

ಲುಂಗಿ ಧರಿಸಿ ಗಡ್ಡ ಬಿಟ್ಟು ಕಾರ್ಯಾಚರಿಸಿದ್ದ ಗುಪ್ತಚರ ಇಲಾಖೆ ವೇಷ ಮರೆಸಿ ಕಾರ್ಯಾಚರಣೆ ನಡೆಸಿದ್ದ ಎಎನ್‌ಎಫ್ ಮಹಿಳೆಯಂತೆ ನೈಟಿ ಧರಿಸಿದ್ದ ಇನ್ಸ್‌ಪೆಕ್ಟರ್!
ಬೆಳ್ತಂಗಡಿ: ಜನಸಾಮಾನ್ಯರಿಗೆ ಮೂಲಭೂತ ಸೌಕರ್ಯ ಒದಗಿಸಿಕೊಡುವುದಕ್ಕಾಗಿ ಹೋರಾಟ ನಡೆಸುವುದಾಗಿ ಹೇಳಿಕೊಂಡು ಕ್ರಾಂತಿಕಾರಿ ಚಟುವಟಿಕೆ ನಡೆಸುತ್ತಾ ಬೆಳ್ತಂಗಡಿ ತಾಲೂಕಿನಲ್ಲಿಯೂ ಪದೇ ಪದೇ ಸದ್ದು ಮಾಡುತ್ತಿದ್ದ ನಕ್ಸಲರ ಯುಗಾಂತ್ಯವಾಗಿದೆ. ಕೊಲೆ, ದರೋಡೆ, ಬೆದರಿಕೆ ಸಹಿತ ೬೦ಕ್ಕೂ ಅಧಿಕ ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ ನಟೋರಿಯಸ್ ನಕ್ಸಲ್ ನಾಯಕ ವಿಕ್ರಂಗೌಡ(೪೮ವ) ತನ್ನದೇ ಊರಾದ ಉಡುಪಿ ಜಿಲ್ಲೆಯ ಹೆಬ್ರಿ ತಾಲೂಕಿನ ಕಬ್ಬಿನಾಲೆಯ ಪೀತಬೈಲುನಲ್ಲಿ ೨೦೨೪ರ ನವೆಂಬರ್ ೧೮ರಂದು ಮಧ್ಯರಾತ್ರಿ ಎನ್‌ಕೌಂಟರ್‌ಗೆ ಬಲಿಯಾದ ನಂತರ ನಕ್ಸಲರ ಚಟುವಟಿಕೆಗೆ ಬ್ರೇಕ್ ಬಿದ್ದಿತ್ತು.
ಶರಣಾಗದೇ ಇದ್ದರೆ ಪೊಲೀಸರ ಗುಂಡೇಟಿಗೆ ಬಲಿಯಾಗುವುದು ನಿಶ್ಚಿತ ಎಂದು ಮನಗಂಡ ಉಳಿದ ನಕ್ಸಲೈಟ್‌ಗಳು ಶರಣಾಗತಿಯತ್ತ ತಮ್ಮ ಚಿತ್ತ ಹರಿಸಿದ್ದರು. ಅದರಂತೆ ಮೋಸ್ಟ್ ವಾಂಟೆಡ್ ವಿಕ್ರಂ ಗೌಡನ ತಂಡದಲ್ಲಿದ್ದ ಮುಂಡಗಾರು ಲತಾ, ವನಜಾಕ್ಷಿ ಬೊಳೆಹೊಳೆ, ಸುಂದರಿ ಕುತ್ಲೂರು, ಮಾರೆಪ್ಪ ಆರೋಲಿ ಕುತ್ತೂರು, ಕೆ. ವಸಂತ ತಮಿಳುನಾಡು ಮತ್ತು ಟಿ.ಎನ್. ಜಿಷಾ ಕೇರಳ ಅವರು ೨೦೨೫ರ ಜನವರಿ ೮ರಂದು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಎದುರು ಶರಣಾಗಿದ್ದರು. ಶರಣಾದ ನಕ್ಸಲರನ್ನು ಎಎನ್‌ಎಫ್ ನ್ಯಾಯಾಲಯದ ಅನುಮತಿ ಪಡೆದು ಕಸ್ಟಡಿಗೆ ತೆಗೆದುಕೊಂಡಿದ್ದ ಪೊಲೀಸ್ ಅಧಿಕಾರಿಗಳು ವಿಚಾರಣೆಗೊಳಪಡಿಸಿ ಮತ್ತೆ ಬೆಂಗಳೂರಿನ ಪರಪ್ಪನ ಅಗ್ರಹಾರಕ್ಕೆ ಕಳುಹಿಸಿದ್ದರು.
