ಬೆಳ್ತಂಗಡಿ: ವಿದ್ಯುತ್ ಬಿಲ್ ಕಟ್ಟುವ ವಿಚಾರಕ್ಕೆ ಸಂಬಂಧಿಸಿ ಬಡವರಿಗೆ ಒಂದು ನ್ಯಾಯ ಶ್ರೀಮಂತರಿಗೆ ಒಂದು ನ್ಯಾಯ ಎಂಬಂತಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ ಘಟನೆ ಶಿಶಿಲ ಗ್ರಾಮಸಭೆಯಲ್ಲಿ ನಡೆದಿದೆ. ಶಿಶಿಲ ಗ್ರಾಮ ಪಂಚಾಯತ್‌ನ 2023-24ನೇ ಸಾಲಿನ ಪ್ರಥಮ ಹಂತದ ಗ್ರಾಮ ಸಭೆ ಜೂ.7ರಂದು ಗ್ರಾಮ ಪಂಚಾಯತ್ ಸಭಾಭವನದಲ್ಲಿ ಅಧ್ಯಕ್ಷ ಸಂದೀಪ್ ಎ. ಎಸ್. ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಮಾರ್ಗದರ್ಶಿ ಅಧಿಕಾರಿಯಾಗಿ ತಾಲೂಕು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಹೇಮಚಂದ್ರ ಭಾಗವಹಿಸಿದ್ದರು.
ಬಡವರಿಗೊಂದು ನ್ಯಾಯ-ಶ್ರೀಮಂತರಿಗೊಂದು ನ್ಯಾಯ:
ವಿದ್ಯುತ್ ಬಿಲ್ ಕಟ್ಟುವ ವಿಚಾರಕ್ಕೆ ಸಂಬಂಧಿಸಿ ಬಡವರಿಗೆ ಒಂದು ನ್ಯಾಯ, ಶ್ರೀಮಂತರಿಗೊಂದು ನ್ಯಾಯ ಎಂಬಂತಿದೆ ಎಂದು ಗ್ರಾಮಸ್ಥ ಕರುಣಾಕರ್ ಆಕ್ಷೇಪ ವ್ಯಕ್ತಪಡಿಸಿದರು. ನಾಗನಡ್ಕ ಎಂಬಲ್ಲಿ ವ್ಯಾಸ್ ಎಂಬವರು ಮೂವತ್ತು ಸಾವಿರದವರೆಗೆ ವಿದ್ಯುತ್ ಬಿಲ್ಲು ಬಾಕಿ ಇರಿಸಿಕೊಂಡಿದ್ದಾರೆ. ಅದರ ಬಗ್ಗೆ ಇಲಾಖೆ ಏನೂ ಕ್ರಮ ಕೈಗೊಂಡಿಲ್ಲ ಎಂದು ಹೇಳಿದ ಕರುಣಾಕರ್ ಅವರು ಈ ಬಗ್ಗೆ ಮೂರು ಗ್ರಾಮ ಸಭೆಯಲ್ಲಿ ವಿಚಾರ ಮಂಡಿಸಿದರೂ ಏನೂ ಪ್ರಯೋಜನ ಆಗಲಿಲ್ಲ. 15 ದಿನದೊಳಗೆ ಅವರಿಂದ ವಿದ್ಯುತ್ ಬಿಲ್ ಕಟ್ಟಿಸಿಕೊಳ್ಳಬೇಕು. ಇಲ್ಲದಿದ್ದರೆ ಪ್ರತಿಭಟನೆ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು. ಬಡವರು ವಿದ್ಯುತ್ ಬಿಲ್ ಕಟ್ಟದಿದ್ದರೆ ವಿದ್ಯುತ್ ಸಂಪರ್ಕ ಕಡಿತ ಮಾಡಿರುವ ಹಲವು ಉದಾಹರಣೆಗಳು ಈ ಗ್ರಾಮದಲ್ಲಿ ಇದೆ ಎಂದು ಮೆಸ್ಕಾಂ ಅಧಿಕಾರಿ ಮಂಜುನಾಥ್‌ರವರಲ್ಲಿ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.15 ದಿನಗಳೊಂದಿಗೆ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದು ಮಂಜುನಾಥ್ ಭರವಸೆ ನೀಡಿದರಲ್ಲದೆ ಶಿಶಿಲ ಗ್ರಾಮಕ್ಕೆ ವಿದ್ಯುತ್ ಸಮಸ್ಯೆ ಉಂಟಾದರೆ ಉಜಿರೆಯಲ್ಲಿರುವ ಮೆಸ್ಕಾಂ ಕಛೇರಿಗೆ ತಿಳಿಸಿರಿ ಎಂದರು.
