ಉಜಿರೆ ಗ್ರಾಮ ಪಂಚಾಯತ್ ನಲ್ಲಿ ಪಾರ್ಕಿಂಗ್ ಸುವ್ಯವಸ್ಥೆ ಕುರಿತು ಸಭೆ

0

ಉಜಿರೆ: ಉಜಿರೆ ಪೇಟೆಯ ಅವ್ಯವಸ್ಥಿತ ಪಾರ್ಕಿಂಗ್ ನಿಂದ ಉಂಟಾಗುತ್ತಿರುವ ಸಮಸ್ಯೆಗಳನ್ನು ಬಗೆಹರಿಸುವ ಕುರಿತು ಗ್ರಾಮ ಪಂಚಾಯತ್ ವಠಾರದಲ್ಲಿ ಪಂಚಾಯತ್ ಅಧ್ಯಕ್ಷೆ ಉಷಾಕಿರಣ ಕಾರಂತ್ ಅವರ ಅಧ್ಯಕ್ಷತೆಯಲ್ಲಿ ಜ.17ರಂದು ವಿಶೇಷ ಸಭೆ ಪಂಚಾಯತ್ ಸಭಾಂಗಣದಲ್ಲಿ ಜರಗಿತು.

ಉಜಿರೆ ಪೇಟೆಯ ಕಾಲೇಜು ರಸ್ತೆಯಲ್ಲಿ ಹಾಗೂ ಫುಟ್ ಪಾತ್ ನಲ್ಲಿ ವಾಹನಗಳನ್ನು ನಿಲ್ಲಿಸುವುದು ಹಾಗೂ ತಾತ್ಕಾಲಿಕ ಅಂಗಡಿಗಳು ತಲೆ ಎತ್ತುತ್ತಿರುವುದರಿಂದ ಸಾರ್ವಜನಿಕರು, ವಿದ್ಯಾರ್ಥಿಗಳು ಸಂಚಾರಕ್ಕೆ ಭಾರಿ ಸಮಸ್ಯೆ ಎದುರಿಸುತ್ತಿದ್ದಾರೆ ಎಂಬ ವಿಚಾರ ಪ್ರಸ್ತಾಪವಾಯಿತು.ಫುಟ್ ಪಾತ್ ಮೇಲೆ ವಾಹನಗಳನ್ನು ನಿಲ್ಲಿಸುವವರ ವಿರುದ್ಧ ಕ್ರಮ ಹಾಗೂ ತಾತ್ಕಾಲಿಕ ವ್ಯಾಪಾರ ನಿರ್ವಹಿಸುವುದನ್ನು ನಿರ್ಬಂಧಿಸುವ ಕುರಿತು ನಿರ್ಣಯಿಸಿ,ಅಂತವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಲಾಯಿತು.

ಕಾಲೇಜು ರಸ್ತೆ ಕೆಲವು ಕಡೆ ಬೇಕಾಬಿಟ್ಟಿ ವಾಹನ ಪಾರ್ಕಿಂಗ್ ಮಾಡುವುದರ ಕುರಿತು ಸೂಕ್ತ ಕ್ರಮ ಕೈಗೊಳ್ಳುವುದು ಹಾಗೂ ಮೂರು ಕಡೆಗಳಲ್ಲಿ ಎಚ್ಚರಿಕೆ ಫಲಕ ಅಳವಡಿಸುವ ನಿರ್ಣಯ ಕೈಗೊಳ್ಳಲಾಯಿತು.

ಅಂಗಡಿಗಳ ಮುಂಭಾಗ ವಾಹನ ಪಾರ್ಕಿಂಗ್ ಮಾಡಿ ಗ್ರಾಹಕರಿಗೆ ಹಾಗೂ ವರ್ತಕರಿಗೆ ತೊಂದರೆ ನೀಡುವವರ ವಿರುದ್ಧ ಪೊಲೀಸ್ ಇಲಾಖೆ ಸಹಕಾರದಲ್ಲಿ ದಂಡ ವಿಧಿಸುವ ಕುರಿತು ನಿರ್ಣಯಿಸಲಾಯಿತು.
ಖಾಸಗಿ ವಾಹನಗಳನ್ನು ಅಲ್ಲಲ್ಲಿ ನಿಲ್ಲಿಸಿ ತೊಂದರೆ ನೀಡುವವರ ವಿರುದ್ಧವು ಸೂಕ್ತ ಕ್ರಮ ಕೈಗೊಳ್ಳುವುದಾಗಿ ಸಭೆಗೆ ತಿಳಿಸಲಾಯಿತು.

