ಉಜಿರೆ ಎಸ್.ಡಿ.ಯಂ ಕಾಲೇಜಿನಲ್ಲಿ ತಂಬಾಕು ರಹಿತ ದಿನ – ಎಲ್ಲಾ ವ್ಯಸನಗಳಿಗೆ ಮುಖ್ಯಕಾರಣ ಅಂತರ್ಜಾಲ – ಶ್ರೀ ವಿವೇಕ್ ವಿ ಪಾಯಸ್

0

ಉಜಿರೆ: ಪ್ರತಿವರ್ಷ ಸರಾಸರಿ 280 ಕೋಟಿ ರೂಗಳ ಮಾದಕ ವಸ್ತುಗಳು ರಾಜಾರೋಷವಾಗಿ ಮಾರಾಟವಾಗುತ್ತದೆ. ಇದು ದೇಶದ ಅಭಿವೃದ್ಧಿ ಅಲ್ಲ, ಯುವಕರ ಅವನತಿಯ ಸಂಕೇತ ಎಂದು ತಂಬಾಕು ರಹಿತ ದಿನದ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿ ಶ್ರೀ ವಿವೇಕ್ ವಿನ್ಸೆಂಟ್ ಪಾಯಸ್ ಅವರು ಹೇಳಿದರು.

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿ ಕಾಲೇಜಿನ ಆಂತರಿಕ ಗುಣಮಟ್ಟದ ಭರವಸೆ ಕೋಶ, ಸಾಮಾಜಿಕ ಜವಾಬ್ದಾರಿಗಳ ಉಪಕ್ರಮಗಳ ಸಮಿತಿ, ರಾಷ್ಟ್ರೀಯ ಸೇವಾ ಯೋಜನಾ ಘಟಕ, ಹಾಗೂ ರಸಾಯನಶಾಸ್ತ್ರ ವಿಭಾಗದ ಸಹಯೋಗದೊಂದಿಗೆ ವಿದ್ಯಾರ್ಥಿಗಳಿಗೆ ಹಾಗೂ ಸ್ವಯಂಸೇವಕರಿಗೆ ವ್ಯಸನ ಮುಕ್ತ ಭಾರತ ಹಾಗೂ ಯುವ ಜನತೆ ಎಂಬ ಶೀರ್ಷಿಕೆಯಡಿ ವಿಶೇಷ ಉಪನ್ಯಾಸವನ್ನು ಆಯೋಜಿಸಲಾಗಿತ್ತು. ವಿದ್ಯಾರ್ಥಿಗಳಿಗೆ ಮಾದಕ ವಸ್ತು ಹಾಗೂ ಧೂಮಪಾನ ವ್ಯಸನದ ಪರಿಣಾಮ ಹಾಗೂ ಜಾಗೃತಿ ಮೂಡಿಸುವ ಕಾರ್ಯಕ್ರಮ ಇದಾಗಿತ್ತು.

ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರಾದೇಶಿಕ ನಿರ್ದೇಶಕರಾದ ಶ್ರೀ ವಿವೇಕ್ ವಿನ್ಸೆಂಟ್ ಪಾಯಸ್ ರವರು ತಂಬಾಕು ಹಾಗೂ ಮಾದಕ ವಸ್ತುಗಳ ವ್ಯಸನದಿಂದ ಉಂಟಾಗುವ ದುಷ್ಪರಿಣಾಮದ ಬಗ್ಗೆ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಿದರು.”ಈಗಿನ ಯುವಕರು ಆತ್ಮಹತ್ಯೆಯ ಕಡೆಗೆ ಮನಸ್ಸು ಮಾಡುವಷ್ಟು ನಮ್ಮ ಹಿರಿಯರು ಮನಸ್ಸು ಮಾಡುತ್ತಿರಲಿಲ್ಲ.ಎಲ್ಲದಕ್ಕೂ ಕಾರಣ ಸಾಮಾಜಿಕ ಖಿನ್ನತೆ, ಏಕಾಂತತೆ, ಸಾಮಾಜಿಕ ಸಂವಹನದ ದೌರ್ಬಲ್ಯತೆ. ಈ ದಿನಗಳಲ್ಲಿ ನಾನೊಬ್ಬ ಸಂತೃಪ್ತ ಯಜಮಾನ ಎಂದು ಭಾವಿಸುತ್ತೇನೆ. ಇದಕ್ಕೆ ಕಾರಣ ನನ್ನ ಜನಪ್ರಿಯತೆ, ವಿದ್ಯೆ ಅಲ್ಲ. ಬದಲಾಗಿ ನನ್ನ ಕುಟುಂಬದಲ್ಲಿ ಯಾರೂ ವ್ಯಸನವೆಂಬ ಜಾಲದಲ್ಲಿ ಸಿಕ್ಕಿ ಹಾಕಿಕೊಳ್ಳಲಿಲ್ಲ ಎಂಬ ಆತ್ಮತೃಪ್ತಿ. ಇದೇ ರೀತಿ ಎಲ್ಲಾ ಪೋಷಕರು ಯೋಚನೆ ಮಾಡಿದರೆ ದೇಶದಲ್ಲಿ ವ್ಯಸನಿಗಳ ಸಂಖ್ಯೆ ಯನ್ನು ಸುಲಭವಾಗಿ ಹತೋಟಿಯಲ್ಲಿಟ್ಟುಕೊಳ್ಳಬಹುದು.

