ಪತ್ರಿಕಾ ಗೋಷ್ಠಿ
ಬೆಳ್ತಂಗಡಿ :ಸರ್ವೋದಯ ಕರ್ನಾಟಕ ಪಕ್ಷದಿಂದ ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದಿಂದ ರೈತ ಸಂಘದ ಯುವ ನಾಯಕ ಆದಿತ್ಯ ನಾರಾಯಣ ಕೊಲ್ಲಾಜೆಯವರು ಸ್ಪರ್ಧೆ ಮಾಡಲಿದ್ದಾರೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಪ್ರಧಾನ ಕಾರ್ಯದರ್ಶಿ ರವಿ ಕಿರಣ್ ಪುಣಚ ಹೇಳಿದರು.
ಅವರು ಫೆ.10 ರಂದು ಅಂಬೇಡ್ಕರ್ ಭವನದಲ್ಲಿ ಕರೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದರು.
ಜನಸಾಮಾನ್ಯರಿಗೆ ಸಹಾಯ ಮಾಡುವ ದೃಷ್ಟಿಯೊಂದಿಗೆ ರಾಜಕೀಯಕ್ಕೆ ಪ್ರವೇಶಿಸಿ ಪಕ್ಷವನ್ನು ಶ್ರೀಸಾಮಾನ್ಯನ ಅಭಿವೃದ್ಧಿಗಾಗಿ ಕಟ್ಟಲಾಗಿದೆ. ಈಗಾಗಲೇ 3 ಶಾಸಕರ ಚುನಾವಣೆಯಲ್ಲಿ ಗೆಲುವು ಸಾಧಿಸಿರುವ ಪಕ್ಷವು ರೈತ ಸಂಘ ಮತ್ತು ಡಿಎಸ್‌ಎಸ್‌ಗಳ ಬಲವಾದ ಬೆಂಬಲದೊಂದಿಗೆ ಮತ್ತೆ ರಾಜಕೀಯಕ್ಕೆ ಪ್ರವೇಶಿಸುತ್ತಿದೆ.ಸರ್ವೋದಯ ಕರ್ನಾಟಕ ಪಕ್ಷ ಈಗಾಗಲೇ ಬೆಳ್ತಂಗಡಿ, ಮೇಲುಕೋಟೆ, ಮಂಡ್ಯ ವಿರಾಜಪೇಟೆ, ಬೆಳಗಿ ಸೇರಿದಂತೆ 5 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿದೆ ಎಂದರು.
ರೈತ ಸಂಘದ ಜಿಲ್ಲಾ ಅಧ್ಯಕ್ಷ ಓಸ್ವಾಲ್ಡ್ ಪ್ರಕಾಶ್ ಫೆರ್ನಾಂಡಿಸ್ ಮಾತನಾಡಿ ಭೂ ಸುಧಾರಣೆ ಕಾಯ್ದೆಗೆ ತಿದ್ದುಪಡಿ ತಂದು ರೈತರಿಗೆ ಆಗಿರುವ ವಿವಿಧ ಸಂಕಷ್ಟದ ಕುರಿತು ಸರಕಾರದ ವಿರುದ್ಧ ಫೆ.16 ರಂದು ಬೆಂಗಳೂರು ಪ್ರೀಡಂ ಪಾರ್ಕ್ ನಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ವತಿಯಿಂದ ರೈತರ ಹಕ್ಕೋತ್ತಾಯಗಳಿಗಾಗಿ ಬ್ರಹತ್ ಪ್ರತಿಭಟನೆ ನಡೆಯಲಿದೆ ಎಂದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರೇಮನಾಥ ಶೆಟ್ಟಿ ಮಾತನಾಡಿ ಫೆ.13 ರಂದು ಮಂಡ್ಯ ದಲ್ಲಿ ವಿಶ್ವ ರೈತ ಚೇತನ ಪ್ರೊ. ಎಂ. ಡಿ. ನಂಜುಂಡ ಸ್ವಾಮಿರವರ ನೆನಪಿನ ದಿನಾಚರಣೆ ಮತ್ತು ರಸ್ತೆ ಹಾಗೂ ವೃತ್ತಕ್ಕೆ ನಾಮಕರಣ, ಯುವ ರೈತ ಘಟಕದ ಚಾಲನಾ ಸಮಾರಂಭ ನಡೆಯಲಿದೆ ಎಂದರು.
ಸರ್ವೋದಯ ಕರ್ನಾಟಕ ಪಕ್ಷದ ಅಭ್ಯರ್ಥಿ ಜಿಲ್ಲಾ ರೈತ ಯುವ ಘಟಕದ ಅಧ್ಯಕ್ಷ ಆದಿತ್ಯ ನಾರಾಯಣ ಕೊಲ್ಲಾಜೆ ಮಾತನಾಡಿ ಭ್ರಷ್ಟಾಚಾರ ಮುಕ್ತ ಆಡಳಿತ ನೀಡಲು, ಮಹಿಳಾ ಸಬಲೀಕರಣ, ಜನ ಸಾಮಾನ್ಯರ ತೆರಿಗೆ ಹಣ ನಿಜವಾದ ಕಾರ್ಯಕ್ರಮಕ್ಕೆ ವಿನಿಯೋಗ ಮಾಡಲು, ಕಟ್ಟಡ ಕಾರ್ಮಿಕರಿಗೆ ಪಿಂಚಣಿ ಯೋಜನೆ, ಉದ್ಯೋಗ ಸೃಷ್ಟಿ ಮೊದಲಾದ ಉತ್ತಮ ಕೆಲಸ ನಿರ್ವಹಿಸಲು ಸ್ಪರ್ಧಿಸುತ್ತೇನೆ ಎಂದರು. ಪತ್ರಿಕಾ ಗೋಷ್ಠಿಯಲ್ಲಿ ಜಿಲ್ಲಾ ಯುವ ಘಟಕದ ಗೌರವ ಅಧ್ಯಕ್ಷ ಸುರೇಂದ್ರ ಕೊರ್ಯ, ಇತರ ರೈತ ಸಂಘದ ಸದಸ್ಯರು ಉಪಸ್ಥಿತರಿದ್ದರು.