ಬೆಳ್ತಂಗಡಿ: ಕುಕ್ಕಳ ಗ್ರಾಮದ ಕರ್ನಾಟಕ ಪಬ್ಲಿಕ್ ಸ್ಕೂಲ್ ಪುಂಜಾಲಕಟ್ಟೆಯ ಪ್ರೌಢ ಶಾಲಾ ವಿಭಾಗದ ಹಾಗೂ ಪ್ರಾಥಮಿಕ ಮತ್ತು ಕಾಲೇಜಿನ ನೇತೃತ್ವದಲ್ಲಿ ಊರವರ ಹಾಗೂ ದಾನಿಗಳ ಸಹಕಾರದೊಂದಿಗೆ “ಕೆ.ಪಿ.ಎಸ್. ಶೈಕ್ಷಣಿಕ ಹಬ್ಬ -2024” ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಈ ಕಾರ್ಯಕ್ರಮವು ನ. 4 ರಿಂದ 09ರವರೆಗೆ ನಡೆಯಲಿದೆ. ಈ ಕಾರ್ಯಕ್ರಮಗಳಲ್ಲಿ ಸುಮಾರು 5,500ಕ್ಕಿಂತಲೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ ಎಂದು ಶಾಸಕ ಹರೀಶ್ ಪೂಂಜಾ ನಿರೀಕ್ಷಣಾ ಮಂದಿರದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ನ.04 ಮತ್ತು 05ರಂದು ಭಾರತ್ ಸೌಟ್ಸ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆ ಮಡಂತ್ಯಾರಿನ ವತಿಯಿಂದ “ರೋವರ್ಸ್-ರೇಂಜರ್ಸ್ ಸಮಾಗಮ, ಸ್ಕೌಟ್ಸ್-ಗೈಡ್ಸ್ ರಾಲಿ, ಕಬ್ಸ್-ಬುಲ್‌ಬುಲ್ ಉತ್ಸವ ನಡೆಯಲಿದೆ. ಈ ಎರಡು ದಿನಗಳ ಕಾರ್ಯಕ್ರಮದಲ್ಲಿ ಕಬ್ಸ್ & ಬುಲ್‌ಬುಲ್ಸ್ ಗಳಿಗೆ ಕರಕುಶಲ ವಸ್ತುಗಳ ತಯಾರಿ, ಧಾನ್ಯದಿಂದ ಆಕೃತಿ ರಚನೆ, ಪೇಪರ್ ಕ್ರಾಫ್ಟ್, ಪ್ರಾಣಿ- ಪಕ್ಷಿಗಳ ಚಿತ್ರ ರಚನೆ, ಅಭಿನಯ ಗೀತೆ, ಕಥೆ ಹೇಳುವುದು ಅದೇ ರೀತಿ ಸೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳಿಗೆ ಧ್ವಜಸ್ತಂಭ ರಚನೆ, ಸುಧಾರಿತ ಗುಡಾರ ರಚನೆ, ಗ್ಯಾಜೆಟ್ ರಚನೆ, ಬೆಂಕಿ ಬಳಸದೆ ಅಡುಗೆ ತಯಾರಿ, ಬುಟ್ಟಿ/ಚಾಪೆ ತಯಾರಿ, ಗ್ರೀಟಿಂಗ್ ಕಾರ್ಡ್ ತಯಾರಿ, 2025 ಕ್ಯಾಲೆಂಡರ್ ತಯಾರಿ, ದೇಶಭಕ್ತಿ/ಭಾವೈಕ್ಯತೆ ಗೀತೆ, ಹೊರ ಸಂಚಾರ, ಶಿಬಿರಾಗ್ನಿ, ಸಾಹಸಮಯ ಚಟುವಟಿಕೆಗಳು, ಬ್ಲೈಂಡ್ ಗೇಮ್, ಪಥಸಂಚಲನ, ನಗರ ಮೆರವಣಿಗೆ ಇತ್ಯಾದಿ ವಿವಿಧ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ರಾಲಿ ನಿರ್ದೇಶಕರಾದ ಧರಣೇಂದ್ರ ಕೆ. ಹೇಳಿದರು. ನ.06ರಂದು