ಇವರದೇ ತಂಡದಲ್ಲಿದ್ದರೂ ಶರಣಾಗದೆ ತಲೆ ಮರೆಸಿಕೊಂಡಿದ್ದ ಶೃಂಗೇರಿಯ ರವೀಂದ್ರ ಇದೀಗ ಚಿಕ್ಕಮಗಳೂರು ಜಿಲ್ಲಾಡಳಿತದ ಎದುರು ಶರಣಾಗಿದ್ದಾನೆ. ನಕ್ಸಲ್ ಜೀವನದಿಂದ ಮುಕ್ತಳಾಗಿ ಆಂದ್ರಪ್ರದೇಶದಲ್ಲಿ ಕೌಟುಂಬಿಕ ಜೀವನ ನಡೆಸುತ್ತಿದ್ದ ಕುಂದಾಪುರದ ಲಕ್ಷ್ಮಿ ಉಡುಪಿ ಜಿಲ್ಲಾಡಳಿತದ ಎದುರು ಶರಣಾಗಿದ್ದಾಳೆ. ಶರಣಾದ ಈರ್ವರನ್ನೂ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಚಿಕ್ಕಮಗಳೂರು ಜಿಲ್ಲಾಡಳಿತದ ಎದುರು ರವೀಂದ್ರ ಶರಣಾಗತಿ: ಕಳೆದ ೧೮ ವರ್ಷಗಳಿಂದ ನಕ್ಸಲ್ ಚಟುವಟಿಕೆಯಲ್ಲಿ ತೊಡಗಿಸಿಕೊಂಡು ಭೂಗತನಾಗಿದ್ದ ಶೃಂಗೇರಿ ತಾಲೂಕಿನ ಕಿಗ್ಗಾದ ಕೋಟೆ ಹೊಂಡದ ರವೀಂದ್ರ(೪೪ವ) ಫೆ.೧ರಂದು ಚಿಕ್ಕಮಗಳೂರು ಜಿಲ್ಲಾಡಳಿತದ ಎದುರು ಶರಣಾಗಿದ್ದಾನೆ. ನಕ್ಸಲ್ ರವೀಂದ್ರನ ಪತ್ತೆಗಾಗಿ ಲುಂಗಿ ಧರಿಸಿ, ಗಡ್ಡ ಬಿಟ್ಟು ಹೆಗಲಿಗೊಂದು ಬ್ಯಾಗ್ ಹಾಕಿ ಸಾಮಾನ್ಯರಂತೆ ವಾರಗಟ್ಟಲೆ ಹಳ್ಳಿಗಳಲ್ಲಿ ತಿರುಗಾಡುವ ಮೂಲಕ ರಾಜ್ಯ ಗುಪ್ತಚರ ಇಲಾಖೆಯ ಎಸ್‌ಪಿ ಹರಿರಾಮ ಶಂಕರ ನೇತೃತ್ವದ ಸಿಬ್ಬಂದಿ ಮೈಸೂರಿನ ರಮೇಶ್ ರಾವ್ ಕಾರ್ಯನಿರ್ವಹಿಸಿದ್ದರು. ರವೀಂದ್ರನ ಪತ್ತೆಗೆ ನಕ್ಸಲ್ ನಿಗ್ರಹ ಪಡೆ, ರಾಜ್ಯ ಗುಪ್ತಚರ ಇಲಾಖೆ, ಶಾಂತಿಗಾಗಿ ನಾಗರಿಕರ ವೇದಿಕೆ ಸದಸ್ಯರು ಎರಡು ವಾರದಿಂದ ಕಾಡಂಚಿನ ಎಲ್ಲಾ ಮನೆ ಮನೆಗಳಿಗೂ ಭೇಟಿ ನೀಡಿ ಮಾಹಿತಿ ಕಲೆ ಹಾಕಿದ್ದರು.
