


ಬೆಳ್ತಂಗಡಿ: ದಯಾ ವಿಶೇಷ ಶಾಲೆಯಲ್ಲಿ ಅ.29ರಂದು ನಡೆದ ಪೋಷಕರ ಸಭೆ ಹಾಗೂ ವಿಶ್ವ ಆರೈಕೆದಾರರ ದಿನಾಚರಣೆಲ್ಲಿ ಮಾತನಾಡಿದ ಶಾಲೆಯ ನಿರ್ದೇಶಕ ಫಾ. ವಿನೋದ್ ಮಸ್ಕರೇನ್ಹಸ್, ದಯಾ ವಿಶೇಷ ಶಾಲೆಯು ಕಳೆದ 8 ವರ್ಷಗಳಿಂದ ಈವರೆಗೆ 150 ವಿಶೇಷ ಚೇತನ ಮಕ್ಕಳಿಗೆ ವಿವಿಧ ಸೇವೆಯನ್ನು ನೀಡುತ್ತಾ ಬಂದಿರುತ್ತದೆ.
ಅನೇಕ ಸಹೃದಯ ದಾನಿಗಳು ಅವರ ಸಣ್ಣಪುಟ್ಟ ಆಸೆ ಆಕಾಂಕ್ಷೆಗಳನ್ನು ತ್ಯಜಿಸಿ ಅದರಿಂದ ಉಳಿಕೆಮಾಡಿದ ಹಣವನ್ನು ನಮ್ಮ ಸಂಸ್ಥೆಗೆ ಈ ವಿಶೇಷ ಚೇತನ ಮಕ್ಕಳಿಗೆ ಉತ್ತಮ ಸೇವೆಯನ್ನು ನೀಡುವ ಸಲುವಾಗಿ ನಮಗೆ ನೀಡಿರುತ್ತಾರೆ. ಅವರ ಆ ತ್ಯಾಗಕ್ಕೆ ಪ್ರತಿಯಾಗಿ ಸಂಸ್ಥೆಯಲ್ಲಿ ಇಂದು ಈ ಮಕ್ಕಳಿಗೆ ನಮ್ಮಿಂದ ಸಾಧ್ಯವಾಗುವುದ್ಕಿಂತ ಹೆಚ್ಚಿನ ಶ್ರಮವಹಿಸಿ, ಮಕ್ಕಳು ತಮ್ಮ ವೈಕಲ್ಯತೆಯನ್ನು ಮೆಟ್ಟಿ ನಿಂತು, ಸಮಾಜದಲ್ಲಿ ಉತ್ತಮ ರೀತಿಯಲ್ಲಿ ಎಲ್ಲರಂತೆ ಬಾಳಿ ಬದುಕಲು ಬೇಕಾದ ಎಲ್ಲಾ ತರಬೇತಿಯನ್ನು ಸಿಬ್ಬಂದಿವರ್ಗದವರೊಂದಿಗೆ ಸೇರಿ ಅವರಿಗೆ ನೀಡಲಾಗುತ್ತಿದೆ.



ನಮ್ಮ ಈ ಪಯಣದಲ್ಲಿ ಎಲ್ಲಾ ಪೋಷಕರು ಮತ್ತು ಈ ಮಕ್ಕಳ ಆರೈಕೆದಾರರ ಪಾತ್ರ ತುಂಬಾ ಮಹತ್ವದ್ದು. ಇಂದು ನಾವು ಈ ಶುಭ ಸಂದರ್ಭದಲ್ಲಿ ನಮ್ಮ ಎಲ್ಲಾ ಪೋಷಕರನ್ನು ಗೌರವಿಸುತ್ತೇವೆ ಮತ್ತು ಅವರು ಈ ಮಕ್ಕಳಿಗೆ ನೀಡುವ ಎಲ್ಲಾ ಸೇವೆಯು ದೇವರ ಸನ್ನಿಧಿಯಲ್ಲಿ ಪರಿಗಣಿಸಲ್ಪಡಲಿ ಮತ್ತು ಅವರ ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯುವಂತಾಗಲಿ ಎಂದು ಶುಭಹಾರೈಸಿದರು.
ಶಾಲೆಯ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಶುಭಕರ್ ಮಾತನಾಡಿ, ಈ ಸಂಸ್ಥೆಯ ನಿರ್ದೇಶಕರ ಹಾಗೂ ಎಲ್ಲಾ ಸಿಬ್ಬಂದಿವರ್ಗದವರ ಸಹಾಯ ಮತ್ತು ಸಹಕಾರಗಳು ಮತ್ತು ಅವರು ನಮ್ಮ ಪ್ರತಿಯೊಬ್ಬ ಮಕ್ಕಳಿಗೆ ನೀಡುವ ಸೇವೆಯಿಂದಾಗಿ ಇಂದು ನಮ್ಮ ಮಕ್ಕಳು ಎಲ್ಲಾ ರೀತಿಯಲ್ಲೂ ಅಭಿವೃಧ್ಧಿಯನ್ನು ಸಾಧಿಸಲು ಸಾಧ್ಯವಾಗಿದೆ. ನಾವೆಲ್ಲರೂ ಈ ಸಂಸ್ಥೆಗೆ ಋಣಿಯಾಗಿದ್ದೇವೆ ಎಂದರು.
ಮಕ್ಕಳ ಎಲ್ಲಾ ಪೊಷಕರಿಗೆ, ಆರೈಕೆದಾರರಿಗೆ ಹೂವನ್ನು ನೀಡಿ ಶುಭಾಶಯವನ್ನು ಕೋರಲಾಯಿತು. ಶಾಲಾ ವಿದ್ಯಾರ್ಥಿ ಕುಮಾರಿ ರಶ್ಮಿ ಪೋಷಕರ ಬಾಂಧವ್ಯವನ್ನು ಸೂಚಿಸುವ ಹಾಡು ಹಾಡಿದರು. ಶಾಲೆಯ ಆಪ್ತಸಮಾಲೋಚಕ ಮೆರಿನ್, ಶಾಲಾ ಮಕ್ಕಳ ಫೋಷಕರು, ದಯಾ ವಿಶೇಷ ಶಾಲೆಯ ಶಿಕ್ಷಕ ಮತ್ತು ಶಿಕ್ಷಕೇತರ ಸಿಬ್ಬಂದಿಗಳು ಮತ್ತು ವಿಶೇಷ ಚೇತನ ಮಕ್ಕಳು ಉಪಸ್ಥಿತರಿದ್ದರು. ವಿಶೇಷ ಶಿಕ್ಷಕಿ.ಚಿರಂಜೀವಿ ನಿರೂಪಿಸಿದರು.