ಬೆಳ್ತಂಗಡಿ ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಕಾರ್ಯಕ್ರಮ ನಡೆಯಲಿದ್ದು, ಈ ದಿನ ಪ್ರಾಥಮಿಕ, ಮಾಧ್ಯಮಿಕ ಹಾಗೂ ಪ್ರೌಢ ವಿಭಾಗದಲ್ಲಿ ಸೇರಿ 48 ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದೆ. ಈಗಾಗಲೇ ಕ್ಲಸ್ಟರ್ ಮಟ್ಟದಲ್ಲಿ ಈ ಸ್ಪರ್ಧೆಗಳು ನಡೆದು ಅಲ್ಲಿ ಪ್ರಥಮ ಸ್ಥಾನ ಪಡೆದ ಪ್ರಾಥಮಿಕ ಮತ್ತು ಮಾಧ್ಯಮಿಕ ವಿಭಾಗದ ವಿದ್ಯಾರ್ಥಿಗಳು ಹಾಗೂ ಪ್ರೌಢಶಾಲಾ ವಿಭಾಗದಲ್ಲಿ ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆದವರು ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ. ಇಲ್ಲಿ ಕನ್ನಡ, ಇಂಗ್ಲೀಷ್, ಹಿಂದಿ ಕಂಠಪಾಠ ಸ್ಪರ್ಧೆ, ಧಾರ್ಮಿಕ ಪಠಣ ಸಂಸ್ಕೃತ ಮತ್ತು ಅರೇಬಿಕ್, ದೇಶಭಕ್ತಿ ಗೀತೆ, ಛದ್ಮವೇಷ, ಕಥೆ ಹೇಳುವುದು, ಚಿತ್ರಕಲೆ, ಅಭಿನಯಗೀತೆ, ಪ್ಲೇ ಮಾಡಲಿಂಗ್, ಭಕ್ತಿಗೀತೆ, ಆಶುಭಾಷಣ, ಪ್ರಬಂಧ ರಚನೆ, ಕವನ/ಪದ್ಯವಾಚನ, ಮಿಮಿಕ್ರಿ ಹಾಗೂ ಪ್ರೌಢ ವಿಭಾಗದಲ್ಲಿ ಕನ್ನಡ, ಇಂಗ್ಲೀಷ್, ಹಿಂದಿ, ತುಳು, ಸಂಸ್ಕೃತ ಭಾಷಣ, ಧಾರ್ಮಿಕ ಪಠಣ ಸಂಸ್ಕೃತ ಮತ್ತು ಅರೇಬಿಕ್, ಜನಪದಗೀತೆ, ಭಾವಗೀತೆ, ಭರತನಾಟ್ಯ, ಪ್ರಬಂಧ ರಚನೆ, ಚಿತ್ರಕಲೆ, ಮಿಮಿಕ್ರಿ, ಚರ್ಚಾಸ್ಪರ್ಧೆ, ರಂಗೋಲಿ, ಗಝಲ್, ಕವನ/ಪದ್ಯವಾಚನ, ಆಶುಭಾಷಣ, ಜಾನಪದ ನೃತ್ಯ, ರಸಪ್ರಶ್ನೆ, ಕವ್ವಾಲಿ ಹೀಗೆ ಹಲವಾರು ರೀತಿಯ ಸ್ಪರ್ಧೆಗಳು ನಡೆಯಲಿದೆ.
ನ.7ರಂದು ಪ್ರೌಢ ಶಾಲಾ ವಿಭಾಗದ ವಿದ್ಯಾರ್ಥಿಗಳ ಪ್ರತಿಭಾ ಪ್ರದರ್ಶನ ಕಾರ್ಯಕ್ರಮ ಸಂಪನ್ನತೆಗೊಳ್ಳಲಿದೆ.
ನ.8ರಂದು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆ ಶಾಂತಿವನ ಟ್ರಸ್ಟ್ ವತಿಯಿಂದ ಬೆಳ್ತಂಗಡಿ ತಾಲೂಕು ಮಟ್ಟದ ಭಾಷಣ, ಪ್ರಬಂಧ, ಚಿತ್ರಕಲೆ ಹಾಗೂ ಬದುಕುಗೆ ಬೆಳಕು ಎನ್ನುವ ಪುಸ್ತಕ ಆಧಾರಿತ ಕಂಠಪಾಠ ಸ್ಪರ್ಧೆ ನಡೆಯಲಿದೆ.
