ಉಜಿರೆ: ಜೈನಧರ್ಮವು ಅತ್ಯಂತ ಪ್ರಾಚೀನ ಮತ್ತು ಶ್ರೇಷ್ಠ ಧರ್ಮವಾಗಿದ್ದು ಅಹಿಂಸೆಯಿಂದ ಸುಖ, ತ್ಯಾಗದಿಂದ ಶಾಂತಿ ಎಂಬುದು ಜೈನಧರ್ಮದ ಸಾರವಾಗಿದೆ ಎಂದು ನರಸಿಂಹರಾಜಪುರ ಸಿಂಹನಗದ್ದೆ ಬಸ್ತಿಮಠದ ಪೂಜ್ಯ ಲಕ್ಷ್ಮೀ ಸೇನಭಟ್ಟಾರಕ ಸ್ವಾಮೀಜಿ ಹೇಳಿದರು.
ಅವರು ಶುಕ್ರವಾರ ಮೇ.03ರಂದು ನಾರಾವಿಯಲ್ಲಿ ಭಗವಾನ್ ಧರ್ಮನಾಥ ಸ್ವಾಮಿ ಬಸದಿಯಲ್ಲಿ ಧಾಮ ಸಂಪ್ರೋಕ್ಷಣಾಪೂರ್ವಕ ಪ್ರತಿಷ್ಠಾ ಮಹೋತ್ಸವ ಸಂದರ್ಭದಲ್ಲಿ ಆಯೋಜಿಸಿದ ಧಾರ್ಮಿಕ ಸಭೆಯಲ್ಲಿ ಮಂಗಲ ಪ್ರವಚನ ನೀಡಿದರು.
ಜೈನರ ಶ್ರದ್ಧಾಕೇಂದ್ರಗಳಾದ ಬಸದಿಗಳು ಸಮವಸರಣದ ಪ್ರತೀಕವಾಗಿದ್ದು, ನಿತ್ಯವೂ ಧರ್ಮದ ಅನುಷ್ಠಾನಕ್ಕೆ ಸ್ಪೂರ್ತಿ, ಪ್ರೇರಣೆ ನೀಡುತ್ತವೆ. ಅಹಿಂಸೆ ಮತ್ತು ತ್ಯಾಗವನ್ನು ಪಾಲಿಸುವವರೆಲ್ಲ ಜೈನರೇ ಆಗುತ್ತಾರೆ.ತೀರ್ಥಂಕರರು ತಮ್ಮ ದಿವ್ಯಧ್ವನಿಯಿಂದ ಧರ್ಮೋಪದೇಶ ನೀಡುವ ಧರ್ಮಸಭೆಯೇ ಸಮವಸರಣವಾಗಿದೆ. ಕಲೆ, ಸಾಹಿತ್ಯ, ಸಂಸ್ಕೃತಿಗೆ ಜೈನಧರ್ಮ ಅಪೂರ್ವ ಹಾಗೂ ಅಪಾರ ಕೊಡುಗೆ ನೀಡಿದೆ.
ಕಾಲಕಾಲಕ್ಕೆ ಬಸದಿಗಳ ಜೀರ್ಣೋದ್ಧಾರ ಮತ್ತು ಧಾಮಸಂಪ್ರೋಕ್ಷಣೆಯಿಂದ ಸಾನ್ನಿಧ್ಯ ವೃದ್ಧಿಯಾಗಿ ಊರಿನಲ್ಲಿ ಸುಖ-ಶಾಂತಿ, ನೆಮ್ಮದಿ ನೆಲೆಸುತ್ತದೆ. ಆಧ್ಯಾತ್ಮಿಕ ಉನ್ನತಿ ಸಾಧಿಸಲು ಸಾಧ್ಯವಾಗುತ್ತದೆ ಎಂದು ಸ್ವಾಮೀಜಿ ಹೇಳಿದರು.
