ಮಲವಂತಿಗೆ : ಮಲವಂತಿಗೆ ಗ್ರಾಮ ಪಂಚಾಯತ್ 2023- 24ನೇ ಸಾಲಿನ ಪ್ರಥಮ ಹಂತದ ಗ್ರಾಮ ಸಭೆಯು ಗ್ರಾಮ ಪಂಚಾಯತ್ ಅಧ್ಯಕ್ಷೆ ಅನಿತಾರವರ ಅಧ್ಯಕ್ಷತೆಯಲ್ಲಿ ಮಲವಂತಿಗೆ ಅನುದಾನಿತ ಖಾಸಗಿ ಹಿರಿಯ ಪ್ರಾಥಮಿಕ ಶಾಲಾ ವಠಾರ ಸಭಾಂಗಣದಲ್ಲಿ ಜುಲೈ 19ರಂದು ನಡೆಯಿತು.
ನೋಡಲ್ ಅಧಿಕಾರಿಯಾಗಿ ಸಹಾಯಕ ನಿರ್ದೇಶಕಿ ಅಕ್ಷರ ದಾಸೋಹ ಅಧಿಕಾರಿ ತಾರಕೇಸರಿ ಭಾಗವಹಿಸಿದ್ದರು.ಕಾರ್ಯಕ್ರಮವನ್ನು ರಶ್ಮಿ ಬಿ ( ಅಭಿವೃದ್ಧಿ ಅಧಿಕಾರಿ) ಸ್ವಾಗತಿಸಿ ಜಾಮ ಖರ್ಚಿನ ವರದಿಯನ್ನು ಮಂಡಿಸಿದರು.
ಉಯ್ಯಾಲೆಯಲ್ಲಿ ಬಿದ್ದು ಸಾವನಪ್ಪಿದ ಶ್ರೀಶ ಬಾಲಕನಿಗೆ ಮೌನ ಪ್ರಾರ್ಥನೆ ಮಾಡಿ ಸಭೆಯನ್ನು ಮುನ್ನಡೆಸಿದರು.
ತೋಟಗಾರಿಕೆ ಇಲಾಖೆ ಸೇರಿದಂತೆ ಕೆಲವು ಅಗತ್ಯ ಇಲಾಖೆಗಳ ಅಧಿಕಾರಿಗಳು ಗ್ರಾಮ ಸಭೆಯಲ್ಲಿ ಭಾಗವಹಿಸದಿರುವ ಕುರಿತು ಗ್ರಾಮಸ್ಥರಿಂದ ಆಕ್ಷೇಪ ವ್ಯಕ್ತವಾಯಿತು.ಇದಕ್ಕೆ ಉತ್ತರಿಸಿದ ಪಿಡಿಒ ತಾಪಂ ಇಒ ಅಗತ್ಯ ಇಲಾಖೆಯ ಅಧಿಕಾರಿಗಳು ಭಾಗವಹಿಸಲು ಪತ್ರ ಮುಖೇನ ತಿಳಿಸಿದ್ದಾರೆ ಎಂದು ಹೇಳಿದರು.ಸಂಬಂಧ ಪಟ್ಟ ಇಲಾಖೆಗಳಿಗೆ ವ್ಯಾಪ್ತಿಯ ಸಮಸ್ಯೆ ಇದ್ದಲ್ಲಿ ಗ್ರಾಮ ಸಭೆಯ ಗಮನಕ್ಕೆ ತನ್ನಿ, ಅಧಿಕಾರಿಗಳಿಗೆ ತಿಳಿಸಲಾಗುವುದು ಎಂದು ನೋಡಲ್ ಅಧಿಕಾರಿ ಹೇಳಿದರು.ಇದಕ್ಕೆ ಗ್ರಾಮಸ್ಥರು ಪ್ರತಿ ಬಾರಿ ಇದೆ ರೀತಿ ಆಗುತ್ತಿದ್ದು, ಕಳೆದ ಗ್ರಾಮ ಸಭೆಯ ಬೇಡಿಕೆಗಳು ಇನ್ನೂ ಪೂರ್ಣವಾಗಿ ಈಡೇರಿಲ್ಲ ಎಂದು ಚರ್ಚೆ ನಡೆಸಿದರು.