ಪತ್ರಿಕಾಗೋಷ್ಠಿ: ಕಲ್ಮಂಜ ಗ್ರಾಮದ ಮಿಯಾದ ಅಚ್ಯುತ ಭಟ್ ಮನೆಯಲ್ಲಿ ನಡೆದಿದ್ದ ದರೋಡೆ ಪ್ರಕರಣ: ಮುಂಡಾಜೆಯ ರಿಯಾಜ್, ನವಾಝ್, ಕಲ್ಬುರ್ಗಿಯ ಕೃಷ್ಣ ಬಂಧನ- ಎಸ್‌ಪಿ ರಿಷ್ಯಂತ್ ಮಾಹಿತಿ

0

ಬೆಳ್ತಂಗಡಿ: ಕಲ್ಮಂಜ ಗ್ರಾಮದ ಮಿಯಾ ಎಂಬಲ್ಲಿ ಅಚ್ಯುತ ಭಟ್ ಎಂಬವರ ಮನೆಗೆ 2020ರ ಜುಲೈ 25ರಂದು ರಾತ್ರಿ ನುಗ್ಗಿ ಮನೆಯವರನ್ನು ಬೆದರಿಸಿ ನಗದು ಸಹಿತ ಲಕ್ಷಾಂತರ ರೂ ಮೌಲ್ಯದ ಚಿನ್ನಾಭರಣ ದರೋಡೆ ನಡೆಸಿದ್ದ ಮೂವರು ಆರೋಪಿಗಳನ್ನು ಧರ್ಮಸ್ಥಳ ಠಾಣಾ ಪೊಲೀಸರು ಬಂಧಿಸಿದ್ದಾರೆ. ಘಟನೆಯ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್ ಅವರು ಮೇ 27ರಂದು ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿದ್ದಾರೆ.

ದರೋಡೆ ನಡೆದ ಬಗ್ಗೆ ದೂರು ದಾಖಲಾಗಿತ್ತು: 2020ರ ಜುಲೈ 26ರಂದು ಕಲ್ಮಂಜ ಗ್ರಾಮದ ಮಿಯಾ ಮನೆಯ ಅಚ್ಯುತ್ ಭಟ್ (56)ರವರು ಧರ್ಮಸ್ಥಳ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ತಾನು ಅಡಿಕೆ ವ್ಯಾಪಾರ ಹಾಗೂ ಕೃಷಿ ಕೆಲಸ ಮಾಡಿಕೊಂಡಿದ್ದೇನೆ. ನನ್ನ ತಂದೆ ಮತ್ತು ತಾಯಿಗೆ ನಾವು 6 ಜನ ಗಂಡು ಮಕ್ಕಳು, ಇಬ್ಬರು ಹೆಣ್ಣು ಮಕ್ಕಳು ಇದ್ದಾರೆ. ನಾನು ಉಜಿರೆ ಓಡಲದಲ್ಲಿ ಹೊಸ ಮನೆ ಕಟ್ಟಿದ್ದು ಹೆಚ್ಚಾಗಿ ಮೂಲ ಮನೆಯಾದ ಕಲ್ಮಂಜದಲ್ಲಿ ನನ್ನ ಪ್ರಾಯಸ್ಥ ತಾಯಿ ಕಾಶಿಯಮ್ಮರವರೊಂದಿಗೆ ವಾಸವಾಗಿದ್ದೇನೆ. ನನ್ನ ತಮ್ಮಂದಿರು ಬೇರೆ ಬೇರೆ ಕಡೆಗಳಲ್ಲಿ ವಾಸವಾಗಿದ್ದು ರಜೆ ಸಮಯದಲ್ಲಿ ನಮ್ಮ ಮನೆಗೆ ಬಂದು ಹೋಗುತ್ತಾರೆ. ಇತ್ತೀಚೆಗೆ ನನ್ನ ತಮ್ಮನ ಹೆಂಡತಿ ವಿದ್ಯಾಕುಮಾರಿ ಹಾಗೂ ಆಕೆಯ ಚಿಕ್ಕ 3 ಮಕ್ಕಳೊಂದಿಗೆ ಊರಿಗೆ ಬಂದವರು ನಮ್ಮ ಮನೆಯಲ್ಲಿ ಇದ್ದರು. 