸಂಗ್ರಹ, ಭಕ್ತರಿಗೆ ಬೇಕಾಗುವ ಮಾಹಿತಿ ಸೇರಿದಂತೆ ಪ್ರತಿಯೊಂದನ್ನೂ ಬಹಳ ವ್ಯವಸ್ಥಿತ ರೀತಿಯಲ್ಲಿ ಕಾರ್ಯಾಲಯ ಸಿಬ್ಬಂದಿಗಳು ನೋಡಿಕೊಂಡಿದ್ದರು.
ದೈವದ ಪವಾಡಕ್ಕೆ ಸಾಕ್ಷಿಯಾಯ್ತು ನವಶಕ್ತಿ ಚಂಡಿಕಾಹವನ: ಫೆ.11ರಂದು ನಡೆದ ನವಶಕ್ತಿ ಚಂಡಿಕಾಹೋಮ ಮಡಂತ್ಯಾರಿನ ಗೋಪಾಲಕೃಷ್ಣ ತಂತ್ರಿಯವರ ಮುಂದಾಳತ್ವದಲ್ಲಿ, ವೇದ ಮೂರ್ತಿ ಶ್ರೀ ನಿಧಿ ಭಟ್ ಅವರ ಪಾರಾಯಣ ಮೂಲಕ ನಡೆಯಿತು. ಚಂಡಿಕ ಹವನದ ಮಹಾ ಮಂಗಳಾರತಿ ಸಂದರ್ಭದಲ್ಲಿ ಸೂರ್ಯನ ಕಿರಣವು ನೇರವಾಗಿ ಚಂಡಿಕಾ ಯಾಗದ ಮಂಡಲಕ್ಕೆ ಬಿದ್ದಿದೆ. ಭಕ್ತರ ಕಣ್ಣಿಗೆ ಅದು ಗೋಚರವಾಗಿ ಮಂಡಲದಲ್ಲಿ ಹಾಕಲಾದ ದೇವಿಯ ಪಾದ ಸ್ಪರ್ಶ ಮಾಡಿ ಮುಖದ ಮೇಲೆ ಬಂದಂತೆ ಭಾಸವಾಗಿದೆ. ಈ ಅದ್ಭುತ ಕ್ಷಣ ನೋಡಿದ ಭಕ್ತರು ಇದು ದೈವದ ಕಾರ್ಣಿಕ ಎಂದಿದ್ದಾರೆ.
ಶುಚಿತ್ವಕ್ಕೆ ವಿಶೇಷ ಪ್ರಾಧಾನ್ಯತೆ: ದೈವಸ್ಥಾನದಲ್ಲಿ ಕುಡಿಯುವ ನೀರು, ಶೌಚಾಲಯ ಸೇರಿ ಅಗತ್ಯ ವ್ಯವಸ್ಥೆಗಳನ್ನು ಅಚ್ಚುಕಟ್ಟಾಗಿ ವ್ಯವಸ್ಥಾಪನಾ ಸಮಿತಿಯವರು ಮಾಡಿದ್ದಾರೆ. ಕೈ ಕಾಲು ತೊಳೆಯುವ ನೀರು, ಅಡುಗೆ ಕೋಣೆಯಿಂದ ಹೋಗುವ ತ್ಯಾಜ್ಯ ನೀರು, ಶೌಚಾಲಯದ ಕೊಳಚೆ ನೀರು, ಬಳಸಿದ ಊಟದ ತಟ್ಟೆ ಸೇರಿದಂತೆ ಎಲ್ಲವನ್ನೂ ಹಾಕಲು ದೊಡ್ಡ ಮಣ್ಣಿನ ಗುಂಡಿ ಮಾಡಲಾಗಿತ್ತು.