ನ.9ರಂದು ಪ್ರಾಥಮಿಕ ಶಾಲಾ ವಿಭಾಗದ ವಿದ್ಯಾರ್ಥಿಗಳ ಪ್ರತಿಭಾ ಪ್ರದರ್ಶನ ಕಾರ್ಯಕ್ರಮ ಸಂಪನ್ನತೆಗೊಳ್ಳಲಿದೆ. ಇದೇ ಸಂದರ್ಭದಲ್ಲಿ 15 ಲಕ್ಷದ ಕೊಠಡಿಯನ್ನು ಶಾಸಕರು ಲೋಕಾರ್ಪಣೆ ಮಾಡಲಿದ್ದಾರೆ ಮತ್ತು ಪ್ರೌಡ ಶಾಲೆಯ 50 ಡೆಸ್ಕ್,10 ಕಂಪ್ಯೂಟರ್, ಪ್ರಾಥಮಿಕ ಶಾಲೆಯ 70 ಡೆಸ್ಕ್ ಇದೇ ಸಂದರ್ಭದಲ್ಲಿ ಶಾಸಕರು ಲೋಕಾರ್ಪಣೆ ಮಾಡಲಿದ್ದಾರೆ.
ಇನ್ನೂ ಈ ಕಾರ್ಯಕ್ರಮಗಳಲ್ಲಿ ಮಾನ್ಯ ಸಂಸದರು, ಜಿಲ್ಲೆಯ ಶಾಸಕ ಬಂಧುಗಳು, ಬೆಳ್ತಂಗಡಿ ತಾಲೂಕಿನ ಜನಪ್ರತಿನಿಧಿ ಮಿತ್ರರು, ದಾನಿಗಳು, ಶಿಕ್ಷಣ ಪ್ರೇಮಿಗಳು, ವಿದ್ಯಾರ್ಥಿಗಳು, ಪೋಷಕರು, ಊರ ಹಿರಿಯ-ಕಿರಿಯ ಬಂಧುಗಳು ಭಾಗವಹಿಸಲಿದ್ದಾರೆ ಎಂದು ಬೆಳ್ತಂಗಡಿ ತಾಲೂಕು ಪ್ರತಿಭಾ ಕಾರಂಜಿ ನಿರ್ವಹಣಾ ಸಮಿತಿಯ ಅಧ್ಯಕ್ಷರು ಹಾಗೂ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಮಾನ್ಯ ಶಾಸಕರು ಆಗಿರುವ ಹರೀಶ್ ಪೂಂಜರವರು ಹೇಳಿದರು. ಈ ಸಂದರ್ಭದಲ್ಲಿ ಸಮಿತಿಯ ಕಾರ್ಯಾಧ್ಯಕ್ಷ ದಿವಾಕರ ಶೆಟ್ಟಿ ಕಂಗಿತ್ತಿಲು, ಪ್ರಧಾನ ಕಾರ್ಯದರ್ಶಿಯೂ ಸಂಸ್ಥೆಯ ಉಪಪ್ರಾಂಶುಪಾಲರು ಆದ ಉದಯಕುಮಾರ್ ಬಿ., ಕೋಶಾಧಿಕಾರಿ ಮೋಹನ್ ಸಾಲಿಯಾನ್, ಪ್ರಭಾರ ಮುಖ್ಯೋಪಾಧ್ಯಾಯ ಕರುಣಾಕರ್, ಬೆಳ್ತಂಗಡಿ ಪ್ರತಿಭಾ ಕಾರಂಜಿ ನೋಡಲ್ ಅಧಿಕಾರಿ ಚೇತನಾಕ್ಷಿ ಎಂ.ಮುಂತಾದವರು ಉಪಸ್ಥಿತರಿದ್ದರು.
ಬೆಳ್ತಂಗಡಿ: ನ.4 ರಿಂದ 9 ವರೆಗೆ ಕೆ.ಪಿ.ಎಸ್. ಶೈಕ್ಷಣಿಕ ಹಬ್ಬ 5ಸಾವಿರದಿಂದ 6 ಸಾವಿರ ವಿಧ್ಯಾರ್ಥಿಗಳು ಭಾಗಿ ಶಾಸಕ ಹರೀಶ್ ಪೂಂಜಾ ಸುದ್ದಿಗೋಷ್ಠಿ
p>