ಗಾಂಜಾ ಪ್ರಕರಣದಲ್ಲಿ ಮೂವರು ಆರೋಪಿಗಳಿಗೆ ಶಿಕ್ಷೆ ವಿಧಿಸಿದ ಬೆಳ್ತಂಗಡಿ ನ್ಯಾಯಾಲಯ- ಕೇವಲ 2 ವಾಯಿದೆಯಲ್ಲಿ 10 ಸಾಕ್ಷಿ ವಿಚಾರಣೆ ನಡೆಸಿ ತೀರ್ಪು ಪ್ರಕಟಿಸಿದ ನ್ಯಾಯಾಧೀಶರು

0

ಬೆಳ್ತಂಗಡಿ: ಗಾಂಜಾ ಪ್ರಕರಣದ ಮೂವರು ಆರೋಪಿಗಳಿಗೆ ಬೆಳ್ತಂಗಡಿ ನ್ಯಾಯಾಲಯ ಶಿಕ್ಷೆ ವಿಧಿಸಿ ಆದೇಶ ನೀಡಿದೆ.

ಘಟನೆಯ ವಿವರ: 2023ರ ಸೆಪ್ಟೆಂಬರ್ 2ರಂದು ಬೆಳಗ್ಗೆ 10 ಗಂಟೆ ವೇಳೆಗೆ ಉಪ್ಪಿನಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯ ಇಳಂತಿಲ ಗ್ರಾಮದ ರಿಫಾಯಿನಗರದಲ್ಲಿ ಗಾಂಜಾ ಸೇವನೆ ಮಾಡಿ ಸಾರ್ವಜನಿಕವಾಗಿ ಅನುಚಿತವಾಗಿ ವರ್ತಿಸುತ್ತಿದ್ದ ಬಂಟ್ವಾಳ ತಾಲೂಕಿನ ಪೆರ್ನೆಯ ಸಲೀಂ ಹುಸೇನ್ ಮತ್ತು ಪೆರಾಜೆಯ ಶಹ್ಯಾಜ್ ಅಹಮ್ಮದ್ ಎಂಬವರನ್ನು ಎಸ್‌ಐ ಓಮನ ಎನ್.ಕೆ. ಮತ್ತು ಸಿಬಂದಿಗಳು ವಶಕ್ಕೆ ಪಡೆದು ಮತ್ತೂರು ಸರಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ ನಡೆಸಿದ್ದರು.

ಈ ವೇಳೆ ಗಾಂಜಾ ಸೇವಿಸಿರುವುದು ದೃಢಪಟ್ಟಿದ್ದ ಹಿನ್ನೆಲೆಯಲ್ಲಿ ಸಲೀಂ ಹುಸೇನ್ ಮತ್ತು ಶಹ್ಯಾಜ್ ಅಹಮ್ಮದ್ ಹಾಗೂ ಅವರಿಗೆ ಗಾಂಜಾ ಸರಬರಾಜು ಮಾಡಿದ ಮಹಮ್ಮದ್ ಶಾಫಿ ಅಲಿಯಾಸ್ ಇಳಂತಿಲ ಶಾಫಿ ಯಾನೆ ಅಂಬೋಟು ಶಾಫಿ ವಿರುದ್ಧ ಎನ್‌ಡಿಪಿಯಸ್ ಕಾಯ್ದೆಯಡಿ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿತ್ತು. ನಂತರ ತನಿಖೆ ಪೂರ್ಣಗೊಳಿಸಿದ ಎಸ್.ಐ. ರಾಜೇಶ್ ಕೆ.ವಿ. ಅವರು ಆಪಾದಿತ ಮೂವರ ವಿರುದ್ಧ ಬೆಳ್ತಂಗಡಿಯ ಪ್ರಧಾನ ಹಿರಿಯ ಸಿವಿಲ್ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.

ಕೇವಲ ಎರಡು ವಾಯಿದೆಯಲ್ಲಿ 10 ಸಾಕ್ಷಿಗಳನ್ನು ವಿಚಾರಣೆ ನಡೆಸಿದ ನ್ಯಾಯಾಧೀಶ ಮನು ಬಿ.ಕೆ. ಅವರು ಇದೀಗ ತೀರ್ಪು ಪ್ರಕಟಿಸಿದ್ದು ಒಂದನೇ ಆರೋಪಿ ಸಲೀಂ ಹುಸೇನ್‌ ಮತ್ತು 2ನೇ ಆರೋಪಿ ಶಹ್ಯಾಜ್ ಅಹಮ್ಮದ್‌ ತಲಾ ಆರು ತಿಂಗಳು ಜೈಲು ಶಿಕ್ಷೆ. 10 ಸಾವಿರ ರೂ ದಂಡ. ದಂಡ ಪಾವತಿಸಲು ತಪ್ಪಿದಲ್ಲಿ 3 ತಿಂಗಳು ಹೆಚ್ಚುವರಿ ಶಿಕ್ಷೆ. 3ನೇ ಆರೋಪಿ ಮಹಮ್ಮದ್ ಶಾಫಿಗೆ ಒಂದು ವರ್ಷ ಕಠಿಣ ಶಿಕ್ಷೆ. 10ಸಾವಿರ ರೂ ದಂಡ ವಿಧಿಸಿದ್ದಾರೆ. ದಂಡ ತೆರಲು ತಪ್ಪಿದಲ್ಲಿ 3 ತಿಂಗಳು ಹೆಚ್ಚುವರಿ ಶಿಕ್ಷೆ ಅನುಭವಿಸುವಂತೆಯೂ ಆದೇಶದಲ್ಲಿ ನ್ಯಾಯಾಧೀಶರು ತಿಳಿಸಿದ್ದಾರೆ. ಸರಕಾರದ ಪರ ಸಹಾಯಕ ಸರಕಾರಿ ಅಭಿಯೋಜಕ ದಿವ್ಯರಾಜ್ ಹೆಗ್ಡೆ ಪುತ್ತೂರು ವಾದ ಮಂಡಿಸಿದ್ದು ಗಂಭೀರ ಪ್ರಕರಣವಾಗಿರುವ ಗಾಂಜಾ ಕೇಸ್‌ನಲ್ಲಿ ತಪ್ಪಿತಸ್ಥರಿಗೆ ಶಿಕ್ಷೆ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ.

LEAVE A REPLY

Please enter your comment!
Please enter your name here