ಬೆಳ್ತಂಗಡಿ: ನೆಲ್ಯಾಡಿಯಲ್ಲಿ ನಡೆದ ಸಂಯುಕ್ತ ಕ್ರಿಸ್ ಮಸ್ ಆಚರಣೆ ವಿವಿದ ಕ್ರೈಸ್ತ ಸಮುದಾಯಗಳ ಸ್ನೇಹ ಸಮ್ಮಿಲನಕ್ಕೆ ವೇದಿಕೆಯಾಯಿತು. ಕೊಕ್ಕಡ, ನೆಲ್ಯಾಡಿ ಪರಿಸರಗಳ ವಿವಿದ ಕ್ರೈಸ್ತ ಸಮುದಾಯಗಳ ಸುಮಾರು 26 ಚರ್ಚ್ ಮತ್ತು ಸಂಸ್ಥೆಗಳ ಸ್ನೇಹ ಮಿಲನದ ವೇದಿಕೆಯಾಯಿತು. ಆಕರ್ಷಕ ಶೋಭಾಯಾತ್ರೆಯೊಂದಿಗೆ ನೆಲ್ಯಾಡಿ ಬಸ್ ನಿಲ್ದಾಣದಿಂದ ಆರಂಭವಾದ ವರ್ಣ ರಂಜಿತ ರ್‍ಯಾಲಿ ನೆಲ್ಯಾಡಿ ಗಾಂಧಿ ಮೈದಾನದಲ್ಲಿ ಸಂಪನ್ನ ಗೊಂಡಿತು.
ಪ್ರಭು ಯೇಸು ಕ್ರಿಸ್ತರ ಬದುಕಿನ ವಿವಿದ ಘಟನೆಗಳನ್ನು ಬಿಂಬಿಸುವ ಸ್ತಬ್ದ ಚಿತ್ರಗಳು, ವರ್ಣ ರಂಜಿತ ಪೋಷಾಕುಗಳು ಸಾಂಟಾ ಕ್ಲೋಸ್ ಚಿತ್ರಗಳು ನೋಡುವರ ಕಣ್ ಸೆಳೆಯುವ ದ್ರಶ್ಯಗಳಾಗಿತ್ತು. ಸಭಾ ಕಾರ್ಯಕ್ರಮದಲ್ಲಿ 2024-25ನೇ ಸಾಲಿನಲ್ಲಿ ಸಂಯುಕ್ತ ಕ್ರಿಸ್ ಮಸ್ ಆಚರಣಾ ಸಮಿತಿಯ ಅಧ್ಯಕ್ಷ ನೆಲ್ಯಾಡಿ ಸಂತ ಅಲ್ಫೋನ್ಸ ಚರ್ಚ್ ನ ವಂದನಿಯ ಫಾ. ಷಾಜಿ ಮಾತ್ಯು ಅಧ್ಯಕ್ಷತೆ ವಹಿಸಿದ್ದರು. ದಿಕ್ಸೂಚಿ ಭಾಷಣವನ್ನು ಮಂಗಳೂರಿನಲ್ಲಿ ಪರಿಗಣಿತ ಅಲೋಷಿಯಸ್ ವಿಶ್ವ ವಿದ್ಯಾಲಯದ ಕುಲಪತಿ ವಂದನಿಯ ಡಾಕ್ಟರ್ ಪ್ರವೀಣ್ ವಿಜಯ್ ಮಾರ್ಟಿಸ್ ನೀಡಿದರು. ಆಶೀರ್ವಚನವನ್ನು ಕಾಲಿಕಟ್ ಧರ್ಮ ಪ್ರಾಂತ್ಯದ ಪರಮ ಪೂಜ್ಯ ಐರೇನಿಯೋಸ್ ತಿರುಮೇನಿ ನೀಡಿದರು.
ಕಾರ್ಯಕ್ರಮದಲ್ಲಿ ಸಮಾಜದ ವಿವಿದ ಸ್ಥರಗಳಲ್ಲಿ ವಿಶೇಷ ಸಾಧನೆ ಮಾಡಿದ 6 ಮಂದಿಯನ್ನು ಸನ್ಮಾನಿಸಲಾಯಿತು. ನಿವ್ರತ್ತ ಪೊಲೀಸ್ ಅಧಿಕಾರಿ ಈಪನ್ ವರ್ಗೀಸ್, ಸಿ. ಆರ್. ಪಿ. ಎಫ್. ಕಂಮಾಂಡೆಂಟ್ ಅನ್ನಮ್ಮ ಯೇಸು ದಾಸ್, ಶೈಕ್ಷಣಿಕ ವಿಭಾಗದಲ್ಲಿ ಜೋನ್ ಜೆಕಬ್, ವೈದಿಕಿಯ ಕ್ಷೇತ್ರದಲ್ಲಿ ಆಗಸ್ಟಿನ್ ಕೆ. ಎಂ., ಭೂಸೇನೆಯಿಂದ ಎನ್. ಎ. ಮಾತ್ಯು, ಸಾಂಟಾ ಕ್ಲೋಸ್ ಪಾತ್ರದಾರಿ ವಿನ್ಸೆಂಟ್ ಕೊಕ್ಕಡ ಇವರನ್ನು ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಕನ್ವಿನರ್ ವಂದನಿಯ ಫಾ. ವರ್ಗಿಸ್ ಕೈಪನಡ್ಕ, ಕೋಶಾಧಿಕಾರಿ ಜಿನೋಯ್, ಕಾರ್ಯದರ್ಶಿ ಮನೋಜ್ ಬಿಲ್ಡ್ ಟೆಕ್, ಜೊತೆ ಕಾರ್ಯದರ್ಶಿ ಕೆ. ಕೆ. ಸೇಬಾಷ್ಟಿಯನ್, ಉಪಾಧ್ಯಕ್ಷ ವಂದನಿಯ ಶಿಭು ಜೋನ್ ಉಪಸ್ಥಿತರಿದ್ದರು.