ಉಜಿರೆ: ಎಲ್ಲರಿಗೂ ಸುಂದರವಾಗಿ ಬದುಕಬೇಕೆಂದು ಇಚ್ಛೆ ಇರುತ್ತದೆ. ಆದರೆ ಆ ಸುಂದರ ಬದುಕಿಗೆ ವಿವಿಧ ಆಯಾಮಗಳಿವೆ. ಅದರಲ್ಲಿ ಯೋಗ ಕೂಡ ಒಂದು. ದೈಹಿಕವಾಗಿ ಹಾಗೂ ಮಾನಸಿಕವಾಗಿ ಸದೃಢವಾಗಲು ದಿನನಿತ್ಯ ಯೋಗ ಸಾಧನೆ ಮಾಡಬೇಕು. ಆರೋಗ್ಯಕರ ಬದುಕಿಗೆ ಯೋಗ ಉತ್ತಮ ಸಾಧನ ಎಂದು ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿಪೂರ್ವ ಕಾಲೇಜಿನ ಉಪ ಪ್ರಾಚಾರ್ಯ ಡಾ.ರಾಜೇಶ್ ಬಿ. ಹೇಳಿದರು.
ಇವರು ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವತಿಯಿಂದ ಮೈತ್ರೇಯಿ ವಿದ್ಯಾರ್ಥಿನಿ ನಿಲಯದಲ್ಲಿ ನಡೆದ ಯೋಗ ಸಪ್ತಾಹದ ಸಮಾರೋಪ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಯೋಜನಾಧಿಕಾರಿ ಡಾ.ಪ್ರಸನ್ನಕುಮಾರ ಐತಾಳ್ ಅವರು ಯೋಗದ ಬಗ್ಗೆ ಮಾಹಿತಿ ನೀಡಿದರು. ಸ್ವಯಂ ಸೇವಕಿ ಚಂದನಾ ಯೋಗ ಸಪ್ತಾಹದ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದರು.ಯೋಗ ತರಬೇತುದಾರರಾದ ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರಕೃತಿ ಚಿಕಿತ್ಸೆ ಹಾಗೂ ಯೋಗ ವಿಜ್ಞಾನ ವಿದ್ಯಾಲಯದ ಕೀರ್ತನಾ ಹಾಗೂ ಸಾಕ್ಷಿ, ನಿಲಯ ಪಾಲಕಿಯರಾದ ಜಯಶ್ರೀ ಹಾಗೂ ಚೈತಾಲಿ ಉಪಸ್ಥಿತರಿದ್ದರು.
ಸಾನ್ವಿ ಸ್ವಾಗತಿಸಿ , ಇಬ್ಬನಿ ವಂದಿಸಿದರು. ಶ್ರಮ ನಿರೂಪಿಸಿದರು.