ಚಿಕ್ಕಮಗಳೂರು, ಕಾರ್ಕಳ, ಉಡುಪಿ ಜಿಲ್ಲೆಯ ಎಎನ್‌ಎಫ್ ಸಿಬ್ಬಂದಿಗಳೂ ವೇಷ ಮರೆಸಿಕೊಂಡು ಹಳ್ಳಿಗಳ ಮನೆ ಮನೆಗೆ ತೆರಳಿ ರಹಸ್ಯವಾಗಿ ಶೋಧ ಕಾರ್ಯದಲ್ಲಿ ತೊಡಗಿದ್ದರು. ಇನ್‌ಸ್ಪೆಕ್ಟರ್ ಒಬ್ಬರು ಸ್ಥಳೀಯ ಮಹಿಳೆಯಂತೆ ನೈಟಿ ಧರಿಸಿಕೊಂಡು ಹೆಗಲಲ್ಲಿ ಹಾರೆ ಹಿಡಿದು ಸುತ್ತಾಡಿದ್ದರು. ಆದರೂ ಯಾವುದೇ ಮಾಹಿತಿ ಸಿಕ್ಕಿರಲಿಲ್ಲ. ಶೃಂಗೇರಿ ಸಮೀಪದ ಹುಲುಗಾರು ಬೈಲು ಸಂಪಾನೆಯ ರಮೇಶ್ ಎಂಬವರ ಮನೆಗೆ ಶುಕ್ರವಾರ ರಾತ್ರಿ ಕೋಟೆ ಹೊಂಡ ರವೀಂದ್ರ ಬಂದಿದ್ದ ಮಾಹಿತಿ ತಿಳಿದು ಶರಣಾಗತಿ ಸಮಿತಿ ಸದಸ್ಯ ಶ್ರೀಪಾಲ್ ಅಲ್ಲಿಗೆ ತೆರಳಿ ಮಾತುಕತೆ ನಡೆಸಿ ಮನವೊಲಿಸಿದ್ದರು.
ರಾತ್ರಿಯೇ ವಿಷಯ ತಿಳಿದ ರಾಜ್ಯ ಗುಪ್ತಚರ ಇಲಾಖೆಯ ಸಿಬ್ಬಂದಿ ಮೈಸೂರಿನ ರಮೇಶ್ ರಾವ್ ಸೇರಿದಂತೆ ಹಲವರು ಅಲ್ಲಿಗೆ ತೆರಳಿ ಶನಿವಾರ ಚಿಕ್ಕಮಗಳೂರಿನ ಜಿಲ್ಲಾಡಳಿತದ ಮುಂದೆ ಕರೆದೊಯ್ಯಲು ಯೋಜನೆ ರೂಪಿಸಿದ್ದರು. ಕೋಟಿಹೊಂಡ ರವೀಂದ್ರನ ವಿರುದ್ಧ ವಿವಿಧ ಠಾಣೆಗಳಲ್ಲಿ ೨೭ ಪ್ರಕರಣಗಳಿದೆ. ೨೦೦೭ರಿಂದ ಭೂಗತರಾಗಿದ್ದು ಕರ್ನಾಟಕ, ಕೇರಳ ಮತ್ತು ತಮಿಳುನಾಡಿನಲ್ಲಿ ನಕ್ಸಲ್ ಚಟುವಟಿಕೆಯಲ್ಲಿ ಸಕ್ರಿಯರಾಗಿದ್ದ ರವೀಂದ್ರನ ವಿರುದ್ಧ ಚಿಕ್ಕಮಗಳೂರು ಜಿಲ್ಲೆಯಲ್ಲಿ ೧೩ ಪ್ರಕರಣಗಳಿದೆ.
