ಕೌಕ್ರಾಡಿ: ಪ್ಲಾಟಿಂಗ್ ಪ್ರಕ್ರಿಯೆ ವಿಳಂಬ: ಶಾಸಕಿ ಭಾಗೀರಥಿ ಮುರುಳ್ಯರಿಂದ ಖಡಕ್ ಎಚ್ಚರ!ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಫಲಾನುಭವಿಗಳ ಆಕ್ರೋಶ-ಸಾರ್ವಜನಿಕರ ಕೆಲಸ ವಿಳಂಬ ಮಾಡಿದವರಿಗೆ ಶಾಸಕರ ಎಚ್ಚರಿಕೆ

0

ಕಡಬ: ತಾಲೂಕಿನ ಕೌಕ್ರಾಡಿ ಗ್ರಾಮದ ಸರ್ವೇ ನಂ. 123/1 ರಲ್ಲಿ 3634.70 ಎಕರೆ ವಿಸ್ತೀರ್ಣದ ಕೃಷಿ ಭೂಮಿಯ ಪ್ಲಾಟಿಂಗ್ ಪ್ರಕ್ರಿಯೆ ವರ್ಷಗಳಿಂದ ಸ್ಥಗಿತಗೊಂಡಿರುವ ಹಿನ್ನೆಲೆಯಲ್ಲಿ, ಶನಿವಾರ ಗ್ರಾಮದ ಕಾವು ದೇವಾಲಯದ ಸಭಾಂಗಣದಲ್ಲಿ ಫಲಾನುಭವಿಗಳ ಸಭೆ ನಡೆಯಿತು.

ಈ ಸಭೆಯಲ್ಲಿ ಸುಮಾರು 35ಕ್ಕೂ ಹೆಚ್ಚು ಫಲಾನುಭವಿಗಳು ಭಾಗವಹಿಸಿ ಇಲಾಖೆಯ ನಿರ್ಲಕ್ಷ್ಯ ಕುರಿತು ಗಂಭೀರ ಅಸಮಾಧಾನ ವ್ಯಕ್ತಪಡಿಸಿದರು. ಈ ಭೂಮಿಯನ್ನು 245 ಮಂದಿಗೆ ಕಂದಾಯ ಇಲಾಖೆಯಿಂದ ಅಧಿಕೃತವಾಗಿ ಹಂಚಿಕೆ ಮಾಡಲಾಗಿದ್ದು, ಎಲ್ಲರೂ ಅಲ್ಲಿ ಕೃಷಿ ಮಾಡುತ್ತಿದ್ದಾರೆ. ಆದರೆ, ಸರ್ಕಾರದ ನಿರ್ದೇಶನದಂತೆ ಅರಣ್ಯ ಭಾಗವನ್ನು ಪ್ರತ್ಯೇಕಿಸಿ ಉಳಿದ ಭಾಗಕ್ಕೆ ಪಹಣಿ ಪತ್ರ (RTC) ಸಿದ್ಧಪಡಿಸುವ ಪ್ರಕ್ರಿಯೆ ಹಲವು ವರ್ಷಗಳಿಂದ ಪೂರ್ಣಗೊಂಡಿಲ್ಲ.

ಇದರ ಪರಿಣಾಮವಾಗಿ, ರೈತರು ತಮ್ಮ ಭೂಮಿಗೆ ಸಂಬಂಧಿಸಿದ ದಾಖಲೆಗಳಲ್ಲಿ ತೊಂದರೆ ಅನುಭವಿಸುತ್ತಿದ್ದಾರೆ. ಈ ಸಮಸ್ಯೆಗೆ ಪರಿಹಾರಕ್ಕಾಗಿ ಮಂಗಳವಾರದಂದು ಕಡಬದಲ್ಲಿ ಸುಮಾರು 50ಕ್ಕೂ ಹೆಚ್ಚು ಫಲಾನುಭವಿಗಳು ಸೇರಿ ಶಾಸಕಿ ಭಾಗೀರಥಿ ಮುರುಳ್ಯ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದರು.

ಇಲಾಖೆ ಮಟ್ಟದ ನಿರ್ಲಕ್ಷ್ಯಕ್ಕೆ ಆಕ್ರೋಶ ಶಾಸಕಿಯ ಮುಂದೆ ಫಲಾನುಭವಿಗಳು ಅರಣ್ಯ ಮತ್ತು ಕಂದಾಯ ಇಲಾಖೆಯ ನಡುವೆ ಕಡತಗಳ ವಿಲೆವಾರಿ ನಡೆಯುತ್ತಿದ್ದು, ನಕ್ಷೆ ತಯಾರಿಸಿ ವರದಿ ಕಳುಹಿಸಿದರೂ ಕ್ರಮ ಬಾಕಿಯಾಗಿದೆ. ಹೀಗಾಗಿ ರೈತರಿಗೆ ನ್ಯಾಯ ದೊರೆಯುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಶಿವಮೊಗ್ಗ ಅರಣ್ಯ ಸಂರಕ್ಷಣಾಧಿಕಾರಿಯ ತಾಂತ್ರಿಕ ಸಹಾಯಕರು, ಅರಣ್ಯಾಧಿಕಾರಿಗಳು ಹಾಗೂ ಕಡಬ ಕಂದಾಯ ಇಲಾಖೆಯ ಅಧಿಕಾರಿಗಳ ತಂಡ ಕಳೆದ ಫೆ. 20 ಮತ್ತು 25ರಂದು ಜಂಟಿ ಸರ್ವೆ ನಡೆಸಿತ್ತು. ನಂತರ ನಕ್ಷೆ ತಯಾರಿಸಿ ಮಂಗಳೂರು ಉಪ ಅರಣ್ಯ ಸಂರಕ್ಷಣಾಧಿಕಾರಿ ಕಚೇರಿಗೆ ಸಲ್ಲಿಸಲಾಗಿತ್ತು.

