


ಬೆಳ್ತಂಗಡಿ: ತಾಲೂಕಿನ ಬಂಟರ ಸಂಘವನ್ನು ಸಾಲಮುಕ್ತಗೊಳಿಸುವಲ್ಲಿ ಬಹಳ ದೊಡ್ಡ ಕೊಡುಗೆಯನ್ನು ನೀಡಿರುವ ಬಂಟರ ಯಾನೆ ನಾಡವರ ಸಂಘ(ರಿ)ದ ಗೌರವ ಮಾರ್ಗದರ್ಶಕರಾಗಿರುವ ನವಶಕ್ತಿಯ ಉದ್ಯಮಿ ಶಶಿಧರ ಶೆಟ್ಟಿ ಬರೋಡರು, ತಮ್ಮ ತಾಯಿ ಕಾಶಿ ಶೆಟ್ಟಿಯವರ ಸ್ಮರಣಾರ್ಥ ಬೆಳ್ತಂಗಡಿ ತಾಲೂಕಿನ ಬಡ ಬಂಟ ಕುಟುಂಬಗಳಿಗೆ ಮನೆ ನಿರ್ಮಾಣಕ್ಕೆ ಆರ್ಥಿಕ ನೆರವು ನೀಡುವ ಯೋಜನೆಯನ್ನು ಘೋಷಿಸಿದ್ದಾರೆ.


ಬಂಟರ ಸಂಘದ ಮೂಲಕ ಅನುಷ್ಠಾನಗೊಳ್ಳಲಿರುವ ಈ ಯೋಜನೆಯನ್ವಯ ಪ್ರಥಮ ಹಂತದಲ್ಲಿ ಬೆಳ್ತಂಗಡಿ ತಾಲೂಕಿನ 9 ವಲಯಗಳಿಗೆ ತಲಾ ಒಂದರಂತೆ ಒಟ್ಟು ಒಂಬತ್ತು ಕುಟುಂಬಗಳಿಗೆ ಮನೆ ನಿರ್ಮಾಣಕ್ಕಾಗಿ ತಲಾ ರೂ : 2,00,000/-( ರೂಪಾಯಿ ಎರಡು ಲಕ್ಷ ಮಾತ್ರ) ಧನಸಹಾಯವನ್ನು ನೀಡಲಾಗುತ್ತದೆ. ಬಂಟರ ಸಂಘದ ವಲಯ ಸಮಿತಿಯ ಪದಾಧಿಕಾರಿಗಳು ತಮ್ಮ ವಲಯದಿಂದ ಸಹಾಯ ಯೋಗ್ಯ ಕುಟುಂಬವನ್ನು ಗುರುತಿಸಿ , ತಾಲೂಕು ಸಮಿತಿಗೆ ಶಿಫಾರಸು ಮಾಡಿ, ಸೂಕ್ತ ಪರಿಶೀಲನೆಯ ನಂತರ ಬಂಟರ ಸಂಘದಿಂದ ಅನುಮೋದನೆಗೊಂಡ ಮನೆಯ ನಿರ್ಮಾಣದ ಸಂಪೂರ್ಣ ಉಸ್ತುವಾರಿಯನ್ನು ವಲಯ ಸಮಿತಿಯವರು ವಹಿಸಿಕೊಳ್ಳುತ್ತಾರೆ.
ಮನೆ ನಿರ್ಮಾಣಕ್ಕೆ ತಗಲುವ ಹೆಚ್ಚುವರಿ ವೆಚ್ಚವನ್ನು ಶ್ರಮದಾನದ ಮೂಲಕ, ಅಗತ್ಯ ಸಾಮಗ್ರಿಗಳನ್ನು ಒದಗಿಸುವ ಮೂಲಕ ಅಥವಾ ಆರ್ಥಿಕ ನೆರವು ನೀಡುವ ಮೂಲಕ ಸ್ಥಳೀಯವಾಗಿ ಕ್ರೋಢೀಕರಿಸಬೇಕಾಗುತ್ತದೆ. ನಿಗದಿಪಡಿಸಿದ ಅವಧಿಯ ಒಳಗೆ ಕನಿಷ್ಠ ಸೌಲಭ್ಯಗಳನ್ನು ಒಳಗೊಂಡ ಸುಂದರ ಮನೆಯನ್ನು ನಿರ್ಮಿಸಿ ಕೊಡುವ ರೀತಿ ವ್ಯವಸ್ಥೆ ಕಲ್ಪಿಸಿಬೇಕಾಗುತ್ತದೆ. ವಲಯ ಸಮಿತಿಯ ಪದಾಧಿಕಾರಿಗಳು ಈ ವಿಚಾರವನ್ನು ಆದ್ಯತೆಯಲ್ಲಿ ಪರಿಗಣಿಸಿ ತಮ್ಮ ವಲಯದಿಂದ ಸಹಾಯ ಯೋಗ್ಯ ಕುಟುಂಬವನ್ನು ಗುರುತಿಸಿ, ಬಂಟರ ಸಂಘಕ್ಕೆ ಶಿಫಾರಸು ಮಾಡಬೇಕು ಹಾಗೂ ಬಡ ಬಂಟ ಕುಟುಂಬಗಳಿಗೆ ನೆರವು ನೀಡಲು ಒದಗಿ ಬಂದ ಈ ಅಪೂರ್ವ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುವಂತೆ ಬೆಳ್ತಂಗಡಿ ಬಂಟರ ಸಂಘ ವಿನಂತಿಸಿಕೊಂಡಿದೆ.