ಬೇರೆ ಜಿಲ್ಲೆಯಲ್ಲಿ ೪ ಮತ್ತು ಕೇರಳದಲ್ಲಿ ೯ ಪ್ರಕರಣಗಳು ದಾಖಲಾಗಿದೆ. ನಕ್ಸಲ್ ಪುನರ್ವಸತಿ ಮತ್ತು ಶರಣಾಗತಿ ಸಮಿತಿ ಅಧ್ಯಕ್ಷರಾದ ಜಿಲ್ಲಾಧಿಕಾರಿ ಸಿ.ಎನ್. ಮೀನಾ ನಾಗರಾಜ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ವಿಕ್ರಮ್ ಅಮಟೆ, ಜಿ.ಪಂ. ಸಿಇಒ ಹಾಗೂ ಜಿಲ್ಲಾ ಸಮಿತಿ ಸದಸ್ಯರಾದ ಎಚ್. ಎಸ್. ಕೀರ್ತನಾ, ನಕ್ಸಲ್ ಪುನರ್ವಸತಿ ಮತ್ತು ಶರಣಾಗತಿ ರಾಜ್ಯ ಸಮಿತಿಯ ಕೆ.ಪಿ. ಶ್ರೀಪಾಲ್ ಹಾಗೂ ಶಾಂತಿಗಾಗಿ ನಾಗರಿಕ ವೇದಿಕೆ ಮುಖಂಡರ ಸಮ್ಮುಖದಲ್ಲಿ ರವೀಂದ್ರನ ಶರಣಾಗತಿ ಪ್ರಕ್ರಿಯೆ ನಡೆಯಿತು. ಶರಣಾದ ಬಳಿಕ ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು ನ್ಯಾಯಾಂಗ ಬಂಧನ ವಿಧಿಸಲಾಗಿದೆ. ೨೦೦೭ರಲ್ಲಿ ತೀರ್ಥಹಳ್ಳಿ ಎಳ್ಳಮಾಸ್ಯೆ ಜಾತ್ರೆಗೆ ಹೋಗಿ ಬರುವುದಾಗಿ ತಿಳಿಸಿ ತೆರಳಿದ್ದ ಬಳಿಕ ರವೀಂದ್ರ ನಾಪತ್ತೆಯಾಗಿದ್ದ. ಈತನ ಸುಳಿವು ನೀಡಿದವರಿಗೆ ಪೊಲೀಸ್ ಇಲಾಖೆ ಬಹುಮಾನ ಘೋಷಿಸಿತ್ತು.
ಉಡುಪಿ ಜಿಲ್ಲಾಡಳಿತದ ಎದುರು ಲಕ್ಷ್ಮಿ ಸರಂಡರ್: ನಕ್ಸಲ್ ಚಟುವಟಿಕೆ ನಡೆಸುತ್ತಾ ಭೂಗತಳಾಗಿ ಬಳಿಕ ಆಂದ್ರಪ್ರದೇಶದಲ್ಲಿ ಕೌಟುಂಬಿಕ ಜೀವನ ನಡೆಸುತ್ತಿದ್ದ ಕುಂದಾಪುರ ತಾಲೂಕಿನ ಮಟ್ಟು ಗ್ರಾಮದ ತೊಂಬಟ್ಟು ಇರ್ಕಿಗದ್ದೆಯ ಪಂಜು ಪೂಜಾರಿ ಮತ್ತು ದಾರಕ್ಕೆ ದಂಪತಿಯ ಪುತ್ರಿ ಲಕ್ಷ್ಮಿ(೪೧ವ) ಫೆ.೨ರಂದು ಉಡುಪಿ ಜಿಲ್ಲಾಡಳಿತದ ಎದುರು ಶರಣಾಗಿದ್ದಾಳೆ.
