



ಬೆಳಾಲು: ಕೊಲ್ಪಾಡಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಹಳೆ ವಿದ್ಯಾರ್ಥಿ ಸಂಘದ ನೇತೃತ್ವದಲ್ಲಿ ಶಾಲೆಯ ಅಭಿವೃದ್ಧಿಗಾಗಿ ‘ವಿದ್ಯಾನಿಧಿ’ ಯೋಜನೆಯನ್ನು ಡಿ.14ರಂದು ಚಾಮುಂಡೇಶ್ವರಿ ಕ್ಷೇತ್ರ ಆರಿಕೋಡಿಯಲ್ಲಿ ಲೋಕಾರ್ಪಣೆ ಮಾಡಲಾಯಿತು.
ವಿದ್ಯಾನಿಧಿಯನ್ನು ಲೋಕಾರ್ಪಣೆ ಮಾಡಿದ ಧರ್ಮದರ್ಶಿ ಹರೀಶ್ ಆರಿಕೋಡಿಯವರು ಮಾತನಾಡಿ,’ ಶಾಲೆ ಎಂಬ ದೇವಾಲಯದಲ್ಲಿ ಎಲ್ಲಾ ಜಾತಿ, ಜನಾಂಗ, ಧರ್ಮದ ಮಕ್ಕಳು ವಿದ್ಯಾಭ್ಯಾಸವನ್ನು ಮಾಡುತ್ತಾರೆ. ಶಾಲೆ ಅಭಿವೃದ್ಧಿ ಹೊಂದಿದಾಗ ಇಡೀ ಊರೇ ಅಭಿವೃದ್ಧಿ ಆಗುತ್ತದೆ. ಹಳೆ ವಿದ್ಯಾರ್ಥಿಗಳ ಈ ಕಾರ್ಯ ಅತ್ಯಂತ ಶ್ರೇಷ್ಠ ವಾದದ್ದು’ ಎಂದು ಶುಭ ಹಾರೈಸಿದರು. ಮತ್ತು ಮೊದಲ ದೇಣಿಗೆಯಾಗಿ ಕ್ಷೇತ್ರದ ವತಿಯಿಂದ ದೇಣಿಗೆಯ ಚೆಕ್ ಹಸ್ತಾಂತರ ಮಾಡಿದರು.


ಕಳೆದ 63 ವರ್ಷಗಳ ಹಿಂದೆ ಬೆಳಾಲು ಗ್ರಾಮದಲ್ಲೇ ಮೊಟ್ಟ ಮೊದಲನೆಯ ಶಾಲೆಯಾಗಿ ಸ್ಥಾಪನೆಯಾದ ಈ ಶಾಲೆ ಇತ್ತೀಚಿಗೆ ಮಕ್ಕಳ ಸಂಖ್ಯೆಯಲ್ಲಿ ಕೊರತೆಯಾಗುತ್ತಿರುವ ಸಂದರ್ಭದಲ್ಲಿ ಶಾಲೆಯನ್ನು ಇನ್ನಷ್ಟು ಅಭಿವೃದ್ಧಿಗೊಳಿಸಿ,ಉಳಿಸಿಕೊಳ್ಳುವ ನಿಟ್ಟಿನಲ್ಲಿ ಹಳೆ ವಿದ್ಯಾರ್ಥಿಗಳ ಸೇರಿಕೊಂಡು ‘ವಿದ್ಯಾನಿಧಿ’ಎಂಬ ಹೊಸದಾದ ಯೋಜನೆಯನ್ನು ಪ್ರಾರಂಭಿಸುತ್ತಿದ್ದು, ಇದರಲ್ಲಿ ಶಾಲಾ ಹಳೆ ವಿದ್ಯಾರ್ಥಿಗಳು, ವಿದ್ಯಾಭಿಮಾನಿಗಳು ತಮ್ಮ ದುಡಿಮೆಯ ಒಂದಂಶವನ್ನು ಶಾಲಾ ಚಟುವಟಿಕೆಗಳಿಗೆ ಪ್ರತಿ ತಿಂಗಳು ಅಥವಾ ವರ್ಷಕ್ಕೊಮ್ಮೆ ಯೋಜನೆಯ ಖಾತೆಗೆ ಸ್ಕ್ಯಾನ್ ಮಾಡುವ ಅವಕಾಶ ಕಲ್ಪಿಸಲಾಗಿದೆ.
ಶಾಲಾ ಮುಖ್ಯೋಪಾಧ್ಯಾಯ ಸುರೇಶ್ ಮಾಚಾರ್, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಲೋಕೇಶ್ ಓಣಾಜೆ, ಉಪಾಧ್ಯಕ್ಷ ಲೋಕೇಶ್ ಮಂಡಾಲ್, ಕೋಶಾಧಿಕಾರಿ ಕರಿಯಣ್ಣ ಬೇರಿಕೆ ಹಾಗೂ ಶಾಲಾ ಎಸ್.ಡಿ.ಎಂ.ಸಿ.ಅಧ್ಯಕ್ಷ ಹರೀಶ್ ಕೆರೆಕೋಡಿ ಮತ್ತು ಪೋಷಕರು, ಶಾಲಾ ಹಳೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.









