


ಬೆಳ್ತಂಗಡಿ: ಕಳೆದ ಜುಲೈನಲ್ಲಿ ಬೆಳಾಲು ಬಳಿ ಹಾಡಹಗಲೇ ವೃದ್ಧೆಯನ್ನು ಕೊಲೆಗೈದು ಚಿನ್ನಾಭರಣ ದೋಚಿದ್ದ ಆರೋಪದಡಿ ಬಂಧಿತನಾಗಿದ್ದ ವಿಚರಣಾಧೀನ ಖೈದಿ ಅಶೋಕ್ ಎಂಬಾತ ಅಸೌಖ್ಯದಿಂದ ಸಾವಿಗೀಡಾದ ಘಟನೆ ನಡೆದಿದೆ.
ಕಳೆದ ವರ್ಷ ಜುಲೈ 23ರಂದು ಬೆಳಾಲು ಗ್ರಾಮದ ಕೆರೆಕೋಡಿ ಎಂಬಲ್ಲಿ ಒಬ್ಬಂಟಿಯಾಗಿದ್ದ ವೃದ್ಧೆ ಅಕ್ಕುರವರಿಗೆ ದೊಣ್ಣೆಯಿಂದ ಹಲ್ಲೆ ನಡೆಸಿ ಕೊಲೆಗೈದು ಚಿನ್ನಾಭರಣ ದೋಚಿದ್ದ ಪ್ರಕರಣದಲ್ಲಿ ಬಂಧಿತನಾಗಿ ಜೈಲಿನಲ್ಲಿದ್ದ ವಿಚರಣಾಧೀನ ಖೈದಿ ಕಡಿರುದ್ಯಾವರ ಗ್ರಾಮದ ಕಾನರ್ಪ ಎಂಬಲ್ಲಿಯ ಅಶೋಕ್ ಎಂಬಾತ ಅಸೌಖ್ಯದಿಂದಾಗಿ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ಜೂನ್ 7ರಂದು ನಡೆದಿದೆ. ಬಿ.ಪಿ. ಮತ್ತು ಟಿ.ಬಿ. ಕಾಯಿಲೆ ಉಲ್ಬಣಗೊಂಡ ಕಾರಣ ಜೈಲಿನಿಂದ ಆಸ್ಪತ್ರೆ ಸೇರಿದ್ದ ಅಶೋಕ್ ಅಲ್ಲಿ ಸಾವನ್ನಪ್ಪಿದ್ದಾನೆ. ಈ ಬಗ್ಗೆ ಮಂಗಳೂರಿನ ಬರ್ಕೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವೃದ್ಧೆಯ ಮರ್ಡರ್ ಆಗಿತ್ತು:
ಬೆಳಾಲು ಗ್ರಾಮದ ಕೆರೆಕೋಡಿಯ ದಿ. ಅಮ್ಮುಗೌಡರವರ ಪತ್ನಿ ಅಕ್ಕುರವರು ಜುಲೈ 23ರಂದು ಮನೆಯಲ್ಲಿ ಒಬ್ಬರೇ ಇದ್ದರು. ಕುಟುಂಬದ ಇತರ ಸದಸ್ಯರು ಕೆಲಸಕ್ಕೆ ಹೋಗಿದ್ದರು. ಮಧ್ಯಾಹ್ನ 2 ಗಂಟೆಗೆ ಅಕ್ಕುರವರ ಮೊಮ್ಮಗಳು ಮೌಲ್ಯ ಶಾಲೆಗೆ ಹೋಗಿದ್ದವಳು ವಾಪಸಾದಾಗ ಅಜ್ಜಿಯ ಮೇಲೆ ಹಲ್ಲೆ ನಡೆದಿತ್ತು. ಅಜ್ಜಿ ರಕ್ತಸಿಕ್ತ ಸ್ಥಿತಿಯಲ್ಲಿ ಮನೆಯ ಪಕ್ಕದಲ್ಲಿರುವ ಕೊಟ್ಟಿಗೆ ಸಮೀಪ ಬಿದ್ದಿರುವುದು ಕಂಡು ಬಂದಿತ್ತು. ನಂತರ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಅಕ್ಕುರವರು ಸಾವನ್ನಪ್ಪಿದ್ದರು. ಅವರಿಗೆ ತಲೆಗೆ ಗಂಭೀರ ಏಟು ಬಿದ್ದಿತ್ತು. ಅವರ ಕಿವಿಯಲ್ಲಿದ್ದ ಬೆಂಡೋಲೆಯನ್ನು ಎಳೆದು ಕಿತ್ತು ತೆಗೆದಿದ್ದು, ಕಿವಿ ಹರಿದು ಹೋಗಿತ್ತು. ಇದರ ಜೊತೆ 20 ಸಾವಿರ ರೂಪಾಯಿ ಕಳವಾಗಿತ್ತು. ಈ ಕೃತ್ಯವನ್ನು ಸಂಬಂಧಿಕರೇ ಮಾಡಿರಬೇಕು ಎಂದು ಸಂಶಯ ಮೂಡಿಸಿತ್ತು. ಕಡಿರುದ್ಯಾವರ ಗ್ರಾಮದ ಕಾನರ್ಪ ನಿವಾಸಿ ಅಶೋಕ ಎಂಬಾತ ಆಗಾಗ ಸಂಬಂಧಿಕರಾಗಿರುವ ಅಕ್ಕುರವರ ಮನೆಗೆ ಬರುತ್ತಿದ್ದು ಆತನೇ ಈ ಕೃತ್ಯ ಎಸಗಿರಬೇಕು ಎಂದು ಬಲವಾದ ಶಂಕೆ ವ್ಯಕ್ತವಾಗಿತ್ತು. ಈತ ಕೆಲಸ ಮಾಡುತ್ತಿದ್ದ ಐಸ್ ಕ್ರೀಮ್ ಫ್ಯಾಕ್ಟರಿಯಿಂದ ರಜೆ ಪಡೆದಿದ್ದ. ಅಲ್ಲದೆ ಘಟನೆಯ ನಂತರ ಈತನ ಓಡಾಟವನ್ನು ಕಂಡ ಕೆಲವರು ಇವನ ಮೇಲೆ ಸಂಶಯ ವ್ಯಕ್ತಪಡಿಸಿದ್ದರು. ಅಲ್ಲದೆ ಈತ ಉಜಿರೆಯ ಜುವೆಲ್ಲರಿಯೊಂದಕ್ಕೆ ಬೆಂಡೋಲೆ ಮಾರಾಟ ಮಾಡಿರುವುದನ್ನು ಪತ್ತೆ ಹಚ್ಚಿದ್ದರು.
ಅಶೋಕನ ಮೇಲೆ ಸಂಶಯ ವ್ಯಕ್ತವಾದ ಹಿನ್ನೆಲೆಯಲ್ಲಿ ಪೊಲೀಸರು ಆತನ ಮೊಬೈಲ್ ನಂಬರ್ ಗೆ ಕರೆ ಮಾಡಿದಾಗ ಆತ ಒಮ್ಮೆ ನಾರಾವಿಯಲ್ಲಿ ಇರುವುದಾಗಿ ತಿಳಿಸಿದ್ದ. ಮತ್ತೊಮ್ಮೆ ನೆಲ್ಯಾಡಿಯಲ್ಲಿದ್ದೇನೆ ಎಂದು ಹೇಳಿದ್ದ. ಇದರಿಂದಾಗಿ ಆತನೇ ಈ ಕೃತ್ಯ ನಡೆಸಿರಬಹುದೆಂದು ಸಂಶಯ ವ್ಯಕ್ತಪಡಿಸಿ ಆತನ ಮೊಬೈಲ್ ಟ್ರ್ಯಾಪ್ ಮಾಡಿದಾಗ ಆತ ಸೋಮಂತಡ್ಕದಲ್ಲಿ ಇರುವುದು ಪತ್ತೆಯಾಗಿತ್ತು. ನಂತರ ಸೋಮಂತಡ್ಕದ ನವೋದಯ ಬಳಿಯಿಂದ ಆತನನ್ನು ಬಂಧಿಸಲಾಗಿತ್ತು. ನಂತರ ನ್ಯಾಯಾಂಗ ಬಂಧನದಲ್ಲಿದ್ದ ಆತ ಟಿ.ಬಿ.ಕಾಯಿಲೆಯಿಂದಾಗಿ ಸಾವನ್ನಪ್ಪಿರುವ ಮಾಹಿತಿ ದೊರೆತಿದೆ.