ಕಣ್ಮನ ಸೂರೆಗೊಳಿಸುವ ಅಲಂಕಾರ: ಅರಮಲೆ ಬೆಟ್ಟ ಮದುವಣಗಿತ್ತಿಯಂತೆ ಸಿಂಗಾರಗೊಂಡಿತ್ತು. ಬೆಟ್ಟದ ಕಡೆ ಸಾಗುವ ಎರಡೂ ದ್ವಾರಗಳನ್ನು ಸುಂದರವಾದ ವಿದ್ಯುತ್ ಅಲಂಕಾರದಿಂದ ಶೃಂಗಾರಗೊಳಿಸಲಾಗಿತ್ತು. ಪೂರ್ತಿ ನಗರ ಕೇಸರಿಮಯವಾಗಿ ಕಂಗೊಳಿಸಿತ್ತು. ಮುಂಭಾಗ ಅಡಿಕೆ ಎಲೆ ಹಾಗೂ ಕಂಬವನ್ನು ಬಳಸಿ ಕುಟೀರವನ್ನು ನಿರ್ಮಿಸಲಾಗಿ ಅಲ್ಲಿ ಕುಂಭಕಂಠಿಣಿ ಭಕ್ತರಿಗೆ ಕುಡಿಯುವ ನೀರು, ಮಜ್ಜಿಗೆ ವ್ಯವಸ್ಥೆ ಮಾಡಲಾಗಿತ್ತು. ವೇದಿಕೆಯ ಮುಂಭಾಗ ತೆಂಗಿನ ಗರಿಯಿಂದ ಮಾಡಿದ ರೀತಿ ಕಾಣಿಸುವ ಸುಂದರವಾದ ಕಮಾನು ಆಕರ್ಷಣೆಯ ಕೇಂದ್ರ ಬಿಂದುವಾಗಿತ್ತು. ಶಶಿಧರ ಶೆಟ್ಟಿ ಹಾಗೂ ಎಕ್ಸೆಲ್ ಕಾಲೇಜಿನ ಅಧ್ಯಕ್ಷ ಸುಮಂತ್ ಕುಮಾರ್ ಜೈನ್ ಅವರ ಸುಸಜ್ಜಿತ ವ್ಯವಸ್ಥೆಗೆ ಸಾಕ್ಷಿಯಾಗಿ ಅರಮಲೆ ಬೆಟ್ಟ ಕಂಡು ಬಂದಿತ್ತು.
ನೂತನ ಅನ್ನಛತ್ರ , ಮೇಲ್ಛಾವಣಿ: ಅರಮಲೆಬೆಟ್ಟದಲ್ಲಿ ನೂತನ ಅನ್ನಛತ್ರವನ್ನು ಎಕ್ಸೆಲ್ ಕಾಲೇಜಿನ ಅಧ್ಯಕ್ಷ ಸುಮಂತ್ ಕುಮಾರ್ ಜೈನ್ ಅವರು ರೂ. 25 ಲಕ್ಷ ವೆಚ್ಚದಲ್ಲಿ ನಿರ್ಮಾಣ ಮಾಡಿದ್ದಾರೆ. ಅದು ಒಂದು ಬಾರಿಗೆ 500 ಜನರು ಕೂತು ಊಟ ಮಾಡುವಷ್ಟು ವಿಶಾಲವಾಗಿದೆ. ರೂ 50 ಲಕ್ಷ ವೆಚ್ಚದಲ್ಲಿ ಸುಂದರವಾದ ಮೇಲ್ಛಾವಣಿ ಹಾಕಲಾಗಿದ್ದು, ಕೊಡಮಣಿತ್ತಾಯ ದೈವಸ್ಥಾನಕ್ಕೆ ಮತ್ತಷ್ಟು ಮೆರುಗನ್ನು ಕೊಟ್ಟಿದೆ.
ಸೇವೆಯಲ್ಲಿ ಮಿಂದೆದ್ದ ಸ್ವಯಂಸೇವಕರು: ಕಳೆದ ಒಂದು ತಿಂಗಳಿದಂದಲೂ ಅರಮಲೆಬೆಟ್ಟದ ಬ್ರಹ್ಮಕುಂಭಾಭೀಷೇಕ ಚೆನ್ನಾಗಿ ಮೂಡಿ ಬರಬೇಕೆನ್ನುವ ಆಶಯವನ್ನು ಹೊತ್ತ ಸ್ವಯಂ ಸೇವಕರು ಎಲೆ ಮರೆಯ ಕಾಯಿಯಂತೆ ದೈವಸ್ಥಾನಕ್ಕೆ ಬರುವ ಭಕ್ತಾದಿಗಳಿಗೆ ಯಾವ ಕೊಂದು ಕೊರತೆ ಆಗದಂತೆ ನೋಡಿಕೊಂಡಿದ್ದರು. ವೇದಿಕೆಯಲ್ಲಿ ಸುಸಜ್ಜಿತ ಆಸನ, ಊಟ, ಶುಚಿತ್ವ ಎಲ್ಲವನ್ನು ಬಹಳ ಅಚ್ಚುಕಟ್ಟಾಗಿ ನೋಡಿಕೊಂಡು ಸುವ್ಯವಸ್ಥೆಯನ್ನು ಕಾಪಾಡಿದ್ದರು.
ಭಕ್ತಿ ಪರವಶೆಯಲ್ಲಿ ಪುಟಾಣಿ ಮಗು: ಫೆ. 11ರಂದು ಸಂಜೆ ಹೊತ್ತಿಗೆ ಬ್ರಹ್ಮ ಕುಂಭಾಭೀಷೇಕದ ಪರಿ ಕಲಶಪೂರೆ, ಪ್ರಧಾನ ಕುಂಭ ಪೂರಣೆ, ಕಲಶ ಅಧಿವಾಸ ನಡೆಯುವ ಸಂದರ್ಭದಲ್ಲಿ ಪುಟಾಣಿ ಹೆಣ್ಣು ಮಗಳು ಭಕ್ತಿ ಕೈ ಮುಗಿದು ದೇವರಿಗೆ ಹೂ ಎಸೆದು ಸಾಷ್ಟಾಂಗ ನಮಸ್ಕರಿಸಿ, ನೆರೆದವರ ಗಮನ ಸೆಳೆದಿದ್ದಾಳೆ.