ಆಶೀರ್ವಚನ ನೀಡಿದ ಕಾರ್ಕಳ ಜೈನಮಠದ ಪೂಜ್ಯ ಲಲಿತಕೀರ್ತಭಟ್ಟಾರಕಸ್ವಾಮೀಜಿ, ಸಮವಸರಣದ ಪ್ರತೀಕವಾದ ಬಸದಿಗಳು ನಮ್ಮನ್ನು ನಾವು ತಿದ್ದಿಕೊಂಡು ಸುಧಾರಣೆ ಮಾಡಲು ಪ್ರೇರಣೆ ನೀಡುತ್ತವೆ. ಶ್ರದ್ದಾ-ಭಕ್ತಿಯಿಂದ ನಿತ್ಯವೂ ಬಸದಿಗೆ ಹೋಗಿ ಏಕಾಗ್ರತೆಯಿಂದ ದೇವರ ದರ್ಶನ, ಜಪ, ತಪ, ಧ್ಯಾನ ಮಾಡಿದಾಗ ಆತ್ಮಕಲ್ಯಾಣವಾಗುತ್ತದೆ. ಶ್ರಾವಕರು, ಶ್ರಾವಕಿಯರು ಹಾಗೂ ದಾನಿಗಳೆಲ್ಲ ಸೇರಿ ಒಗ್ಗಟ್ಟಿನಿಂದ ಬಸದಿ ಜೀರ್ಣೋದ್ಧಾರ ಮಾಡಿದ ಬಗ್ಯೆ ಸ್ವಾಮೀಜಿ ಮೆಚ್ಚುಗೆ ವ್ಯಕ್ತಪಡಿಸಿದರು.
ಅಧ್ಯಕ್ಷತೆ ವಹಿಸಿದ ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಎಂ.ಎನ್.ರಾಜೇಂದ್ರ ಕುಮಾರ್ ಮಾತನಾಡಿ ಜೈನರ ಆಚಾರ-ವಿಚಾರ, ನೇರ ನಡೆ-ನುಡಿ ಹಾಗೂ ನಾಯಕತ್ವ ಗುಣದಿಂದಾಗಿ ಸಮಾಜದಲ್ಲಿ ಜೈನರಿಗೆ ವಿಶೇಷ ಮಾನ್ಯತೆ, ಗೌರವ ಇದೆ. ಜೈನರು ವೃತ-ನಿಯಮಗಳ ಪಾಲನೆಯೊಂದಿಗೆ ಆದರ್ಶ ಹಾಗೂ ಸಾತ್ವಿಕ ಜೀವನ ನಡೆಸುತ್ತಿದ್ದಾರೆ.
ಬದುಕು ಮತ್ತು ಬದುಕಲು ಬಿಡು ಎಂಬುದು ಜೈನಧರ್ಮದ ಶ್ರೇಷ್ಠ ತತ್ವವಾಗಿದೆ ಎಂದು ಅವರು ಹೇಳಿದರು.ಶಿಶುಪಾಲ ಜೈನ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಜಿರೆಯ ಮಹಾವೀರ ಜೈನ್ ಇಚಿಲಂಪಾಡಿ ಧಾರ್ಮಿಕ ಉಪನ್ಯಾಸ ನೀಡಿದರು.
ವೇಣೂರು ಜೈನ ತೀರ್ಥಕ್ಷೇತ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಕುಮಾರ್ ಇಂದ್ರ, ನಾರಾವಿ ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಜವರ್ಮ ಜೈನ್, ಆಡಳಿತ ಸಮಿತಿ ಕಾರ್ಯಾಧ್ಯಕ್ಷ ಪ್ರೇಮ್ ಕುಮಾರ್ ಹೊಸ್ಮಾರು, ಅಧ್ಯಕ್ಷ ನಿರಂಜನ ಆಜ್ರಿ, ಎಂ.ಕೆ. ಆರಿಗ ಮರೋಡಿ ಮತ್ತು ಹರ್ಷೇಂದ್ರ ಕುಮಾರ್ ನೂರಾಳಬೆಟ್ಟು ಉಪಸ್ಥಿತರಿದ್ದರು.
ಬಸದಿಯಲ್ಲಿ ಇಂದ್ರ ಪ್ರತಿಷ್ಠೆ, ತೋರಣ ಮುಹೂರ್ತ, ವಿಮಾನಶುದ್ಧಿ, ವಾಸ್ತುಪೂಜೆ, ಕ್ಷೇತ್ರಪಾಲ ಪ್ರತಿಷ್ಠೆ ಮೊದಲಾದ ಧಾರ್ಮಿಕ ವಿಧಿ-ವಿಧಾನಗಳು ನಡೆದವು.ಸೇವಾಕರ್ತೃಗಳನ್ನು ಮತ್ತು ದಾನಿಗಳನ್ನು ಗೌರವಿಸಲಾಯಿತು.
ಎಕ್ಸೆಲ್ ಕಾಲೇಜಿನ ಅಧ್ಯಕ್ಷ ಸುಮಂತಕುಮಾರ್ ಜೈನ್ ಸ್ವಾಗತಿಸಿದರು. ಕರುಣಾಕರ ಜೈನ್ ಕಾರ್ಯಕ್ರಮ ನಿರ್ವಹಿಸಿದರು.