ಬೆಳ್ತಂಗಡಿ ಆಡಳಿತ ಸೌಧಕ್ಕೆ ದಿಢೀ‌ರ್ ಭೇಟಿ ನೀಡಿದ ಲೋಕಾಯುಕ್ತ ಅಧಿಕಾರಿಗಳು

0

ಬೆಳ್ತಂಗಡಿ: ಮಂಗಳೂರು ವಿಭಾಗದ ಲೋಕಾಯುಕ್ತ ಅಧಿಕಾರಿಗಳು ಬೆಳ್ತಂಗಡಿ ಆಡಳಿತ ಸೌಧಕ್ಕೆ ಮೇ.4ರಂದು ದಿಢೀರ್ ಭೇಟಿ ನೀಡಿ ಆಡಳಿತ ವ್ಯವಸ್ಥೆಗೆ ಚುರುಕು ಮುಟ್ಟಿಸಿದ್ದಾರೆ. ಸರಕಾರಿ ಕಚೇರಿಗಳಿಗೆ ದಿಢೀರ್ ಭೇಟಿ ನೀಡಿ ಸಾರ್ವಜನಿಕರ ಜೊತೆ ಸಮಸ್ಯೆಗಳನ್ನು ಕೇಳಿ ಸ್ಥಳದಲ್ಲಿಯೇ ಬಗೆಹರಿಸುವ 26 ಅಂಶಗಳ ಕಾರ್ಯಕ್ರಮದ ಅಂಗವಾಗಿ ಬೆಳ್ತಂಗಡಿ ಆಡಳಿತ ಸೌಧಕ್ಕೆ ಮೇ.3ರಂದು ಬೆಳಗ್ಗೆ ದಿಢೀರ್ ಭೇಟಿ ನೀಡಿದ ಲೋಕಾಯುಕ್ತ ಮಂಗಳೂರು ವಿಭಾಗದ ಅಧಿಕಾರಿಗಳು ಸಾರ್ವಜನಿಕರಿಂದ ಹಲವು ಸಮಸ್ಯೆಗಳನ್ನು ಆಲಿಸಿದರಲ್ಲದೆ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದರು.

ಬೆಳ್ತಂಗಡಿ ಆಡಳಿತ ಸೌಧ ಭೇಟಿಯಲ್ಲಿ 94 CC, ಆಹಾರ ಇಲಾಖೆಯಲ್ಲಿ ಸಾರ್ವಜನಿಕರಿಗೆ ಪಡಿತರ ವಿತರಣೆ ಸರಿಯಾಗಿ ಆಗುತ್ತಿಲ್ಲ, ವಿಧವ ವೇತನ ಬರುತ್ತಿಲ್ಲ, ಗೃಹ ಲಕ್ಷ್ಮಿ ಯೋಜನೆಯ ಹಣ ಸರಿಯಾಗಿ ಬರುತ್ತಿಲ್ಲ ಎಂಬ ಆರೋಪ ಕೇಳಿ ಬಂದ ಬಗ್ಗೆ ಲೋಕಾಯುಕ್ತ ಅಧಿಕಾರಿಗಳು ಸಾರ್ವಜನಿಕರನ್ನು ಕರೆದು ಸ್ಥಳದಲ್ಲಿಯೇ ಪುಸ್ತಕ ದಾಖಲೆ ಹಾಗೂ ಕಂಪ್ಯೂಟ‌ರ್ ದಾಖಲೆಗಳನ್ನು ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲು ಸೂಚಿಸಿದರು. 750 ಬಿಪಿಎಲ್ ಕಾರ್ಡ್ ಸಾರ್ವಜನಿಕರಿಗೆ ಸಿಗಲು ಬಾಕಿ ಇರುವ ಬಗ್ಗೆ ಮಾಹಿತಿ ಪಡೆದ ಲೋಕಾಯುಕ್ತ ಪೊಲೀಸರು ಶೀಘ್ರದಲ್ಲೇ ಪರಿಹರಿಸಲು ಸೂಚನೆ ನೀಡಿದ್ದಾರೆ.

ಪುಂಜಾಲಕಟ್ಟೆಯ ಕುಕ್ಕಳ ಗ್ರಾಮದ ಸುನಿತಾ(32) ಎಂಬವರ ಗಂಡ ಅಶೋಕ್ ಸಾವನ್ನಪ್ಪಿದ ಬಳಿಕ ಏಳು ತಿಂಗಳಿನಿಂದ ಪಡಿತರ ಅಕ್ಕಿ ವಿತರಣೆ ಆಗದೆ ಹಲವಾರು ಭಾರಿ ಆಹಾರ ಇಲಾಖೆಯಲ್ಲಿ ಅಲೆದಾಟ ಮಾಡುತ್ತಿದ್ದ ಬಗ್ಗೆ ಲೋಕಾಯುಕ್ತ ಪೊಲೀಸರಿಗೆ ಮಾಹಿತಿ ಸಿಕ್ಕಿದ್ದು ತಕ್ಷಣ ನೊಂದ ಮಹಿಳೆ ಸುನಿತಾ ಅವರನ್ನು ಮತ್ತು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಅಧಿಕಾರಿಗಳನ್ನು ಕರೆಸಿ ದಾಖಲೆ ಪರಿಶೀಲನೆ ನಡೆಸಿದಾಗ ಆಹಾರ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯದಿಂದ ಮಹಿಳೆಗೆ ಪಡಿತರ ದೊರಕದೆ ಏಳು ತಿಂಗಳಿನಿಂದ ಬಾಕಿಯಾಗಿರುವುದು ಪತ್ತೆಯಾಗಿದೆ. ತಕ್ಷಣ ಸ್ಥಳದಲ್ಲಿಯೇ ದಾಖಲೆಯನ್ನು ಸರಿಪಡಿಸಿ ಮಹಿಳೆಗೆ ಪಡಿತರ ಸಿಗುವಂತೆ ಲೋಕಾಯುಕ್ತ ಅಧಿಕಾರಿಗಳು ವ್ಯವಸ್ಥೆ ಮಾಡಿದರು.

\ಡಿವೈಎಸ್ಪಿಗಳಾದ ಡಾ.ಗಾನ.ಪಿ.ಕುಮಾರ್, ಚೆಲುವರಾಜ್, ಇನ್ಸೆಕ್ಟರ್ ಗಳಾದ ಅಮನುಲ್ಲಾ.ಎ, ಸುರೇಶ್.ಕೆ.ಎನ್, ಸುರೇಶ್.ಸಿ.ಎಲ್ ಮತ್ತು ಸಿಬ್ಬಂದಿಗಳು ಬೆಳ್ತಂಗಡಿ ಭೇಟಿ ವೇಳೆ ಉಪಸ್ಥಿತರಿದ್ದರು.

p>

LEAVE A REPLY

Please enter your comment!
Please enter your name here