ಬಹಳ ಅಚ್ಚುಕಟ್ಟಾಗಿ ನಡೆದಿದೆ: ಹಷೇಂದ್ರ ಕುಮಾರ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಧರ್ಮಸ್ಥಳದ ಡಿ. ಹಷೇಂದ್ರ ಕುಮಾರ್ ಅವರು, ಅರಮಲೆ ಬೆಟ್ಟದ ಕುಂಭ ಕಂಠಿಣಿಯ ದರ್ಶನ ಭಾಗ್ಯ ಈ ಬಾರಿ ಸಿಕ್ಕಿದೆ. ಕ್ಷೇತ್ರದ ಕೆಲಸ ಬಹಳ ಅಚ್ಚುಕಟ್ಟಾಗಿ ಆಗಿದೆ. ದಾನ ಧರ್ಮ ಸುಲಭವಲ್ಲ, ಅದನ್ನು ಕೊಡುವುದಕ್ಕೆ ಮನಸ್ಸು ಬೇಕು. ಕಡಂಬು ಕುಟುಂಬ ಕೊಡಮಣಿತ್ತಾಯನ ಸೇವೆ ವಿಶೇಷವಾಗಿ ಮಾಡಿದ್ದಾರೆ. ತಾಯಿಯೂ ಕೂಡ ಅವರ ಕೈ ಬಿಡಲಿಲ್ಲ ಎಂದರು.
ದೈವದ ಸಾನಿಧ್ಯ ಕಡಿಮೆಯಾಗುವುದಿಲ್ಲ-ಪದ್ಮಪ್ರಸಾದ್ ಅಜಿಲ: ಉಗ್ರಾಣ ಮುಹೂರ್ತ ನೆರವೇರಿಸಿ ಮಾತನಾಡಿದ ಅಜಿಲ ಸೀಮೆಯ ತಿಮ್ಮಣ್ಣರಸ ಡಾ. ಪದ್ಮಪ್ರಸಾದ್ ಅಜಿಲರು, ದಕ್ಷಿಣ ಕನ್ನಡದಲ್ಲಿ ಜೈನರ ಅರಮನೆಯಲ್ಲಿ ಜಾತ್ರೆಯ ಸಂದರ್ಭದಲ್ಲಿ ದೈವ ದೇವರ ಭೇಟಿ ಎಂದೇ ನಡೆಯುತ್ತದೆ. ಆ ಸಂದರ್ಭದಲ್ಲಿ ಅರಸರಿಗೆ ದೈವ ಏನಾದ್ರೂ ತಪ್ಪಾಗಿದೆಯಾ ಎಂದು ಕೇಳಿ ತಪ್ಪಾಗಿದ್ದರೆ ಕ್ಷಮಿಸುತ್ತದೆ. ಅರಸರಲ್ಲಿ ಕೆಲಸ ಮಾಡಿಸುವುದು ದೈವವೇ ಎಂದು ನಂಬಿದ್ದೇವೆ. ದೈವದ ಸಾನಿಧ್ಯ ಎಂದಿಗೂ ಕಡಿಮೆಯಾಗುವುದಿಲ್ಲ ಎಂದರು.
ಕೊಡಮಣಿತ್ತಾಯ ದೈವವೂ ಹೌದು, ದೇವರೂ ಹೌದು ಶ್ರೀಕಾಂತ್ ಶೆಟ್ಟಿ–ಅರಮಲೆಬೆಟ್ಟ: ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ರಾಜ್ಯದ ಅನೇಕ ದೇವಸ್ಥಾನಗಳ ಜೀರ್ಣೋದ್ಧಾರವಾಗುತ್ತಿದೆ. ಬರೋಡಾದ ಶಶಿಧರ್ ಶೆಟ್ಟರ ನೇತೃತ್ವದಲ್ಲಿಯೂ ಹಲವಾರು ದೈವಸ್ಥಾನ, ದೇವಸ್ಥಾನಗಳು ಜೀರ್ಣೋದ್ಧಾರವಾಗುತ್ತಿದೆ. ಸಾಂಸ್ಕೃತಿಕವಾದ ಅನನ್ಯತೆಯನ್ನು ಉಳಿಸಿಕೊಂಡರೆ ಮಾತ್ರ ದೈವಸ್ಥಾನ, ದೇವಸ್ಥಾನಗಳು ಉಳಿಯಲು ಸಾಧ್ಯ. ಕೊಡಮಣಿತ್ತಾಯ ಎಂದರೆ ದೇವರೂ ಹೌದು, ದೈವವೂ ಹೌದು. ದೇವರ ಹಾಗೇ ಬಲಿ ಉತ್ಸವ ನಡೆಯುವ ಕ್ರಮ ಇರುವುದು ಕೊಡಮಣಿತ್ತಾಯನಿಗೆ ಮಾತ್ರ ಎಂದು ಯುವ ವಾಗ್ಮಿ ಶ್ರೀಕಾಂತ್ ಶೆಟ್ಟಿ ಹೇಳಿದರು.
