ಬೆಳ್ತಂಗಡಿ: ಜ. 02 ರಂದು ದಕ್ಷಿಣಕನ್ನಡ ಜಿಲ್ಲಾ ಪಂಚಾಯತ್ ನೇತ್ರಾವತಿ ಸಭಾಂಗಣದಲ್ಲಿ ಸಿ. ನಾರಾಯಣ ಸ್ವಾಮಿ ಅಧ್ಯಕ್ಷರು, 5 ನೇ ರಾಜ್ಯ ಹಣಕಾಸು ಆಯೋಗ ಇವರ ಅಧ್ಯಕ್ಷತೆಯಲ್ಲಿ ಪಂಚಾಯತ್ ರಾಜ್ ಸಂಸ್ಥೆಗಳ ಸಾಂಸ್ಥಿಕ ರಚನೆ, ಕಾರ್ಯಚಟುವಟಿಕೆಗಳು ಆರ್ಥಿಕ ಸ್ಥಿತಿ ಸಂಪನ್ಮೂಲಗಳ ಕ್ರೋಡಿಕರಣ, ಹಂಚಿಕೆ ಮತ್ತು ಮೂಲಸೌಕರ್ಯ ಹಾಗೂ ಸೇವೆಗಳ ಒದಗಿಸುವಿಕೆಯಲ್ಲಿ ತಾಂತ್ರಿಕ ಸಾಮರ್ಥ್ಯ ಇತ್ಯಾದಿಗಳನ್ನು ಅಧ್ಯಯನ ಮಾಡುವ ಸಲುವಾಗಿ ನಡೆದ ಅವಲೋಕನ ಸಭೆಯನ್ನು ಕರೆಯಲಾಗಿತ್ತು.
ಈ ಸಭೆಯಲ್ಲಿ ಜಿಲ್ಲಾಧಿಕಾರಿ, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ, ವಿವಿಧ ಇಲಾಖೆಗಳ ಅಧಿಕಾರಿಗಳು, ವಿವಿದ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷರು ಹಾಗೂ ಅಧಿಕಾರಿಗಳು, ದಕ್ಷಿಣಕನ್ನಡ ಜಿಲ್ಲೆಯ ಆಯ್ಕೆ ಗ್ರಾಮ ಪಂಚಾಯತಿನ ಅಧ್ಯಕ್ಷರು ಹಾಗೂ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳನ್ನು ಆಹ್ವಾನಿಸಲಾಗಿತ್ತು. ಈ ಸಭೆಯಲ್ಲಿ ಬೆಳ್ತಂಗಡಿ ತಾಲೂಕಿನಿಂದ ಕಾರ್ಯ ನಿರ್ವಾಹಣಾಧಿಕಾರಿ ಭವಾನಿಶಂಕರ್, ಸಹಾಯಕ ಲೆಕ್ಕಾಧಿಕಾರಿ ಶ್ರೀ ಗಣೇಶ್ ಪೂಜಾರಿ, ಕಾಶಿಪಟ್ಟ ಗ್ರಾಮಪಂಚಾಯತಿನ ಅಧ್ಯಕ್ಷ ಸತೀಶ್ ಕೆ. ಕಾಶೀಪಟ್ಣ ಹಾಗೂ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಆಶಾಲತಾ ಎಚ್. ಭಾಗವಹಿಸಿದ್ದರು.
ಸತೀಶ್ ಕೆ. ಕಾಶಿಪಟ್ಣ ಅಧ್ಯಕ್ಷರು ಗ್ರಾಮ ಪಂಚಾಯತ್ ಇವರು ಗ್ರಾಮ ಪಂಚಾಯತಿನ ಕುಡಿಯುವ ನೀರು ಹಾಗೂ ಬೀದಿ ದೀಪಗಳಿಗೆ ಕನಿಷ್ಠ ವಿದ್ಯುತ್ ದರವನ್ನು ನಿಗದಿಪಡಿಸಬೇಕೆಂದು ಸಲಹೆ ನೀಡಿದರು. ಶಾಸನಬದ್ಧ ಅನುದಾನವು ಸಿಬ್ಬಂದಿ ವೇತನ ಹಾಗೂ ವಿದ್ಯುತ್ ಬಿಲ್ ಗೆ ಸಮವಾಗುವ ಕಾರಣ ಅಭಿವೃದ್ಧಿ ಅನುದಾನವನ್ನು ಹೆಚ್ಚಿಸಬೇಕಾಗಿ ಕೋರಿದರು.
ನರೇಗಾ ಯೋಜನೆಯಡಿ ತಡೆಗೋಡೆ ಕಾಮಗಾರಿಗಳನ್ನು ಬೇಡಿಕೆ ಆದರಿಸಿ ಅನುಷ್ಠಾನ ಮಾಡಲು ಅವಕಾಶ ನೀಡಬೇಕೆಂದು ಕೋರಿದರು. ವಿಪತ್ತು ನಿರ್ವಹಣೆ ಅನುದಾನವನ್ನು ನೇರವಾಗಿ ಗ್ರಾಮಪಂಚಾಯತ್ ಕ್ಕೆ ಬಿಡುಗಡೆ ಮಾಡುವಂತೆ ಸಲಹೆ ನೀಡಿದರು. ಈ ಸಲಹೆಗಳನ್ನು ಆಯೋಗದ ಸದಸ್ಯರು ಸಕಾರಾತ್ಮಕವಾಗಿ ಪರಿಶೀಲಿಸುವ ಭರವಸೆ ನೀಡಿದರು.