ಮೊಬೈಲ್ ಫೋನ್ ಬಳಸದ ಕಾರಣ ಲಕ್ಷ್ಮಿಯನ್ನು ಸಂಪರ್ಕಿಸಲು ಸಾಧ್ಯವಾಗಿರಲಿಲ್ಲ. ವಿಕ್ರಂ ಗೌಡನ ಎನ್‌ಕೌಂಟರ್ ನಂತರ ಮುಂಡಗಾರು ಲತಾ, ಕುತ್ಲೂರಿನ ಸುಂದರಿ ಸಹಿತ ರಾಜ್ಯದ ೬ ನಕ್ಸಲರು ಮುಖ್ಯವಾಹಿನಿಗೆ ಬಂದ ವಿಚಾರವನ್ನು ಪತ್ರಿಕೆ ಮತ್ತು ದೃಶ್ಯ ಮಾಧ್ಯಮಗಳ ಮೂಲಕ ತಿಳಿದುಕೊಂಡಿದ್ದ ಲಕ್ಷ್ಮಿ ಪೊಲೀಸರಿಗೆ ಶರಣಾಗಲು ನಿರ್ಧರಿಸಿದ್ದಳು. ಈ ಹಿಂದೆ ನಕ್ಸಲ್ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದ ಆಂದ್ರಪ್ರದೇಶದ ವಿಶಾಖಪಟ್ಟಣದ ಸಂಜೀವ ಎಂಬಾತನನ್ನು ಲಕ್ಷ್ಮಿ ಮದುವೆಯಾಗಿದ್ದಳು.
ಬಳಿಕ ಅವರಿಬ್ಬರೂ ನಕ್ಸಲ್ ಚಟುವಟಿಕೆಯಿಂದ ಹೊರ ಬಂದಿದ್ದರು. ನಕ್ಸಲೈಟ್ ಸಂಜೀವ ಈ ಹಿಂದೆಯೇ ಆಂದ್ರಪ್ರದೇಶ ಪೊಲೀಸರ ಎದುರು ಶರಣಾಗಿದ್ದ. ಆ ಬಳಿಕ ನ್ಯಾಯಾಲಯದಿಂದ ದೋಷಮುಕ್ತಗೊಂಡಿದ್ದ. ಆದರೆ ಲಕ್ಷ್ಮಿ ಶರಣಾಗದೇ ಇದ್ದುದರಿಂದ ದೋಷಮುಕ್ತವಾಗಿರಲಿಲ್ಲ. ಇದೀಗ ಆಕೆ ಸ್ವಯಂಇಚ್ಛೆಯಿಂದ ಶರಣಾಗಿದ್ದಾಳೆ.
೨೦೦೭-೦೮ರಲ್ಲಿ ಉಡುಪಿ ಜಿಲ್ಲೆಯ ಮಾವೋವಾದಿ ಸಂಘಟನೆಯಲ್ಲಿ ಸಕ್ರಿಯಳಾಗಿದ್ದ ಲಕ್ಷ್ಮಿಯ ಶರಣಾಗತಿಯೊಂದಿಗೆ ರಾಜ್ಯದಲ್ಲಿ ನಕ್ಸಲ್ ಚಟುವಟಿಕೆಗೆ ಸಂಪೂರ್ಣ ತಿಲಾಂಜಲಿ ಬಿದ್ದಂತಾಗಿದೆ. ಇದುವರೆಗೆ ಮುಖ್ಯವಾಹಿನಿಗೆ ಬಂದ ನಕ್ಸಲರ ಪೈಕಿ ಅತಿ ಕಡಿಮೆ ಪ್ರಕರಣ ಲಕ್ಷ್ಮಿ ಮೇಲಿದೆ. ಲಕ್ಷ್ಮಿ ವಿರುದ್ಧ ಅಂದಿನ ಶಂಕರನಾರಾಯಣ (ಇಂದಿನ ಆಯಾರೆಟ್ಟಿಲು) ಪೊಲೀಸ್ ಠಾಣೆಯಲ್ಲಿ ೨೦೦೭ರಲ್ಲಿ ಗುಂಡಿನ ದಾಳಿ ನಡೆಸಿರುವ, ಹಲ್ಲೆ ಮಾಡಿ ಬೆದರಿಕೆ ಹಾಕಿರುವ ಹಾಗೂ ಭಿತ್ತಿಪತ್ರ, ಕರಪತ್ರಗಳನ್ನು ಅಂಟಿಸಿರುವ ಆರೋಪದಡಿ ಒಟ್ಟು ೩ ಪ್ರಕರಣಗಳು ದಾಖಲಾಗಿವೆ. ಇದಕ್ಕೆ ಸಂಬಂಧಿಸಿದ ವಿಚಾರಣೆ ಬಾಕಿ ಇವೆ. ಆಕೆ ನೆಲೆಸಿದ್ದ ಆಂಧ್ರಪ್ರದೇಶದಲ್ಲಿ ಯಾವುದೇ ಪ್ರಕರಣಗಳಿಲ್ಲ.