ಅರಮಲೆಬೆಟ್ಟದ ಕೊಡಮಣಿತ್ತಾಯ ಕ್ಷೇತ್ರದ ಕುಂಭಕಂಠಿಣಿ ದೈವದ ಬ್ರಹ್ಮಕುಂಭಾಭಿಷೇಕ ಕಾರ್ಯಕ್ರಮದ ಪ್ರಯುಕ್ತ ಏರ್ಪಡಿಸಲಾಗಿದ್ದ ಧಾರ್ಮಿಕ ಸಭೆಯಲ್ಲಿ ಅವರು ಉಪನ್ಯಾಸ ನೀಡಿದರು. 1834ರಲ್ಲಿ ತುಳುನಾಡಿನಲ್ಲಿ ಮೊದಲ ಬಾರಿಗೆ ಬ್ರಿಟೀಷರ ವಿರುದ್ಧ ಹೋರಾಟ ನಡೆಯಿತು. ಆ ಸ್ವಾತಂತ್ರ್ಯ ಹೋರಾಟ ನಡೆದಾಗ ನಂದಾರಿನ ಕ್ರಾಂತಿಕಾರಿಗಳು ಕೊಡಮಣಿತ್ತಾಯನಿಗೆ ನೇಮೋತ್ಸವ ಮಾಡಿ ಅನುವು ಕೇಳಿದ್ದರು. ಆ ಕಾಲದಲ್ಲಿ ಕೊಡಮಣಿತ್ತಾಯ ಜಯ ಕೊಡುತ್ತೇನೆ ಎಂದು ನುಡಿ ಕೊಟ್ಟ ನಂತರ ಬ್ರಿಟಿಷರ ವಿರುದ್ಧದ ಹೋರಾಟದಲ್ಲಿ ಗೆದ್ದು 13 ದಿನಗಳ ಕಾಲ ಗೆಲುವು ಆಚರಿಸಿದ್ದರು. ನಾವೆಲ್ಲ ದೈವ ಭೂಮಿಗೆ ಸೇರಿದವರು ಅನ್ನುವುದಕ್ಕೆ ಖುಷಿಯಾಗುತ್ತದೆ. ಕೇವಲ 60 ದಿನಗಳಲ್ಲಿ ಅರಮಲೆಬೆಟ್ಟದ ಕ್ಷೇತ್ರದಲ್ಲಿ ಆಗಿರುವ ಕೆಲಸ ಮಾಡಿದವರು ನಿಮಿತ್ತ ಮಾತ್ರ. ಮತ್ತೆಲ್ಲ ಮಾಡಿಸಿದ್ದು ಕೊಡಮಣಿತ್ತಾಯ ದೈವ. 5 ಸಾವಿರ ವರ್ಷದಿಂದ ನಾಗರಿಕತೆ ಉಳಿದಿದ್ದರೆ ಭಾರತೀಯ ಹಿಂದೂ ನಾಗರಿಕತೆ ಮಾತ್ರ ಎಂದು ಶ್ರೀಕಾಂತ್ ಶೆಟ್ಟಿ ಹೇಳಿದರು.