ನಮ್ಮ ವ್ಯಸನಮುಕ್ತ ಶಿಬಿರಕ್ಕೆ ಬರುವ ಹಲವಾರು ಜನರು ಕೆಟ್ಟ ಚಟಗಳನ್ನು ಕಲಿತದ್ದು ಅವರ ಮನೆಯ ವಾತಾವರಣದಿಂದಲೇ. ಹೇಗೆ ಒಂದು ಚೀಲದಲ್ಲಿ ಭತ್ತ ಹಾಗೂ ಕಲ್ಲುಗಳನ್ನು ಹಾಕಿ ಒಂದು ಕೋಳಿಯ ಮುಂದೆ ಇಟ್ಟರೆ ಅದು ಭತ್ತವನ್ನು ಮಾತ್ರ ಆರಿಸಿ ತಿನ್ನುವುದು ಹಾಗೆ ನಿಮ್ಮ ಜೀವನದಲ್ಲಿ ಬರುವ ಒಳ್ಳೆಯ ಹಾಗೂ ಕೆಟ್ಟ ವಿಚಾರಗಳಲ್ಲಿ ಒಳ್ಳೆಯದನ್ನು ಮಾತ್ರ ಸ್ವೀಕರಿಸಬೇಕು. ಪುಸ್ತಕದ ಪರೀಕ್ಷೆಯಲ್ಲಿ ಏನಾದರೂ ತಪ್ಪಾದರೆ ಅದನ್ನು ಅಳಿಸಬಹುದು. ಆದರೆ ಜೀವನದ ಪರೀಕ್ಷೆಯಲ್ಲಿ ಏನಾದರೂ ತಪ್ಪಾದರೆ ಅದನ್ನು ಅಳಿಸುವುದು ಕಷ್ಟಸಾಧ್ಯ. ನೀರಿಗೆ ಬಿದ್ದು, ಆಹಾರ ಕೊರತೆಯಿಂದ ಸಾಯುವ ಜನರಿಗಿಂತ ವ್ಯಸನದಿಂದಾಗಿ ಸಾಯುವ ಜನಗಳ ಸಂಖ್ಯೆಯೇ ಈ ದಿನಗಳಲ್ಲಿ ಹೆಚ್ಚಾಗಿದೆ. ಚಿತ್ರನಟರು ಸೇವಿಸುವ ಧೂಮಪಾನದಿಂದ ಹೊರಬರುವ ಬಿಳಿಹೊಗೆಗಳು ಮಾತ್ರ ನಮಗೆ ಕಾಣುತ್ತವೆ ಹೊರತು ಒಳಗೆ ಶ್ವಾಸಕೋಶದಲ್ಲಿ ಬೀಳುವ ಕಪ್ಪುಚುಕ್ಕೆಗಳು ಯಾರಿಗೂ ಕಾಣುವುದಿಲ್ಲ. ಕಾಲೇಜು ಜೀವನದಲ್ಲಿ ವ್ಯಸನಕ್ಕೆ ಮೊದಲು ಸುಲಭವಾಗಿ ಪರಿಚಯವಾಗುವುದು ಸಿಗರೇಟ್ ಹಾಗೂ ಬೀಡಿಗಳು. ಮಾದಕ ವಸ್ತುಗಳ ಪ್ರಕರಣದಲ್ಲಿ ಹೆಚ್ಚಾಗಿ ಸಿಕ್ಕಿಬೀಳುವವರು ವಿದ್ಯಾರ್ಥಿಗಳೇ ಆಗಿರುತ್ತಾರೆ. ಎಲ್ಲ ರೀತಿಯ ಮಾದಕ ಸೇವನೆಗೆ ಮುಖ್ಯಕಾರಣ ಅಂತರ್ಜಾಲ. ಬೆಳಗ್ಗಿರುವ ಜಾಲತಾಣಗಳು ಸಂಜೆಯಾಗುವಾಗ ಇರುವುದಿಲ್ಲ. ಇಂತಹವುಗಳು ಡಾರ್ಕ್ ವೆಬ್ ಗಳೆಂದೇ ಕುಖ್ಯಾತಿ ಪಡೆದಿವೆ. ಪ್ರತಿವರ್ಷ ಸರಿಸುಮಾರು 280 ಕೋಟಿ ರೂಪಾಯಿಯಷ್ಟು ಮಾದಕ ವಸ್ತುಗಳ ಮಾರಾಟ ರಾಜಾರೋಷವಾಗಿ ನಡೆಯುತ್ತವೆ. ಬೆಂಗಳೂರಲ್ಲಿ ಈಗಲೂ ಸಮಾರಂಭಗಳಲ್ಲಿ ಮಾದಕ ವಸ್ತುಗಳ ವಿತರಣೆ ಚಾಲ್ತಿಯಲ್ಲಿದೆ. ಅಕ್ಷರಸ್ಥರೆಲ್ಲರೂ ಈ ವಿಷಯದಲ್ಲಿ ಅವಿದ್ಯಾವಂತರಾಗುತ್ತಿರುವುದು ವಿಪರ್ಯಾಸವೇ ಆಗಿದೆ. ಕಳೆದ ಏಳು ವರ್ಷಗಳಲ್ಲಿ ಹತ್ತು ಸಾವಿರಕ್ಕಿಂತಲೂ ಹೆಚ್ಚು ಹೆಣ್ಣುಮಕ್ಕಳು ನಾಪತ್ತೆಯಾಗಿದ್ದಾರೆ. ನಮ್ಮ ನೆರೆಹೊರೆಯ ರಾಷ್ಟ್ರಗಳು ಭಾರತದ ಯುವಕರನ್ನು ವ್ಯಸನಿಗಳನ್ನಾಗಿ ಮಾರ್ಪಡಿಸುವುದರಲ್ಲಿ ಸಕ್ರಿಯ ಪ್ರಯತ್ನವನ್ನು ನಡೆಸುತ್ತಿವೆ. ಒಂದು ದೇಶವನ್ನು ದುರ್ಬಲಗೊಳಿಸಲು ಆ ದೇಶದ ಮೇಲೆ ಯುದ್ಧಸಾರಬೇಕಾಗಿಲ್ಲ. ಆ ದೇಶದ ಯುವಕರನ್ನು ದುರ್ಬಲಗೊಳಿಸಿದರೆ ಸಾಕು. ವ್ಯಸನಿಗಳಿಗೆ ಮೂರು ರೀತಿಯ ಸಾವುಗಳು ಕಟ್ಟಿಟ್ಟ ಬುತ್ತಿ. ಅಕಾಲಿಕ ಮರಣ, ಆತ್ಮಹತ್ಯೆ ಹಾಗೂ ಅಪಘಾತ. ನಾವು ಸೇವಿಸುವ ಆಹಾರದಿಂದ ನಾವು ದೇವರೂ ಆಗಬಹುದು, ರಾಕ್ಷಸರೂ ಆಗಬಹುದು. ನಾವು ಸೇವಿಸುವ ವಿಷಯಗಳಲ್ಲಿ ನಮ್ಮ ಪ್ರತಿಕ್ರಿಯೆ ನಿರ್ಧಾರವಾಗುತ್ತದೆ. ಆದ್ದರಿಂದ ಮುಂದಿನ ಯುವಪೀಳಿಗೆಯ ಸಾರಥಿಗಳಾಗಿರುವ ವಿದ್ಯಾರ್ಥಿಗಳು ಮಾದಕ ಜಾಲದಿಂದ ಹೊರಬಂದು ದೇಶದ ಬಗ್ಗೆ, ಭವಿಷ್ಯದ ಬಗ್ಗೆ ಚಿಂತಿಸುವುದು ಅತ್ಯಗತ್ಯವಾಗಿದೆ” ಎಂದು ಅವರು ನುಡಿದರು.

