ಬೆಳ್ತಂಗಡಿ: ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಷ್‌ವಾದಿ) ಸಿಪಿಐ(ಎಂ) ಬೆಳ್ತಂಗಡಿ ತಾಲೂಕು ಸಮಿತಿ ನೂತನ ಕಾರ್ಯದರ್ಶಿಯಾಗಿ ಬೆಳ್ತಂಗಡಿಯ ಹಿರಿಯ ನ್ಯಾಯವಾದಿ ಬಿ.ಎಂ.ಭಟ್ ಅವರು ಸರ್ವಾನುಮತದಿಂದ ಆಯ್ಕೆಯಾದರು.ಪಕ್ಷದ ತಾಲೂಕು ಸಮ್ಮೇಳನ ಬೆಳ್ತಂಗಡಿಯ ಅಂಬೇಡ್ಕರ್ ಭವನದಲ್ಲಿ ನಡೆದು ಇವರನ್ನು ಮುಂದಿನ 3 ವರ್ಷದ ಅವಧಿಗೆ ಕಾರ್ಯದರ್ಶಿಯನ್ನಾಗಿ ಆಯ್ಕೆ ಮಾಡಲಾಯಿತು.
ಇವರು 1990ರಿಂದ ಸಿಪಿಐ(ಎಂ) ಮೂಲಕ ರಾಜಕೀಯ ಪ್ರವೇಶಿಸಿ ಕಳೆದ 34 ವರ್ಷಗಳಿಂದ ಕಾರ್ಮಿಕರ, ರೈತರ, ಸಂಘಟನೆ ಮಾಡಿ ಅವರ ಪರ ಧ್ವನಿಯಾಗಿದ್ದವರು. ಬೀಡಿ ಕಾರ್ಮಿಕರ, ಅಂಗನವಾಡಿ, ಬಿಸಿಯೂಟ, ಆಶಾ, ಅಟೋ ಮೊದಲಾದ ಕಾರ್ಮಿಕರ ನಾಯಕಾರಾಗಿರುವ ಇವರು ಸಂವಿಧಾನ ರಕ್ಷಣೆಗಾಗಿ ಜನಜಾಗೃತಿ ಆಂದೋಲನ ನಡೆಸುತ್ತಿದ್ದಾರೆ. ತಾಲೂಕಿನ ಹೋರಾಟಗಾರ ಎಂದೇ ಮನೆ ಮಾತಾಗಿರುವ ಬಿ.ಎಂ.ಭಟ್ ಅವರು ಮೈಕ್ರೋಫೈನಾನ್ಸ್ ದೌರ್ಜನ್ಯ ವಿರುದ್ಧ ರಾಜ್ಯದಾದ್ಯಂತ ಹೋರಾಟ ನಡೆಸಿ ಬಡ ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯ ತಡೆಯಲು ಪ್ರಯತ್ನಿಸಿ ಮಹಿಳೆಯರು ಒಮ್ಮೆಗೆ ಉಸಿರಾಡುವಂತೆ ಮಾಡುವಲ್ಲಿ ಯಶಶ್ವಿಯಾಗಿದ್ದಾರೆ. ಸಂಗಾತಿ ಸ್ವ-ಸಹಾಯ ಗುಂಪುಗಳ ಮೂಲಕ ಯಾವುದೇ ಗೂಂಡಾಗಿರಿ ದೌರ್ಜನ್ಯ ನಡೆಸದೇ ಸ್ವಸಹಾಯ ಗುಂಪುಗಳ ನಡೆಸಲು ಸಾಧ್ಯ ಎಂದು ತೋರಿಸಿ ಕೊಟ್ಟ ಬಿ.ಎಂ.ಭಟ್ ಇಂದು ಪಕ್ಷದ ತಾಲೂಕು ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದಾರೆ.
ಇವರ ಜೊತೆ ತಾಲೂಕು ಸಮಿತಿ ಸದಸ್ಯರಾಗಿ ಪಾಂಗಳ ಲಕ್ಷ್ಮಣ ಗೌಡ, ಜಯರಾಮ ಮಯ್ಯ, ಶ್ಯಾಮರಾಜ್ ಪಟ್ರಮೆ, ಈಶ್ವರಿ ಶಂಕರ್, ನೆಬಿಸಾ, ಧನಂಜಯ ಗೌಡ, ಲೋಕೇಶ್ ಕುದ್ಯಾಡಿ, ಅಜಿ.ಎಂ.ಜೋಸೆಫ್ ವೇಣೂರು, ಜಯಶ್ರೀ ಕಳೆಂಜ, ಸುಕುಮಾರ್ ಎಂ.ಕೆ. ದಿಡುಪೆ ಅವರುಗಳು ಆಯ್ಕೆಯಾದರು. 2024 ನ.17ರಿಂದ 19ರ ತನಕ ನಡೆಯಲಿರುವ ಸಿಪಿಐಎಂ ಜಿಲ್ಲಾ ಸಮ್ಮೇಳನಕ್ಕೆ 30 ಜನ ಪ್ರತಿನಿಧಿಗಳನ್ನೂ ಸಮ್ಮೇಳನ ಸರ್ವಾನುತದಿಂದ ಆಯ್ಕೆ ಮಾಡಿತು.