ಅಕ್ರಮ ಗಣಿಗಾರಿಕೆಯಲ್ಲಿ ನನ್ನ ಪಾತ್ರವಿಲ್ಲ, ಪ್ರಮಾಣಕ್ಕೆ, ಮಂಪರು ಪರೀಕ್ಷೆಗೆ ಸಿದ್ಧ,‌ ಇದು ರಕ್ಷಿತ್ ಶಿವರಾಂ ಷಡ್ಯಂತ್ರ: ಶಶಿರಾಜ್ ಶೆಟ್ಟಿ ಸುದ್ದಿಗೋಷ್ಠಿ

0

ಗುರುವಾಯನಕೆರೆ: ಅಕ್ರಮ ಗಣಿಗಾರಿಕೆ ಕೇಸ್ ನಲ್ಲಿ ಬಂಧನಕ್ಕೊಳಗಾಗಿದ್ದ ಬಿಜೆಪಿ ಯುವಮೋರ್ಚಾ ಅಧ್ಯಕ್ಷ ಶಶಿರಾಜ್ ಶೆಟ್ಟಿಯವರು ತಮ್ಮ ಮೇಲಿನ ಪ್ರಕರಣದ ಬಗ್ಗೆ ಇಂದು ಗುರುವಾಯನಕೆರೆಯ ಖಾಸಗಿ ಹೊಟೇಲ್ ನಲ್ಲಿ ಸುದ್ದಿಗೋಷ್ಠಿ ನಡೆಸಿದರು. ಈ ವೇಳೆ ಮಾತನಾಡಿದ ಶಶಿರಾಜ್ ಶೆಟ್ಟಿ “ನನ್ನ ಮೇಲೆ ದಾಖಲಾಗಿರುವ ಅಕ್ರಮ ಗಣಿಗಾರಿಕೆ ವಿಚಾರದಲ್ಲಿ ನನಗೆ ಯಾವುದೇ ಸಂಬಂಧವಿಲ್ಲ. ಮೇ 18ರಂದು ಸಂಜೆ ನನಗೊಂದು ಕರೆ ಬಂದು ಮೇಲಂತಬೆಟ್ಟುವಿನ ಗಣಿಗಾರಿಕೆಗೆ ರೈಡ್ ಆಗಿದೆ, ಅದರಲ್ಲಿ ನೀವು ಇದ್ದೀರಿ ಅಂತ ಕರೆ ಬರುತ್ತದೆ. ಆ ಕ್ಷಣವೇ ನಾನು ತಹಶೀಲ್ದಾರ್ ಗೆ ಕರೆ ಮಾಡಿ, ನನಗೂ ಅದಕ್ಕೂ ಸಂಬಂಧವಿಲ್ಲ. ಒಂದು ತಿಂಗಳ ಮುಂಚೆ ನಾನು ನೋಡಿ ಬಂದಿದ್ದೆ. ಆದರೆ ಗಣಿಗಾರಿಕೆಯಲ್ಲಿ ನಾನು ತೊಡಗಿಕೊಂಡಿಲ್ಲ, ಯಾವುದಾದರೂ ವಿಚಾರಣೆ ಇದ್ದರೆ ಬರುತ್ತೇನೆ ಅಂತ ಹೇಳಿದೆ.

ಆ ನಂತರ ರಾತ್ರಿ ಪೊಲೀಸರು ಮನೆಗೆ ಬಂದಿದ್ದರು. ಹೆಂಡತಿ ಕರೆ ಮಾಡಿ ಪೊಲೀಸ್ ನವರು ಮನೆಗೆ ಬಂದಿರುವ ವಿಚಾರ ತಿಳಿಸಿದರು.‌ಆ ವೇಳೆ ನಾನು ಕಳೆಂಜ ಗೋಶಾಲೆಯ ಕಾರ್ಯಕ್ರಮದ ನಿಮಿತ್ತ ಹೋಗಿದ್ದವನು, ಮನೆಗೆ ಬರುವ ದಾರಿಯಲ್ಲಿ ಪೊಲೀಸ್ ನವರು ಸಿಕ್ಕಿದ್ದು, ಅಲ್ಲಿಂದ ನನ್ನನ್ನು ಸ್ಟೆಷನ್ ಗೆ ಕರೆದುಕೊಂಡು ಬರಲು ಇನ್ಸ್ ಪೆಕ್ಟರ್ ಹೇಳಿದ್ದಾರೆ ಅಂತ ಕರೆದುಕೊಂಡು ಹೋದರು. ಈ ಬಗ್ಗೆ ಶಾಸಕರಿಗೆ ನಾನು ಕರೆ ಮಾಡಿ ತಿಳಿಸಿದ್ದೇನೆ.