25-06-2020ರಂದು ರಾತ್ರಿ ಸುಮಾರು 9 ಗಂಟೆಗೆ ನಾವೆಲ್ಲರೂ ಊಟ ಮಾಡಿ ಮಲಗಿದ್ದೆವು. 26-06-2020ರಂದು ಬೆಳಗ್ಗಿನ ಜಾವ 02.50 ಗಂಟೆಗೆ ನಾನು ನಾಯಿ ಬೊಗಳುವ ಶಬ್ದ ಕೇಳಿ ಎಚ್ಚರಗೊಂಡು ಮನೆಯ ಬಾಗಿಲು ತೆಗೆದು ಹೊರಗೆ ಬಂದಾಗ ಇಬ್ಬರು ನನ್ನನ್ನು ಸುತ್ತುವರಿದು ನನ್ನನ್ನು ಹಿಡಿದುಕೊಂಡು ಕುತ್ತಿಗೆಯನ್ನು ಅದುಮಿದರು. ನಾನು ಬೊಬ್ಬೆ ಹಾಕಿದಾಗ ನನ್ನ ತಮ್ಮನ ಹೆಂಡತಿ ವಿದ್ಯಾಕುಮಾರಿ ಮನೆಯ ಇನ್ನೊಂದು ಬದಿಯಲ್ಲಿದ್ದ ಬಾಗಿಲು ತೆರೆದಾಗ ಅಲ್ಲಿಂದ ಇಬ್ಬರು ಒಳ ನುಗ್ಗಿದರು. ಆ ಸಮಯ ಮನೆಯಲ್ಲಿದ್ದ ನನ್ನ ತಾಯಿ ಕೂಡಾ ಎಚ್ಚರಗೊಂಡಾಗ ಎಲ್ಲರೂ ಸೇರಿ ನನ್ನನ್ನು, ನನ್ನ ತಾಯಿ ಮತ್ತು ತಮ್ಮನ ಹೆಂಡತಿಯನ್ನು ಎಳೆದುಕೊಂಡು ಬಂದು ಎದುರಿನ ಚಾವಡಿಯಲ್ಲಿ ಕೂಡಿ ಹಾಕಿ ದೂಡಿ ಬಟ್ಟೆಯಿಂದ ಕೈಕಾಲು ಕಟ್ಟಿ ಹಾಕಿ ನನಗೆ ಕೈಯಿಂದ ಹಲ್ಲೆ ನಡೆಸಿ ಮನೆಯಲ್ಲಿದ್ದ ಚಿನ್ನಾಭರಣ ಹಾಗೂ ಹಣವನ್ನು ನೀಡುವಂತೆ ಗದರಿಸಿದರು. ಅಲ್ಲದೆ ನನ್ನ ತಮ್ಮನ ಹೆಂಡತಿಯ ಕುತ್ತಿಗೆಯಿಂದ ಒಂದು ಚಿನ್ನದ ಕರಿಮಣಿ ಸರ ಹಾಗೂ ತಾಯಿಯ ಕೈಯಲ್ಲಿದ್ದ ಎರಡು ಚಿನ್ನದ ಬಳೆಗಳನ್ನು ಕಿತ್ತುಕೊಂಡರು. ಅಲ್ಲದೆ ಮನೆಯಲ್ಲಿ ಹುಡುಕಾಡಿ ಕಬ್ಬಿಣದ ಕಪಾಟನ್ನು ಬಲತ್ಕಾರವಾಗಿ ತೆರೆದು ಅದರಲ್ಲಿದ್ದ ಬೆಳ್ಳಿಯ 4 ತಂಬಿಗೆ, ತಾಯಿಯ ಚಿನ್ನದ ಸರ ಮತ್ತು ಒಂದು ಉಂಗುರವನ್ನು ಹಾಗೂ ನಗದು ರೂ 25,000 ತೆಗೆದುಕೊಂಡರು ಅಲ್ಲದೆ ನನ್ನ ತಮ್ಮನ ಹೆಂಡತಿಯ ಬ್ಯಾಗ್‌ನಲ್ಲಿದ್ದ 3 ಮಕ್ಕಳ ಸಣ್ಣ ಚೈನ್, ಒಂದು ದೊಡ್ಡ ಚೈನ್, ನೆಕ್ಲೇಸ್, 5 ಸೆಟ್ ಕಿವಿಯ ಬೆಂಡೋಲೆ, 3 ಉಂಗುರ, 4 ಬಳೆಗಳನ್ನು ತೆಗೆದುಕೊಂಡು ಹೋಗಿದ್ದಾರೆ. ನನ್ನ ಒಂದು ಮೊಬೈಲ್ ಫೋನ್ ಮತ್ತು ತಮ್ಮನ ಹೆಂಡತಿಯ 2 ಮೊಬೈಲ್ ಸೆಟ್‌ಗಳನ್ನು ನೆಲಕ್ಕೆ ಹೊಡೆದು ಜಖಂಗೊಳಿಸಿದ್ದಾರೆ. ಈ ಬಗ್ಗೆ ಪೊಲೀಸರಿಗೆ ತಿಳಿಸಿದರೆ ನಿಮ್ಮನ್ನು ಕೊಂದು ಮನೆಗೆ ಬೆಂಕಿ ಹಾಕುವುದಾಗಿ ಬೆದರಿಸಿದ್ದಾರೆ. ಈ ಘಟನೆ ಈ ದಿನ ಬೆಳಿಗ್ಗಿನ ಜಾವ 02.50 ಗಂಟೆಯಿಂದ ಸುಮಾರು 3.30 ಗಂಟೆಯ ಮಧ್ಯೆ ಸಂಭವಿಸಿದೆ. ಆರೋಪಿಗಳು 30ರಿಂದ 35 ಪವನ್ ತೂಕದ ಚಿನ್ನದ ಒಡವೆ ಹಾಗೂ ಸುಮಾರು 1 ಕೆ ಜಿ ತೂಕದ ಬೆಳ್ಳಿ ಒಡವೆಗಳನ್ನು ದರೋಡೆ ಮಾಡಿಕೊಂಡು ಹೋಗಿದ್ದಾರೆ. ಒಟ್ಟು ಸುಮಾರು ಚಿನ್ನಾಭರಣ ಹಾಗೂ ನಗದು ಹಣ ಸೇರಿ ಸುಮಾರು 12,40,000 ರೂಪಾಯಿಗಳಾಗಬಹುದು ಎಂದು ಅವರು ದೂರಿನಲ್ಲಿ ತಿಳಿಸಿದ್ದರು. ಈ ಬಗ್ಗೆ ಎಸ್.ಐ ಚಂದ್ರಶೇಖರರವರು ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಅ.ಕ್ರ. 43/2020ರಂತೆ ಕಲಂ 448, 427, 506, 394 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಿಸಿದ್ದರು ಎಂದು ಎಸ್.ಪಿ. ರಿಷ್ಯಂತ್ ಮಾಹಿತಿ ನೀಡಿದರು.

ತನಿಖೆ ಹಸ್ತಾಂತರವಾಗಿತ್ತು-ಸಿ ರಿಪೋರ್ಟ್ ಮಾಡಲಾಗಿತ್ತು: ಘೋರಾಪರಾಧದ ಪ್ರಕರಣವಾಗಿದ್ದರಿಂದ ಈ ಘಟನೆಯ ಮುಂದಿನ ತನಿಖೆಯನ್ನು ಬೆಳ್ತಂಗಡಿ ವೃತ್ತದ ಪೊಲೀಸ್ ವೃತ್ತ ನಿರೀಕ್ಷಕರಾಗಿದ್ದ ಸಂದೇಶ್ ಪಿ.ಜಿ.ರವರಿಗೆ ಹಸ್ತಾಂತರಿಸಲಾಗಿತ್ತು. ಬಳಿಕ ಪೊಲೀಸ್ ವೃತ್ತ ನಿರೀಕ್ಷಕರುಗಳು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿದ್ದರು. ಆರೋಪಿತರುಗಳ ಮತ್ತು ಸೊತ್ತಿನ ಪತ್ತೆ ಆಗದೇ ಇದ್ದುದರಿಂದ ಆರೋಪಿ ಹಾಗೂ ಸೊತ್ತು ಪತ್ತೆಯಾಗದ ಪ್ರಕರಣವೆಂದು ನ್ಯಾಯಾಲಯಕ್ಕೆ ತಾತ್ಕಾಲಿಕವಾಗಿ ಸಿ ಅಂತಿಮ ವರದಿ ಸಲ್ಲಿಸಿದ್ದರು ಎಂದು ಪತ್ರಿಕಾಗೋಷ್ಠಿಯಲ್ಲಿ ಎಸ್‌ಪಿ ರಿಷ್ಯಂತ್ ತಿಳಿಸಿದ್ದಾರೆ.

