

ಬೆಳ್ತಂಗಡಿ: ಎಪ್ರಿಲ್ ಅಥವಾ ಮೇ ತಿಂಗಳಿನಲ್ಲಿ ಜಿಲ್ಲಾ ಪಂಚಾಯತ್ ಮತ್ತು ತಾಲೂಕು ಪಂಚಾಯತ್ ಚುನಾವಣೆ ನಡೆಸಲು ಆಯೋಗ ಸಿದ್ಧತೆ ನಡೆಸುತ್ತಿದೆ. ಇವಿಎಂ ಹ್ಯಾಕ್ ಗೊಂದಲ ಮೂಡಿರುವುದರಿಂದ ಮತ ಪತ್ರದಲ್ಲಿ ಮತದಾನ ನಡೆಸಲು ರಾಜ್ಯ ಚುನಾವಣಾ ಆಯೋಗದ ಆಯುಕ್ತ ಜಿ.ಎಸ್. ಸಂಗ್ರೇಶಿ ನೇತೃತ್ವದಲ್ಲಿ ಸಿದ್ಧತೆ ನಡೆಸಲಾಗುತ್ತಿದೆ.
ರಾಜ್ಯದ 31 ಜಿಲ್ಲೆಗಳ ಜಿ. ಪಂ. ಹಾಗೂ ತಾ.ಪಂ. ಚುನಾವಣೆ ನಡೆಸಲು ಸಿದ್ಧತೆ ಮಾಡಿಕೊಂಡಿರುವ ಚುನಾವಣಾ ಆಯೋಗ 18 ವರ್ಷ ತುಂಬಿದ ಮತದಾರರನ್ನು ಮತದಾರರ ಪಟ್ಟಿಗೆ ಸೇರಿಸುವ ಕಾರ್ಯ ನಡೆಸುತ್ತಿದೆ. ಪುನರ್ ವಿಂಗಡಣಾ ಆಯೋಗದ ವರದಿ ಹಾಗೂ ಇನ್ನಿತರ ಕಾರಣಗಳಿಂದಾಗಿ ಈಗಾಗಲೇ ಚುನಾವಣೆ ಸಾಕಷ್ಟು ವಿಳಂಬವಾಗಿದ್ದು ಶೀಘ್ರವೇ ಚುನಾವಣೆ ನಡೆಸಲು ರೂಪುರೇಷೆ ಸಿದ್ಧ ಪಡಿಸಲಾಗುತ್ತಿದೆ.
ಸಂಬಂಧಪಟ್ಟ ಇಲಾಖೆಗಳಿಗೆ ಮೀಸಲಾತಿ ಪಟ್ಟಿ ಕೊಡಲು ತಿಳಿಸಿರುವ ಆಯೋಗ ಮೀಸಲಾತಿ ಪಟ್ಟಿ ಲಭ್ಯವಾದ ತಕ್ಷಣ ಚುನಾವಣೆಯ ದಿನಾಂಕ ಘೋಷಿಸಲಿದೆ. ಚುನಾವಣಾ ದಿನಾಂಕ ಘೋಷಣೆಯಾಗಿ ಮತಪತ್ರಗಳನ್ನು ಹಿಂಪಡೆಯುವ ದಿನಾಂಕದವರೆಗೆ 18 ವರ್ಷ ತುಂಬಿದವರು ಮತದಾರರಾಗಿ ಹೆಸರು ನೋಂದಾಯಿಸಿಕೊಳ್ಳಲು ಅವಕಾಶ ಇದೆ. ಭ್ರಷ್ಟಾಚಾರ ಮುಕ್ತ ಚುನಾವಣೆ ನಡೆಸುವ ನಿಟ್ಟಿನಲ್ಲಿ ಆಯೋಗ ಕಟ್ಟುನಿಟ್ಟಿನ ಸಿದ್ಧತೆ ಮಾಡಿಕೊಳ್ಳುತ್ತಿದೆ. ಜಿಲ್ಲೆಯಲ್ಲಿ ಜಿಲ್ಲಾಧಿಕಾರಿಗಳೇ ಚುನಾವಣ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಲಿದ್ದು ತಾಲೂಕುಗಳಲ್ಲಿ ತಹಶೀಲ್ದಾರ್‌ಗಳು ಚುನಾವಣಾ ಅಧಿಕಾರಿಗಳಾಗಿ ಕಾರ್ಯ ನಿರ್ವಹಣೆ ಮಾಡಲಿದ್ದಾರೆ.
ರಾಜ್ಯ ಚುನಾವಣ ಆಯೋಗ ಸ್ವತಂತ್ರವಾಗಿದ್ದು ಸಂವಿಧಾನ ಹಾಗೂ ಪ್ರಜಾಪ್ರಭುತ್ವದ ಆಶಯಗಳಂತೆ ಚುನಾವಣೆ ನಡೆಸಲಿದೆ. ವಿದ್ಯುನ್ಮಾನ ಮತಯಂತ್ರಗಳ ಕುರಿತು ಅನೇಕ ಟೀಕೆಗಳು ಕೇಳಿ ಬರುತ್ತಿರುವುದರಿಂದ ಜನರಲ್ಲಿ ಮೂಡಿರುವ ಸಂಶಯಗಳನ್ನು ಹೊಗಲಾಡಿಸಲು ಜಾಗೃತಿ ಕಾರ್ಯ ನಡೆದಿದೆ. ಎಲ್ಲಾ ರಾಜಕೀಯ ಪಕ್ಷಗಳ ಮುಖಂಡರ ಮನವೊಲಿಸಿ ಜಿ.ಪಂ., ತಾ.ಪಂ. ಚುನಾವಣೆಗಳಲ್ಲಿ ಮತಪತ್ರ ಬಳಸಲಾಗುವುದು. ಇವಿಎಂ ಹ್ಯಾಕ್ ಮಾಡಲಾಗುತ್ತಿದೆ ಎಂಬ ಸಂಶಯವನ್ನು ತಿರಸ್ಕರಿಸಿ ಜನರಲ್ಲಿ ಅರಿವು ಮೂಡಿಸಲು ಚುನಾವಣಾ ಆಯೋಗ ಸಿದ್ಧತೆ ನಡೆಸಿದೆ.