ಬಸ್ ನಿಲ್ದಾಣಗಳಲ್ಲಿ ಬಾಡಿಗೆ ವಾಹನಗಳನ್ನು ನಿಲ್ಲಿಸುವವರಿಗೆ ಕಡಿವಾಣ ಹಾಕುವ ಕುರಿತು ಚರ್ಚೆ ನಡೆಯಿತು.

ಪಂಚಾಯತ್ ಉಪಾಧ್ಯಕ್ಷ ರವಿ ಕುಮಾರ್ ಬರೆಮೇಲು, ಸಂಚಾರಿ ಪೊಲೀಸ್ ಠಾಣೆಯ ಪಿಎಸ್ ಐ ಅರ್ಜುನ್, ವರ್ತಕರು, ವಾಹನ ಚಾಲಕ-ಮಾಲಕ ಸಂಘದ ಪದಾಧಿಕಾರಿಗಳು, ಸಾರ್ವಜನಿಕರು, ಕಾರ್ಯದರ್ಶಿ
ಶ್ರವಣ್ ಕುಮಾರ್ ಉಪಸ್ಥಿತರಿದ್ದರು.ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪ್ರಕಾಶ ಶೆಟ್ಟಿ ನೊಚ್ಚ ಕಾರ್ಯಕ್ರಮ ನಿರ್ವಹಿಸಿದರು.


ಮುಗಿಯದ ಗೋಳು:
ಉಜಿರೆ ಪೇಟೆಯಲ್ಲಿ ವಾಹನ ಪಾರ್ಕಿಂಗ್ ಸಮಸ್ಯೆ ಮುಗಿಯದ ಗೋಳಾಗಿದೆ.ಖಾಸಗಿ ಹಾಗೂ ಬಾಡಿಗೆ ವಾಹನಗಳನ್ನು ಎಲ್ಲೆಂದರಲ್ಲಿ ಪಾರ್ಕಿಂಗ್ ಮಾಡುವುದು ಇಲ್ಲಿ ಮಾಮೂಲಾಗಿದೆ.ಇದರಿಂದ ಜನಸಾಮಾನ್ಯರು ತಿರುಗಾಡಲು ಸಾಧ್ಯವಾಗದ ಸ್ಥಿತಿ ಇದೆ.ಉಜಿರೆಯಲ್ಲಿ ಐದಕ್ಕಿಂತ ಹೆಚ್ಚು ಕಡೆ ಬಸ್ ಸ್ಟ್ಯಾಂಡ್ ಗಳಿದ್ದು, ಬಸ್ ಗಳು ರಸ್ತೆ ಮೇಲೆ ನಿಲ್ಲುವುದು ಸುಗಮ ಸಂಚಾರಕ್ಕೆ ಅಡ್ಡಿಯಾಗುತ್ತಿದೆ.ಗೂಡ್ಸ್ ವಾಹನಗಳನ್ನು ರಸ್ತೆ ಮಧ್ಯೆ ನಿಲ್ಲಿಸಿ ಅಂಗಡಿಗಳಿಗೆ ಸಾಮಗ್ರಿಗಳನ್ನು ಸಾಗಿಸುವುದು ಸಂಚಾರಕ್ಕೆ ಅಡಚಣೆ ನೀಡುತ್ತಿದೆ.ಅಂಗಡಿ, ಹೋಟೆಲ್ ಗಳಿಗೆ ವಾಹನಗಳ ಮಧ್ಯೆ ಹೋಗಿ ಬರುವುದು ಚಕ್ರವ್ಯೂಹ ಭೇದಿಸಿದಷ್ಟು ಕಠಿಣವಾಗಿದೆ.ರಸ್ತೆ ಬದಿ ವ್ಯಾಪಾರ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.
ಈ ಸಮಸ್ಯೆಗಳ ಕುರಿತು ಪತ್ರಿಕೆಗಳಲ್ಲಿ ಹಲವು ಬಾರಿ ವರದಿ ಪ್ರಕಟವಾಗಿತ್ತು.ಪ್ರತಿ ಗ್ರಾಮ ಸಭೆಯಲ್ಲಿ ಈ ವಿಚಾರಗಳು ಚರ್ಚೆಯ ಪ್ರಮುಖ ಅಂಶಗಳಾಗಿದ್ದವು. ಇದರಲ್ಲಿ ಸದ್ಯ ಪಾರ್ಕಿಂಗ್, ಹಾಗೂ ಬೀದಿ ಬದಿ ಅನಧಿಕೃತ ವ್ಯಾಪಾರ ಸಮಸ್ಯೆಗೆ ಸೂಕ್ತ ಕ್ರಮ ದೊರಕುವ ನಿರೀಕ್ಷೆ ಇದೆ.

LEAVE A REPLY

Please enter your comment!
Please enter your name here