ನಿಡ್ಲೆ: ಪರಿಸರದ ಬದಲಾವಣೆಯನ್ನು ಹಬ್ಬಗಳ ಮೂಲಕ ಆಚರಿಸುವ ಪದ್ಧತಿ ಹಿಂದೂ ಧರ್ಮದಲ್ಲಿದೆ. ಹಿಂದುಗಳು ಆಚರಿಸುವ ಪ್ರತಿಯೊಂದು ಹಬ್ಬಗಳ ಹಿಂದೆ ವೈಜ್ಞಾನಿಕ ವಿಚಾರಗಳಿವೆ. ಕೃಷಿ ಹಾಗೂ ಆರೋಗ್ಯಕ್ಕೆ ಸಂಬಂಧಿಸಿದ ಅನೇಕ ಆಚರಣೆಗಳನ್ನು ಧಾರ್ಮಿಕ ಹಿನ್ನೆಲೆಗಳ ಮೂಲಕ ನಮ್ಮ ಹಿರಿಯರು ನಮಗೆ ತಿಳಿಸಿದ್ದ ಕಾರಣ ಇಂದಿಗೂ ಇಂತಹ ಆಚರಣೆಗಳು ಜೀವಂತಿಕೆಯನ್ನು ಪಡೆದಿದೆ ಎಂದು ರಾಷ್ಟ್ರೀಯ ಸೇವಿಕಸಮಿತಿ ಪುತ್ತೂರು ಜಿಲ್ಲಾ ಸೇವಾ ಪ್ರಮುಖ್ ಶ್ರೀದೇವಿ ನಾಗರಾಜ್ ಭಟ್ ಹೇಳಿದರು.
ಕಾಯರ್ತಡ್ಕದ ಸೇವಾ ಶರಧಿ ಟ್ರಸ್ಟ್, ವೈಷ್ಣವಿ ಶಿಶುಮಂದಿರ, ರಾಷ್ಟ್ರಸೇವಿಕಾ ಸಮಿತಿ ಹಾಗೂ ಶ್ರೀ ಉಮಾಮಹೇಶ್ವರ ದೇವಸ್ಥಾನದ ಆಶ್ರಯದಲ್ಲಿ ಬಾಲಗೋಕುಲ ಮತ್ತು ಶಿಶುಮಂದಿರದ ಮಕ್ಕಳಿಗೆ ನಡೆಸಲ್ಪಟ್ಟ ಸಾಮೂಹಿಕ ಹುಟ್ಟುಹಬ್ಬ ಮತ್ತು ಮಾತೃವಂದನ ಕಾರ್ಯಕ್ರಮದಲ್ಲಿ ಅವರು ಬೌದ್ಧಿಕ ನೀಡಿದರು. ವಿದ್ಯಾರ್ಥಿಗಳಿಗೆ ಮಕರ ಸಂಕ್ರಾಂತಿ ಹಾಗೂ ಉತ್ತರಾಯಣದ ಬಗ್ಗೆ ಅನೇಕ ಕಥೆಗಳ ಮೂಲಕ ಅವರು ವಿವರಿಸಿದರು.
ಕಾರ್ಯಕ್ರಮ ಉದ್ಘಾಟಿಸಿ ಅಧ್ಯಕ್ಷತೆ ವಹಿಸಿದ್ದ ಉದ್ಯಮಿ ಹಾಗೂ ಕೃಷಿಕ ಮಧುಕರ ರಾವ್ ಮಚ್ಚಳೆ ಮಾತನಾಡಿ, ಸಂಸ್ಕಾರದ ಪಾಠ ಮಕ್ಕಳಿಗೆ ಕೇವಲ ತಾಯಿಯಿಂದ ಮಾತ್ರ ಸಿಗದೇ ತಂದೆಯೂ ಮಕ್ಕಳ ಚಾರಿತ್ರ್ಯ ವೃದ್ಧಿಯಲ್ಲಿ ತಾಯಿಯೊಂದಿಗೆ ಸಹಭಾಗಿಯಾಗಬೇಕು. ಹುಟ್ಟುಹಬ್ಬದ ಆಚರಣೆ ಇಂಗ್ಲಿಷ್ ಕ್ಯಾಲೆಂಡರ್‌ಗೆ ಸೀಮಿತವಾಗಿರದೆ ಜನ್ಮ ನಕ್ಷತ್ರಗಳ ಪ್ರಕಾರ ಆಚರಿಸುವಂತಹ ಕಾರ್ಯ ಭವಿಷ್ಯದಲ್ಲಿ ಆಗಬೇಕು ಎಂದು ಆಶಯ ವ್ಯಕ್ತಪಡಿಸಿದರು.
