ವೇಣೂರು: ಮುನಿಗಳ ಆಹಾರ-ವಿಹಾರದಲ್ಲಿ ಶ್ರಾವಕರು ಮತ್ತು ಶ್ರಾವಕಿಯರು ಶ್ರದ್ಧಾ- ಭಕ್ತಿಯಿಂದ ಸೇವೆ ಮಾಡಬೇಕು ಎಂದು ಪೂಜ್ಯ ಅಮೋಘಕೀರ್ತಿ ಮುನಿಮಹಾರಾಜರು ಹೇಳಿದರು.
ವೇಣೂರಿನಲ್ಲಿ ಬಾಹುಬಲಿ ಮಸ್ತಕಾಭಿಷೇಕ ಸಂದರ್ಭದಲ್ಲಿ 4ನೇ ದಿನ ಫೆ.25ರಂದು ಯುಗಳಮುನಿಗಳ ದೀಕ್ಷಾಮಹೋತ್ಸವದ ರಜತಮಹೋತ್ಸವ ಆಚರಣ ಸಂದರ್ಭದಲ್ಲಿ ಆಶೀರ್ವಚನ ಗೈದರು. ಸಮಾರಂಭಕ್ಕೆ ಪೂರ್ವಭಾವಿಯಾಗಿ ಗಣಧರ ಪರಮೇಷ್ಟಿಗಳಿಗೆ, ಜಿನವಾಣಿಗೆ, ಶಾಂತಿಸಾಗರ ಮುನಿ ಮಹಾರಾಜರಿಗೆ ಗುರುಗಳಾದ ದೇವನಂದಿ ಮುನಿ ಮಹಾರಾಜರಿಗೆ ಮತ್ತು ಯುಗಳ ಮುನಿಗಳಿಗೆ ಅಷ್ಟವಿಧಾರ್ಚನೆ ಪೂಜೆಯೊಂದಿಗೆ ಅರ್ಘ್ಯ ಅರ್ಪಿಸಲಾಯಿತು.
ಮುನಿಗಳಿಗೆ ಪಿಂಚಿದಾನ ಮತ್ತು ಶಾಸ್ತ್ರದಾನ ಮಾಡಿ ಗೌರವ ಅರ್ಪಿಸಲಾಯಿತು.ಮೂಡಬಿದಿರೆ ಚಾರುಕೀರ್ತಿ ಭಟ್ಟಾರಕರ ನೇತ್ರತ್ವದಲ್ಲಿ ನಡೆದ ಸಮಾರಂಭದಲ್ಲಿ ಡಾ| ಪದ್ಮಪ್ರಸಾದ ಅಜಿಲ ಮತ್ತು ವಿ.ಪ್ರವೀಣ್ ಕುಮಾರ್ ಇಂದ್ರ ಉಪಸ್ಥತರಿದ್ದರು.ಧಾರ್ಮಿಕ ಸಭೆಯ ಅಧ್ಯಕ್ಷತೆಯನ್ನು ಸಂಸದ ನಳಿನ್ ಕುಮಾರ್ ಕಟೀಲ್ ವಹಿಸಿ ಮಾತನಾಡಿದರು.
ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಎಂ.ಎನ್. ರಾಜೇಂದ್ರಕುಮಾರ್ ಶಾಸಕ ಹರೀಶ್ ಪೂಂಜ,ವಿಧಾನ ಪರಿಷತ್ ಶಾಸಕರುಗಳಾದ ಪ್ರತಾಪಸಿಂಹ ನಾಯಕ್, ಕೆ.ಹರೀಶ್ ಕುಮಾರ್ ಮತ್ತು ಮಂಜುನಾಥ ಭಂಡಾರಿ ಶುಭ ಹಾರೈಸಿದರು.ಜೀವಂಧರ ಕುಮಾರ್ ಸ್ವಾಗತಿಸಿದರು, ನವೀನ್ ಕುಮಾರ್ ಧವ್ಯವಾದವಿತ್ತರು.