ಕೊಡಮಣಿತ್ತಾಯ ದೈವದ ಅನುಗ್ರಹ: ಗ್ರಾಮ ಪಂಚಾಯತ್ ಅಧ್ಯಕ್ಷೆ ಭಾರತಿ ಶೆಟ್ಟಿ ಮಾತನಾಡಿ ಸಾಮಾನ್ಯ ಮಹಿಳೆ ಗ್ರಾಮ ಪಂಚಾಯತ್ ಅಧ್ಯಕ್ಷೆಯಾಗಲು ಕೊಡಮಣಿತ್ತಾಯ ದೈವದ ಅನುಗ್ರಹವೇ ಕಾರಣ ಎಂದರು. ಪಾಡ್ಯಾರಬೀಡಿನ ಪ್ರವೀಣ್ ಕುಮಾರ್ ಅಜ್ರಿಯವರು ಕೊಡಮಣಿತ್ತಾಯ ದೈವದ ಅನುಗ್ರಹದ ಬಗ್ಗೆ ಮಾತನಾಡಿದರು. ಧಾರ್ಮಿಕ ಪರಿಷತ್ತಿನ ಮಾಜಿ ಸದಸ್ಯ ದೇವೇಂದ್ರ ಹೆಗ್ಡೆ ಕೊಕ್ರಾಡಿ ಮಾತನಾಡಿ ಈ ಕ್ಷೇತ್ರವೂ ಬೆಳಗಲು ಶಶಿಧರ್ ಶೆಟ್ಟಿಯವರ ಬದ್ಧತೆ, ಸುಕೇಶ್ ಕುಮಾರ್‌ರವರ ಪರಿಶ್ರಮ ಕಾರಣ ಎಂದರು. ಉದ್ಯಮಿ ಗಂಗಾಧರ ರಾವ್ ಕೆವುಡೇಲು ಮಾತನಾಡಿ, ಅರಮಲೆ ಬೆಟ್ಟದಲ್ಲಿ ಧರ್ಮವನ್ನು ಉಳಿಸುವುದಕ್ಕಾಗಿ ಸೇರಿದ್ದೇವೆ. ಅರಮಲೆ ಬೆಟ್ಟದ ಎರಡೂ ಬದಿಯಲ್ಲಿ ವಿದ್ಯಾಸಂಸ್ಥೆಗಳು ತಲೆ ಎತ್ತಿವೆ. ಇದಕ್ಕೆ ಕಾರಣ ದೈವದ ಅನುಗ್ರಹ ಎಂದರು.
ಕಾರ್ಯಕ್ರಮದಲ್ಲಿ ಅನುವಂಶಿಕ ಆಡಳಿತ ಮೊಕ್ತೇಸರರಾದ ಸುಖೇಶ್ ಕುಮಾರ್ ಕಡಂಬು, ಗೌತಮ್ ಕುಮಾರ್ ಜೈನ್, ಸಂಪತ್ ಕುಮಾರ್ ಜೈನ್, ಲಯನ್ಸ್ ಕ್ಲಬ್ ಅಧ್ಯಕ್ಷ ದೇವದಾಸ್ ಶೆಟ್ಟಿ, ಹಿರಿಯ ಉದ್ಯಮಿ ವೈ. ನಾಣ್ಯಪ್ಪ ಪೂಜಾರಿ, ಸತೀಶ್ ಶೆಟ್ಟಿ, ಶಮಂತ್ ಕುಮಾರ್ ಜೈನ್, ಸೀತಾರಾಮ ಶೆಟ್ಟಿ, ರಾಮಕೃಷ್ಣ ನಾಯಕ್ ಗುರುವಾಯನಕೆರೆ, ಸುಭಾಷ್ ಚಂದ್ರ ಜೈನ್, ಕಾರ್ಯದರ್ಶಿ ಪ್ರದೀಪ್ ಶೆಟ್ಟಿ, ಉದ್ಯಮಿ ವಿನಯಚಂದ್ರ, ಪುರಂದರ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು. ದೇವಿಪ್ರಸಾದ್ ಶಿವಾಜಿನಗರ ನಿರ್ಮಿಸಿದ ಅರಮಲೆ ಬೆಟ್ಟದ ಮಾಯೋದ ಪುರ್ಸಾದ ಕುಂಭಕಂಠಿಣಿ ಎಂಬ ಹಾಡನ್ನು ಲೋಕಾರ್ಪಣೆಗೊಳಿಸಲಾಯಿತು. ಜಯಶ್ರೀ ಪ್ರಾರ್ಥಿಸಿ ಅಜಿತ್ ಕುಮಾರ್ ಕೊಕ್ರಾಡಿ ನಿರೂಪಿಸಿದರು. ಬ್ರಹ್ಮಾಕುಂಭಾಭಿಷೇಕ ಸಮಿತಿಯ ಕಾರ್ಯಾಧ್ಯಕ್ಷ ಸುಮಂತ್ ಕುಮಾರ್ ಜೈನ್ ವಂದಿಸಿದರು.
