


ಉಜಿರೆ: ನಾಡಿನ ಪವಿತ್ರ ಕ್ಷೇತ್ರ ಧರ್ಮಸ್ಥಳದ ಹೆಬ್ಬಾಗಿಲಿನಂತಿರುವ ಉಜಿರೆಯು ಸಸ್ಯಕಾಶಿಯಾಗಿಯೂ, ಜ್ಞಾನಕಾಶಿಯಾಗಿಯೂ ಬೆಳೆಯುತ್ತಿದ್ದು ಹಲವು ಸೃಜನಾತ್ಮಕ ಚಟುವಟಿಕೆಗಳ ಕೇಂದ್ರವಾಗಿದ್ದು ಸಾರ್ವಜನಿಕ ಸೇವೆಯಲ್ಲಿ ಆರೋಗ್ಯಕರ ಸ್ಪರ್ಧೆ ಇರಲಿ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಹಾರೈಸಿದರು.
ಅವರು ಮಾ.15 ಉಜಿರೆಯಲ್ಲಿ ಚಾರ್ಮಾಡಿ ರಸ್ತೆಯಲ್ಲಿರುವ ಮಂಜೂಷಾ ಕಟ್ಟಡದಲ್ಲಿ ಬ್ಯಾಂಕ್ ಅಫ್ ಬರೋಡ ನೂತನ ಮುಖ್ಯ ಶಾಖೆಯನ್ನು ಉದ್ಘಾಟಿಸಿ ಉಜಿರೆಯ ನಾಗರಿಕರು ಬ್ಯಾಂಕ್ ಆಫ್ ಬರೋಡದ ಸೇವೆಯ ಸದುಪಯೋಗ ಪಡೆದು ಉನ್ನತ ಪ್ರಗತಿ ಸಾಧಿಸುವಂತಾಗಲೆಂದು ಶುಭ ಹಾರೈಸಿದರು.

ಬ್ಯಾಂಕ್ ಆಫ್ ಬರೋಡಾದ ಕಾರ್ಯನಿರ್ವಾಹಕ ನಿರ್ದೇಶಕ ಅಜಯ್ ಕೆ. ಖುರಾನಾ ಮಾತನಾಡಿ, ಅಧಿಕ ಲಾಭ ಮತ್ತು ಉತ್ತಮ ಸೇವೆಯೊಂದಿಗೆ ಪ್ರಗತಿ ಪಥದಲ್ಲಿ ಮುನ್ನಡೆಯುತ್ತಿರುವ ಬ್ಯಾಂಕ್ ಆಫ್ ಬರೋಡ ಉನ್ನತ ಸಾಧನೆಯಲ್ಲಿ ದೇಶದಲ್ಲಿ ಎರಡನೆ ಸ್ಥಾನದಲ್ಲಿದೆ ಎಂದರು.

ಸಾಧಕರಿಗೆ ಸನ್ಮಾನ: ಬ್ಯಾಂಕ್ ಆಫ್ ಬರೋಡಾದ ಸೇವೆಯ ಸದುಪಯೋಗ ಪಡೆದು ಉನ್ನತ ಸಾಧನೆ ಮಾಡಿದ ಗ್ರಾಹಕರಾದ ರಾಜೇಶ್ ಪೈ, ಶೈಲಾ, ಗಣೇಶ ಎಂ. ಅಶ್ವಿನಿ ಕುಮಾರಿ, ಡಾ. ಗೋಪಾಲಕೃಷ್ಣ ಭಟ್ ಅವರನ್ನು ಬ್ಯಾಂಕಿನ ವತಿಯಿಂದ ಗೌರವಿಸಲಾಯಿತು.
ಗ್ರಾಹಕರ ಪರವಾಗಿ ರಾಜೇಶ್ ಪೈ ಕೃತಜ್ಞತೆಗಳೊಂದಿಗೆ ಬ್ಯಾಂಕ್ಗೆ ಅಭಿನಂದನೆ ಸಲ್ಲಿಸಿದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ. ಎಲ್.ಎಚ್. ಮಂಜುನಾಥ ಗ್ರಾಹಕರಿಗೆ ಬ್ಯಾಂಕ್ ಆಫ್ ಬರೋಡಾದ ಸೌಜನ್ಯಪೂರ್ಣ ಸೇವೆಯನ್ನು ಶ್ಲಾಘಿಸಿ ಅಭಿನಂದಿಸಿದರು.

ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ.ಎಸ್. ಸತೀಶ್ಚಂದ್ರ, ಸಿರಿ ಗ್ರಾಮೋದ್ಯೋಗ ಸಂಸ್ಥೆಯ ಆಡಳಿತ ನಿರ್ದೇಶಕ ಜನಾರ್ದನ, ಕೆ.ಎನ್. ಬ್ಯಾಂಕ್ ಆಫ್ ಬರೋಡ ಉಜಿರೆ ಶಾಖೆಯ ಹಿರಿಯ ವ್ಯವಸ್ಥಾಪಕ ಪ್ರಸಾದ್ ಎನ್., ಪ್ರಾದೇಶಿಕ ವ್ಯವಸ್ಥಾಪಕ ದೇವಿಪ್ರಸಾದ್ ಶೆಟ್ಟಿ ಮತ್ತು ಆರ್. ಗೋಪಾಲಕೃಷ್ಣ ಉಪಸ್ಥಿತರಿದ್ದರು.
ಬ್ಯಾಂಕ್ ಆಫ್ ಬರೋಡದ ಮಂಗಳೂರು ವಲಯದ ಪ್ರಧಾನ ವ್ಯವಸ್ಥಾಪಕರಾದ ಗಾಯತ್ರಿ, ಆರ್. ಸ್ವಾಗತಿಸಿದರು.