ಉಡುಪಿ ಜಿಲ್ಲಾಧಿಕಾರಿ ಡಾ. ವಿದ್ಯಾಕುಮಾರಿ, ಎಸ್.ಪಿ. ಡಾ. ಕೆ. ಅರುಣ್, ಹೆಚ್ಚುವರಿ ಎಸ್ಪಿ ಎಸ್.ಟಿ. ಸಿದ್ದಲಿಂಗಪ್ಪ, ಎಎನ್‌ಎಫ್ ಇನ್ಸ್‌ಸ್ಪೆಕ್ಟರ್ ಸತೀಶ್ ಅವರು ಲಕ್ಷ್ಮಿಯ ಶರಣಾಗತಿಯ ಕಾನೂನು ಪ್ರಕ್ರಿಯೆ ಪೂರೈಸಿದರು. ಜಿ.ಪಂ. ಸಿಇಒ ಪ್ರತೀಕ್ ಬಾಯಲ್, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ನಾರಾಯಣ ಸ್ವಾಮಿ ಉಪಸ್ಥಿತರಿದ್ದರು. ಶರಣಾಗತಿ ಪ್ರಕ್ರಿಯೆಯ ಬಳಿಕ ಕುಂದಾಪುರ ಡಿವೈಎಸ್‌ಪಿ ಡಿ. ಕುಲಕರ್ಣಿ ನೇತೃತ್ವದ ಪೊಲೀಸ್ ತಂಡ ಜಿಲ್ಲಾಸ್ಪತ್ರೆಯಲ್ಲಿ ಲಕ್ಷ್ಮಿಯ ವೈದ್ಯಕೀಯ ಪರೀಕ್ಷೆ ನಡೆಸಿ ನ್ಯಾಯಾಧೀಶರ ಮನೆಗೆ ಹಾಜರುಪಡಿಸಿದೆ. ಆಕೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಕುಂದಾಪುರ ತಾಲೂಕಿನ ಮಟ್ಟು ಗ್ರಾಮದ ತೊಂಬಟ್ಟು ಇರ್ಕಿಗದ್ದೆಯ ಪಂಜು ಪೂಜಾರಿ ಮತ್ತು ದಾರಕ್ಕೆ ದಂಪತಿಯ ೫ನೇ ಪುತ್ರಿಯಾಗಿರುವ ಲಕ್ಷ್ಮಿಯ ಸಹೋದರರಾದ ರಾಮ್, ರಾಜು, ವಿಟ್ಟಲ ಮತ್ತು ಬಸವ ಕೃಷಿಕರಾಗಿದ್ದಾರೆ. ತಂಗಿ ರಾಜೀವಿಗೆ ವಿವಾಹವಾಗಿದೆ. ತಂದೆ ೫ ವರ್ಷಗಳ ಹಿಂದೆ ಹಾಗೂ ತಾಯಿ ೩ ವರ್ಷಗಳ ಹಿಂದೆ ಮೃತಪಟ್ಟಿದ್ದಾರೆ. ಆಂದ್ರಪ್ರದೇಶದ ಸಂಜೀವ ಯಾನೆ ಸಲೀಂರವರನ್ನು ವಿವಾಹವಾಗಿರುವ ಲಕ್ಷ್ಮಿಗೆ ಒಂದು ಗಂಡು ಮತ್ತು ಒಂದು ಹೆಣ್ಣು ಮಕ್ಕಳಿದ್ದಾರೆ.