ಮೂವರ ಬಂಧನ: 22.05.2024ರಂದು ಸುಮಾರು 15.00 ಗಂಟೆಗೆ ಧರ್ಮಸ್ಥಳ ಪೊಲೀಸ್ ಠಾಣಾ ಪೊಲೀಸ್ ಉಪ ನಿರೀಕ್ಷಕ ಅನಿಲ್ ಕುಮಾರ್‌ರವರಿಗೆ ಪೊಲೀಸ್ ಬಾತ್ಮೀದಾರರಿಂದ ಅಪರಾಧ ಕ್ರಮಾಂಕ 43/2020ರ ಕಲಂ 448,427,506,394 ಜೊತೆಗೆ 34 ಐಪಿಸಿ ಪ್ರಕರಣದಲ್ಲಿನ ಸಂಶಯಾಸ್ಪದ ವ್ಯಕ್ತಿ ಈ ಪ್ರಕರಣದಲ್ಲಿ ದರೋಡೆ ಮಾಡಿ ದೋಚಿಕೊಂಡು ಹೋಗಿದ್ದ ಚಿನ್ನವನ್ನು ಮಾರಾಟ ಮಾಡಲು ತೆರಳುತ್ತಿರುವ ಬಗ್ಗೆ ಮಾಹಿತಿ ಬಂದ ಮೇರೆಗೆ ಮುಂಡಾಜೆಯ ರಿಯಾಜ್ ಎಂಬಾತನನ್ನು ವಶಕ್ಕೆ ಪಡೆದುಕೊಂಡು ವಿಚಾರಿಸಿದಾಗ ಅವನು ಧರ್ಮಸ್ಥಳ ಪೊಲೀಸ್ ಠಾಣೆಯ ಅಪರಾಧ ಕ್ರಮಾಂಕ 43/2020 ಕಲಂ:448,427,506,394 ಜೊತೆಗೆ 34 ಐಪಿಸಿ ಪ್ರಕರಣದಲ್ಲಿ ಆರೋಪಿಯೆಂದು ತಪ್ಪು ಒಪ್ಪಿಕೊಂಡಿದ್ದಾನೆ. ಮತ್ತು ಪ್ರಕರಣದ ಇನ್ನಿಬ್ಬರು ಆರೋಪಿಗಳಾದ ಮುಂಡಾಜೆ ಗ್ರಾಮದ ಕೂಳೂರು ಮನೆಯ ನವಾಝ್ ಹಾಗೂ ಕಲ್ಬುರ್ಗಿಯ ಕೃಷ್ಣ ಎಂಬವರು ಧರ್ಮಸ್ಥಳದಲ್ಲಿ ಇರುವುದಾಗಿ ತಿಳಿಸಿದ್ದಾನೆ. ಬಳಿಕ 26-06-2020ರಂದು ಬೆಳ್ತಂಗಡಿ ತಾಲೂಕಿನ ಕಲ್ಮಂಜ ಗ್ರಾಮದ ಮಿಯಾ ಎಂಬಲ್ಲಿ ದರೋಡೆ ಮಾಡಿ ಚಿನ್ನಾಭರಣ ಹಾಗೂ ಹಣವನ್ನು ತೆಗೆದುಕೊಂಡು ಹೋಗಿರುವ ವಿಚಾರವನ್ನು 22-05-2024ರಂದು ಆರೋಪಿತರು ತಮ್ಮ ಸ್ವ ಇಚ್ಚಾ ಹೇಳಿಕೆಯ ಸಮಯ ಒಪ್ಪಿಕೊಂಡಿದ್ದಾರೆ. ಈ ಪ್ರಕರಣದಲ್ಲಿ ಒಟ್ಟು 104 ಗ್ರಾಂ ಬಂಗಾರದ ಆಭರಣಗಳ ಅದರ ಅಂದಾಜು ಮೌಲ್ಯ ಸುಮಾರು 7,87,000 ರೂ ಆಗಬಹುದು. 