ಹಲವರು ಕೊಡುಗೆ ನೀಡಿದ್ದಾರೆ – ಸುಕೇಶ್ ಕುಮಾರ್ : ಅನುವಂಶಿಕ ಆಡಳಿತ ಮೊಕ್ತೇಸರ ಸುಕೇಶ್ ಕುಮಾರ್ ಕಡಂಬು ಮಾತನಾಡಿ ನಮ್ಮ ಕ್ಷೇತ್ರಕ್ಕೆ ಎರಡು ಕಣ್ಣುಗಳು. ಒಬ್ಬರು ಬರೋಡಾ ಉದ್ಯಮಿ ಶಶಿಧರ್ ಶೆಟ್ಟಿ ನವಶಕ್ತಿ ಮತ್ತು ಮತ್ತೊಬ್ಬರು ಎಕ್ಸೆಲ್‌ನ ಸುಮಂತ್ ಕುಮಾರ್ ಜೈನ್. ನಮ್ಮ ಕ್ಷೇತ್ರದಲ್ಲಿ ಬಾವಿಯನ್ನು ತೆಗೆದು ಸಹಕರಿಸಿದ ಸತೀಶ್, ಭಕ್ತರ ಕೊಡುಗೆಯಿಂದ ಕ್ಷೇತ್ರ ಬೆಳಗಿದೆ. ಶ್ರಮದಾನದ ಮೂಲಕ ಕ್ಷೇತ್ರಕ್ಕೆ ಕೊಡುಗೆಯನ್ನು ಹಲವರು ನೀಡಿದ್ದಾರೆ ಎಂದರು.
ನಮ್ಮ ವಿದ್ಯಾರ್ಥಿಗಳನ್ನು ಕಾಪಾಡುವುದು ಕೂಡ ಕೊಡಮಣಿತ್ತಾಯ ದೈವ: ಸುಮಂತ್ ಕುಮಾರ್ ಜೈನ್ ಎಕ್ಸೆಲ್ ಪಿಯು ಕಾಲೇಜಿನ ಚೇರ್‌ಮನ್ ಸುಮಂತ್ ಕುಮಾರ್ ಜೈನ್ ಮಾತನಾಡಿ ನಮ್ಮ ಸಂಸ್ಥೆಯನ್ನು ಆರಂಭಿಸಿದಾಗ ತಂತ್ರಿಗಳು ಹೇಳಿದಂತೆ ಪ್ರತಿ ಸಂಕ್ರಾಂತಿಗೆ ನಾವು ಅರಮಲೆಬೆಟ್ಟಕ್ಕೆ ಬಂದು ಪ್ರಾರ್ಥಿಸುತ್ತೇವೆ. ದೈವದ ಅನುಗ್ರಹದಿಂದ ಕ್ಷೇತ್ರದ ಹತ್ತಿರದಲ್ಲೇ ಜಾಗ ಸಿಕ್ಕಿದೆ. ಅದಕ್ಕಾಗಿ ಹರಕೆ ಕಟ್ಟಿಕೊಂಡಿದ್ದೆವು. ದೈವದ ಅನುಗ್ರಹದಂತೆ ನಾವು ಅಂದುಕೊಂಡಿದ್ದ ಕಾರ್ಯಗಳೆಲ್ಲವೂ ಆಗಿದೆ. ಇದು ದೈವದ ಮೇಲಿನ ಭಕ್ತಿಯನ್ನು ಹೆಚ್ಚಿಸಿದೆ. ನಮ್ಮ ವಿದ್ಯಾರ್ಥಿಗಳನ್ನು ಕಾಪಾಡುವುದು ಕೂಡ ಕೊಡಮಣಿತ್ತಾಯ ದೈವ ಎಂದರು.
ಮಾನ, ಪ್ರಾಣವನ್ನು ಕಾಪಾಡುವ ಶಕ್ತಿ ದೈವಕ್ಕಿದೆ- ರವೀಶ್ ಪಡುಮಲೆ: ಮೂರನೇ ದಿನದ ಧಾರ್ಮಿಕ ಸಭೆಯಲ್ಲಿ ದೈವರಾಧನೆ ಯಾಕಾಗಿ ಮತ್ತು ದೈವ ನಮ್ಮನ್ನು ರಕ್ಷಿಸುತ್ತಿರುವುದು ಹೇಗೆ ಎಂಬ ಬಗ್ಗೆ ವಿಶೇಷ ಉಪನ್ಯಾಸ ನಡೆಯಿತು. ಉಪನ್ಯಾಸಕ, ತುಳು ಜಾನಪದ ವಿಧ್ವಾಂಸರಾಗಿರುವ ಡಾ.ರವೀಶ್ ಪಡುಮಲೆ ಮಾತನಾಡಿ, “ಹಿರಿಯರು ತಮ್ಮ ಮಾನ ಪ್ರಾಣ ಕಾಪಾಡುವ ಶಕ್ತಿ ಇದ್ದರೆ ಅದು ನಮ್ಮ ದೈವಕ್ಕೆ ಮಾತ್ರ ಎಂದು ನಂಬಿದ್ದರು. ಮನೆಯ ಹೊರಗೆ ಬಂದಾಗ ಕಾಪಾಡು ದೈವ ಅಂತ ಪ್ರಾರ್ಥಿಸಿ ಬರುತ್ತೇವೆ. ದೈವದ ಕೊಡಿಯಡಿಯಲ್ಲಿ ಹತ್ತು ತಾಯಿಯ ಮಕ್ಕಳು ಜಾತಿ ಮತ ಪಂಗಡದ ಬೇದ ಮರೆತು ಎಲ್ಲರೂ ಒಂದೇ ತಾಯಿಯ ಮಕ್ಕಳಂತೆ ಸೇರುತ್ತೇವೆ. ನಮ್ಮ ಹಿರಿಯರು ಸಾವಿರಾರು ವರ್ಷಗಳ ಹಿಂದೆಯೇ ಸಂವಿಧಾನದ ಸಾಮರಸ್ಯದ ಬದುಕು ಕಟ್ಟಿಕೊಡಲು ದೈವದ ಕೊಡಿಯಡಿಯಲ್ಲಿ ನಿರ್ಧರಿಸಿದ್ದರು. ಅಂತಹ ಮೂಲ ನಂಬಿಕೆಯ ಮೇಲೆ ನಮ್ಮೆಲ್ಲರ ಬದುಕು ನಿಂತಿದೆ ಎಂದರು.