ಕಾರ್ಯಕ್ರಮವನ್ನು ಸ್ವಯಂಸೇವಕಿಯಾದ ಸಿಂಚನ. ಟಿ. ಅವರು ನಿರೂಪಿಸಿದರು. ಸ್ವಯಂಸೇವಕಿಯರಾದ ನಿಶ್ಚಿತಾ ಸ್ವಾಗತಿಸಿ, ಸುರಕ್ಷಾ ವಂದನಾರ್ಪಣೆ ಮಾಡಿದರು. ಹಾಗೂ ಸ್ವಯಂಸೇವಕಿಯಾದ ಸಹನಾ ಕಿರಣ್ ಸಂಪನ್ಮೂಲ ವ್ಯಕ್ತಿಗಳ ಪರಿಚಯವನ್ನು ನಿರೂಪಿಸಿದರು.
ಈ ಕಾರ್ಯಕ್ರಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿಗಳಾದ ಶ್ರೀ ಮೋಹನ್, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ಕುಲಸಚಿವರು, (ಮೌಲ್ಯಮಾಪನ) ಹಾಗೂ ರಸಾಯನ ಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಶ್ರೀಮತಿ ನಂದಾ ಕುಮಾರಿ ಕೆ.ಪಿ., ರಾಷ್ಟ್ರೀಯ ಸೇವಾ ಯೋಜನಾ ಘಟಕದ ಯೋಜನಾಧಿಕಾರಿಗಳಾದ ಪ್ರೊ. ದೀಪಾ ಅರ್. ಪಿ., ಹಾಗೂ ರಸಾಯನಶಾಸ್ತ್ರ ಮತ್ತು ಹಿಂದಿ ವಿಭಾಗದ ಅಧ್ಯಾಪಕರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here