ವೇದಿಕೆಯಲ್ಲಿ ಅಭ್ಯಾಸ್ ಕಾಲೇಜಿನ ಉಪಪ್ರಾಂಶುಪಾಲ ಚಂದ್ರಶೇಖರ ಗೌಡ, ಶ್ರೀಉಮಾಮಹೇಶ್ವರ ದೇವಸ್ಥಾನದ ಅಧ್ಯಕ್ಷ ಆನಂದ ಗೌಡ ಮರಕ್ಕಡ ಮತ್ತು ವೈಷ್ಣವಿ ಶಿಶುಮಂದಿರದ ಅಧ್ಯಕ್ಷ ಉಮೇಶ್ ಕುಡುಪ್ಪಾರು ಉಪಸ್ಥಿತರಿದ್ದರು. ಶಿಶು ಮಂದಿರದ ಸಂಚಾಲಕಿ ಮತ್ತು ರಾಷ್ಟ್ರೀಯಸೇವಿಕಾ ಸಮಿತಿ ಪುತ್ತೂರು ಜಿಲ್ಲಾ ಕಾರ್ಯವಾಹಿಕ ವೇದಾವತಿ ಜನಾರ್ದನ್, ಪಟ್ಟೂರು ಶ್ರೀರಾಮ ವಿದ್ಯಾಸಂಸ್ಥೆಯ ಸಂಚಾಲಕ ಪ್ರಶಾಂತ್ ಶೆಟ್ಟಿ ದೇರಾಜೆ, ಶಾಲಾ ಮುಖ್ಯಶಿಕ್ಷಕ ಚಂದ್ರಶೇಖರ ಶೇಟ್, ಶಿಕ್ಷಕಿಯರಾದ ಸ್ವಾತಿ ಕೆ.ವಿ, ಸುಪ್ರೀತಾ ಎ, ಶುಭಲಕ್ಷ್ಮಿ, ಸೇವಾ ಶರಧಿ ಟ್ರಸ್ಟ್ ಕಾರ್ಯದರ್ಶಿ ಪುರುಷೋತ್ತಮ, ಶಿಶುಮಂದಿರದ ಕೋಶಾಧಿಕಾರಿ ನಾರಾಯಣ ಭಂಡಾರಿ, ಲೋಕೇಶ್ ಮರಕಡ, ಉಜಿರೆ ತಾಲೂಕು ಸೇವಾ ಪ್ರಮುಖ್ ವಿಜಯ ನಾವೂರು ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದರು.
ವಿದ್ಯಾರ್ಥಿಗಳ ಸರಸ್ವತಿ ವಂದನೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಸೇವಾ ಶರಧಿ ಟ್ರಸ್ಟಿನ ಅಧ್ಯಕ್ಷ ಜನಾರ್ದನ್ ಕಜೆ ಸ್ವಾಗತಿಸಿದರು. ಶಿಶು ಮಂದಿರದ ಮಾತಾಜಿ ತುಳಸಿ ವಂದಿಸಿದರು. ಪಟ್ಟೂರು ಶ್ರೀರಾಮ ವಿದ್ಯಾಸಂಸ್ಥೆಯ ಸಹ ಶಿಕ್ಷಕ ದಿಲೀಪ್ ಕಾರ್ಯಕ್ರಮ ನಿರ್ವಹಿಸಿದರು.
ವಿಶೇಷತೆ: ಕಾರ್ಯಕ್ರಮದಲ್ಲಿ ಶಿಶುಮಂದಿರದ ಪುಟಾಣಿಗಳು ತಮ್ಮ ಮಾತಾ-ಪಿತರ ಪಾದ ತೊಳೆದು ಅರಿಶಿನ ಕುಂಕುಮ ಹಚ್ಚಿ ಹೂ ಇಟ್ಟು ಆಶೀರ್ವಾದ ಪಡೆದರು. ಆಗಮಿಸಿರುವ ಎಲ್ಲ ವಿದ್ಯಾರ್ಥಿಗಳು ಸಾಮೂಹಿಕವಾಗಿ ತಮ್ಮ ಹುಟ್ಟು ಹಬ್ಬ ಆಚರಿಸಿಕೊಂಡರು. ಈ ಸಂದರ್ಭ ವಿದ್ಯಾರ್ಥಿಗಳಿಗೆ ಮಾತೆಯರು ಆರತಿ ಬೆಳಗಿ, ಅಕ್ಷತೆ ಹಾಕಿ ಸಿಹಿ ನೀಡಿದರು. ಪುಟಾಣಿಗಳು ಭಾರತಮಾತೆಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ, ಸಮರ್ಪಣಾ ನಿಧಿ ಅರ್ಪಿಸಿ ವೇದಿಕೆಯಲ್ಲಿರುವ ಹಿರಿಯರಿಂದ ತಿಲಕಧಾರಣೆ ಮಾಡಿಸಿಕೊಂಡು ಆಶೀರ್ವಾದ ಪಡೆದರು.