ಉಜಿರೆ: ಎಸ್.ಡಿ.ಎಂ ಬಿ.ವೋಕ್ ವಿಭಾಗದಿಂದ ಲುಮೋಸ್ ಸಂಘದ ಉದ್ಘಾಟನೆ-ವಿದ್ಯಾರ್ಥಿಗಳು ರಚಿಸಿದ ವ್ಯಾಸಂಗಿಗಳ ಕತೆಗಳು ಪುಸ್ತಕ ಬಿಡುಗಡೆ

0

ಉಜಿರೆ: ಎಸ್.ಡಿ.ಎಂ ಕಾಲೇಜಿನ ಬಿ.ವೋಕ್ ವಿಭಾಗದಿಂದ ‘ಲುಮೋಸ್’ ಸಂಘದ ಉದ್ಘಾಟನೆ ಹಾಗೂ ವಿದ್ಯಾರ್ಥಿಗಳಿಂದಲೇ ರಚಿಸಿದ ‘ವ್ಯಾಸಂಗಿಗಳ ಕತೆಗಳು’ ಪುಸ್ತಕ ಬಿಡುಗಡೆಯ ಕಾರ್ಯಕ್ರಮ ನಡೆಯಿತು.

ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರದಲ್ಲಿ ನಡೆದ ಪುಸ್ತಕ ಬಿಡುಗಡೆ ಹಾಗೂ ಸಂಘಗಳ ಉದ್ಘಾಟನೆ ಕಾರ್ಯಕ್ರಮವನ್ನು ವಾಣಿ ಪದವಿ ಪೂರ್ವ ಕಾಲೇಜಿನ ಉಪಪ್ರಾಂಶುಪಾಲ ವಿಷ್ಣು ಪ್ರಕಾಶ್ ನೆರವೇರಿಸಿದರು. ಬಳಿಕ ಮಾತನಾಡಿ,ನಿರಂತರ ಓದು ಮಾಹಿತಿಪೂರ್ಣ ವರದಿಗಾರಿಕೆಗೆ ಹಾಗೂ ವೃತ್ತಿಯಲ್ಲಿ ಯಶಸ್ಸು ಗಳಿಸಲು ನೆರವಾಗುತ್ತದೆ ಎಂದರು.

ಇತಿಹಾಸದಲ್ಲಿನ ಸಾಕಷ್ಟು ವಿಷಯಗಳನ್ನು ಆಧುನಿಕ ನೆಲೆಗಟ್ಟಿನಲ್ಲಿ ಬಳಸಿಕೊಳ್ಳಬೇಕು, ಇದನ್ನಳವಡಿಸಿಕೊಂಡು ಮಾಧ್ಯಮಗಳು ಜನರಲ್ಲಿ ಹೊಸ ಭರವಸೆ ಹುಟ್ಟುಹಾಕಬೇಕು ಎಂದು ಸಲಹೆ ನೀಡಿದರು. ಈ ನಿಟ್ಟಿನಲ್ಲಿ ಎಸ್.ಡಿ.ಎಂ ಕಾಲೇಜು ವಿದ್ಯಾರ್ಥಿಗಳಿಗೆ ಉತ್ತಮ ತರಬೇತಿ ನೀಡುತ್ತಿದ್ದು, ಸಾಕಷ್ಟು ಅವಕಾಶಗಳನ್ನು ಒದಗಿಸುತ್ತಿವೆ ಎಂದು ಶ್ಲಾಘಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎಸ್.ಡಿ.ಎಂ ಕಾಲೇಜಿನ ಪ್ರಾಂಶುಪಾಲ ಡಾ.ಕುಮಾರ ಹೆಗ್ಡೆ ಬಿ.ಎ ಮಾತನಾಡಿದರು. ನಿತ್ಯ ಜೀವನದಲ್ಲಿ ಹೆಚ್ಚು ತೊಡಗಿಕೊಂಡಾಗ ವ್ಯಕ್ತಿಗತ ಬೆಳವಣಿಗೆಯಾಗುತ್ತದೆ. ಕೆಲಸದಲ್ಲಿ ಸಮರ್ಪಣೆ ಹಾಗೂ ತೊಡಗಿಸಿಕೊಳ್ಳುವಿಕೆ ಬಹಳ ಮುಖ್ಯ ಎಂದರು. ಈ ಸಂದರ್ಭದಲ್ಲಿ ‘ನಡೆಯುವವರು ಎಡವದೇ ಕುಳಿತವರು ಎಡವುತ್ತಾರೆಯೇ’ ಎಂಬ ನಾಣ್ನುಡಿಯನ್ನು ನೆನಪಿಸಿಕೊಂಡರು.

ವಿದ್ಯಾರ್ಥಿ ಜೀವನದಲ್ಲಿ ಆತ್ಮವಿಶ್ವಾಸ, ತಿಳುವಳಿಕೆ ಹಾಗೂ ಸಂವಹನ ಕೌಶಲ್ಯ ಬಹಳ ಮುಖ್ಯ. ಈ ಮೂರು ಅಂಶಗಳನ್ನು ಅಳವಡಿಸಿಕೊಂಡರೆ ಯಶಸ್ಸಿನ ಹಾದಿ ಸುಗಮವಾಗುತ್ತದೆ ಎಂದರು. ಮಾಧ್ಯಮ ಕ್ಷೇತ್ರದಲ್ಲಿ ಎಲ್ಲಾ ವಿಷಯಗಳ ಕುರಿತು ಅರಿವುಹೊಂದಿರುವುದು ಅಗತ್ಯ, ಇದಕ್ಕೆ ಓದು ಸಹಾಯ ಮಾಡುತ್ತದೆ ಎಂದರು.

ಬಿ.ವೋಕ್ ವಿಭಾಗದ ಸಂಯೋಜಕ ಸುವೀರ್ ಜೈನ್ ಪ್ರಾಸ್ತಾವಿಕ ನುಡಿಗಳನ್ನಾಡಿದರು.ಬಿ.ವೋಕ್ ವಿಭಾಗದ ಮುಖ್ಯಸ್ಥ ಮಾಧವ ಹೊಳ್ಳ ಸ್ವಾಗತ ಭಾಷಣ ಮಾಡಿದರು. ಸಹಾಯಕ ಪ್ರಾಧ್ಯಾಪಕಿ ಅಶ್ವಿನಿ ಜೈನ್ ?ಲುಮೋಸ್’ ಸಂಘದ 2022-23 ವಾರ್ಷಿಕ ವರದಿ ಹಾಗೂ 2023-24 ವರ್ಷದ ಕಾರ್ಯಚಟುವಟಿಕೆಗಳ ಬಗ್ಗೆ ವಿವರಿಸಿದರು. ‘ವ್ಯಾಸಂಗಿಗಳ ಕತೆಗಳು’ ಪುಸ್ತಕಕ್ಕೆ ಕೊಡುಗೆ ನೀಡಿದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.

ಲುಮೋಸ್ ಸಂಘದ ಪ್ರತಿನಿಧಿಗಳಿಗೆ ಪ್ರತಿಜ್ಞಾ ವಾಚನ ಮಾಡಲಾಯಿತು.ಕಾರ್ಯಕ್ರಮವನ್ನು ಅಂಕಿತಾ ಸ್ವಾಗತಿಸಿ, ಸಹಾಯಕ ಪ್ರಾಧ್ಯಾಪಕಿ ತೇಜಸ್ವಿನಿ ವಂದಿಸಿದರು.

LEAVE A REPLY

Please enter your comment!
Please enter your name here