ನಾನು ಪ್ರಮಾಣಕ್ಕೆ, ಮಂಪರು ಪರೀಕ್ಷೆಗೆ ರೆಡಿ: ಮೇಲಂತಬೆಟ್ಟುವಿನ ಅಕ್ರಮಗಣಿಗಾರಿಕೆಯಲ್ಲಿ ನನ್ನ ಪಾತ್ರ ಇಲ್ಲ.ಈ ಬಗ್ಗೆ ನಾನು ಮುಂದಿನ ಸೋಮವಾರ ಬೆಳ್ತಂಗಡಿಯ ಮಾರಿಗುಡಿಯಲ್ಲಿ ಪ್ರಮಾಣ ಮಾಡುತ್ತೇನೆ. ನಾನಿದ್ದೇನೆ ಅಂತ ಹೇಳಿರುವ ಕಾಂಗ್ರೆಸ್ ನಾಯಕ ರಕ್ಷಿತ್ ಶಿವರಾಂ ಕೂಡ ಪ್ರಮಾಣ ಮಾಡಲಿ. ಅಲ್ಲದೇ, ಈ ಪ್ರಕರಣದಲ್ಲಿ ನನ್ನ ಮಂಪರು ಪರೀಕ್ಷೆಗೂ ನಾನು ಸಿದ್ಧನಾಗಿದ್ದೇನೆ ಅಂತ ಪೊಲೀಸರಿಗೆ ತಿಳಿಸಿದ್ದೇನೆ.
ನನ್ನ ವಿರುದ್ಧದ ಷಡ್ಯಂತ್ರದಲ್ಲಿ ರಕ್ಷಿತ್ ಶಿವರಾಂ ಪಾತ್ರವಿದೆ.ರಕ್ಷಿತ್ ಶಿವರಾಂ ನಮ್ಮನ್ನು ಟಾರ್ಗೆಟ್ ಮಾಡಿದ್ದಾರೆ.ಬಿಜೆಪಿ ಕಾರ್ಯಕರ್ತರ ಮೇಲೆ ರೌಡಿಶೀಟ್ ಓಪನ್ ಮಾಡಿದ್ದಾರೆ.ಬೆಳ್ತಂಗಡಿಯಲ್ಲಿ ಬಿಜೆಪಿ ಕಾರ್ಯಕರ್ತರನ್ನು ಟಾರ್ಗೆಟ್ ಮಾಡಿ ಕುಗ್ಗಿಸುವ ಕೆಲಸ ಕಾಂಗ್ರೆಸ್ ಮಾಡುತ್ತಿದೆ.ನಾನು ಸಮಾಜಮುಖಿ ಕೆಲಸದಲ್ಲಿ ತೊಡಗಿಸಿಕೊಂಡು ಬಂದವನು. ನಮ್ಮೂರಿಗೆ ನಾನು ರೌಡಿಶೀಟರ್ ವ್ಯಕ್ತಿತ್ವ ಹೊಂದಿದ್ದೇನೋ ಇಲ್ಲವೋ ಅನ್ನುವ ಬಗ್ಗೆ ಗೊತ್ತಿದೆ. ನಾನು ಹಪ್ತಾ ವಸೂಲಿ ಮಾಡುವ ವ್ಯಕ್ತಿ ನಾನಲ್ಲ, ನಾನೊಬ್ಬ ಬಡ ರಿಕ್ಷಾ ಡ್ರೈವರ್ ರೊಬ್ಬರ ಮಗ. ರಕ್ಷಿತ್ ಶಿವರಾಂ ನಾವು ಮಾಡಿರುವ ಒಳ್ಳೆಯ ಕೆಲಸಗಳ ಬಗ್ಗೆ ತಿಳಿದುಕೊಳ್ಳಲಿ. 27 ದಿವಸ ನನ್ನ ಮನೆಯವರು,ನನ್ನ ಮಡದಿ,ಮಕ್ಕಳು ಅನುಭವಿಸಿದ ನೋವು ನಮಗಷ್ಟೇ ಗೊತ್ತಿದೆ.ನಾನು ಪ್ರಕರಣ ನಡೆಯುವುದಕ್ಕೆ ಒಂದು ತಿಂಗಳ ಹಿಂದೆ ಪ್ರಮೋದ್ ಜೊತೆ ಆ ಜಾಗಕ್ಕೆ ಹೋಗಿ ಬಂದಿದ್ದೇನೆ. ಸಕ್ರಮವಾಗಿ ಅನುಮತಿ ಪಡೆದು ಗಣಿಗಾರಿಕೆ ಮಾಡಬಹುದಾ ಅಂತ ನೋಡಿದ್ದೆ. ಅಲ್ಲಿನ ಕೆಲಸಗಾರರು ನನ್ನನ್ನು ಅಲ್ಲಿ ನೋಡಿರಲೂ ಸಾಧ್ಯವಿಲ್ಲ, ಅಲ್ಲದೇ ನನ್ನ ಮೊಬೈಲ್ ನಂಬರ್ ನ್ನು ಟ್ರ್ಯಾಕ್ ಮಾಡಿದ್ರೂ ಗೊತ್ತಾಗುತ್ತೆ ಅಂತ ಹೇಳಿದರು.

ಈ ವೇಳೆ ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ಪಾರೆಂಕಿ, ಬಿಜೆಪಿ ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ ವಿನಿತ್ ಕೋಟ್ಯಾನ್ ಸಾವ್ಯ, ಯುವಮೋರ್ಚಾ ಕಾರ್ಯದರ್ಶಿ ಹರೀಶ್ ಸಂಬೋಲ್ಯ, ಯುವಮೋರ್ಚಾ ಕೋಶಾಧಿಕಾರಿ ಸ್ವಸ್ತಿಕ್ ಗೌಡ ಮಡಂತ್ಯಾರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here