ಕರಾಯ: ಸರಕಾರಿ ಪ್ರೌಢ ಶಾಲೆಯಲ್ಲಿ ಜಮೀಯ್ಯತುಲ್ ಫಲಾಹ್ ಬೆಳ್ತಂಗಡಿ ಘಟಕದ ವತಿಯಿಂದ 10 ನೇ ತರಗತಿಯ ವಿದ್ಯಾರ್ಥಿಗಳಿಗೆ ಪರೀಕ್ಷಾ ಪೂರ್ವ ತರಬೇತಿ ಶಿಬಿರ ಕಾರ್ಯಕ್ರಮ ಘಟಕದ ಅಧ್ಯಕ್ಷ ಶೇಕುಂಞ ಅಧ್ಯಕ್ಷತೆಯಲ್ಲಿ ಜ. 9 ರಂದು ಜರಗಿತು.
ಮುಖ್ಯ ಶಿಕ್ಷಕ ಬಸವಲಿಂಗಪ್ಪ ಮಾತನಾಡಿ ಜಮೀಯ್ಯತುಲ್ ಫಲಾಹ್ ಸಂಸ್ಥೆಯ ಈ ಕಾರ್ಯಕ್ರಮವು ತುಂಬಾ ಉತ್ತಮ ಕಾರ್ಯಕ್ರಮವಾಗಿದೆ ಎಂದು ಹೇಳಿ ಪ್ರಶಂಸಿಸಿದರು. ಘಟಕದ ಕಾರ್ಯದರ್ಶಿ ಆಲಿಯಬ್ಬ ಪುಲಾಬೆಯವರು ಮಾತನಾಡಿ ಶುಭ ಹಾರೈಸಿದರು.
ಹಿಂದಿನ ವರ್ಷ ಕರಾಯ ಶಾಲೆಗೆ 100 ಶೇ. ತಂದು ಕೊಟ್ಟ ಮುಖ್ಯೋಪಾಧ್ಯಾಯ ಬಸವಲಿಂಗಪ್ಪರವರನ್ನು ಎಲ್ಲಾ ಅಧ್ಯಾಪಕರ ಪರವಾಗಿ ಸನ್ಮಾನಿಸಲಾಯಿತು.
ಅಧ್ಯಕ್ಷೀಯ ಭಾಷಣ ಮಾಡಿದ ಶೇಕುಂಞ ವಿದ್ಯಾರ್ಥಿಗಳು ಒಂದು ಗುರಿಯನ್ನು ಇಟ್ಟುಕೊಂಡು ಓದಿದರೆ ಖಂಡಿತವಾಗಿಯೂ ಉತ್ತಮ ಅಂಕ ಪಡೆಯಲು, ಜೀವನದಲ್ಲಿ ಏನಾದರೊಂದು ಸಾಧನೆ ಮಾಡಲು ಸಾಧ್ಯ ಎಂದರು.
ವೇದಿಕೆಯಲ್ಲಿ ಘಟಕದ ಕೋಶಾಧಿಕಾರಿ ಅಬ್ಬೋನು ಮದ್ದಡ್ಕ,ಸದಸ್ಯರುಗಳಾದ ಖಾಲಿದ್ ಪುಲಾಬೆ, ಅಬೂಬಕ್ಕರ್ ಕಾಶಿಪಟ್ನ ಕೆ. ಎಸ್. ಅಬ್ಬುಲ್ಲ ಇಲ್ಯಾಸ್ ಕರಾಯ, ಕಾಸಿಂ ಪದ್ಮುಂಜ, ಪ್ರದೀಪ್ ಉಪಸ್ತಿತರಿದ್ದರು.
ಸಂಪನ್ಮೂಲ ವ್ಯಕ್ತಿಗಳಾಗಿ ಶರೀಫ್, ಯಾಕೂಬ್, ರಾಮಚಂದ್ರ ದೊಡ್ಮನೆ ತರಬೇತಿ ನೀಡಿದರು. ದೈಹಿಕ ಶಿಕ್ಷಕ ಸಿದ್ದಿಕ್ ಸ್ವಾಗತಿಸಿದರು. ಶಿಕ್ಷಕ ಶಿವ ಬಾಲು ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕ ಜಯಪ್ರಕಾಶ್ ಧನ್ಯವಾದ ಸಲ್ಲಿಸಿದರು.