ಮತ್ತೊರ್ವ ತುಳು ಜಾನಪದ ವಿಧ್ವಾಂಸ ಕೆ ಕೆ ಪೇಜಾವರ್ ಮಾತನಾಡಿ, “ಅರಮಲೆಬೆಟ್ಟದ ದೃಶ್ಯ ನೋಡಿ ಬೆರಗಾಗಿದ್ದೇನೆ. ಅಭೂತಪೂರ್ವ ಕೆಲಸ ಆಗಿದೆ. ತುಳುನಾಡಿನಲ್ಲಿರುವವರು ದೈವಾರಾಧನೆಗಾಗಿ ಕುಟುಂಬದ ಮನೆಗೆ ಹೋಗಲೇಬೇಕು. ನಾಗನಿಗೆ ತನು ಹಾಕುವಾಗ ಹೋಗಲೇಬೇಕು. ದೈವರಾಧನೆಯ ಪಾರಿಭಾಷಿಕ ಶಬ್ದಗಳನ್ನು ಮರೆತಿದ್ದೇವೆ. ನಮ್ಮ ಸಂಸ್ಕೃತಿಯ ವಿಚಾರಗಳನ್ನು ಬಿಟ್ಟುಕೊಂಡು ಬಂದಿದ್ದೇವೆ. ಹಾಗಾಗಬಾರದು, ತಾಯಿಯ ಮಡಿಲಿನಲ್ಲಿ ಸಿಗುವ ಶಿಕ್ಷಣ ಶ್ರೇಷ್ಠ ಎಂದರು.
ಕಾರ್ಯಕ್ರಮದಲ್ಲಿ ಓಡೀಲು ಕ್ಷೇತ್ರದ ಅರ್ಚಕ ವಿಷ್ಣು ಪ್ರಸಾದ್ ಭಟ್, ಹರೀಶ್ ಕುಮಾರ್, ಹರೀಶ್ ಶೆಟ್ಟಿ ನವಶಕ್ತಿ, ರಾಜೇಶ್ ಶೆಟ್ಟಿ ನವಶಕ್ತಿ, ದಿನೇಶ್ ಶೆಟ್ಟಿ ಪೂನಾ, ಉದ್ಯಮಿ ರಾಗ್ನೇಶ್, ವಕೀಲರಾದ ಶಶಿಕಿರಣ್ ಜೈನ್, ಆನಂದ್ ಶೆಟ್ಟಿ ಶಕ್ತಿನಗರ, ರಾಜೇಶ್ ಪೈ, ಕಿರಣ್‌ಚಂದ್ರ ಪುಷ್ಪಗಿರಿ, ಪ್ರಕಾಶ್ ಜೈನ್, ಮುಗುಳಿ ನಾರಾಯಣ ಭಟ್, ಪುಷ್ಪರಾಜ್ ಶೆಟ್ಟಿ, ಶಶಿರಾಜ್ ಶೆಟ್ಟಿ, ಸುಭಾಶ್ಚಂದ್ರ ಶೆಟ್ಟಿ, ರಾಧಾಕೃಷ್ಣ ರೈ, ಕಜೆ ಪ್ರಮೋದ್ ಶೆಟ್ಟಿ ನಾಸಿಕ್, ದೀಪಾ ಶೆಣೈ, ಬಿನುತಾ ಬಂಗೇರ, ವಿತೇಶ್ ಕುಮಾರ್ ಜೈನ್, ಆಡಳಿತ ಮೋಕ್ತೇಸರರಾದ ಸುಕೇಶ್ ಅರಮಲೆಬೆಟ್ಟ,ಪ್ರದೀಪ್ ಶೆಟ್ಟಿ, ಪುರಂದರ ಶೆಟ್ಟಿ, ಸುನೀಶ್ ಕಡಂಬು, ಮಂತಾದವರು ಉಪಸ್ಥಿತರಿದ್ದರು. ಧರಣೇಂದ್ರ ಕುಮಾರ್ ಕಾರ್ಯಕ್ರಮ ನಿರೂಪಿಸಿದರೆ ಅಧ್ಯಕ್ಷತೆ ವಹಿಸಿದ್ದ ಶಶಿಧರ್ ಶೆಟ್ಟಿ ಬರೋಡಾ ಸ್ವಾಗತ ಮಾಡಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಭಕ್ತರನ್ನು ಚಕಿತಗೊಳಿಸಿದ ನವೀಕರಣಗೊಂಡ ದೈವಸ್ಥಾನ: ಕೊಡಮಣಿತ್ತಾಯ ದೈವಸ್ಥಾನ ನವೀಕರಣಗೊಂಡು ಹೊಸದಾದ ಮೇಲ್ಛಾವಣಿ, ದೈವದ ಗುಡಿಯ ಹೊರಾಂಗಣ ಗೋಡೆಗೆ ಹಿತ್ತಾಳೆಯ ಕವಚ, ದೈವದ ಮಂಟಪದ ಮುಗುಳಿ, ನೈವೇದ್ಯ ಕೊಠಡಿ, ತೀರ್ಥಬಾವಿ ಸೇರಿದಂತೆ ಹತ್ತು ಹಲವಾರು ಅಭಿವೃದ್ಧಿ ಕಾಮಗಾರಿಗಳು ನಡೆದಿವೆ. ಅರಮಲೆ ಬೆಟ್ಟ ಅರಮನೆ ರೀತಿ ಆಗಿದೆ. ದೈವ ಸಾನಿಧ್ಯ ಬಹಳ ಸುಂದರವಾಗಿ ನವೀಕರಣಗೊಂಡಿದೆ. ಈ ಹಿಂದಿನ ಅರಮಲೆಬೆಟ್ಟಕ್ಕೂ ಈಗ ನೋಡುವುದಕ್ಕೂ ಭಾರೀ ವ್ಯತ್ಯಾಸ ಕಾಣುತ್ತದೆ. ಇದಕ್ಕೆ ಕಾರಣ ಶಶಿಧರ ಶೆಟ್ಟರು. ದೈವ ಅವರ ಕೈಯಿಂದ ಎಲ್ಲವನ್ನೂ ಮಾಡಿಸುತ್ತಿದೆ. ಇದನ್ನು ನೋಡುವುದು ನಮ್ಮ ಪುಣ್ಯ ಎಂದು ಹಲವು ಭಕ್ತರು ಅಭಿಪ್ರಾಯಪಟ್ಟಿದ್ದಾರೆ.

ಕಾರ್ಣಿಕಕ್ಕೆ ಸಾಕ್ಷಿಯಾದ ತೀರ್ಥಬಾವಿ: ಅರಮಲೆಬೆಟ್ಟದಲ್ಲಿ ನೀರಿನ ವ್ಯವಸ್ಥೆ ಇಲ್ಲದ ಕಾರಣ ಇಲ್ಲಿ ತೀರ್ಥಬಾವಿ ಆಗಬೇಕು ಎಂದು ನಿರ್ಧರಿಸಲಾಗಿತ್ತು. ಈ ಹಿನ್ನೆಲೆ ಬಾವಿ ತೋಡುವ ಸಂದರ್ಭದಲ್ಲಿ ಇಷ್ಟು ಎತ್ತರ ಇರುವ ಸ್ಥಳದಲ್ಲಿ ನೀರು ಸಿಗಲು ಸಾಧ್ಯ ಇಲ್ಲ ಎಂದು ಅನೇಕರು ಹೇಳಿದ್ದರು. ದೈವ ಮನಸ್ಸು ಮಾಡಿದರೆ ಎಲ್ಲವೂ ಸಾಧ್ಯ ಅನ್ನುವ ಹಾಗೆ ಕೇವಲ 55 ಅಡಿಯಲ್ಲಿ ನೀರು ಸಿಕ್ಕಿದೆ. ಒಟ್ಟು 60 ಅಡಿ ತೀರ್ಥಬಾವಿ ಕೊರೆಯಲಾಗಿದ್ದು ಸದ್ಯ 7 ಫೀಟ್ ನೀರು ಉದ್ಭವವಾಗಿದೆ. ಜೈನ್ ಪೇಟೆಯ ಸತೀಶ್ ದೊಡ್ಡಮನೆ ದೈವಸ್ಥಾನಕ್ಕಾಗಿ ತಮ್ಮ ಸೇವಾರೂಪದಲ್ಲಿ ತೀರ್ಥ ಬಾವಿ ಕೊಡುಗೆ ನೀಡಿದ್ದಾರೆ.