


ಉಜಿರೆ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವಸತಿ ಪದವಿಪೂರ್ವ ಕಾಲೇಜಿನ ‘ಕನ್ನಡ ಸಂಘ’ದ ವತಿಯಿಂದ ವಿದ್ಯಾರ್ಥಿಗಳು ಶ್ರೀ ಧರ್ಮಸ್ಥಳ ಸಂಸ್ಕೃತಿ ಸಂಶೋಧನಾ ಪ್ರತಿಷ್ಠಾನಕ್ಕೆ ಭೇಟಿ ನೀಡಿ ಪುರಾತನ ಸಾಹಿತ್ಯದ ಪರಿಕರಗಳನ್ನು ವೀಕ್ಷಿಸಿದರು.
ಕೈಯಲ್ಲಿ ಮುದ್ರಿಸಲಾದ ಹಾಳೆಗಳಲ್ಲಿ ಚಿನ್ನದ ಮಿಶ್ರಣವನ್ನು ಸೇರಿಸಿ ಬರೆಯಲಾದ ಲಿಪಿಗಳು ಹಾಗೂ ಹಿಂದಿನ ತಾಳೆಗರಿಗಳು ಪುಸ್ತಕಗಳು ಹಾಗೂ ಲಿಪಿಗಳನ್ನು ಸಂಗ್ರಹಿಸಿ ಸಂರಕ್ಷಿಸುವ ವಿಧಾನವನ್ನು ವಿದ್ಯಾರ್ಥಿಗಳು ತಿಳಿದುಕೊಂಡರು.
ಧರ್ಮಸ್ಥಳ ಸಂಸ್ಕೃತಿ ಸಂಶೋಧನ ಪ್ರತಿಷ್ಠಾನದ ನಿರ್ದೇಶಕ ಡಾ| ವಿಘ್ನರಾಜ ವಿದ್ಯಾರ್ಥಿಗಳಿಗೆ ಭಾರತೀಯ ಲಿಪಿಗಳ ವಂಶವೃಕ್ಷದ ವಿವರಣೆ ನೀಡುತ್ತಾ ಬ್ರಾಹ್ಮಿ, ದೇವನಾಗರಿ, ಖರೋಷ್ಠಿ, ಶಾರದಾ ಅಸ್ಸಾಮಿ, ಪಂಜಾಬಿ, ಮಳೆಯಾಳಂ, ತುಳು ಕನ್ನಡ ಹಾಗೂ ಇತರ ಲಿಪಿಗಳ ಹುಟ್ಟಿನ ಕುರಿತು ವಿವರಣೆ ನೀಡಿದರು.
ಸುಮಾರು 350ಕ್ಕೂ ಹೆಚ್ಚಿನ ತಾಳೆಗರಿಗಳ ಕಟ್ಟುಗಳು,ಧರ್ಮಸ್ಥಳ ಮಂಜುನಾಥ ಸ್ವಾಮಿ ದೇವಾಲಯದ ಹಳೆಯ ಕಡತಗಳನ್ನು ವಿದ್ಯಾರ್ಥಿಗಳಿಗೆ ತೋರಿಸಿಕೊಟ್ಟರು. ತಾಳೆಗರಿಗಳನ್ನು ಸಂರಕ್ಷಿಸುವ ವಿಧಾನಗಳ ಕುರಿತು ಅದರ ಅಧ್ಯಯನ ಪ್ರಕ್ರಿಯೆಯ ಕುರಿತು ಮಾಹಿತಿ ನೀಡಿದರು. ಸಂಶೋಧನಾ ಪ್ರತಿಷ್ಠಾನದಲ್ಲಿ ಸಂಗ್ರಹಿಸಲಿಟ್ಟಿರುವ ಶ್ರೇಷ್ಠ ಕವಿಗಳ ಹಸ್ತಾಕ್ಷರದಿಂದ ಬರೆದ ಕಾವ್ಯದ ಪ್ರತಿ ಪ್ರಾಚೀನ ಕವಿಗಳ ಕಾವ್ಯಗಳು ಆಯುರ್ವೇದ, ವೇದ ಉಪನಿಷತ್ಗಳ ಸಂಗ್ರಹಗಳ ಬಗ್ಗೆ ಮಾಹಿತಿ ನೀಡಿದರು.



ಡಾ.ವೀರೇಂದ್ರ ಹೆಗ್ಗಡೆಯವರು ಪ್ರತಿಷ್ಠಾನದ ಕುರಿತು ಹೊಂದಿರುವ ತೀವ್ರ ಕಾಳಜಿಯಿಂದ ಒದಗಿಸುವ ಸವಲತ್ತುಗಳ ಬಗ್ಗೆ ತಿಳಿಸಿ ಅಧ್ಯಯನಶೀಲರಾಗಿ ಎಂದು ಮಕ್ಕಳಿಗೆ ಕಿವಿ ಮಾತು ಹೇಳಿದರು.
ಕಾಲೇಜಿನ ಪ್ರಾಂಶುಪಾಲ ಸುನೀಲ್ ಪಂಡಿತ್, ಗಣಿತಶಾಸ್ತ್ರ ಉಪನ್ಯಾಸಕಿ ಧನಲಕ್ಷ್ಮೀ, ಕನ್ನಡ ವಿಭಾಗದ ಉಪನ್ಯಾಸಕಿ ಹಾಗೂ ಕನ್ನಡ ಸಂಘದ ಸಂಯೋಜಕಿ ಕವಿತಾ ಉಮೇಶ್,ಕಾಲೇಜಿನ ಗ್ರಂಥಪಾಲಕ ಗಿರಿಧರ್, ಕಾಲೇಜು ನಿಲಯಪಾಲಕರು ವಿದ್ಯಾರ್ಥಿಗಳ ಜೊತೆಗಿದ್ದರು.


            





