ಕಕ್ಯಪದವು: ಎಲ್ ಸಿ ಆರ್ ವಿದ್ಯಾಸಂಸ್ಥೆಯಲ್ಲಿ ಶಾಲಾ ಸಂಸತ್ ಚುನಾವಣೆ

0

ಕಕ್ಯಪದವು: ಶಾಲಾ ಜೀವನದಲ್ಲಿಯೇ ಮಕ್ಕಳಿಗೆ ಚುನಾವಣಾ ಅರಿವು ಮೂಡಿಸುವ ನಿಟ್ಟಿನಲ್ಲಿ ವಿದ್ಯಾರ್ಥಿ ಚುನಾವಣೆಯ ಮೂಲಕ ಎಲ್ ಸಿ ಆರ್ ವಿದ್ಯಾಸಂಸ್ಥೆಯಲ್ಲಿ ನಾಯಕ-ನಾಯಕಿ ಮತ್ತು ಉಪ ನಾಯಕ-ಉಪನಾಯಕಿಯರನ್ನು ಆಯ್ಕೆ ಮಾಡಲು ಶಾಲಾ ಸಂಸತ್ ಚುನಾವಣೆ ನಡೆಸಲಾಯಿತು.

ಚುನಾವಣೆಯಲ್ಲಿ ಆಗುವ ಎಲ್ಲ ಹಂತಗಳನ್ನು ಚಾಚು ತಪ್ಪದೇ ಪಾಲಿಸಲಾಯಿತು.ಚುನಾವಣೆಯ ಘೋಷಣೆಯಿಂದ ಹಿಡಿದು, ನಾಮಪತ್ರ ಸಲ್ಲಿಕೆ, ಅಭ್ಯರ್ಥಿಗಳ ಪ್ರಚಾರ ಭಾಷಣ ಮತ್ತು ಮತದಾನ ದಿನದಂದು ಮತ ಚಲಾಯಿಸುವಂತಹ ಎಲ್ಲ ಹಂತಗಳನ್ನು ಪಾಲಿಸಲಾಯಿತು.

ಶಾಲೆಯ ಯುವ ಪೀಳಿಗೆಯಲ್ಲಿ ಚುನಾವಣೆ ಮತ್ತು ಮತದಾನದ ಮಹತ್ವವನ್ನು ತಿಳಿಸಿಕೊಡುವ ಉದ್ದೇಶದಿಂದ ವಿಶೇಷ ಶ್ರಮವಹಿಸಿ ಎಲೆಕ್ಟ್ರಾನಿಕ್ ವೋಟಿಂಗ್‌ ಮಷಿನ್‌ ಮಾದರಿಯ ಸಾಫ್ಟ್‌ವೇರ್‌ ತಯಾರಿಸಿ ವಿದ್ಯಾರ್ಥಿಗಳು ಅದರಲ್ಲೇ ಮತ ಚಲಾಯಿಸಿದರು.ಶಾಲಾ ಚುನಾವಣೆಯಲ್ಲಿ 4 ಮತಗಟ್ಟೆಗಳಿದ್ದು 14 ಅಭ್ಯರ್ಥಿಗಳು ಮತ್ತು ಶೇ 94.09ರಷ್ಟು ಮತದಾನವಾಗಿದೆ. 6ನೇ ತರಗತಿಯಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಮತದಾನದ ಹಕ್ಕು ನೀಡಲಾಗಿತ್ತು. ಪ್ರತಿ ಮತಗಟ್ಟೆಯಲ್ಲಿ ಏಳು ಶಿಕ್ಷಕರಂತೆ ಶಾಲೆಯ ಶಿಕ್ಷಕರು ಕಾರ್ಯನಿರ್ವಹಿಸಿದರು.

ಎಲ್ ಸಿ ಆರ್ ವಿದ್ಯಾಸಂಸ್ಥೆಯ ಶಾಲಾ ಚುನಾವಣಾಧಿಕಾರಿಯಾದ ಪ್ರಾಥಮಿಕ ಹಾಗೂ ಪ್ರೌಢ ವಿಭಾಗದ ಮುಖ್ಯ ಶಿಕ್ಷಕಿ ವಿಜಯಾ ಕೆ, ಪ್ರಾಂಶುಪಾಲ ಜೋಸ್ಟನ್ ಲೋಬೊ ಇವರ ಮಾರ್ಗದರ್ಶನದಲ್ಲಿ, ಸಂಸ್ಥೆಯ ಸಂಯೋಜಕರು ಯಶವಂತ್ ಜಿ.ನಾಯಕ್ ನೇತೃತ್ವದಲ್ಲಿ ಶಾಲಾ ಶಿಕ್ಷಕ ವೃಂದ ಮತಗಟ್ಟೆ ಅಧಿಕಾರಿಗಳಾಗಿ ಕರ್ತವ್ಯ ನಿರ್ವಹಿಸಿದರು.

LEAVE A REPLY

Please enter your comment!
Please enter your name here