ಅಲ್ಲಿಂದ ಮಂಗಳೂರು ಜಿಲ್ಲಾಧಿಕಾರಿ ಕಚೇರಿಗೆ ವರದಿ ಹಾಗೂ ನಕ್ಷೆಯ ಪ್ರತಿಯನ್ನು ಕಳುಹಿಸಿ ಅರಣ್ಯ ಭಾಗವನ್ನು ಪ್ರತ್ಯೇಕಿಸಿ ಉಳಿದ ಭಾಗಕ್ಕೆ ಆರ್‌ಟಿಸಿ ತಯಾರಿಸಿ ಎಂದು ಸೂಚನೆ ನೀಡಲಾಗಿತ್ತು.ಮುಂದಿನ ಕ್ರಮಕ್ಕಾಗಿ ಪುತ್ತೂರಿನ ಸಹಾಯಕ ಆಯುಕ್ತರಿಗೆ ಆದೇಶ ನೀಡಲಾಗಿದ್ದು, ನಂತರ ಕಡಬ ತಹಶೀಲ್ದಾರರಿಗೆ ಪರಿಶೀಲನೆಗಾಗಿ ದಾಖಲೆಗಳನ್ನು ಕಳಿಸಲಾಯಿತು.

ಆದರೆ, ಆದೇಶ ಪ್ರತಿಯು ಅ.28ರವರೆಗೆ ಟಪಾಲ್ ವಿಭಾಗದಲ್ಲೇ ಬಾಕಿ ಉಳಿದಿತ್ತು. ಅಧಿಕಾರಿಗಳ ಈ ನಿರ್ಲಕ್ಷ್ಯವನ್ನು ಶಾಸಕಿಯ ಸಮ್ಮುಖದಲ್ಲೇ ಫಲಾನುಭವಿಗಳು ಅಧಿಕಾರಿಯನ್ನು ಪ್ರಶ್ನಿಸಿದರು.ಶಾಸಕಿಯ ಖಡಕ್ ಎಚ್ಚರಶಾಸಕಿ ಭಾಗೀರಥಿ ಮುರುಳ್ಯ, ಸಾರ್ವಜನಿಕರ ಹಿತದ ಕೆಲಸವನ್ನು ವಿಳಂಬ ಮಾಡುವ ಅಧಿಕಾರಿಗಳನ್ನು ಅವರ ಸ್ಥಾನದಿಂದಲೇ ತೆಗೆದುಬಿಡಲಾಗುವುದು, ಜನರಿಗೆ ನ್ಯಾಯ ದೊರೆಯುವವರೆಗೆ ನಾನು ಬಿಟ್ಟುಕೊಡುವುದಿಲ್ಲ, ಉಪ ತಹಶೀಲ್ದಾರರಿಗೆ ಕಡತಗಳನ್ನು ಸಿದ್ಧಪಡಿಸಿ ಸಹಾಯಕ ಆಯುಕ್ತರಿಂದ ಅನುಮತಿ ಪಡೆದು ಅರಣ್ಯ ಮತ್ತು ಕಂದಾಯ ಇಲಾಖೆಯ ನಡುವೆ ಇರುವ ಕಡತ ಚಲಾವಣೆ ಶೀಘ್ರ ಪೂರ್ಣಗೊಳಿಸಿ, ಫಲಾನುಭವಿಗಳಿಗೆ ಪಹಣಿ ಪತ್ರ ಸಿಗುವಂತೆ ಕ್ರಮಕೈಗೊಳ್ಳಿ.

ಯಾವುದೇ ರೀತಿಯ ಆಲಸ್ಯ ಸಹಿಸಲಾಗುವುದಿಲ್ಲ ಎಂದು ಅಧಿಕಾರಿಗಳಿಗೆ ಎಂದು ಖಡಕ್ ಎಚ್ಚರ ನೀಡಿದರು. ಉಪ ತಹಶೀಲ್ದಾರರಾದ ಸಾಹೀದ್ದುಲ್ಲ ಖಾನ್, ಗೋಪಾಲ, ಸರ್ವೆ ಇಲಾಖೆಯ ಅಧಿಕಾರಿ, ಕೌಕ್ರಾಡಿ ಗ್ರಾಮ ಪಂಚಾಯತಿ ಸದಸ್ಯರಾದ ಮಹೇಶ್, ಜನಾರ್ದನ, ಭವಾನಿ ಹಾಗೂ ಸ್ಥಳೀಯ ಮುಖಂಡರಾದ ತುಕ್ರಪ್ಪ ಶೆಟ್ಟಿ ನೂಜೆ, ಮಹೇಶ್, ನಾರಾಯಣ ಗೌಡ, ಗೋಪಾಲ ಗೌಡ ಸೇರಿದಂತೆ ಸುಮಾರು 50 ಫಲಾನುಭವಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here