ನಿರಂತರ ಸಂಪರ್ಕದಲ್ಲಿರಬೇಕು:
ಕೃಷಿಕರಿಗೆ ಬರುವ ಸೌಲಭ್ಯಗಳ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಲು ಗ್ರಾಮಸ್ಥರು ಕೊಕ್ಕಡದಲ್ಲಿರುವ ಕೃಷಿ ಇಲಾಖೆಯ ಕಛೇರಿಯೊಂದಿಗೆ ನಿರಂತರ ಸಂಪರ್ಕದಲ್ಲಿ ಇರಬೇಕು. ಇದರಿಂದ ಕೃಷಿಕರಿಗೆ ತುಂಬಾ ಅನುಕೂಲವಾಗುತ್ತದೆ. ಕೃಷಿ ಇಲಾಖೆಯಲ್ಲಿ ಬಿತ್ತನೆ ಬೀಜ ಲಭ್ಯವಿದ್ದು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು. ಕೃಷಿ ಸಮ್ಮಾನ್ ಯೋಜನೆ ಮಾಡಿಸದವರು ಸೈಬರ್ ಕೇಂದ್ರದಲ್ಲಿ ಮಾಡಬಹುದು ಎಂದು ಸಹಾಯಕ ಕೃಷಿ ನಿರ್ದೇಶಕ ಚಿದಾನಂದ ಹೂಗಾರ್ ಹೇಳಿದರು. ಫಸಲ್ ಭೀಮಾ ಯೋಜನೆ ಹವಮಾನ ಆಧಾರಿತ ಬೆಳೆ ವಿಮೆ ಯೋಜನೆ ಬಗ್ಗೆ ಅವರು ಮಾಹಿತಿ ನೀಡಿದರು.
ಪ್ರತೀ ಮರಕ್ಕೆ 125 ರೂ ಪ್ರೋತ್ಸಾಹಧನ:
ಅರಣ್ಯ ಇಲಾಖೆಯ ಪ್ರಶಾಂತ್ ಮಾತನಾಡಿ ಸಸಿಗಳನ್ನು ವಿತರಣೆ ಮಾಡುತ್ತಿದ್ದೇವೆ. ಪಟ್ಟಾ ಜಮೀನಿನಲ್ಲಿ ನೆಡುವುದಿದ್ದರೆ ಮೂರು ವರ್ಷ ಸಾಕಿದ ನಂತರ ಪ್ರತಿ ಮರಕ್ಕೆ 125 ರೂ ಪ್ರೋತ್ಸಾಹಧನ ನೀಡುತ್ತೇವೆ. ನಮ್ಮಲ್ಲಿ ರಕ್ತ ಚಂದನ, ಸಾಗುವಾನಿ ಸಸಿಗಳನ್ನು ನೀಡುತ್ತೇವೆ ಹಾಗೂ ಪ್ರಾಣಿಗಳಿಂದ ಬೆಳೆ ಹಾನಿಯಾಗಿದ್ದರೆ ಅರ್ಜಿಗಳನ್ನು ನೀಡಿದರೆ ಬೆಳೆ ಪರಿಹಾರ ನೀಡುತ್ತೇವೆ ಎಂದು ತಿಳಿಸಿದರು. ಗ್ರಾಮದಲ್ಲಿ ಜಲಮಟ್ಟವನ್ನು ಹೆಚ್ಚಿಸಲು ಸರ್ವೆ ನಡೆಸಿದ್ದೇವೆ. ಮುಂದೆ ಸರಕಾರ ಸೂಕ್ತ ಕ್ರಮ ಮಾಡಲಿದೆ ಎಂದು ಅವರು ಹೇಳಿದರು.
ಮಾತೃ ವಂದನಾ, ಇ ಶ್ರಮ್ ಕಾರ್ಡ್, ಸುಕನ್ಯ ಸಮೃದ್ಧಿ ಖಾತೆ, ಭಾಗ್ಯಲಕ್ಷ್ಮಿ ಜನೆಗಳ ಬಗ್ಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವಿನೋದ ಮಾಹಿತಿ ನೀಡಿದರು.