288 ಗ್ರಾಂ ಬೆಳ್ಳಿಯ ಅಂದಾಜು ಮೌಲ್ಯ ಸುಮಾರು 30,240 ರೂ ಆಗಬಹುದು. ಟಿವಿಎಸ್ ಕಂಪೆನಿಯ ಅಪಾಚೆ ಮೋಟಾರ್ ಬೈಕ್‌ನ ಅಂದಾಜು ಮೌಲ್ಯ ಸುಮಾರು 25,000 ಎಂದು ಅಂದಾಜಿಸಲಾಗಿದೆ. ಒಟ್ಟು ಮೌಲ್ಯ 8,42,240 ಆಗಬಹುದಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್ ವಿವರ ನೀಡಿದರು.

ಪೊಲೀಸ್ ಕಾರ್ಯಾಚರಣೆ: ಎಸ್.ಪಿ ರಿಶ್ಯಂತ್, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಎಂ. ಜಗದೀಶ್ ಮತ್ತು ರಾಜೇಂದ್ರ ಡಿ.ಎಸ್, ಪೊಲೀಸ್ ಉಪಾಧೀಕ್ಷಕ ವಿಜಯ ಪ್ರಸಾದ್ ಎಸ್.ರವರ ನಿರ್ದೆಶನದಂತೆ ಪೊಲೀಸ್ ವೃತ್ತ ನಿರೀಕ್ಷಕ ವಸಂತ್ ಆರ್.ಆಚಾರ್‌, ನಾಗರಾಜ್ ಹೆಚ್.ಇ ಪಪೊಲೀಸ್ ನಿರೀಕ್ಷಕರು ವಿಟ್ಲ ಪೊಲೀಸ್ ಠಾಣೆ, ಸುಬ್ಬಾಪುರ ಮಠ, ಪೊಲೀಸ್ ನಿರೀಕ್ಷಕರು ಬೆಳ್ತಂಗಡಿ ಪೊಲೀಸ್ ಠಾಣೆ ರವರ ಮಾರ್ಗದರ್ಶದಲ್ಲಿ ಧರ್ಮಸ್ಥಳ ಪೊಲೀಸ್ ಠಾಣಾ ಉಪನಿರೀಕ್ಷಕರುಗಳಾದ ಅನಿಲ್ ಕುಮಾರ ಡಿ ಮತ್ತು ಸಮರ್ಥ ಗಾಣಿಗೇರ ಹಾಗೂ ಸಿಂಬಂದಿಗಳಾದ ರಾಜೇಶ ಎನ್, ಪ್ರಶಾಂತ್ ಎಂ, ಸತೀಶ್ ನಾಯ್ಕ್, ಪ್ರಮೋದಿನಿ, ಶೇಖರ್ ಗೌಡ, ಕೃಷ್ಣಪ್ಪ, ಅನಿಲ್ ಕುಮಾರ್, ಜಗದೀಶ್, ಮಲ್ಲಿಕಾರ್ಜುನ್, ವಿನಯ್ ಪ್ರಸನ್ನ, ಗೋವಿಂದರಾಜ್, ಭಿಮೇಶ್, ನಾಗರಾಜ್ ಬುಡ್ರಿ ಹಾಗೂ ಹುಲಿರಾಜ್ ಪತ್ತೆ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು ಎಂದು ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here