ತನ್ನ ಊರಿನಲ್ಲಿ ೭ನೇ ತರಗತಿಯವರೆಗೆ ಓದಿದ್ದ ಲಕ್ಷ್ಮಿ ಸಂಡೂರು ನೀರಾವರಿ ಪ್ರಾಜೆಕ್ಟ್ ಕೆಲಸಕ್ಕೆ ಹೋಗುತ್ತಿದ್ದಳು. ತನ್ನ ಗ್ರಾಮದ ರಸ್ತೆ ಸಮಸ್ಯೆ ಮತ್ತು ಸಾರಾಯಿ ಅಂಗಡಿ ವಿರುದ್ಧ ಹೋರಾಟ ನಡೆಸುತ್ತಿದ್ದ ಲಕ್ಷ್ಮಿ ಊರಿಗೆ ಮೂಲಭೂತ ಸೌಕರ್ಯ ಬೇಕು ಎಂದು ಹೋರಾಡುತ್ತಿದ್ದಳು. ಆಕೆ ೨೦೦೬ರಲ್ಲಿ ಒಂದು ದಿನ ಸ್ನೇಹಿತರ ಮನೆಗೆ ಹೋಗಿ ಬರುವುದಾಗಿ ಹೇಳಿ ಹೋದವಳು ಮತ್ತೆ ಮನೆಗೆ ಬಂದಿರಲಿಲ್ಲ. ನಕ್ಸಲ್ ಗುಂಪಿನಲ್ಲಿ ಕ್ರಾಂತಿಕಾರಿ ಗೀತೆಗಳನ್ನು ಹಾಡುತ್ತ ಚುರುಕಾಗಿದ್ದಳು. ಈಗಾಗಲೇ ಶರಣಾಗಿರುವ ಲತಾ ಮುಂಡಗಾರು ವಿರುದ್ಧ ಕರ್ನಾಟಕದಲ್ಲಿ ದಾಖಲಾಗಿರುವ ೬೫ ಪ್ರಕರಣಗಳ ಪೈಕಿ ೪೩ ಪ್ರಕರಣ ಚಿಕ್ಕಮಗಳೂರು ಜಿಲ್ಲೆಯಲ್ಲಿವೆ.
ವನಜಾಕ್ಷಿ ವಿರುದ್ಧ ಒಟ್ಟಾರೆ ೨೫ ಪ್ರಕರಣಗಳಿದ್ದರೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ೧೯ ಪ್ರಕರಣ ದಾಖಲಾಗಿವೆ. ಕುತ್ಲೂರಿನ ಸುಂದರಿ ವಿರುದ್ಧ ರಾಜ್ಯದಲ್ಲಿ ೨೩ ಪ್ರಕರಣಗಳಿದ್ದು ಮೂರು ಪ್ರಕರಣ ಚಿಕ್ಕಮಗಳೂರು ಜಿಲ್ಲೆಯಲ್ಲಿವೆ.