ಗ್ರಾಮದಲ್ಲಿರುವ ಸರಕಾರಿ ಶಾಲೆಗಳ ಜಮೀನಿಗೆ ಇನ್ನೂ ಆರ್‌ಟಿಸಿ ಆಗಿಲ್ಲ ಎಂದು ಕಂದಾಯ ಇಲಾಖೆಯ ತೇಜಸ್ವಿನಿಯವರನ್ನು ಗ್ರಾಮಸ್ಥರು ಸಭೆಯಲ್ಲಿ ತರಾಟೆಗೆ ತೆಗೆದುಕೊಂಡ ಘಟನೆ ನಡೆಯಿತು.
ಮುಂಜಾಗ್ರತೆ ವಹಿಸಬೇಕು:
ಆರೋಗ್ಯ ಇಲಾಖೆಯ ಸುಜಾತ ಮಾತನಾಡಿ ಮಳೆಗಾಲದಲ್ಲಿ ಬರುವ ರೋಗಗಳ ಬಗ್ಗೆ ಮಾಹಿತಿ ನೀಡಿ ಸಾರ್ವಜನಿಕರು ಮುಂಜಾಗ್ರತೆ ವಹಿಸಬೇಕು ಎಂದರು. ಮನೆಯ ಸುತ್ತಮುತ್ತ ನೀರು ನಿಲ್ಲದ ಹಾಗೆ ನೋಡಿಕೊಳ್ಳಬೇಕು. ಚರಂಡಿ ವ್ಯವಸ್ಥೆ ಸರಿಪಡಿಸಿಕೊಳ್ಳಬೇಕು ಎಂದು ಅವರು ಹೇಳಿದರು.
ಸಾರ್ವಜನಿಕರು ಯಾವುದೇ ರೀತಿಯ ಸರ್ಕಾರಿ ಸೌಲಭ್ಯಗಳನ್ನು ಪಡೆಯಬೇಕಾದರೆ ಮೂಲ ದಾಖಲೆಗಳು ಅಗತ್ಯ ಬೇಕಾಗುತ್ತದೆ ಎಂದು ನೋಡಲ್ ಅಧಿಕಾರಿ ಹೇಮಚಂದ್ರ ತಿಳಿಸಿದರು. ಹೆಚ್ಚಿನ ಅಧಿಕಾರಿಗಳು ಗ್ರಾಮಸಭೆಗೆ ಗೈರು ಆಗಿರುವುದಕ್ಕೆ ಗ್ರಾಮಸ್ಥರು ಆಕ್ಷೇಪ ವ್ಯಕ್ತಪಡಿಸಿದರು. ಗ್ರಾಮ ಪಂಚಾಯತ್ ಸದಸ್ಯರುಗಳಾದ ಸುಧಿನ್, ಯಶೋಧರ ಭಟ್, ಚೆನ್ನಕ್ಕ, ಲಲಿತಾ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಜಮಾ ಖರ್ಚಿನ ವರದಿಯನ್ನು ಸಿಬ್ಬಂದಿ ಸುಂದರ್ ಮಂಡಿಸಿದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ರವೀಶ್ ವಂದಿಸಿದರು.
ಮಾದರಿ ಗ್ರಾಮ ಮಾಡುವ-ಸಂದೀಪ್ ಎ.ಎಸ್.:
ಸಭೆಯ ಅಧ್ಯಕ್ಷತೆ ವಹಿಸಿದ್ದ ಗ್ರಾಮ ಪಂಚಾಯತ್ ಅಧ್ಯಕ್ಷ ಸಂದೀಪ್ ಅವರರು ಗ್ರಾಮಸ್ಥರ ಯಾವುದೇ ಕಷ್ಟಕ್ಕೆ ಸ್ಪಂದಿಸಲು ನಾವು ಬದ್ಧರಾಗಿzವೆ. ಮನೆ ತೆರಿಗೆ, ನೀರಿನ ತೆರಿಗೆಯನ್ನು ಸಮಯಕ್ಕೆ ಸರಿಯಾಗಿ ಕಟ್ಟಿ ಗ್ರಾಮದ ಅಭಿವೃದ್ಧಿಗೆ ಗ್ರಾಮಸ್ಥರು ಕೈಜೋಡಿಸಬೇಕು. ಶಿಶಿಲ ಗ್ರಾಮವನ್ನು ಒಂದು ಮಾದರಿ ಗ್ರಾಮವನ್ನಾಗಿ ಮಾಡಲು ಸಹಕಾರ ನೀಡಬೇಕು ಎಂದು ಹೇಳಿದರು.