ಮಾರೆಪ್ಪ ಅರೋಲಿ ವಿರುದ್ಧ ರಾಜ್ಯದಲ್ಲಿ ೧೩ ಪ್ರಕರಣಗಳಿದ್ದು ಚಿಕ್ಕಮಗಳೂರು ಜಿಲ್ಲೆಯಲ್ಲಿ ಮೂರು ಪ್ರಕರಣ ದಾಖಲಾಗಿವೆ. ಕೇರಳದ ಜಿಷಾ ಮತ್ತು ತಮಿಳುನಾಡಿನ ಕೆ.ವಸಂತ ವಿರುದ್ಧ ಚಿಕ್ಕಮಗಳೂರು ಜಿಲ್ಲೆಯಲ್ಲಿ ತಲಾ ಒಂದು ಪ್ರಕರಣ ದಾಖಲಾಗಿದೆ. ಶರಣಾಗತರಾಗಿರುವ ನಕ್ಸಲರ ವಿರುದ್ಧ ಬಹುತೇಕ ಪ್ರಕರಣಗಳು ಕೊಪ್ಪ ತಾಲ್ಲೂಕಿನ ಜಯಪುರ ಮತ್ತು ಶೃಂಗೇರಿ ಠಾಣೆಯಲ್ಲೇ ದಾಖಲಾಗಿದೆ. ಈ ಎಲ್ಲಾ ಪ್ರಕರಣಗಳ ತನಿಖೆಗೆ ಫಾಸ್ಟ್‌ಟ್ರಾಕ್ ಕೋರ್ಟ್ ರಚನೆಯಾಗುವ ಸಾಧ್ಯತೆ ಇದೆ.
ಲಕ್ಷ್ಮಿಗೆ ನ್ಯಾಯಾಂಗ ಬಂಧನ: ನಕ್ಸಲ್ ಲಕ್ಷ್ಮೀ ತೊಂಬಟ್ಟು ಅವರಿಗೆ ಕುಂದಾಪುರ ತಾಲೂಕು ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದೆ. ಉಡುಪಿ ಜೈಲಿನಲ್ಲಿರುವ ಈಕೆಯನ್ನು ಸೋಮವಾರ ಕುಂದಾಪುರ ನ್ಯಾಯಾಲಯದ ಎರಡನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಮತ್ತು ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿ ಅವರ ಮುಂದೆ ವೀಡಿಯೋ ಕಾನ್ಸರೆನ್ಸ್ ಮೂಲಕ ಹಾಜರುಪಡಿಸಲಾಯಿತು. ಆಕೆ ಮೇಲೆ ಕುಂದಾಪುರ ತಾಲೂಕಿನ ಅಮಾಸೆಬೈಲು ಪೊಲೀಸ್ ಠಾಣೆಯಲ್ಲಿ ೩ ಪ್ರಕರಣಗಳಿವೆ. ಸೊಮವಾರ ಆಕೆಯನ್ನು ಕುಂದಾಪುರ ಡಿವೈಎಸ್ಪಿ ಅವರಿಗೆ ಹಸ್ತಾಂತರಿಸಲಾಗಿತ್ತು.
ಈ ಹಿನ್ನೆಲೆಯಲ್ಲಿ ಆಕೆಯ ಹೆಚ್ಚಿನ ವಿಚಾರಣೆಗೆ ಪೊಲೀಸರು ತಮ್ಮ ವಶಕ್ಕೆ ಕೇಳುತ್ತಾರೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಸೋಮವಾರ ಕುಂದಾಪುರ ಪೊಲೀಸರು ಆಕೆಯನ್ನು ಕಸ್ಟಡಿಗೆ ಕೇಳಲಿಲ್ಲ. ಆದ್ದರಿಂದ ನ್ಯಾಯಾಧೀಶರು ಆಕೆಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶಿಸಿದರು. ಆಕೆಯನ್ನು ವಿಚಾರಣೆಗೊಳಪಡಿಸಲು ಬೇಕಾದ ಎಲ್ಲ ಸಿದ್ಧತೆಗಳನ್ನು ಮಾಡಿಕೊಡು ಒಂದೆರಡು ದಿನಗಳಲ್ಲಿ ಪೊಲೀಸ್ ಕಸ್ಟಡಿಗೆ ಕೇಳುವ ಸಾಧ್ಯತೆ ಇದೆ ಎನ್ನಲಾಗಿದೆ.